ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಹಿರಿಯ ಪತ್ರಕರ್ತೆ ನಿಧಿ ರಾಜ್ದಾನ್ ಅವರ ವಿವಾಹವನ್ನು ‘ಅಸಿಂಧು’ ಎಂದು ಶರಿಯತ್ ಆಧಾರದ ಮೇಲೆ ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಬರೇಲ್ವಿ ಫತ್ವಾ ಹೊರಡಿಸಿದ್ದಾರೆ.
ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಮೌಲಾನಾ ಶಹಾಬುದ್ದೀನ್, ಇಸ್ಲಾಮಿಕ್ ಧರ್ಮದಲ್ಲಿ ಮದುವೆಗೆ ಸಂಬಂಧಿಸಿದಂತೆ ಅತ್ಯಂತ ಕಠಿಣ ನಿಯಮಗಳಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇಸ್ಲಾಂ ಧರ್ಮದ ಪ್ರಕಾರ ಮುಸ್ಲಿಂ ಪುರುಷನು ಮುಸ್ಲಿಂ ಮಹಿಳೆಯನ್ನಷ್ಟೇ ವಿವಾಹವಾಗಲು ಅವಕಾಶವಿದೆ. ನಿಧಿ ರಾಜ್ದಾನ್ ಇಸ್ಲಾಂಗೆ ಮತಾಂತರಗೊಳ್ಳದೆ ಈ ಮದುವೆ ನಡೆದಿರುವುದರಿಂದ, ಇದು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿದೆ ಎಂದು ಮುಫ್ತಿ ಶಹಾಬುದ್ದೀನ್ ಪ್ರತಿಪಾದಿಸಿದ್ದಾರೆ.
ಒಮರ್ ಅಬ್ದುಲ್ಲಾ ಅವರು ಮದುವೆಗೂ ಮುನ್ನ ನಿಧಿ ರಾಜ್ದಾನ್ ಅವರಿಗೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿ, ತದನಂತರ ನಿಕಾಹ್ ಮಾಡಿಕೊಂಡಿದ್ದರೆ ಮಾತ್ರ ಶರಿಯತ್ ಪ್ರಕಾರ ಈ ಮದುವೆ ಮಾನ್ಯವಾಗುತ್ತಿತ್ತು. ಆದರೆ ಹಾಗೆ ಮಾಡದೇ ಇರುವುದರಿಂದ ಈ ವಿವಾಹವು ಸಂಪೂರ್ಣವಾಗಿ ಶರಿಯತ್ ಬಾಹಿರವಾಗಿದೆ ಎಂದು ಮೌಲ್ವಿ ಪ್ರತಿಪಾದಿಸಿದ್ದಾರೆ.
ವರದಿಗಳ ಪ್ರಕಾರ, ಒಮರ್ ಅಬ್ದುಲ್ಲಾ ಮತ್ತು ನಿಧಿ ರಾಜ್ದಾನ್ ಅವರ ಮದುವೆಯು ಯಾವುದೇ ಧಾರ್ಮಿಕ ಮತಾಂತರವಿಲ್ಲದೆ, ಕಾನೂನುಬದ್ಧವಾಗಿ ವಿಶೇಷ ವಿವಾಹ ಕಾಯ್ದೆ-1954 ರ ಅಡಿಯಲ್ಲಿ ನೆರವೇರಿದೆ. ಭಾರತದ ಸಂವಿಧಾನ ಮತ್ತು ಕಾನೂನಿನ ಪ್ರಕಾರ ಈ ರೀತಿಯ ಮದುವೆಗಳಿಗೆ ಪೂರ್ಣ ಕಾನೂನುಬದ್ಧ ಮಾನ್ಯತೆ ಇದೆ.
ಹಲಿ ಮತ್ತು ಶ್ರೀನಗರದಲ್ಲಿ ನಡೆದ ಈ ವಿವಾಹ ಕಾರ್ಯಕ್ರಮದಲ್ಲಿ ಉಭಯ ಕುಟುಂಬಗಳ ಆಪ್ತ ಸಂಬಂಧಿಕರು ಭಾಗವಹಿಸಿದ್ದರು. ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಹಾಗೂ ನಿಧಿ ರಾಜ್ದಾನ್ ಅವರ ಪೋಷಕರ ಸಮ್ಮುಖದಲ್ಲಿ ಮದುವೆ ನೆರವೇರಿದ್ದು, ಒಮರ್ ಅಬ್ದುಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ “ಹೊಸ ಪಯಣ ಶುರುವಾಗಿದೆ” ಎಂದು ಫೋಟೋಗಳನ್ನು ಹಂಚಿಕೊಂಡಿದ್ದರು.
ಇದು ಒಮರ್ ಅಬ್ದುಲ್ಲಾ ಮತ್ತು ನಿಧಿ ರಾಜ್ದಾನ್ ಇಬ್ಬರಿಗೂ ಎರಡನೇ ವಿವಾಹವಾಗಿದೆ. ಒಮರ್ ಅಬ್ದುಲ್ಲಾ ತಮ್ಮ ಮೊದಲ ಪತ್ನಿ ಪಾಯಲ್ ಅವರಿಂದ ಸುಪ್ರೀಂ ಕೋರ್ಟ್ ಮೂಲಕ ಕಾನೂನುಬದ್ಧ ವಿಚ್ಛೇದನ ಪಡೆದ ಕೆಲವೇ ತಿಂಗಳುಗಳ ನಂತರ ಈ ವಿವಾಹ ನಡೆದಿದೆ.
ವಿವಾಹದ ಫತ್ವಾದ ಜೊತೆಗೆ, ಬರೇಲಿ ಮೂಲದ ಇದೇ ಮೌಲ್ವಿ ಇತ್ತೀಚೆಗೆ ಕೇದಾರನಾಥ ಧಾಮಕ್ಕೆ ಭೇಟಿ ನೀಡಿ ಪೂಜೆ ಮತ್ತು ಆರತಿ ನೆರವೇರಿಸಿದ್ದಕ್ಕಾಗಿ ಬಾಲಿವುಡ್ ನಟಿ ಸಾರಾ ಅಲಿ ಖಾನ್ ವಿರುದ್ಧವೂ ಫತ್ವಾ ಹೊರಡಿಸಿದ್ದರು. ಬೇರೆ ಧರ್ಮದ ಆರಾಧನೆ ಮಾಡುವುದು ಇಸ್ಲಾಂನಲ್ಲಿ ‘ಹರಾಮ್’ ಎಂದು ಅವರು ಹೇಳಿದ್ದರು. ಮೌಲ್ವಿಯ ಈ ಸರಣಿ ಫತ್ವಾಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಭಾರತೀಯ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ತನ್ನ ಇಷ್ಟದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಅನುಭವಿಸುವ ಹಕ್ಕನ್ನು ನೀಡಿದೆ ಎಂದು ನೆಟ್ಟಿಗರು ಮೌಲ್ವಿಯ ನಿಲುವನ್ನು ಖಂಡಿಸಿದ್ದಾರೆ.




