ವಿ.ಡಿ. ಸತೀಶನ್ ಅವರು ಕೇರಳ ರಾಜಕಾರಣದಲ್ಲಿ ಪರಿಸರ ಪರವಾದ ದೃಢ ನಿಲುವುಗಳನ್ನು ನಿರಂತರವಾಗಿ ಪ್ರತಿಪಾದಿಸುವ ಅಪರೂಪದ ನಾಯಕ. ಪಶ್ಚಿಮ ಘಟ್ಟಗಳ ರಕ್ಷಣೆಯ ‘ಮಾಧವ್ ಗಾಡ್ಗೀಳ್ ಸಮಿತಿ ವರದಿ’ಯನ್ನು ಸ್ವಪಕ್ಷೀಯರು ಹಾಗೂ ಚರ್ಚ್‌ಗಳು ವಿರೋಧಿಸಿದಾಗಲೂ ಇವರು ಬಹಿರಂಗವಾಗಿ ಬೆಂಬಲಿಸಿದ್ದರು. ಅಕ್ರಮ ಕ್ವಾರಿಗಳು ಮತ್ತು ಭೂ ಒತ್ತುವರಿಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿದ್ದಾರೆ
“ಕೇರಳ ವಿಧಾನಸಭೆಯಲ್ಲಿ ಯುಡಿಎಫ್ ಮೈತ್ರಿಕೂಟ 100ಕ್ಕೂ ಹೆಚ್ಚು ಸೀಟು ಗೆಲ್ಲದಿದ್ದರೆ(140 ಒಟ್ಟು ವಿಧಾನಸಭಾ ಕ್ಚೇತ್ರ), ನಾನು ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ” – ಚುನಾವಣಾ ಪ್ರಚಾರದ ವೇಳೆ ಅಂದಿನ ವಿಪಕ್ಷ ನಾಯಕ ವಿ.ಡಿ. ಸತೀಶನ್ ಹಾಕಿದ್ದ ಸವಾಲಿದು. ಆಗ ಅವರದೇ ಪಕ್ಷದ ಹಲವರು ಈ ಮಾತನ್ನು ಲಘುವಾಗಿ ಪರಿಗಣಿಸಿ ನಕ್ಕಿದ್ದರು. ಆದರೆ, ಫಲಿತಾಂಶ ಹೊರಬಿದ್ದಾಗ ಸತೀಶನ್ ನಗು ಗೆಲುವಿನದ್ದಾಗಿತ್ತು. ಅವರ ನೇತೃತ್ವದಲ್ಲಿ ಯುಡಿಎಫ್ ಮೈತ್ರಿಕೂಟ ಬರೋಬ್ಬರಿ 102 ಸ್ಥಾನಗಳನ್ನು ಗೆದ್ದು ಸಾರ್ವಕಾಲಿಕ ದಾಖಲೆ ಬರೆದರೆ, ಕಾಂಗ್ರೆಸ್ ಏಕಾಂಗಿಯಾಗಿ 63 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ.
ಎರ್ನಾಕುಲಂ ಜಿಲ್ಲೆಯ ಪರವೂರ್ ಕ್ಷೇತ್ರದಿಂದ ಸತತ 6ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ 61 ವರ್ಷದ ಸತೀಶನ್, ಇದೀಗ ಕೇರಳದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. 2021ರ ಚುನಾವಣೆಯಲ್ಲಿ ಎಲ್‌ಡಿಎಫ್ ಮೈತ್ರಿಕೂಟ ಸತತ ಎರಡನೇ ಬಾರಿಗೆ ಅಧಿಕಾರಕ್ಕೇರಿದ್ದಾಗ, ಕೇವಲ 21 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್ ಪಾತಾಳಕ್ಕೆ ಕುಸಿದಿತ್ತು. ಅಂತಹ ಕಠಿಣ ಪರಿಸ್ಥಿತಿಯಲ್ಲಿ ವಿಪಕ್ಷ ನಾಯಕರಾಗಿ ನೇಮಕಗೊಂಡು ಪಕ್ಷವನ್ನು ಮೇಲೆತ್ತಿದ ಸತೀಶನ್, ಇದೀಗ ಸಿಎಂ ಗಾದಿಗೇರಿದ್ದಾರೆ.
ರಾಜಕೀಯದ ಆಚೆಗೆ ಸತೀಶನ್ ಅವರನ್ನು “ಪುಸ್ತಕ ಪ್ರೇಮಿ ರಾಜಕಾರಣಿ” ಎಂದೇ ಕರೆಯಲಾಗುತ್ತದೆ. 2025ರಲ್ಲೇ ಅವರು ಇಂಗ್ಲಿಷ್ ಮತ್ತು ಮಲಯಾಳಂನ ಸುಮಾರು 60 ಪುಸ್ತಕಗಳನ್ನು ಓದಿ ಮುಗಿಸಿದ್ದರು. ಆರ್. ಲಕ್ಷ್ಮಿಪ್ರಿಯಾ ಅವರನ್ನು ವಿವಾಹವಾಗಿರುವ ಇವರಿಗೆ ಉಣ್ಣಿಮಾಯ ಎಂಬ ಮಗಳಿದ್ದಾಳೆ. ಕೇವಲ 21 ಸ್ಥಾನಗಳಲ್ಲಿದ್ದ ಪಕ್ಷವನ್ನು ಇಂದು ಅಧಿಕಾರದ ಗಾದಿಗೆ ತಂದು ನಿಲ್ಲಿಸಿ, ನೂತನ ಮುಖ್ಯಮಂತ್ರಿಯಾಗಿ ಹೊಣೆ ಹೊತ್ತಿರುವ ವಿ.ಡಿ. ಸತೀಶನ್ ಅವರು, ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ಆಧುನಿಕ ಕಾರ್ಯತಂತ್ರಗಳ ಪ್ರಧಾನ ರೂವಾರಿಯಾಗಿ ಹೊಸ ಇತಿಹಾಸ ಬರೆದಿದ್ದಾರೆ.
ಸತೀಶನ್ ಅವರು ಕೇರಳ ರಾಜಕಾರಣದಲ್ಲಿ ಪರಿಸರ ಪರವಾದ ದೃಢ ನಿಲುವುಗಳನ್ನು ನಿರಂತರವಾಗಿ ಪ್ರತಿಪಾದಿಸುವ ಅಪರೂಪದ ನಾಯಕ. ಪಶ್ಚಿಮ ಘಟ್ಟಗಳ ರಕ್ಷಣೆಯ ‘ಮಾಧವ್ ಗಾಡ್ಗೀಳ್ ಸಮಿತಿ ವರದಿ’ಯನ್ನು ಸ್ವಪಕ್ಷೀಯರು ಹಾಗೂ ಚರ್ಚ್‌ಗಳು ವಿರೋಧಿಸಿದಾಗಲೂ ಇವರು ಬಹಿರಂಗವಾಗಿ ಬೆಂಬಲಿಸಿದ್ದರು. ಅಕ್ರಮ ಕ್ವಾರಿಗಳು ಮತ್ತು ಭೂ ಒತ್ತುವರಿಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿದ್ದಾರೆ. 2024ರ ವಯನಾಡು ಭೂಕುಸಿತದ ದುರಂತದ ನಂತರ, ಸರ್ಕಾರದ ವಿಪತ್ತು ನಿರ್ವಹಣಾ ವೈಫಲ್ಯವನ್ನು ಟೀಕಿಸಿದ್ದ ಅವರು, ಪ್ರವಾಸೋದ್ಯಮ ಆಧಾರಿತ ಬೆಳವಣಿಗೆಯ ಬದಲು ಸುಸ್ಥಿರ ಅಭಿವೃದ್ಧಿ ನೀತಿಗಳ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದ್ದರು.
ತಲೆಮಾರುಗಳ ಬದಲಾವಣೆಯ ಸ್ಪಷ್ಟ ಸಂದೇಶದೊಂದಿಗೆ ಅಂದು ವಿರೋಧ ಪಕ್ಷದ ನಾಯಕನ ಹುದ್ದೆಗೇರಿದ್ದ ಸತೀಶನ್, ನೋಡನೋಡುತ್ತಿದ್ದಂತೆಯೇ ಇಡೀ ಮೈತ್ರಿಕೂಟದ ಪ್ರಶ್ನಾತೀತ ನಾಯಕರಾಗಿ ಬೆಳೆದು ನಿಂತರು. ಕುಸಿದುಬಿದ್ದಿದ್ದ ಯುಡಿಎಫ್ ಅನ್ನು ಮರುಸಂಘಟಿಸುವ ಕೆಲಸ ಅವರ ಪಾಲಿಗೆ ಅತ್ಯಂತ ಸವಾಲಿನದ್ದಾಗಿತ್ತು. ಇದೇ ವರ್ಷದ ಫೆಬ್ರವರಿಯಲ್ಲಿ ಚುನಾವಣೆಗಾಗಿ ಕಾಂಗ್ರೆಸ್ ಕಾರ್ಯಕರ್ತರನ್ನು ಹುರಿದುಂಬಿಸಲು ಅವರು ರಾಜ್ಯಾದ್ಯಂತ ಪ್ರವಾಸ ಆಯೋಜಿಸಿದ್ದರು. ಇದು ಪಕ್ಷಕ್ಕೆ ಭಾರಿ ಲಾಭ ತಂದುಕೊಟ್ಟಿತು. ಅಲ್ಲದೆ, ಯುಡಿಎಫ್‌ನಿಂದ ದೂರ ಸರಿದಿದ್ದ ವಿವಿಧ ಕ್ಷೇತ್ರಗಳ ತಜ್ಞರು, ಬರಹಗಾರರು ಹಾಗೂ ಸಾಮಾಜಿಕ ಸಂಘಟನೆಗಳನ್ನು ಮತ್ತೆ ಪಕ್ಷದತ್ತ ಸೆಳೆಯುವಲ್ಲಿ ಅವರು ಯಶಸ್ವಿಯಾದರು.
ವಿರೋಧ ಪಕ್ಷದ ನಾಯಕರಾಗಿದ್ದ 5 ವರ್ಷಗಳ ಅವಧಿಯಲ್ಲಿ, ನಿರ್ಗಮಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ನೇರವಾಗಿ ಎದುರಿಸುವ ಮೂಲಕ ಸತೀಶನ್ ಪ್ರಬಲ ನಾಯಕರಾಗಿ ರೂಪುಗೊಂಡರು. ಸಿಪಿಐ(ಎಂ) ಒಳಗೆ ವಿಜಯನ್ ಅಜೇಯ ನಾಯಕರಾಗಿ ಹೊರಹೊಮ್ಮುತ್ತಿದ್ದಾಗ, ಸತೀಶನ್ ಅವರ ಹೋರಾಟದ ರಾಜಕಾರಣ ರಾಜ್ಯದ ಗಮನ ಸೆಳೆಯಿತು. ಸರ್ಕಾರದ ಯೋಜನೆಗಳ ವೈಫಲ್ಯವನ್ನು ನಿರಂತರವಾಗಿ ಪ್ರಶ್ನಿಸಿದ್ದಕ್ಕಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಎಡಪಂಥೀಯ ಬೆಂಬಲಿಗರಿಂದ ಅವರು ತೀವ್ರ ದಾಳಿ ಎದುರಿಸಬೇಕಾಯಿತು. ಈ ಚುನಾವಣೆಯ ಮುನ್ನಾವಧಿಯಲ್ಲಂತೂ ಸಿಪಿಐ(ಎಂ) ಕಾರ್ಯಕರ್ತರು ಅವರ ವಿರುದ್ಧ “ಸುಳ್ಳುಗಾರ ಸತೀಶನ್” ಎಂಬ ಅಭಿಯಾನವನ್ನೇ ಆರಂಭಿಸಿದ್ದರು. ಆದರೂ ಅವರು ಎದೆಗುಂದಲಿಲ್ಲ.
ಅವರ ದೃಢವಾದ ಜಾತ್ಯತೀತ ನಿಲುವು, ರಾಜ್ಯದ ಪ್ರಭಾವಿ ಸಮುದಾಯ ಮುಖಂಡರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತು. ಇತರ ನಾಯಕರು ಮೌನ ವಹಿಸಿದ್ದಾಗಲೂ, ಸಮಾಜದಲ್ಲಿನ ಧ್ರುವೀಕರಣದ ವಿರುದ್ಧ ಅವರ ಅಚಲವಾದ ನಿಲುವು ಜನಪ್ರಿಯತೆ ಹೆಚ್ಚಿಸಿತು. ಯಾವುದೇ ಸಮುದಾಯದ ಹೆಸರೆತ್ತದೆ, “ನಿಮ್ಮ ವೋಟ್ ಬ್ಯಾಂಕ್ ಅನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ” ಎಂದು ಬಹಿರಂಗ ಸವಾಲು ಹಾಕಿದರು. ಕೆಲವು ಮುಖಂಡರು ಕಾಂಗ್ರೆಸ್‌ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸಿದಾಗ, ಕ್ರಿಶ್ಚಿಯನ್ ಪಾದ್ರಿಗಳು ಸೇರಿದಂತೆ ಎಲ್ಲರಿಗೂ, ರಾಜಕೀಯವನ್ನು ರಾಜಕಾರಣಿಗಳಿಗೆ ಬಿಟ್ಟುಬಿಡಿ ಎಂದು ಅವರು ಕಠಿಣ ಎಚ್ಚರಿಕೆ ನೀಡಿದ್ದರು.
ಪಕ್ಷ ಸಂಘಟನೆಯಲ್ಲಿ ಅವರ ನಾಯಕತ್ವದ ಮೊದಲ ನೈಜ ಅಗ್ನಿಪರೀಕ್ಷೆ ಎದುರಾಗಿದ್ದು 2022 ರಿಂದ 2024 ರ ಅವಧಿಯಲ್ಲಿ ನಡೆದ ತೃಕ್ಕಾಕರ, ಪುತ್ತುಪ್ಪಲ್ಲಿ, ಪಾಲಕ್ಕಾಡ್ ಮತ್ತು ನಿಲಂಬೂರ್ ಉಪಚುನಾವಣೆಗಳಲ್ಲಿ. ಇದರಲ್ಲಿನ ಗೆಲುವು ಅವರ ವಿಶ್ವಾಸವನ್ನು ಇಮ್ಮಡಿಗೊಳಿಸಿತು. ತರುವಾಯ 2024ರ ಲೋಕಸಭೆ ಹಾಗೂ 2025ರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಅವರು ಯುಡಿಎಫ್ ಅನ್ನು ಅಭೂತಪೂರ್ವ ಗೆಲುವಿನತ್ತ ಮುನ್ನಡೆಸಿದರು. ತಳಮಟ್ಟದಲ್ಲಿ ಕಾಂಗ್ರೆಸ್ ಪುನಶ್ಚೇತನಗೊಳಿಸಲು ಬೂತ್ ಸಮಿತಿಗಳನ್ನು ಮರುಸಕ್ರಿಯಗೊಳಿಸಿದರು. ಪ್ರಚಾರ ಕಾವೇರಿದಾಗ ಹೆಚ್ಚಿನ ಕಾಂಗ್ರೆಸ್ ನಾಯಕರು ತಮ್ಮ ಕ್ಷೇತ್ರಗಳಿಗೆ ಸೀಮಿತವಾಗಿದ್ದರೆ, ಸತೀಶನ್ ಮಾತ್ರ ಇಡೀ ರಾಜ್ಯ ಸುತ್ತಿ ಪ್ರಚಾರ ನಡೆಸಿದರು.
ಕಾನೂನು ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ ದಿಸೆಯಲ್ಲೇ ಎನ್‌ಎಸ್‌ಯುಐ (NSUI) ಮೂಲಕ ರಾಜಕೀಯ ಪ್ರವೇಶಿಸಿದ ಅವರು, 2006-2011ರ ಎಲ್‌ಡಿಎಫ್ ಸರ್ಕಾರದ ಅವಧಿಯಲ್ಲಿ ವಿಧಾನಸಭೆಯ ಅತ್ಯಂತ ಸಕ್ರಿಯ ಶಾಸಕರಲ್ಲಿ ಒಬ್ಬರಾಗಿದ್ದರು. ಅಕ್ರಮ ಲಾಟರಿ ದಂಧೆ ಕುರಿತು ಅವರ ಕರಾರುವಾಕ್ಕಾದ ಚರ್ಚೆಗಳು, ಅವರಿಗೆ ಆಕ್ರಮಣಕಾರಿ ಶಾಸಕ ಎಂಬ ಖ್ಯಾತಿ ತಂದುಕೊಟ್ಟವು. 2011ರಲ್ಲಿ ಊಮ್ಮನ್ ಚಾಂಡಿ ಸರ್ಕಾರದಲ್ಲಿ ಸಚಿವರಾಗುವ ಅವಕಾಶ ಕೂದಲೆಳೆಯಲ್ಲಿ ತಪ್ಪಿತ್ತು. ಆದರೆ ಚಾಂಡಿ ಸರ್ಕಾರ ಹಗರಣಗಳಲ್ಲಿ ಸಿಲುಕಿದಾಗ, ಸತೀಶನ್ ಅವರ ಧ್ವನಿ ಪಕ್ಷದೊಳಗೆ ಮತ್ತಷ್ಟು ಪ್ರಬಲವಾಯಿತು.
1964ರ ಮೇ 31ರಂದು ಎರ್ನಾಕುಲಂ ಜಿಲ್ಲೆಯ ನೆಟ್ಟೂರಿನಲ್ಲಿ ಜನಿಸಿದ ಸತೀಶನ್ ಅವರದ್ದು ನಾಯರ್ ಸಮುದಾಯದ ಸಾಮಾನ್ಯ ಕುಟುಂಬದ ಹಿನ್ನೆಲೆ. ಇವರ ತಂದೆ ಕೆ. ದಾಮೋದರ ಮೆನನ್ ಮತ್ತು ತಾಯಿ ವಿ. ವಿಲಾಸಿನಿ ಅಮ್ಮ. ನೆಟ್ಟೂರಿನಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪೂರೈಸಿದ ಅವರು, ಬಳಿಕ ತೇವರದ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಪದವಿ ಪಡೆದರು. ಬಾಲ್ಯದಿಂದಲೇ ಓದು ಮತ್ತು ಸಾರ್ವಜನಿಕ ವಿಷಯಗಳಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಅವರು, ತಿರುವನಂತಪುರದ ಕೇರಳ ಲಾ ಅಕಾಡೆಮಿಯಲ್ಲಿ ಎಲ್ಎಲ್.ಬಿ ಹಾಗೂ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಎಲ್ಎಲ್.ಎಂ (ಸ್ನಾತಕೋತ್ತರ ಕಾನೂನು ಪದವಿ) ಮುಗಿಸಿದರು. ಕುಟುಂಬದ ಶಿಸ್ತು ಮತ್ತು ಮೌಲ್ಯಗಳು ಅವರ ವ್ಯಕ್ತಿತ್ವ ಹಾಗೂ ನಾಯಕತ್ವದ ಗುಣಗಳ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.




