ಕಾಶ್ಮೀರದ ಪ್ರಮುಖ ಧರ್ಮಗುರು ಮಿರ್ವೈಜ್-ಎ-ಕಾಶ್ಮೀರ್ ಡಾ. ಮೌಲ್ವಿ ಮೊಹಮ್ಮದ್ ಉಮರ್ ಫಾರೂಕ್ ಅವರನ್ನು ಶುಕ್ರವಾರ (ನವೆಂಬರ್ 27) ಮತ್ತೆ ಗೃಹಬಂಧನದಲ್ಲಿ ಇರಿಸಲಾಗಿದೆ. ಶ್ರೀನಗರದ ಐತಿಹಾಸಿಕ ಜಾಮಿಯಾ ಮಸೀದಿಗೆ ತೆರಳಿ ಶುಕ್ರವಾರದ ಪ್ರವಚನ ನೀಡಲು ಮತ್ತು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಅಧಿಕಾರಿಗಳು ನಿರ್ಬಂಧ ಹೇರಿದ್ದಾರೆ.
ನಗೀನ್ ಪ್ರದೇಶದಲ್ಲಿರುವ ಅವರ ನಿವಾಸದ ಹೊರಗೆ ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದ್ದು, ಅವರ ಸಂಚಾರವನ್ನು ತಡೆಯಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪ್ರತಿಕ್ರಿಯಿಸಿರುವ ಮಿರ್ವೈಜ್, ತಮಗೆ ಇಂತಹ ನಿರ್ಬಂಧಗಳ ನಿರೀಕ್ಷೆ ಮೊದಲೇ ಇತ್ತು ಎಂದು ತಿಳಿಸಿದ್ದಾರೆ. ಪರಿಸರ ಸೂಕ್ಷ್ಮ ಪ್ರದೇಶವಾದ ಶೇಷನಾಗ್ ವಲಯದಲ್ಲಿ ಉಂಟಾಗುತ್ತಿರುವ ಪರಿಸರ ಹಾನಿ ಮತ್ತು ವಕ್ಫ್ ಬೋರ್ಡ್ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ‘ವಂದೇ ಮಾತರಂ’ ಗಾಯನದ ಕುರಿತು ತಾವು ಇತ್ತೀಚೆಗೆ ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದ ಕಳವಳಗಳ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರ | ಮೀಸಲಾತಿ ಪ್ರತಿಭಟನೆ; ಮುಫ್ತಿ ಸೇರಿ ಹಲವು ನಾಯಕರಿಗೆ ಗೃಹಬಂಧನ
ಜಮ್ಮು ಮತ್ತು ಕಾಶ್ಮೀರದ ಜನರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಾವು ಧ್ವನಿ ಎತ್ತಿದಾಗಲೆಲ್ಲಾ ಮುಂದಿನ ಶುಕ್ರವಾರ ಜಾಮಿಯಾ ಮಸೀದಿಗೆ ಭೇಟಿ ನೀಡದಂತೆ ತಡೆಯುವುದು ಒಂದು ಸಂಪ್ರದಾಯವಾಗಿಬಿಟ್ಟಿದೆ ಎಂದು ಆರೋಪಿಸಿದ್ದಾರೆ.
ತಮ್ಮ ಮೇಲೆ ಒತ್ತಡ ಹೇರುವ ಬದಲು ಆಡಳಿತಾರೂಢ ಸರ್ಕಾರವು ಜನರ ಭಾವನೆಗಳು ಮತ್ತು ಸೂಕ್ಷ್ಮ ವಿಚಾರಗಳನ್ನು ಅರ್ಥಮಾಡಿಕೊಳ್ಳುವುದು ಒಳಿತು ಎಂದು ಮಿರ್ವೈಜ್ ಅಭಿಪ್ರಾಯಪಟ್ಟಿದ್ದಾರೆ.
ಅಮರನಾಥ ಯಾತ್ರಿಕರ ಸೌಲಭ್ಯಗಳನ್ನು ಸುಧಾರಿಸುವುದಕ್ಕೆ ಕಾಶ್ಮೀರ ಎಂದಿಗೂ ವಿರೋಧ ವ್ಯಕ್ತಪಡಿಸಿಲ್ಲ, ಆದರೆ ಅದು ನಮ್ಮ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಧಕ್ಕೆ ತರುವಂತಿರಬಾರದು ಎಂದು ಪ್ರತಿಪಾದಿಸಿದ್ದಾರೆ. ಜನರಿಗೆ ನೋವು ಮತ್ತು ಆತಂಕ ಉಂಟುಮಾಡುವಂತಹ ನಿರ್ಧಾರಗಳನ್ನು ಹೇರುವುದನ್ನು ಸರ್ಕಾರ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ, ಮುತಾಹಿದಾ ಮಜ್ಲಿಸ್-ಎ-ಉಲಮಾ (MMU) ಪೋಷಕರು ಮತ್ತು ಖ್ಯಾತ ಇಸ್ಲಾಮಿಕ್ ವಿದ್ವಾಂಸ ಮೌಲಾನಾ ರಹಮತುಲ್ಲಾ ಖಾಸ್ಮಿ ಅವರನ್ನು ಗುರುವಾರ ಪೊಲೀಸ್ ಠಾಣೆಗೆ ಕರೆಸಿರುವುದನ್ನು ಮಿರ್ವೈಜ್ ತೀವ್ರವಾಗಿ ಖಂಡಿಸಿದ್ದಾರೆ. ವಕ್ಫ್ ಬೋರ್ಡ್ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗಾಯನವನ್ನು ವಿರೋಧಿಸಿದ್ದಕ್ಕಾಗಿ ಅವರನ್ನು ಠಾಣೆಗೆ ಕರೆಸಲಾಗಿತ್ತು ಎನ್ನಲಾಗಿದೆ.
“ನಮ್ಮ ಧಾರ್ಮಿಕ ನಂಬಿಕೆಗಳು ಮತ್ತು ಭಾವನೆಗಳನ್ನು ರಕ್ಷಿಸಿಕೊಳ್ಳಲು ನಾವು ಧ್ವನಿ ಎತ್ತುವಂತಿಲ್ಲವೇ? ನಂಬಿಕೆಯ ವಿಷಯಗಳಲ್ಲಿ ಯಾವುದೇ ರೀತಿಯ ಬಲವಂತವನ್ನು ನಾವು ಸಹಿಸುವುದಿಲ್ಲ” ಎಂದು ಮಿರ್ವೈಜ್ ಕಿಡಿಕಾರಿದ್ದಾರೆ.
ಬಂಕಿಮಚಂದ್ರ ಚಟರ್ಜಿ ಅವರು ರಚಿಸಿದ ‘ವಂದೇ ಮಾತರಂ’ ಗೀತೆಯ ಸಂಪೂರ್ಣ ಪದ್ಯಗಳಲ್ಲಿ (ಮೊದಲ ಎರಡು ಚರಣಗಳ ನಂತರದ ಭಾಗಗಳಲ್ಲಿ) ಮಾತೃಭೂಮಿಯನ್ನು ಹಿಂದೂ ದೇವತೆಗಳಾದ ದುರ್ಗೆ, ಲಕ್ಷ್ಮಿ ಮತ್ತು ಸರಸ್ವತಿಯರಿಗೆ ಹೋಲಿಸಿ ಸ್ತುತಿಸಲಾಗಿದೆ. ಈ ಕಾರಣದಿಂದಾಗಿ, ಈ ಗೀತೆಯು ಕೇವಲ ದೇಶಭಕ್ತಿ ಗೀತೆಯಾಗಿರದೆ, ಒಂದು ನಿರ್ದಿಷ್ಟ ಧಾರ್ಮಿಕ ಆರಾಧನೆಯ ಸ್ವರೂಪವನ್ನು ಹೊಂದಿದೆ ಎಂಬ ಆಕ್ಷೇಪವಿದೆ.
ಇನ್ನು ಸಂವಿಧಾನ ರಚನಾ ಸಭೆಯು ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೆ ಸಮಾನವಾದ ಗೌರವದೊಂದಿಗೆ ಅಂಗೀಕರಿಸಿದೆ. ಸುಪ್ರೀಂ ಕೋರ್ಟ್ ಕೂಡ ವಿವಿಧ ಪ್ರಕರಣಗಳಲ್ಲಿ ‘ವಂದೇ ಮಾತರಂ’ ಹಾಡುವುದು ಕಡ್ಡಾಯವಲ್ಲ ಮತ್ತು ಯಾರನ್ನೂ ಇದನ್ನು ಹಾಡುವಂತೆ ಬಲವಂತಪಡಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಧಾರ್ಮಿಕ ಸ್ವಾತಂತ್ರ್ಯದ (ಸಂವಿಧಾನದ 25ನೇ ವಿಧಿ) ಅಡಿಯಲ್ಲಿ ತಮಗೆ ಒಪ್ಪಿಗೆಯಿಲ್ಲದ ಗೀತೆಯನ್ನು ಹಾಡದಿರುವ ಹಕ್ಕು ತಮಗಿದೆ ಎಂಬುದು ವಿರೋಧಿಸುವವರ ನಿಲುವಾಗಿದೆ.



