ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಖುದ್ದಾಗಿ ವಿನ್ಯಾಸಗೊಳಿಸಿದ್ದರು ಎನ್ನಲಾದ, ಕೊಲ್ಕತ್ತದ ಐತಿಹಾಸಿಕ ಸಾಲ್ಟ್‌ಲೇಕ್ ಕ್ರೀಡಾಂಗಣದ (ವಿವೇಕಾನಂದ ಯುವಭಾರತಿ ಕ್ರೀಡಾಂಗಣ) ಬಳಿಯಿದ್ದ ಫುಟ್‌ಬಾಲ್ ಶಿಲ್ಪವನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಶನಿವಾರ ನೆಲಸಮಗೊಳಿಸಿದೆ. ಕ್ರೀಡಾಂಗಣದ ವಿವಿಐಪಿ ಗೇಟ್ ಬಳಿ ಇದ್ದ ಈ ವಿಲಕ್ಷಣ ಶಿಲ್ಪವನ್ನು ತೆರವುಗೊಳಿಸುವುದಾಗಿ ಕ್ರೀಡಾ ಸಚಿವ ನಿಸಿತ್ ಪ್ರಮಾಣಿಕ್ ಇತ್ತೀಚೆಗಷ್ಟೇ ಭರವಸೆ ನೀಡಿದ್ದರು. ಅದರಂತೆ ಶನಿವಾರ ಬೆಳಿಗ್ಗೆ ಈ ಕಾರ್ಯಾಚರಣೆ ನಡೆದಿದೆ.
2017ರಲ್ಲಿ ಭಾರತದಲ್ಲಿ ನಡೆದ ಫಿಫಾ ಅಂಡರ್-17 ವಿಶ್ವಕಪ್ ಟೂರ್ನಿಗೂ ಮುನ್ನ ಈ ಶಿಲ್ಪವನ್ನು ಸ್ಥಾಪಿಸಲಾಗಿತ್ತು. ಸೊಂಟದ ಮೇಲ್ಭಾಗವಿಲ್ಲದ ಕೇವಲ ಎರಡು ಕಾಲುಗಳು ಹಾಗೂ ಅದರ ಮೇಲೊಂದು ಫುಟ್‌ಬಾಲ್ ಇರುವಂತೆ ಇದನ್ನು ವಿನ್ಯಾಸಗೊಳಿಸಲಾಗಿತ್ತು. ಜೊತೆಗೆ ಹಿಂದಿನ ಟಿಎಂಸಿ ಸರ್ಕಾರದ ಲಾಂಛನವಾದ ‘ಬಿಸ್ವಾ ಬಾಂಗ್ಲಾ’ ಹಾಗೂ ಫುಟ್‌ಬಾಲ್ ಮೇಲೆ ‘ಜೋಯಿ’ ಎಂಬ ಬರಹವನ್ನು ಇದು ಹೊಂದಿತ್ತು.
ಇದನ್ನು ಓದಿದ್ದೀರಾ? ಕೊಹ್ಲಿ-ರೋಹಿತ್ 2027ರ ವಿಶ್ವಕಪ್ ಆಡ್ತಾರಾ; ಬಿಸಿಸಿಐ ಮುಂದಿದೆ ದೊಡ್ಡ ಸವಾಲು
ಮೇ 17ರಂದು ಕ್ರೀಡಾಂಗಣದಲ್ಲಿ ನಡೆದ ಮೋಹನ್ ಬಗಾನ್ ಮತ್ತು ಈಸ್ಟ್ ಬೆಂಗಾಲ್ ನಡುವಿನ ಪಂದ್ಯದ ವೇಳೆ ಭೇಟಿ ನೀಡಿದ್ದ ಕ್ರೀಡಾ ಸಚಿವ ನಿಸಿತ್ ಪ್ರಮಾಣಿಕ್ ಈ ಶಿಲ್ಪವನ್ನು ಕಟುವಾಗಿ ಟೀಕಿಸಿದ್ದರು. “ಈ ಸುಂದರ ಕ್ರೀಡಾಂಗಣದ ಸೌಂದರ್ಯಕ್ಕೆ ಈ ವಿಕಾರವಾದ ಶಿಲ್ಪ ಅಡ್ಡಿಯಾಗಿದೆ. ಯಾವುದೇ ಅರ್ಥವಿಲ್ಲದ ಇಂತಹ ಅಸಹ್ಯಕರ ರಚನೆಯನ್ನು ನಾವು ಮುಂದುವರಿಸುವುದಿಲ್ಲ” ಎಂದು ತೆರವುಗೊಳಿಸುವ ಸ್ಪಷ್ಟನೆ ನೀಡಿದ್ದರು.
ಅಲ್ಲದೆ, “ಈ ಶಿಲ್ಪ ಸ್ಥಾಪನೆಯಾದ ನಂತರವೇ ಹಿಂದಿನ ಟಿಎಂಸಿ ಸರ್ಕಾರದ ಕೆಟ್ಟ ದಿನಗಳು ಶುರುವಾದವು. ಆ ಬಳಿಕ ನಡೆದ ಮೆಸ್ಸಿ ವಿವಾದದಿಂದಾಗಿ ಸರ್ಕಾರವೇ ಅಧಿಕಾರ ಕಳೆದುಕೊಳ್ಳುವಂತಾಯಿತು” ಎಂದು ಅವರು ವಾಗ್ದಾಳಿ ನಡೆಸಿದ್ದರು. ಕಳೆದ ಡಿಸೆಂಬರ್‌ನಲ್ಲಿ ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅವರ ‘ಗೋಟ್ ಇಂಡಿಯಾ ಟೂರ್’ ವೇಳೆ ಕ್ರೀಡಾಂಗಣದಲ್ಲಿ ಉಂಟಾದ ಅವ್ಯವಸ್ಥೆ ಮತ್ತು ಗಲಭೆಗೆ ಟಿಎಂಸಿ ಸರ್ಕಾರವೇ ಕಾರಣ ಎಂದು ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು.




