ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯಲ್ಲಿ ದಲಿತ ವ್ಯಕ್ತಿಯೊಬ್ಬರ ಮೇಲೆ ತಮ್ಮನ್ನು ತಾವು ಗೋರಕ್ಷಕರು ಎಂದು ಕರೆದುಕೊಳ್ಳುವ ಬಜರಂಗದಳದ ಕಾರ್ಯಕರ್ತರ ಗುಂಪೊಂದು ಹಲ್ಲೆ ನಡೆಸಿ, ಬಲವಂತವಾಗಿ ಸಗಣಿ ತಿನ್ನಿಸಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಹಾಗೂ ಸಾಮಾಜಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೂ ಆಶ್ಚರ್ಯವೆಂದರೆ ಘಟನೆ ನಡೆದು ಹಲವು ದಿನಗಳಾದರೂ ಇನ್ನೂ ಕಿಡಿಗೇಡಿಗಳ ಬಂಧನವಾಗಿಲ್ಲ.
ಸಂತ್ರಸ್ತ ಪರಮೇಶ್ವರ್ ಸುಹಾಸ್ ಹಿವಾಳೆ ಅವರು ದೇವ್ಗಾಂವ್ ರಾಜಾದ ಜಾನುವಾರು ಸಂತೆಯಿಂದ ಎತ್ತೊಂದನ್ನು ಖರೀದಿಸಿ, ತಮ್ಮ 11 ವರ್ಷದ ಮಗ ಹಾಗೂ ಸಹೋದ್ಯೋಗಿ ನಾರಾಯಣ ಕಾಂಬ್ಳೆ ಜೊತೆ ವಾಹನದಲ್ಲಿ ಹಿಂತಿರುಗುತ್ತಿದ್ದರು. ಜಾಲ್ನಾದ ಕನ್ಹೈಯಾನಗರ ಪ್ರದೇಶದ ಬಳಿ ವಾಹನವನ್ನು ತಡೆದ ಆರು ಜನರ ಗುಂಪು, ಎತ್ತನ್ನು ಕಸಾಯಿಖಾನೆಗೆ ಮಾರಾಟ ಮಾಡಲು ಒಯ್ಯಲಾಗುತ್ತಿದೆ ಎಂದು ಆರೋಪಿಸಿದೆ.
ಇದನ್ನೂ ಓದಿ: ಉತ್ತರ ಪ್ರದೇಶ | ಮಹಿಳೆಯ ಮೇಲೆ ಅತ್ಯಾಚಾರ; ಬಜರಂಗದಳ ನಾಯಕ ಬಂಧನ
ಸಂತ್ರಸ್ತರು ಎತ್ತು ಖರೀದಿಸಿದವರ ದಾಖಲೆಗಳನ್ನು ತೋರಿಸಿದರೂ ಲೆಕ್ಕಿಸದ ಕಿಡಿಗೇಡಿಗಳು, ಅವರ ಜಾತಿ ಕೇಳಿ ಜಾತಿ ನಿಂದನೆ ಮಾಡಿದ್ದಾರೆ. ಬಳಿಕ ಪರಮೇಶ್ವರ್ ಅವರ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಅವರ ಬಾಯಿಗೆ ಸಗಣಿ ತುರುಕಿದ್ದಾರೆ. ಅವರ 11 ವರ್ಷದ ಮಗನಿಗೂ ಸಗಣಿ ತಿನ್ನಿಸಲು ಯತ್ನಿಸಲಾಯಿತಾದರೂ, ತಂದೆ ಆತನನ್ನು ರಕ್ಷಿಸಿದ್ದಾರೆ.
ಆರೋಪಿಗಳು ಈ ಕೃತ್ಯವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿ, ಪೊಲೀಸರಿಗೆ ದೂರು ನೀಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಇದರಿಂದ ಹೆದರಿದ್ದ ಸಂತ್ರಸ್ತರು ಪ್ರಾರಂಭದಲ್ಲಿ ದೂರು ನೀಡಿರಲಿಲ್ಲ. ಆದರೆ, ಈ ವಿಡಿಯೋ ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಪ್ರಾರಂಭಿಸಿದಾಗ, ಸಂತ್ರಸ್ತರು ಧೈರ್ಯ ಮಾಡಿ ಜಾಲ್ನಾ ತಹಸಿಲ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ವೆಂಕಟೇಶ್ ಭಗತ್, ಅರ್ಜುನ್ ಸಿಂಗ್, ರಿತೇಶ್ ದೇಶ್ಮುಖ್, ಶಿವರಾಜ್ ಪಿಚಾಡೆ, ಯಶ್ ಸರ್ಕೇಟ್ ಮತ್ತು ಸೋಮೇಶ್ ಪಾಟೀಲ್ ಎಂಬ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯಡಿ ಹಲ್ಲೆ, ಕಾನೂನುಬಾಹಿರ ಗುಂಪುಗಾರಿಕೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಅಟ್ರಾಸಿಟಿ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಆದಾಗ್ಯೂ, ಎಫ್ಐಆರ್ ದಾಖಲಾಗಿ ದಿನಗಳು ಕಳೆದರೂ ಇದುವರೆಗೆ ಯಾವುದೇ ಆರೋಪಿಯನ್ನು ಬಂಧಿಸಲಾಗಿಲ್ಲ ಎಂದು ಪೊಲೀಸರೇ ತಿಳಿಸಿದ್ದಾರೆ. ಪ್ರಕರಣದ ತನಿಖೆಯನ್ನು ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಅವರಿಗೆ ವಹಿಸಲಾಗಿದೆ. ಆರೋಪಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಂಡು ಬಂಧಿಸಬೇಕೆಂದು ದಲಿತ ಸಂಘಟನೆಗಳು ಹಾಗೂ ಸಾರ್ವಜನಿಕರು ತೀವ್ರವಾಗಿ ಆಗ್ರಹಿಸುತ್ತಿದ್ದಾರೆ. ಆದರೆ ಯಾಕೆ ಬಂಧಿಸಲಾಗಿಲ್ಲ ಎಂಬ ಬಗ್ಗೆ ಮಾತ್ರ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.




