ಇತ್ತೀಚೆಗಷ್ಟೇ ಮುಗಿದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋತು ಅಧಿಕಾರ ಕಳೆದುಕೊಂಡ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಗುರುವಾರ ವಕೀಲರ ಸಮವಸ್ತ್ರದಲ್ಲಿ ಕೋಲ್ಕತ್ತಾ ಹೈಕೋರ್ಟ್‌ಗೆ ಹಾಜರಾಗಿರುವುದು ಹೊಸ ಚರ್ಚಾ ವಿಷಯವಾಗಿದೆ.
ಚುನಾವಣೆಯ ನಂತರ ನಡೆದ ಗಲಭೆಗಳಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಾದಿಸಲು ಅವರು ಕೋರ್ಟಿಗೆ ಬಂದಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ, ಮಮತಾ ಅವರ ವಕೀಲ ವೃತ್ತಿಯ ಪ್ರಸ್ತುತ ಸ್ಥಿತಿಯ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪಶ್ಚಿಮ ಬಂಗಾಳ ರಾಜ್ಯ ಬಾರ್ ಕೌನ್ಸಿಲ್ ಅನ್ನು ಕೇಳಿದೆ.
ತಮ್ಮ ಖಾಯಂ ಬಿಳಿ ಮತ್ತು ನೀಲಿ ಅಂಚಿನ ಸೀರೆಯ ಮೇಲೆ ಕಪ್ಪು ಕೋಟ್ ಹಾಗೂ ಬಿಳಿ ಬ್ಯಾಂಡ್ ಧರಿಸಿ ಮಮತಾ ಬ್ಯಾನರ್ಜಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಚುನಾವಣೆಯ ಸಮಯದಲ್ಲಿ ರಾಜ್ಯದಲ್ಲಿ ನಡೆದಿದೆ ಎನ್ನಲಾದ ಹಿಂಸಾಚಾರದ ಬಗ್ಗೆ ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಮತ್ತು ನ್ಯಾಯಮೂರ್ತಿ ಪಾರ್ಥಸಾರಥಿ ಸೇನ್ ಅವರ ವಿಭಾಗೀಯ ಪೀಠದ ಮುಂದೆ ಅವರು ವಾದಿಸಿದರು.
ಇದನ್ನು ಓದಿದ್ದೀರಾ? ಕೇರಳಂ ‘ಕೈ’ ಹಿಡಿದ ‘ಪುಸ್ತಕ ಪ್ರೇಮಿ’ ಸಜ್ಜನ ಸತೀಶನ್ ಬಗ್ಗೆ ನಿಮಗೆಷ್ಟು ಗೊತ್ತು?
ಹಲ್ಲೆಗೀಡಾದವರ ಪಟ್ಟಿ ಮತ್ತು ಛಾಯಾಚಿತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಮಮತಾ, ‘ಬಂಗಾಳದ ಜನತೆಯನ್ನು ರಕ್ಷಿಸಿ’ ಎಂದು ಕೋರ್ಟ್ ಅನ್ನು ಒತ್ತಾಯಿಸಿದರು. ಈ ಪಿಐಎಲ್ ಅನ್ನು ಹಿರಿಯ ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರ ಮಗ, ವಕೀಲ ಸಿರ್ಸನ್ಯಾ ಬ್ಯಾನರ್ಜಿ ಸಲ್ಲಿಸಿದ್ದರು.
ಮಮತಾ ಅವರ ನ್ಯಾಯಾಲಯದ ಪ್ರವೇಶದ ನಂತರ ಹೇಳಿಕೆ ಬಿಡುಗಡೆ ಮಾಡಿರುವ ಬಿಸಿಐ, “ಮಮತಾ ಬ್ಯಾನರ್ಜಿ ಅವರು 2011 ರಿಂದ 2026 ರವರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸಾಂವಿಧಾನಿಕ ಹುದ್ದೆಯಲ್ಲಿದ್ದರು. ಅವರು ಕೋರ್ಟಿನಲ್ಲಿ ವಾದಿಸಲು ಅರ್ಹರಿದ್ದಾರೆಯೇ ಎಂಬ ಬಗ್ಗೆ ಈಗ ಯಾವುದೇ ಅಭಿಪ್ರಾಯಪಡಿಸದೆ, ಅವರ ಎನ್‌ರೋಲ್‌ಮೆಂಟ್, ವೃತ್ತಿ, ಅಮಾನತು ಮತ್ತು ಮರಳಿ ವೃತ್ತಿಗೆ ಬಂದಿದ್ದರ ಬಗ್ಗೆ ಮೂಲ ದಾಖಲೆಗಳನ್ನು ಪರಿಶೀಲಿಸಬೇಕು,” ಎಂದು ತಿಳಿಸಿದೆ. ಪಶ್ಚಿಮ ಬಂಗಾಳ ರಾಜ್ಯ ಬಾರ್ ಕೌನ್ಸಿಲ್‌ಗೆ 9 ಅಂಶಗಳ ಪಟ್ಟಿಯನ್ನು ಕಳುಹಿಸಿರುವ ಬಿಸಿಐ, ಮೇ 16ರೊಳಗಾಗಿ ಉತ್ತರ ನೀಡುವಂತೆ ಸೂಚಿಸಿದೆ.




