ಬುಧವಾರ ನಡೆಯಲಿರುವ ‘INDIA’ ಮೈತ್ರಿಕೂಟದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೆಹಲಿಗೆ ತೆರಳಿದ್ದಾರೆ. ಅವರ ಪ್ರಯಾಣ ಮತ್ತು ಸಭೆ ಕುರಿತು ವಾಗ್ದಾಳಿ ನಡೆಸಿರುವ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ‘ದಿಮಾಗಿ ನಕ್ಸಲರ’ ಜತೆ ಸಮಾಲೋಚನೆ ಎಂದು ಟೀಕಿಸಿದ್ದಾರೆ.
ಚುನಾವಣಾ ಅಕ್ರಮಗಳು ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಜಂಟಿ ಹೋರಾಟ ರೂಪಿಸಲು ವಿಪಕ್ಷಗಳ ನಾಯಕರು ದೆಹಲಿಯಲ್ಲಿ ಸಭೆ ಸೇರುತ್ತಿದ್ದಾರೆ. ಅದಕ್ಕಾಗಿ, ಮಮತಾ ಕೂಡ ದೆಹಲಿಗೆ ತೆರಳಿದ್ದಾರೆ.
ಈ ಕುರಿತು ಸುದ್ಧಿಗಾರರೊಂದಿಗೆ ಮಾತನಾಡಿದ ಸುವೇಂದು ಅಧಿಕಾರಿ, “ಇಂಡಿಯಾ ಮೈತ್ರಿಕೂಟದ ಕಥೆ ಮುಗಿದಿದೆ. ಮಮತಾ ಬ್ಯಾನರ್ಜಿ ದೆಹಲಿಗೆ ತೆರಳಿ ‘ದಿಮಾಗಿ ನಕ್ಸಲರ’ (ಬೌದ್ಧಿಕ ನಕ್ಸಲರು) ಜೊತೆ ಯೋಜನೆ ರೂಪಿಸುವ ಸಭೆ ನಡೆಸಲಿದ್ದಾರೆ. ದೇಶವಿರೋಧಿ ಶಕ್ತಿಗಳ ಜೊತೆ ಅವರು ಸಭೆ ನಡೆಸುತ್ತಾರೆಯೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಅವರ ಪ್ರತಿಯೊಂದು ನಡೆಯ ಮೇಲೆ ಕಣ್ಣಿಡುವಂತೆ ದೆಹಲಿ ಪೊಲೀಸರು ಹಾಗೂ ಕೇಂದ್ರ ಗುಪ್ತಚರ ಸಂಸ್ಥೆಗೆ (IB) ಮನವಿ ಮಾಡುತ್ತೇನೆ” ಎಂದು ಹೇಳಿದ್ದಾರೆ.
ಅಂದಹಾಗೆ, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ತಮ್ಮ ಗಮನಕ್ಕೆ ತರದೆ ತೆಗೆದುಕೊಂಡ ನಿರ್ಧಾರಗಳ ವಿರುದ್ಧ ಹಲವು ಬಾರಿ ಅಧಿಕೃತವಾಗಿ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ತನಿಖಾ ವರದಿ ಪ್ರಕಟಿಸಿತ್ತು. ಈ ಬೆನ್ನಲ್ಲೇ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ ಜಂಟಿ ಹೋರಾಟ ರೂಪಿಸುವ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಇದೀಗ, ಬುಧವಾರ ನಡೆಯಲಿರುವ ‘INDIA’ ಮೈತ್ರಿಕೂಟದ ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗ ನಿರ್ಣಯ ಮಂಡಿಸಲು ವಿಪಕ್ಷಗಳ ನಾಯಕರು ಸಂಸತ್ತಿನ ಎರಡೂ ಮನೆಗಳಿಗೆ ನೀಡಲು ನೋಟಿಸ್ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.



