ಬಾಲಿವುಡ್ ನಟಿ ಕೃತಿ ಸನೋನ್ ನಟಿಸಿರುವ ರಕ್ಷಾ ಬಂಧನ್ ಕುರಿತ ಜಾಹೀರಾತೊಂದು ಉಡುಪಿನ ವಿಚಾರವಾಗಿ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಪ್ರಸಿದ್ಧ ಆಭರಣ ಸಂಸ್ಥೆ ಜಿವಾ (GIVA) ಆ ಜಾಹೀರಾತನ್ನು ಎಲ್ಲ ಮಾಧ್ಯಮಗಳಿಂದ ಹಿಂಪಡೆದಿದೆ.
ಕೃತಿ ಸನೋನ್ ಅವರು ದಂತವರ್ಣದ ಉಡುಪು ಧರಿಸಿ ಕಾಣಿಸಿಕೊಂಡಿದ್ದ ಜಾಹೀರಾತು ಆನ್‌ಲೈನ್‌ನಲ್ಲಿ ಬಿಡುಗಡೆಯಾದ ಬಳಿಕ, ಅವರ ಉಡುಪಿನ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬ್ರ್ಯಾಂಡ್ ಜಾಹೀರಾತನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿದೆ.
ಈ ಕುರಿತು ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದ್ದು, “ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಹಬ್ಬಗಳ ಬಗ್ಗೆ ನಮಗೆ ಅತ್ಯಂತ ಗೌರವವಿದೆ. ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಆಚರಿಸುವುದನ್ನು ನಾವು ಸದಾ ನಂಬಿದ್ದೇವೆ. ಈ ಬಾರಿ ನಮ್ಮ ಸಾಕುಪ್ರಾಣಿಗಳೊಂದಿಗೂ ಪ್ರೀತಿ ಮತ್ತು ಸಂಭ್ರಮವನ್ನು ಹಂಚಿಕೊಳ್ಳಲು ಬಯಸಿದ್ದೆವು. ನಮ್ಮ ಇತ್ತೀಚಿನ ಜಾಹೀರಾತಿನಿಂದ ಸಮಾಜದ ಯಾವುದಾದರೂ ವರ್ಗದ ಭಾವನೆಗಳಿಗೆ ಉದ್ದೇಶಪೂರ್ವಕವಲ್ಲದೆ ಧಕ್ಕೆಯಾಗಿದ್ದರೆ, ಅದು ನಮ್ಮ ಉದ್ದೇಶವಾಗಿರಲಿಲ್ಲ. ಗೌರವದ ದೃಷ್ಟಿಯಿಂದ ಜಾಹೀರಾತನ್ನು ಎಲ್ಲ ಮಾಧ್ಯಮಗಳಿಂದ ಹಿಂಪಡೆದಿದ್ದೇವೆ” ಎಂದು ತಿಳಿಸಿದೆ.
ಜಾಹೀರಾತಿನ ಕುರಿತು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳವಾರ ಕೃತಿ ಸನೋನ್ ತಮ್ಮ ಉಡುಪನ್ನು ಸಮರ್ಥಿಸಿಕೊಂಡಿದ್ದಾರೆ. “ಹಬ್ಬಗಳ ಸಾರವು ನಾವು ಧರಿಸುವ ಬಟ್ಟೆಯಲ್ಲಿ ಇಲ್ಲ. ಸಂಪ್ರದಾಯಗಳ ಬಗ್ಗೆ ನಾವು ಹೊಂದಿರುವ ಭಾವನೆ ಮತ್ತು ಅರ್ಥದಲ್ಲಿದೆ. ರಕ್ಷಾ ಬಂಧನವೆಂದರೆ ರಕ್ಷಣೆಯ ಬಂಧ. ನನ್ನ ಸಹೋದರಿ ಮತ್ತು ನಾನು ಪರಸ್ಪರ ರಾಖಿ ಕಟ್ಟಿಕೊಳ್ಳುತ್ತೇವೆ. ಸಹೋದರನಷ್ಟೇ ಪರಸ್ಪರರನ್ನು ನಾವು ರಕ್ಷಿಸಬಲ್ಲೆವು ಎಂಬುದು ನಮಗೆ ಗೊತ್ತಿದೆ” ಎಂದಿದ್ದಾರೆ.
“ನಮ್ಮ ನಾಯಿಗಳಿಗೂ ಈ ಪ್ರಾರ್ಥನೆ ಮತ್ತು ಭರವಸೆ ಅನ್ವಯಿಸುತ್ತದೆ. ಏಕೆಂದರೆ ಅವುಗಳೂ ನಮ್ಮ ಕುಟುಂಬದ ಭಾಗ. ಮಹಿಳೆಯರು ಏನು ಧರಿಸಬೇಕು ಎಂದು ಹೇಳುವುದನ್ನು ನಾವು ಯಾವಾಗ ನಿಲ್ಲಿಸುತ್ತೇವೆ? ಕಾಲಕ್ರಮೇಣ ಸಾಂಪ್ರದಾಯಿಕ ಫ್ಯಾಷನ್ ಬದಲಾಗಿದೆ. ಆದರೆ ಮಹಿಳೆಯೊಬ್ಬಳ ಸಂಸ್ಕೃತಿಯ ಮೇಲಿನ ಗೌರವವನ್ನು ಆಕೆಯ ಉಡುಪಿನಿಂದಲೇ ಅಳೆಯಲಾಗುತ್ತಿದೆ. ಸಂಸ್ಕೃತಿ ಮತ್ತು ಸಂಪ್ರದಾಯಗಳು ಆಕೆಯ ಹೃದಯದಲ್ಲಿರುತ್ತವೆ, ಕಂಠದ ಬಳಿಯ ಉಡುಪಿನಲ್ಲಲ್ಲ” ಎಂದು ಕೃತಿ ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೂ ಮುನ್ನ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಕೂಡ ಕೃತಿ ಅವರ ಉಡುಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕೃತಿ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದ ಕಂಗನಾ, ಜಾಹೀರಾತನ್ನು “ಉದ್ದೇಶಪೂರ್ವಕವಾಗಿ ವಿಚಿತ್ರವಾಗಿ ಕಾಣುವಂತೆ ಮಾಡಲಾಗಿದೆ” ಎಂದು ಟೀಕಿಸಿದ್ದರು.
ಇದನ್ನೂ ಓದಿ: ’ಏನು ಧರಿಸಬೇಕು, ಎಲ್ಲಿಗೆ ಹೋಗಬೇಕು ಎಂಬುದು ಆಕೆಯ ಹಕ್ಕು’: ನಟಿ ಕೃತಿ ಸನೋನ್ ಬೆಂಬಲಿಸಿದ ರಾಹುಲ್ ಗಾಂಧಿ
“ಇಂದು ಮಹಿಳೆಯರ ವಾರ್ಡ್‌ರೋಬ್‌ನಲ್ಲಿ ವಿವಿಧ ಬಗೆಯ ಉಡುಪುಗಳಿವೆ. ಇಂದಿನ ಮಹಿಳೆ ಜಾಗತಿಕ ಮಹಿಳೆ. ಕಾಕ್‌ಟೇಲ್ ಡ್ರೆಸ್‌ನಿಂದ ಲೆಹಂಗಾ ಚೋಲಿ, ಜೀನ್ಸ್‌ನಿಂದ ಸೀರೆ, ಬಿಕಿನಿಯಿಂದ ಸಲ್ವಾರ್ ಕಮೀಜ್‌ವರೆಗೆ ಹಲವು ಆಯ್ಕೆಗಳಿವೆ. ಇಷ್ಟೊಂದು ಆಯ್ಕೆಗಳಿರುವಾಗ ಸಹೋದರನಿಗೆ ರಾಖಿ ಕಟ್ಟುವಾಗ ಒಳಉಡುಪು ಅಥವಾ ಬಿಕಿನಿ ಧರಿಸುವ ಅಗತ್ಯವೇನು?” ಎಂದು ಪ್ರಶ್ನಿಸಿದ್ದರು.
ಈ ನಡುವೆ ಕೃತಿ ಸನೋನ್ ಅವರನ್ನು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬೆಂಬಲಿಸಿದ್ದಾರೆ. ಕೃತಿ ಅವರ ಹೇಳಿಕೆಯನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿರುವ ರಾಹುಲ್, ಮಹಿಳೆಯರ ಉಡುಪು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
“ಮಹಿಳೆಯೊಬ್ಬಳು ಏನು ಧರಿಸುತ್ತಾಳೆ, ಏನು ಮಾಡುತ್ತಾಳೆ ಮತ್ತು ಎಲ್ಲಿಗೆ ಹೋಗುತ್ತಾಳೆ ಎಂಬುದು ಆಕೆಯ ಆಯ್ಕೆ. ತಮ್ಮ ಸ್ವಾತಂತ್ರ್ಯವನ್ನು ಬಳಸಿಕೊಳ್ಳುವ ಮಹಿಳೆಯರನ್ನು ಟ್ರೋಲ್ ಮಾಡುವುದನ್ನು ನಿಲ್ಲಿಸಿ” ಎಂದು ಅವರು ಹೇಳಿದ್ದಾರೆ. ಜೊತೆಗೆ #SmashThePatriarchy ಹ್ಯಾಶ್‌ಟ್ಯಾಗ್‌ನ್ನೂ ಬಳಸಿದ್ದಾರೆ.




