ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು, ಉತ್ತರ ಪ್ರದೇಶದ ಗೌತಮ ಬುದ್ಧ ನಗರ ಜಿಲ್ಲಾಧಿಕಾರಿ (ಡಿಎಂ) ಮೇಧಾ ರೂಪಂ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ಲೈವ್‌ಸ್ಟ್ರೀಮ್ ಆಡಿಯೋವನ್ನು ನ್ಯಾಯಮೂರ್ತಿಗಳು ಮ್ಯೂಟ್ ಮಾಡಿದ್ದಾರೆ ಎಂದು ವರದಿಯಾಗಿದೆ.
ವಿದ್ಯಾರ್ಥಿ ಹೋರಾಟಗಾರ್ತಿ ಅಕೃತಿ ಚೌಧರಿ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಬಂಧಿಸಲಾಗಿತ್ತು. ಆ ಬಂಧವನ್ನು ರದ್ದುಪಡಿಸಿದ್ದ ಅಲಹಾಬಾದ್ ಹೈಕೋರ್ಟ್, “ಆಕೃತಿ ಅವರಿಗೆ 5 ಲಕ್ಷ ಪರಿಹಾರ ನೀಡಬೇಕು. ಆ ಪರಿಹಾರದ ಹಣವನ್ನು ಜಿಲ್ಲಾಧಿಕಾರಿ ಮೇಧಾ ರೂಪಂ ಸೇರಿದಂತೆ ಜವಾಬ್ದಾರ ಅಧಿಕಾರಿಗಳ ವೇತನದಿಂದ ವಸೂಲಿ ಮಾಡಬೇಕು” ಎಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮೇಧಾ ರೂಪಂ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯನ್ನು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ನೊಂಗ್ಮೈಕಪಂ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ವಿಚಾರಣೆ ನಡೆಸಿದೆ. ಈ ವೇಳೆ, ಸಾರ್ವಜನಿಕ ಲೈವ್‌ಸ್ಟ್ರೀಮ್‌ನ ಆಡಿಯೋವನ್ನು ನ್ಯಾಯಮೂರ್ತಿಗಳು ಮ್ಯೂಟ್ ಮಾಡಿಸಿದ್ದಾರೆ ಎಂದು ವರದಿಯಾಗಿದೆ.
ನ್ಯಾಯಾಂಗದ ಆಡಳಿತಾತ್ಮಕ ಹಿತದೃಷ್ಟಿಯಿಂದ ಪೀಠದ ನಿರ್ದೇಶನದ ಮೇರೆಗೆ ಲೈವ್ ಪ್ರಸಾರವನ್ನು ತಾತ್ಕಾಲಿಕವಾಗಿ ತಡೆಯುವ ಅವಕಾಶ ಲೈವ್‌ಸ್ಟ್ರೀಮಿಂಗ್ ನಿಯಮಗಳಲ್ಲಿದೆ. ಈ ಅವಕಾಶವನ್ನು ಬಳಸಿಕೊಂಡು ಮೈಕ್‌ಅನ್ನು ಮ್ಯೂಟ್ ಮಾಡಲಾಗಿದೆ ಎಂದು ಹೇಳಲಾಗಿದೆ.
#Supremecourt
— LawChakra (@LawChakra) September 23, 2026
Supreme Court mutes the audio of the live proceedings as hearing continues in Noida DM Medha Roopam’s plea challenging the Allahabad High Court order directing recovery of ₹5 lakh from her salary as compensation to a student allegedly illegally detained during the… https://t.co/snYXJ9lys6
ಪ್ರಕರಣದ ಹಿನ್ನೆಲೆ:
2026ರ ಏಪ್ರಿಲ್‌ನಲ್ಲಿ ನೋಯ್ಡಾದಲ್ಲಿ ನಡೆದ ಕೈಗಾರಿಕಾ ಕಾರ್ಮಿಕರ ಪ್ರತಿಭಟನೆಗೆ ಬೆಂಬಲ ನೀಡಿದ್ದ ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿನಿ ಅಕೃತಿ ಚೌಧರಿ ಅವರನ್ನು ಪೊಲೀಸರು ಬಂಧಿಸಿದ್ದರು. ಮೇ 13ರಂದು ಅವರ ವಿರುದ್ಧ NSA ಅಡಿ ನಿರ್ಬಂಧಾತ್ಮಕ ಬಂಧನ (Preventive Detention) ವಿಧಿಸಿದ್ದರು. ಇದನ್ನು ಪ್ರಶ್ನಿಸಿ ಅಕೃತಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಅತುಲ್ ಶ್ರೀಧರನ್ ಮತ್ತು ನ್ಯಾಯಮೂರ್ತಿ ಅಚಲ್ ಸಚ್‌ದೇವ್ ಅವರ ಪೀಠವು ಸೆಪ್ಟೆಂಬರ್ 2ರಂದು ಈ NSA ಬಂಧನವನ್ನು ರದ್ದುಪಡಿಸಿತ್ತು.
“ಸಾಮಾನ್ಯ ಕ್ರಿಮಿನಲ್ ಕಾನೂನು ಸಾಲದೆಂದು ಕಠಿಣ NSA ಜಾರಿಗೆ ತರಲು ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಈ ನಿರ್ಧಾರವು ಸಂವಿಧಾನದ ಅನುಚ್ಛೇದ 21ರ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸಿದೆ” ಎಂದು ಹೈಕೋರ್ಟ್ ಕಟುವಾಗಿ ಆಕ್ಷೇಪಿಸಿತ್ತು. ಪೊಲೀಸ್ ವರದಿಯನ್ನು ಸ್ವತಂತ್ರವಾಗಿ ಪರಿಶೀಲಿಸದೆ ನಿರ್ಧಾರ ತಳೆದ ಜಿಲ್ಲಾಧಿಕಾರಿ ಮೇಧಾ ರೂಪಂ ಅವರ ಕ್ರಮದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್, ಅಕೃತಿ ಅವರಿಗೆ 5 ಲಕ್ಷ ರೂ. ಪರಿಹಾರ ನೀಡಲು ಮತ್ತು ಆ ಮೊತ್ತವನ್ನು ಜಿಲ್ಲಾಧಿಕಾರಿ ಮೇಧಾ ರೂಪಂ ಸೇರಿದಂತೆ ಆರಂಭಿಕ ವರದಿ ನೀಡಿದ ಅಧಿಕಾರಿಗಳ ವೇತನದಿಂದ ವಸೂಲಿ ಮಾಡಲು ಆದೇಶಿಸಿತ್ತು. ಅಲ್ಲದೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಅವರ ಸೇವಾ ದಾಖಲೆಯಲ್ಲಿ ನಮೂದಿಸಲು ಸೂಚಿಸಿತ್ತು.
ಹೈಕೋರ್ಟ್‌ನ ಈ ಕಠಿಣ ಟೀಕೆ ಮತ್ತು ವೈಯಕ್ತಿಕ ವೇತನದಿಂದ ಪರಿಹಾರ ವಸೂಲಿ ಮಾಡುವ ಆದೇಶವನ್ನು ಪ್ರಶ್ನಿಸಿ ಮೇಧಾ ರೂಪಂ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರಿ ಅಧಿಕಾರಿಯೊಬ್ಬರು ಕರ್ತವ್ಯ ನಿರ್ವಹಣೆಯ ವೇಳೆ ತೆಗೆದುಕೊಂಡ ನಿರ್ಧಾರಕ್ಕೆ ವೈಯಕ್ತಿಕವಾಗಿ ವೇತನದಿಂದ ಪರಿಹಾರ ವಸೂಲಿ ಮಾಡಬಹುದೇ ಎಂದು ಅವರು ಪ್ರಶ್ನಿಸಿದ್ದಾರೆ. ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪೀಠ ವಿಚಾರಣೆ ನಡೆಸುತ್ತಿದ್ದು, ಶೀಘ್ರವೇ ತೀರ್ಪು ಅಥವಾ ಮಧ್ಯಂತರ ಆದೇಶ ಪ್ರಕಟವಾಗುವ ಸಾಧ್ಯತೆ ಇದೆ.



