ಕಳೆದ ವರ್ಷ ತಮಿಳುನಾಡಿನ ಕರೂರ್‌ನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಅರ್ಹ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವ ತಮಿಳುನಾಡು ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ. ಸುಪ್ರೀಂ ಕೋರ್ಟ್‌ನ ಈ ಮಧ್ಯಂತರ ಆದೇಶದಿಂದಾಗಿ, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರಕ್ಕೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ. ಅಲ್ಲದೆ, ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇತರ ಪ್ರತಿವಾದಿಗಳಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ವಿಚಾರಣೆ ವೇಳೆ, ಸರ್ಕಾರದ ನೀತಿಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದ ಅರ್ಜಿದಾರರನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. “ಸರ್ಕಾರದ ನೀತಿಯನ್ನು ಪ್ರಶ್ನಿಸಲು ನೀವ್ಯಾರು? ದುರಂತದಲ್ಲಿ ಕುಟುಂಬವನ್ನು ಪೋಷಿಸುತ್ತಿದ್ದ ಏಕೈಕ ಆಧಾರಸ್ತಂಭವೇ ಮೃತಪಟ್ಟಿದ್ದರೆ, ಸರ್ಕಾರ ಅವರ ಮಗ ಅಥವಾ ಮಗಳಿಗೆ ಉದ್ಯೋಗ ನೀಡಬಾರದೇ?” ಎಂದು ನ್ಯಾಯಪೀಠ ಕಟುವಾಗಿ ಪ್ರಶ್ನಿಸಿದೆ.
2025ರ ಸೆಪ್ಟೆಂಬರ್ 27ರಂದು ಕರೂರ್‌ನಲ್ಲಿ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಸಭೆಯನ್ನು ಉದ್ದೇಶಿಸಿ ಮುಖ್ಯಮಂತ್ರಿ ವಿಜಯ್ ಅವರು ಮಾತನಾಡುತ್ತಿದ್ದ ವೇಳೆ ಭಾರಿ ಕಾಲ್ತುಳಿತ ಸಂಭವಿಸಿತ್ತು. ಈ ಭೀಕರ ದುರಂತದಲ್ಲಿ 41 ಮಂದಿ ಪ್ರಾಣ ಕಳೆದುಕೊಂಡಿದ್ದರು ಮತ್ತು 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ದುರಂತದ ಬಳಿಕ ತಮಿಳುನಾಡು ಸರ್ಕಾರವು ಮೃತರ ಕುಟುಂಬದ ಅರ್ಹ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿತ್ತು. ಅದರಂತೆ, ಜುಲೈ 10ರಂದು ಮುಖ್ಯಮಂತ್ರಿ ವಿಜಯ್ ಅವರು 31 ಸಂತ್ರಸ್ತ ಕುಟುಂಬಸ್ಥರಿಗೆ ಖುದ್ದು ನೇಮಕಾತಿ ಪತ್ರಗಳನ್ನು ವಿತರಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಜುಲೈ 27ರಂದು ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್, ಸರ್ಕಾರದ ನೇಮಕಾತಿ ಆದೇಶವನ್ನು ರದ್ದುಗೊಳಿಸಿತ್ತು. “ಸರ್ಕಾರಿ ಉದ್ಯೋಗವನ್ನು ಸರ್ಕಾರದ ಔದಾರ್ಯ ಅಥವಾ ಉಚಿತ ಕೊಡುಗೆಯಂತೆ ನೀಡುವಂತಿಲ್ಲ, ಅದು ಕಟ್ಟುನಿಟ್ಟಾಗಿ ಸಾಂವಿಧಾನಿಕ ತತ್ವಗಳ ಚೌಕಟ್ಟಿನೊಳಗೆ ಇರಬೇಕು. ಈ ರೀತಿ ನೌಕರಿ ನೀಡಿದರೆ, ಭವಿಷ್ಯದಲ್ಲಿ ಇತರ ದುರಂತಗಳ ಸಂತ್ರಸ್ತ ಕುಟುಂಬಗಳಿಂದಲೂ ಇಂತಹದ್ದೇ ಬೇಡಿಕೆಗಳು ಬರುವ ಸಾಧ್ಯತೆಯಿದೆ. ಅಲ್ಲದೆ, ಈಗಾಗಲೇ ವಿವಿಧ ಇಲಾಖೆಗಳಲ್ಲಿ ಅನುಕಂಪದ ಆಧಾರದ ಉದ್ಯೋಗಕ್ಕಾಗಿ ಕಾಯುತ್ತಿರುವ ಸಾವಿರಾರು ಜನರನ್ನು ಕಡೆಗಣಿಸುವುದು ಸೂಕ್ತವಲ್ಲ” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.
ಕರೂರ್ ದುರಂತದ ಸಂತ್ರಸ್ತರ ಕುಟುಂಬಗಳ ಬಗ್ಗೆ ನ್ಯಾಯಾಲಯಕ್ಕೆ ಸಂಪೂರ್ಣ ಅನುಕಂಪವಿದೆ. ಆದರೆ, ದೇಶಸೇವೆ ಮಾಡುತ್ತಾ ಪ್ರಾಣಾರ್ಪಣೆ ಮಾಡಿದ ಸಿಬ್ಬಂದಿಯ ಕುಟುಂಬಗಳಿಗೆ ನೀಡುವ ಉದ್ಯೋಗದ ಮಾದರಿಯಲ್ಲಿ ಇದನ್ನು ಪರಿಗಣಿಸಲಾಗದು. ಇದರ ಬದಲಾಗಿ, ಸಂತ್ರಸ್ತರ ಕುಟುಂಬಗಳು ಸ್ವಾವಲಂಬಿಗಳಾಗಲು ಅನುಕೂಲವಾಗುವಂತೆ ಕೌಶಲ್ಯಾಭಿವೃದ್ಧಿ, ತಾಂತ್ರಿಕ ತರಬೇತಿ ಮತ್ತು ಉದ್ಯಮಶೀಲತಾ ಕಾರ್ಯಕ್ರಮಗಳ ಮೂಲಕ ಸರ್ಕಾರ ನೆರವು ನೀಡಬಹುದು ಎಂದು ಹೈಕೋರ್ಟ್ ಸಲಹೆ ನೀಡಿತ್ತು.
ಇದೀಗ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಿರುವುದರಿಂದ, ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣದ ಅಂತಿಮ ವಿಚಾರಣೆ ಮುಗಿಯುವವರೆಗೆ ಮದ್ರಾಸ್ ಹೈಕೋರ್ಟ್ ತೀರ್ಪು ಜಾರಿಯಲ್ಲಿರುವುದಿಲ್ಲ. ಇದರಿಂದಾಗಿ ಸಂತ್ರಸ್ತರಿಗೆ ನೀಡಲಾದ ಉದ್ಯೋಗಕ್ಕೆ ಸದ್ಯಕ್ಕೆ ಯಾವುದೇ ಆತಂಕವಿಲ್ಲದಂತಾಗಿದೆ.




