ಸಮಾಜದಲ್ಲಿ ತೃತೀಯ ಲಿಂಗಿಗಳು ಲಿಂಗ ತಾರತಮ್ಯ, ಖಿನ್ನತೆ ಹಾಗೂ ದೌರ್ಜನ್ಯಗಳನ್ನು ಅನುಭವಿಸುತ್ತಾ, ಚಪ್ಪಾಳೆ ತಟ್ಟುತ್ತಾ, ಭಿಕ್ಷೆ ಬೇಡುತ್ತಾ, ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಇಂತಹ ಅವಮಾನಗಳನ್ನು ಎದುರಿಸಿ, ದಿಟ್ಟ ಬದುಕು ಕಟ್ಟಿಕೊಳ್ಳುತ್ತಿರುವ ರಮೇಶ್ ಕಂಬಳಿ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಯಾರ ಮುಂದೆಯೂ ಕೈಯೊಡ್ಡದೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನರೇಗಾ ಆಸರೆಯಾಗಿದೆ.
ಇದು ಕತೆಯಲ್ಲ, ಅವಮಾನಗಳ ಮೆಟ್ಟಿಲು ಹತ್ತಿ ಸಮಾಜದ ಮುಖ್ಯ ವಾಹಿನಿಯಲ್ಲಿ ಗೌರವಯುತ ಬದುಕು ಕಟ್ಟಿಕೊಂಡ ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದ 42 ವರ್ಷದ ತೃತೀಯ ಲಿಂಗಿ ರಮೇಶ ವಿರುಪಾಕ್ಷಪ್ಪ ಕಂಬಳಿ ಅವರ ಬದುಕಿನ ಯಶೋಗಾಥೆ.
ಅವಮಾನದ ಸುಳಿಯಲ್ಲಿ ನೊಂದ ಜೀವಕ್ಕೆ ತಾಯಿಯೇ ಆಸರೆ: ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ಹುಟ್ಟಿದ ರಮೇಶ ಸುಮಾರು 20 ವರ್ಷಗಳ ಹಿಂದೆ, ತನ್ನ ದೇಹ ಹಾಗೂ ಮನಸ್ಸಿನಲ್ಲಿ ಆಗುತ್ತಿದ್ದ ತಳಮಳ ಬದಲಾವಣೆಗಳನ್ನು ಕಂಡಾಗ ಜಗತ್ತೇ ಶೂನ್ಯವೆನಿಸಿತು. ತಾನು ತೃತೀಯ ಲಿಂಗಿ ಎಂದು ಸಮಾಜಕ್ಕೆ ತಿಳಿದರೆ ಎದುರಿಸಬೇಕಾದ ಹೀಯಾಳಿಕೆಯ ಮಾತುಗಳನ್ನು ನೆನೆದು ಹತಾಶರಾಗಿದ್ದರು. ಹೆತ್ತ ತಂದೆಯೂ ಕಣ್ಣು ಮುಚ್ಚಿದಾಗ ಇಡೀ ಕುಟುಂಬ ಅನಾಥವಾಯಿತು. ಆದರೆ, ಇಂತಹ ಕಠಿಣ ಪರಿಸ್ಥಿತಿಯಲ್ಲೂ ಮಗನನ್ನು ಕೈಬಿಡದ ವೃದ್ಧ ತಾಯಿ ಆ ಜೀವಕ್ಕೆ ಆಸರೆಯಾಗಿ ನಿಂತಳು.
ತಾಯಿಯ ಆರೈಕೆಗೆ ಮತ್ತು ತಾನು ಯಾರಿಗೂ ಹೊರೆಯಾಗಬಾರದು ಎಂಬ ದಿಟ್ಟ ನಿರ್ಧಾರಕ್ಕೆ ಬದ್ಧರಾಗಿದ್ದ ರಮೇಶ ಕಂಬಳಿ, ಆರಂಭದಲ್ಲಿ ಆರಿಸಿಕೊಂಡದ್ದು ಕಡುಕಷ್ಟದ ಕುರಿ ಕಾಯುವ ಕೆಲಸ. ಬಿಸಿಲು, ಮಳೆ, ಗಾಳಿ ಎನ್ನದೆ ಹಗಲಿಡಿ ಕಾಡು-ಮೇಡು ಅಲೆಯುತ್ತಾ ಸಿಗುವ ಅಲ್ಪಸ್ವಲ್ಪ ಆದಾಯದಲ್ಲಿ ತಾಯಿಯನ್ನು ಸಲಹುತ್ತಿದ್ದರು.
ಬದುಕಿಗೆ ದಾರಿದೀಪವಾದ ‘ನರೇಗಾ’: ಕುರಿ ಕಾಯುತ್ತಾ ಸಾಗುತ್ತಿದ್ದ ರಮೇಶನ ಬದುಕಿನಲ್ಲಿ ಹೊಸ ಭರವಸೆಯ ಬೆಳಕು ಮೂಡಿಸಿದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ). ಕಳೆದ 5 ವರ್ಷಗಳ ಹಿಂದೆ ಮೊದಲ ಬಾರಿಗೆ ನರೇಗಾ ಅಡಿಯಲ್ಲಿ ಮಣ್ಣು ಅಗೆಯಲು ಗುದ್ದಲಿ ಹಿಡಿದಾಗ, ಅದು ಕೇವಲ ಒಂದು ಕೆಲಸವಾಗದೆ, ಸ್ವಾಭಿಮಾನದ ಬದುಕಿನ ಮೊದಲ ಮೆಟ್ಟಿಲಾಯಿತು.
ಜಾಬ್ ಕಾರ್ಡ್ ಸಂಖ್ಯೆ KN-14-004-027-002/1562 ಹೊಂದಿರುವ ರಮೇಶ, ಇಂದು ಗ್ರಾಮದ ಯುವಕರಿಗೆ ಮಾದರಿಯಾಗಿ ಕೆಲಸ ಮಾಡುತ್ತಾರೆ. ಕೆರೆ ಹೂಳೆತ್ತುವುದು, ಬದು ನಿರ್ಮಾಣ ಮುಂತಾದ ಕಠಿಣ ಕೆಲಸಗಳನ್ನು ನಿರಾಯಾಸವಾಗಿ ನಿರ್ವಹಿಸುತ್ತಾ, ಸರ್ಕಾರದ ಯೋಜನೆಯನ್ನು ಬದುಕಿನ ಆಧಾರವಾಗಿಸಿಕೊಂಡಿದ್ದಾರೆ.

ಸರ್ಕಾರದ ಸಹಾಯ ಹಸ್ತದ ಅವಶ್ಯಕತೆ: “ಕಳೆದ 5 ವರ್ಷಗಳಿಂದ ನರೇಗಾ ಸಾಮಾನ್ಯ ಕಾಮಗಾರಿಗಳಲ್ಲಿ ದುಡಿಯುತ್ತಿರುವ ರಮೇಶ ಅವರ ಬದುಕಿಗೆ ಈಗ ಸರ್ಕಾರದ ಸಹಾಯ ಹಸ್ತದ ಅವಶ್ಯಕತೆ ಇದೆ. ಸದ್ಯ ಸಿಗುತ್ತಿರುವ ‘ಮೈತ್ರಿ’ ಯೋಜನೆಯ ಮಾಸಾಶನ ವೃದ್ಧ ತಾಯಿಯ ಔಷಧಿ ವೆಚ್ಚಕ್ಕೆ ನೆರವಾಗುತ್ತಿದೆಯಾದರೂ, ಇವರು ಸ್ವಂತ ಕಾಲು ಮೇಲೆ ನಿಲ್ಲುವಲ್ಲಿ ಸರ್ಕಾರದಿಂದ ಸಹಾಯ ಹಸ್ತದ ಅಗತ್ಯವಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ವಿಶೇಷ ಸೌಲಭ್ಯ ದೊರಕಿಸಿಕೊಡಬೇಕು. ರಮೇಶ ಕುಟುಂಬ ಆರ್ಥಿಕವಾಗಿ ಸಬಲವಾಗಲು ಸರ್ಕಾರ ಸಹಾಯ ಹಸ್ತ ಚಾಚಬೇಕಿದೆ” ಎಂಬುದು ಸಾರ್ವಜನಿಕರ ಆಶಯವಾಗಿದೆ.
ತಾರತಮ್ಯದ ಬೇಲಿ ಮುರಿದ ಊರು: ರಮೇಶನ ಕಥೆಯಲ್ಲಿ ಅತ್ಯಂತ ಹೃದಯಸ್ಪರ್ಶಿ ಮತ್ತು ಹೆಮ್ಮೆಯ ವಿಷಯವೆಂದರೆ ಸವಡಿ ಗ್ರಾಮಸ್ಥರ ನಡೆ. ಇಂದಿಗೂ ನಗರ ಪ್ರದೇಶಗಳಲ್ಲೇ ತೃತೀಯ ಲಿಂಗಿಗಳನ್ನು ದೂರ ಇಡುವ ಕಾಲದಲ್ಲಿ, ಈ ಹಳ್ಳಿಯ ಜನ ರಮೇಶನನ್ನು ಸರಿಸಮಾನವಾಗಿ ನಡೆಸಿಕೊಳ್ಳುತ್ತಾರೆ. “ಅವರು ನಮ್ಮ ಊರಿನ ಮಗು, ನಮ್ಮಂತೆಯೇ ದುಡಿದು ಬದುಕುತ್ತಿದ್ದಾರೆ” ಎಂಬ ಗ್ರಾಮಸ್ಥರ ಪ್ರೀತಿಯೇ ರಮೇಶನಿಗೆ ಜಗತ್ತನ್ನು ಗೆಲ್ಲುವ ಶಕ್ತಿ ನೀಡಿದೆ.

ರಮೇಶ ಕಂಬಳಿ ಅವರು ತನ್ನನ್ನು ತಾನು ಯಾವತ್ತೂ ಕಡೆಗಣಿಸಲಿಲ್ಲ. ಯಾರ ಬಳಿಯೂ ಭಿಕ್ಷೆ ಬೇಡದೆ ದುಡಿದು ಬದುಕು ಸಾಗಿಸುತ್ತಿದ್ದಾರೆ. ತನಗೆ ಇರುವ ಒಂದು ಎಕರೆ ಸಣ್ಣ ಒಣ ಬೇಸಾಯದ ಜಮೀನು ಹಾಗೂ ಒಂದು ಪುಟ್ಟ ಮನೆಯಲ್ಲಿ ತಾಯಿಯ ಜೊತೆ ವಾಸವಿರುವ ರಮೇಶ, ನರೇಗಾ ಕೆಲಸವಿಲ್ಲದ ದಿನಗಳಲ್ಲಿ ಖಾಲಿ ಕೂರದೆ ಬೇರೆ ರೈತರ ಹೊಲಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಕಾಯಕವೇ ಕೈಲಾಸ ಎಂಬಂತೆ ದುಡಿಯುವುದೊಂದೇ ಇವರ ಕಣ್ಣ ಮುಂದಿರುವ ಗುರಿ.
ತಮ್ಮ ಕಣ್ಣಾಲಿಗಳನ್ನು ಒರೆಸಿಕೊಳ್ಳುತ್ತಾ ರಮೇಶ ಆಡುವ ಮಾತುಗಳು ಯಾರ ಹೃದಯವನ್ನಾದರೂ ಕರಗಿಸುತ್ತವೆ: “ನನ್ನಂತವರಿಗೆ ಸಮಾಜದಲ್ಲಿ ಬದುಕುವುದು ಎಷ್ಟು ಕಷ್ಟ ಅಂತ ನನಗೆ ಗೊತ್ತು. ನನಗೂ ಸಿಟಿಗೆ ಹೋಗಿ ಭಿಕ್ಷೆ ಬೇಡಿ ಸುಲಭವಾಗಿ ದುಡ್ಡು ಮಾಡಬಹುದಿತ್ತು. ಆದರೆ ನನಗೆ ನನ್ನ ತಾಯಿಯ ಪಾಲನೆ ಮುಖ್ಯವಾಗಿತ್ತು. ಹಳ್ಳಿಯ ಮಣ್ಣಿನಲ್ಲಿ ಕಷ್ಟಪಟ್ಟು, ಬೆವರು ಸುರಿಸಿ ಬರುವ ನೂರು ರೂಪಾಯಿ ಸಾಕು ನನಗೆ. ಈ ನರೇಗಾ ಯೋಜನೆ ನನಗೆ ಕೆಲಸ ಕೊಟ್ಟಿದ್ದಲ್ಲದೆ ಸಮಾಜದಲ್ಲಿ ಎಲ್ಲರಂತೆ ತಲೆಯೆತ್ತಿ ಬಾಳುವ ಗೌರವ ಕೊಟ್ಟಿದೆ” ಎಂದು ಹೇಳುತ್ತಾರೆ.
ರೋಣ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಮಾತನಾಡಿ, “ನರೇಗಾ ಯೋಜನೆ ಸಮಾಜದಲ್ಲಿ ಸಮಾನತೆ ತರುವ ಕ್ರಾಂತಿ. ತೃತೀಯ ಲಿಂಗಿ ರಮೇಶ ಅವರು 5 ವರ್ಷಗಳಿಂದ ಸತತವಾಗಿ ನರೇಗಾ ಕೆಲಸ ಮಾಡುತ್ತಿರುವುದು ಇಡೀ ತಾಲೂಕಿಗೆ ಹೆಮ್ಮೆ. ಭಿಕ್ಷಾಟನೆ ಮೆಟ್ಟಿ ನಿಂತು ಸ್ವಾವಲಂಬಿಯಾದ ಇವರಿಗೆ ಇಲಾಖೆಯಿಂದ ಸಿಗಬೇಕಾದ ವೈಯಕ್ತಿಕ ಜಮೀನಿನ ಕಾಮಗಾರಿಗಳು ಸೇರಿದಂತೆ ಎಲ್ಲಾ ವೈಯಕ್ತಿಕ ಸೌಲಭ್ಯಗಳನ್ನು ಆದ್ಯತೆಯ ಮೇಲೆ ನೀಡಲು ನಾವು ಬದ್ಧರಾಗಿದ್ದೇವೆ” ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, “ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಭದ್ರತೆ ನೀಡುವುದೇ ನರೇಗಾದ ಮುಖ್ಯ ಉದ್ದೇಶ. ಯಾರ ಮುಂದೆಯೂ ಕೈಯೊಡ್ಡದೆ ಶ್ರಮದಾನ ಮಾಡುತ್ತಿರುವ ರಮೇಶ ಕಂಬಳಿ ಅವರ ಬದುಕು ಜಿಲ್ಲೆಗೆ ಮಾದರಿ. ಇಂತಹ ಕಾಯಕ ಯೋಗಿಗಳಿಗೆ ಜಿಲ್ಲಾ ಪಂಚಾಯತ್ ವತಿಯಿಂದ ಅಗತ್ಯವಿರುವ ವೈಯಕ್ತಿಕ ಆಸ್ತಿ ಸೃಜನೆ ಮತ್ತು ಆರ್ಥಿಕ ನೆರವಿನ ಸೌಲಭ್ಯಗಳನ್ನು ಒದಗಿಸಲು ಸಂಪೂರ್ಣ ಪ್ರೋತ್ಸಾಹ ನೀಡಲಾಗುವುದು” ಎಂದು ತಿಳಿಸಿದರು.
ನರೇಗಾ ಯೋಜನೆ ಕೇವಲ ಗ್ರಾಮೀಣ ಭಾಗದ ಆಸ್ತಿಗಳನ್ನು ಸೃಜಿಸುತ್ತಿಲ್ಲ, ಬದಲಿಗೆ ರಮೇಶ ನಂತಹ ಅನೇಕ ಶೋಷಿತ ಜೀವಗಳ ಬದುಕಿಗೆ ಘನತೆ ಮತ್ತು ಆತ್ಮವಿಶ್ವಾಸದ ಬೆಳಕನ್ನು ಕರುಣಿಸುತ್ತಿದೆ. ತಾರತಮ್ಯವಿಲ್ಲದ ಸಮಾಜ ಮತ್ತು ಶ್ರಮಜೀವಿಯೊಬ್ಬರ ಸ್ವಾಭಿಮಾನದ ಪಯಣ ಗದಗ ಜಿಲ್ಲೆಗೆ ಮಾತ್ರವಲ್ಲದೆ ಇಡೀ ಸಮುದಾಯಕ್ಕೆ, ದೇಶಕ್ಕೆ ಪ್ರೇರಣೆಯಾಗಿದೆ.




