ಮತ ಚಲಾಯಿಸಿದ ಸ್ವಲ್ಪ ಸಮಯದ ನಂತರ 65 ವರ್ಷದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯ ಮತಗಟ್ಟೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಮೃತರನ್ನು ಕೊಂಬಡ ರಾಮಂಚಿರ ಮೂಲದ ವಿನೋದ್ ಎಂದು ಗುರುತಿಸಲಾಗಿದೆ.
ಈ ಘಟನೆ ಬೆಳಿಗ್ಗೆ 10.45 ರ ಸುಮಾರಿಗೆ ವಾಣಿಯಂಪಾರ ಇಕೆಎಂ ಯುಪಿ ಶಾಲೆಯ ಬೂತ್ ಸಂಖ್ಯೆ 37 ರಲ್ಲಿ ಸಂಭವಿಸಿದೆ. ಅಧಿಕಾರಿಗಳ ಪ್ರಕಾರ, ವಿನೋದ್ ಮತ ಚಲಾಯಿಸಿ ಆವರಣದಿಂದ ಹೊರಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದಾರೆ.
ಇದನ್ನು ಓದಿದ್ದೀರಾ? ಕೇರಳ | ಉದುಮದಲ್ಲಿ ಯುಡಿಎಫ್ ಚುನಾವಣಾ ಏಜೆಂಟ್ ಬಂಧನ
ಸಿಬ್ಬಂದಿ ಅವರ ಸಹಾಯಕ್ಕೆ ಧಾವಿಸಿದ್ದು ಅವರನ್ನು ವೀಲ್‌ಚೇರ್‌ನಲ್ಲಿ ಕೂರಿಸಲು ಮುಂದಾದರು. ಅಷ್ಟರಲ್ಲೇ ವಿನೋದ್ ಕುಸಿದುಬಿದ್ದಿದ್ದಾರೆ. ಕೂಡಲೇ ಆಂಬ್ಯುಲೆನ್ಸ್‌ನಲ್ಲಿ ತ್ರಿಶೂರ್ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಕೇರಳದ 140 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ರಾಜ್ಯದಲ್ಲಿ ತೀವ್ರ ಬಿಸಿಲಿನ ವಾತಾವರಣವಿದ್ದರೂ, ಬೆಳಿಗ್ಗೆಯಿಂದಲೇ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸುತ್ತಿದ್ದಾರೆ. ಒಟ್ಟು 2.71 ಕೋಟಿ ಮತದಾರರು 883 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ರಾಜ್ಯಾದ್ಯಂತ 30,000ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಸುಗಮ ಮತದಾನಕ್ಕಾಗಿ 76,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಹಿಳಾ ಸ್ನೇಹಿ ಮತಗಟ್ಟೆಗಳು ಮತ್ತು ಮಾದರಿ ಮತಗಟ್ಟೆಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಚುನಾವಣೆಯ ಫಲಿತಾಂಶವು ಮೇ 4 ರಂದು ಪ್ರಕಟವಾಗಲಿದೆ.




