ಲೇಖಕಿ, ಪ್ರಾಧ್ಯಾಪಕಿ ಡಾ. ಅನಸೂಯಾ ಕಾಂಬಳೆ ಅವರಿಗೆ ಎಚ್. ಎಸ್. ಪಾರ್ವತಿ ದತ್ತಿ ಪ್ರಶಸ್ತಿ

Date:

ಕರ್ನಾಟಕ ಲೇಖಕಿಯರ ಸಂಘ (ಕಲೇಸಂ) ಪ್ರತಿವರ್ಷ ನೀಡುವ ಪ್ರತಿಷ್ಠಿತ ‘ಎಚ್.ಎಸ್. ಪಾರ್ವತಿ ದತ್ತಿ ಪ್ರಶಸ್ತಿ-2026’ ಅನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕಿ, ಬಹುಭಾಷಾ ಲೇಖಕಿ ಮತ್ತು ಸ್ತ್ರೀವಾದಿ ಸಾಹಿತ್ಯದ ಪ್ರತಿಪಾದಕಿ ಡಾ. ಅನಸೂಯಾ ಕಾಂಬಳೆ ಅವರಿಗೆ ಪ್ರದಾನ ಮಾಡಲಾಯಿತು. ನಗರದ ಎನ್.ಆರ್. ಕಾಲೋನಿಯ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ನಡೆದ ಸಮಾರಂಭದಲ್ಲಿ ಸಂಘದ ಮಾಜಿ ಅಧ್ಯಕ್ಷೆ ಕೆ.ಆರ್. ಸಂಧ್ಯಾರೆಡ್ಡಿ ಪ್ರಶಸ್ತಿ ನೀಡಿ ಗೌರವಿಸಿದರು.

- Advertisement -

ಪ್ರಶಸ್ತಿ ಪುರಸ್ಕೃತರ ಕುರಿತು ಅಭಿನಂದನಾ ನುಡಿಗಳನ್ನಾಡಿದ ವಿಮರ್ಶಕಿ ಎಂ. ಎಸ್. ಆಶಾದೇವಿ, “ಡಾ. ಅನಸೂಯಾ ಕಾಂಬಳೆ ಅವರು ಸ್ವಯಂ ಪ್ರಭೆಯ ಸಾಧಕಿ ಮತ್ತು ಅಪರೂಪದ ವಿಶ್ವವಿದ್ಯಾಲಯ ಪ್ರಾಧ್ಯಾಪಕಿ. ಕಳೆದ ಎರಡು ದಶಕಗಳಿಂದ ಚಿಂತಕಿ ಮತ್ತು ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವ ಅವರು, ದಲಿತ ಮಹಿಳೆಯನ್ನು ಕೇಂದ್ರವಾಗಿಟ್ಟುಕೊಂಡು ಸಾಹಿತ್ಯ ಕ್ಷೇತ್ರ ಪ್ರವೇಶಿಸಿದರು. ‘ದಲಿತ ಮಹಿಳೆ ಮತ್ತು ಕುಟುಂಬ’ ಇವರ ಪ್ರಮುಖ ಸಂಶೋಧನಾ ಕೃತಿಯಾದರೆ, ‘ಮತ್ಸ್ಯಗಂಧಿಯ ಹಾಡು’ ಗಮನಾರ್ಹ ಕವನ ಸಂಕಲನವಾಗಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿರುಕು ಬಿಟ್ಟಿದ್ದ ‘ಕೈ’ ಕೋಟೆಗೆ ಒಗ್ಗಟ್ಟಿನ ಶಕ್ತಿ: ರಾಜಸ್ಥಾನ...

ಗೋವಿಂದ್ ಡೋಟಸರ ಮತ್ತು ಟೀಕಾರಾಮ್ ಜುಲ್ಲಿ ಅವರ ನಡುವಣ ಬಾಂಧವ್ಯ ಕೇವಲ ರಾಜಕೀಯ ಅನಿವಾರ್ಯತೆಯಲ್ಲ; ಅದು ಪರಸ್ಪರ ನಂಬಿಕೆ ಮತ್ತು ಪೂರಕ ಸಾಮರ್ಥ್ಯಗಳ ಸಮ್ಮಿಲನವಾಗಿದೆ. ಡೋಟಸರ ಅವರಲ್ಲಿರುವ ಆಕ್ರಮಣಕಾರಿ ಸಂಘಟನಾ ಶೈಲಿ, ಪ್ರಖರ...

ವನ್ಯಜೀವಿ ಸಂಘರ್ಷದ ಸುಳಿಯಲ್ಲಿ ಅರಣ್ಯದ ಭವಿಷ್ಯ: ಸಂರಕ್ಷಣೆಯ ಹೆಸರಿನಲ್ಲಿ...

ಬಂಡೀಪುರ-ನಾಗರಹೊಳೆ ಅರಣ್ಯಗಳ ಮೇಲೆ ಹೆಚ್ಚುತ್ತಿರುವ ಒತ್ತಡ; ಖಾಸಗಿ ಬಂಡವಾಳ, ಪ್ರವಾಸೋದ್ಯಮ ವಿಸ್ತರಣೆ ಮತ್ತು ಆದಿವಾಸಿಗಳ ಹಕ್ಕುಗಳ ನಡುವೆ ಸಂರಕ್ಷಣೆಯ ಮೂಲ ಆಶಯಕ್ಕೆ ಸವಾಲು. ಮನುಷ್ಯ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರವಿಲ್ಲ; ಅರಣ್ಯಗಳ ಮೇಲಿನ ನಿಯಂತ್ರಣ...

ಶಿವಮೊಗ್ಗ | ನೀರಿಲ್ಲದೆ ಒಣಗುತ್ತಿವೆ ಅಡಿಕೆ ತೋಟಗಳು: ರೈತರ...

ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಪಾಲಿಗೆ ನಾಲೆಗಳ ನೀರು ಕೇವಲ ಕೃಷಿಗೆ ಪೂರಕವಾದ ವ್ಯವಸ್ಥೆಯಲ್ಲ. ಅದು ಅವರ ವಾರ್ಷಿಕ ಆದಾಯ, ಕುಟುಂಬದ ನಿರ್ವಹಣೆ, ಕೃಷಿ ಸಾಲದ ಮರುಪಾವತಿ ಹಾಗೂ ಮುಂದಿನ ಬದುಕಿನ ಭರವಸೆಯಾಗಿದೆ....

ಇದನ್ನೂ ಓದಿ: ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರಕಟ

ಮುಂದುವರಿದು, “ಅಡಿಗರು ಕಾವ್ಯದಲ್ಲಿ ಅಂಬೇಡ್ಕರ್ ಅವರನ್ನು ಅರ್ಥೈಸಿದ್ದಕ್ಕೂ, ದಲಿತರು ಅಂಬೇಡ್ಕರ್ ಅವರನ್ನು ಅರ್ಥೈಸಿದ್ದಕ್ಕೂ ದೊಡ್ಡ ಕಂದರವಿದೆ. ಆದರೆ, ಸಮಾಜದ ಅಂಚಿನಿಂದ ಬಂದ ಅನಸೂಯಾ ಅವರು ತಮ್ಮ ಸ್ವಂತ ಬದುಕಿನ ಮೂಲಕವೇ ಅಂಬೇಡ್ಕರ್ ಅವರನ್ನು ಅರ್ಥೈಸಿಕೊಂಡವರು. ಹೋರಾಟದ ಮನೋಭಾವವನ್ನು (ಆ್ಯಕ್ಟಿವಿಸಂ) ಮೈಗೂಡಿಸಿಕೊಂಡಿರುವ ಅಪರೂಪದ ಪ್ರಾಧ್ಯಾಪಕಿ ಇವರು” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಅನಸೂಯಾ ಕಾಂಬಳೆ, “ಪ್ರೊ. ಬಿ.ಎನ್. ಸುಮಿತ್ರಾಬಾಯಿ ಮತ್ತು ಡಾ. ವಿಜಯಾ ಅವರಂತಹ ಇಬ್ಬರು ಹಿರಿಯ ಸಾಧಕರೊಂದಿಗೆ ಸಹ-ಪ್ರಶಸ್ತಿ ಪಡೆಯುತ್ತಿರುವುದು ಸಂಕೋಚ ಮತ್ತು ಸಂಭ್ರಮ ಎರಡನ್ನೂ ಒಟ್ಟಿಗೆ ತಂದಿದೆ. ನಾನು ಅತ್ಯಂತ ಶೋಷಣೆಗೆ ಒಳಗಾದವರ ಬಗ್ಗೆ ಬರೆಯುತ್ತಿದ್ದೇನೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಆದರೆ, ಯಾರ ಕುರಿತು ನಾನು ಬರೆಯುತ್ತಿದ್ದೇನೋ ಆ ಶೋಷಿತರ ಬದುಕು ಮಾತ್ರ ಬದಲಾಗುತ್ತಿಲ್ಲ; ನಮಗಿಲ್ಲಿ ಬರೆದಿದ್ದಕ್ಕೆ ಪ್ರಶಸ್ತಿಗಳು ಬರುತ್ತಿವೆ” ಎಂದು ವಿಷಾದ ವ್ಯಕ್ತಪಡಿಸಿದರು.

ತಮ್ಮ ಸಾಹಿತ್ಯಿಕ ಆಸಕ್ತಿಗೆ ತಂದೆ ಮತ್ತು ಆಕಾಶವಾಣಿಯೇ ಪ್ರೇರಣೆ ಎಂದು ಸ್ಮರಿಸಿದ ಅವರು, “ನನ್ನ ತಂದೆ ಶಿಕ್ಷಕರಾಗಿದ್ದರು, ಮನೆಯಲ್ಲಿ ರೇಡಿಯೋ ಇತ್ತು. ಬಾಲ್ಯದಲ್ಲಿ ಎಚ್.ಎಸ್. ಪಾರ್ವತಿ, ವತ್ಸಲಾ ಕುಲಕರ್ಣಿ, ಯಮುನಾ ಮೂರ್ತಿ ಹಾಗೂ ಬೆಳಗಿನ ಪ್ರದೇಶ ಸಮಾಚಾರ ಓದುತ್ತಿದ್ದ ಬಸಪ್ಪ ಮಾದಾರ ಅವರ ಧ್ವನಿಯ ಏರಿಳಿತಗಳನ್ನು ಅನುಕರಿಸುತ್ತಿದ್ದೆ. ಆಕಾಶವಾಣಿಯ ಈ ಧ್ವನಿಗಳು ನನ್ನ ಮೇಲೆ ಪರೋಕ್ಷವಾಗಿ ಗಾಢ ಪ್ರಭಾವ ಬೀರಿವೆ. ಈಗಲೂ ಆಕಾಶವಾಣಿಯೊಂದಿಗೆ ನನಗೆ ನಿಕಟ ಸಂಬಂಧವಿದೆ” ಎಂದರು.

“ನಾನು ಸುಲಭವಾಗಿ ಪ್ರಶಸ್ತಿಗಳನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ, ಪ್ರಶಸ್ತಿ ಬಂದ ಕಾರಣಕ್ಕಾದರೂ ಹಲವರು ನಮ್ಮ ಬರಹಗಳನ್ನು ಓದುತ್ತಾರೆ ಎಂಬ ಒಂದೇ ಕಾರಣಕ್ಕೆ ಇದನ್ನು ಸ್ವೀಕರಿಸಿದ್ದೇನೆ. 2004ರಲ್ಲಿ ಸಮತಾ ಸೈನಿಕ ದಳದ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಬಿಸಿಯೂಟ ನೌಕರರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದೆ. ಇಂದು ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ಬದುಕಿಗಾಗಿ ದೊಡ್ಡ ಮಟ್ಟದ ಹೋರಾಟ ನಡೆಸುತ್ತಿರುವ ಸಂಕಷ್ಟದ ಸಮಯದಲ್ಲಿ ನಾವಿಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ಸಂಕೋಚ ತಂದಿದೆ. ಆಶಾ ಕಾರ್ಯಕರ್ತೆಯರಿಗೆ ಅಲ್ಪವಾದರೂ ನಿಶ್ಚಿತ ಆದಾಯವಿದೆ; ಆದರೆ ಕೂಲಿ ಮಾಡುವ ಮಹಿಳೆಯರ ಸ್ಥಿತಿ ಇನ್ನೂ ಶೋಚನೀಯವಾಗಿದೆ” ಎಂದು ಕಾಂಬಳೆ ನೋವು ತೋಡಿಕೊಂಡರು.

ಕನ್ನಡ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ನೀಡಲಾಗುವ ಈ ಪ್ರಶಸ್ತಿಯು ₹10,000 ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಸಿದ್ಧ ಲೇಖಕಿ, ಅನುವಾದಕಿ ಮತ್ತು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕಿಯಾಗಿದ್ದ ಎಚ್.ಎಸ್. ಪಾರ್ವತಿ ಅವರು ಕರ್ನಾಟಕ ಲೇಖಕಿಯರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರ ಆಶಯದಂತೆ ಈ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ ಎಂದು ಆರ್. ಸುನಂದಮ್ಮ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಡಾ. ವಿಜಯಾ, ಡಾ. ಅನಸೂಯಾ ಕಾಂಬಳೆ ಮತ್ತು ಆರ್. ಸುನಂದಮ್ಮ ಅವರು ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ್ದು ಸಭಾಂಗಣದ ಗಮನ ಸೆಳೆಯಿತು. ವೇದಿಕೆಯಲ್ಲಿ ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಭೈರಮಂಗಲ ರಾಮೇಗೌಡ, ರಂಗಕಲಾವಿದೆ ಹಾಗೂ ಅಬ್ಬಾಸ್ ಖಾನ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ.ಎಸ್. ಸಂಧ್ಯಾ ಉಪಸ್ಥಿತರಿದ್ದರು. ರೇಣುಕಾ ಕೋಡಗಂಟಿ ಕಾರ್ಯಕ್ರಮ ನಿರೂಪಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಮತಾ ಬಣಕ್ಕೆ ಗೆಲುವು: ವಿಪಕ್ಷ ನಾಯಕ ರಿತಬ್ರತ ಬ್ಯಾನರ್ಜಿ ನೇಮಕ ರದ್ದುಗೊಳಿಸಿದ ಹೈಕೋರ್ಟ್

ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ರಿತಬ್ರತ ಬ್ಯಾನರ್ಜಿ ಅವರನ್ನು...

ಔರಾದ್ | ಬಹುಜನ ಜನಸಂಪರ್ಕ ಕಾರ್ಯಾಲಯದಲ್ಲಿ ಕನಕದಾಸರ ಜಯಂತಿ ಆಚರಣೆ

ಔರಾದ್ ಪಟ್ಟಣದ ಬಹುಜನ ಜನಸಂಪರ್ಕ ಕಾರ್ಯಾಲಯದಲ್ಲಿ ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯನ್ನು...

ಔರಾದ್‌ | ಬದುಕಿನಲ್ಲಿ ಕನಕದಾಸರ ಆದರ್ಶ ಅಳವಡಿಸಿಕೊಳ್ಳಿ : ಶಾಮಣ್ಣ ಮೇತ್ರೆ

ಔರಾದ್ ತಾಲ್ಲೂಕಿನ ರಕ್ಷಾಳ (ಬಿ) ಗ್ರಾಮದಲ್ಲಿ ಕನಕದಾಸರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಗ್ರಾಮದ...

ಧಾರವಾಡ |ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ ಹೊಣೆ ಇಂದಿನ ಮಕ್ಕಳ ಹೆಗಲ ಮೇಲಿದೆ

ಇಂದಿನ ಮಕ್ಕಳಿಗೆ ಕನ್ನಡ ನಾಡು-ನುಡಿ, ನೆಲ, ಜಲ, ಸಂಸ್ಕೃತಿ ಹಾಗೂ ಪರಂಪರೆಗಳ...