ಆಫ್ರಿಕಾ ಖಂಡದ ಪ್ರಮುಖ ದೇಶಗಳಲ್ಲಿ ಎಬೋಲಾ ವೈರಸ್ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಆಂಧ್ರಪ್ರದೇಶ ಸರ್ಕಾರವು ರಾಜ್ಯಾದ್ಯಂತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ತೀವ್ರ ಕಣ್ಗಾವಲು ವಹಿಸಿದೆ.
ಆಫ್ರಿಕಾದ ಐದು ದೇಶಗಳಲ್ಲಿ ಇದುವರೆಗೆ 10,498ಕ್ಕೂ ಹೆಚ್ಚು ಪ್ರಕರಣಗಳು ಮತ್ತು 5,107ಕ್ಕೂ ಅಧಿಕ ಸಾವುಗಳು ವರದಿಯಾಗಿವೆ. ವಿಶೇಷವಾಗಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಹೆಚ್ಚಿನ ಪ್ರಕರಣ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನೀಡಿರುವ ಮಾರ್ಗಸೂಚಿಗಳಂತೆ ಆಂಧ್ರಪ್ರದೇಶದ ಆರೋಗ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ.
ಇದನ್ನೂ ಓದಿ: ಎಬೋಲಾ ಭೀತಿ: ಮೂರು ಆಫ್ರಿಕನ್ ದೇಶಗಳಿಗೆ ಪ್ರಯಾಣಿಸದಂತೆ ಕೇಂದ್ರ ಸಲಹೆ
ರಾಜ್ಯದ ಮೂರು ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು (ವಿಜಯವಾಡ, ತಿರುಪತಿ ಮತ್ತು ಭೋಗಾಪುರಂ) ಮತ್ತು ಮೂರು ಸಮುದ್ರ ಬಂದರುಗಳಲ್ಲಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದ್ದು, ಆಫ್ರಿಕಾ ಮತ್ತು ಎಬೋಲಾ ಬಾಧಿತ ಪ್ರದೇಶಗಳಿಂದ ಬರುವ ಪ್ರಯಾಣಿಕರನ್ನು ತೀವ್ರವಾಗಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ.
ಯಾವುದೇ ರೀತಿಯ ತುರ್ತು ಪರಿಸ್ಥಿತಿ ಎದುರಿಸಲು ರಾಜ್ಯದ 5 ಸರ್ಕಾರಿ ಜನರಲ್ ಆಸ್ಪತ್ರೆಗಳಲ್ಲಿ (GGH) ಒಟ್ಟು 46 ಐಸೊಲೇಶನ್ (ಪ್ರತ್ಯೇಕ) ಹಾಸಿಗೆಗಳನ್ನು ಸಜ್ಜುಗೊಳಿಸಲಾಗಿದೆ. ಆರೋಗ್ಯ ಇಲಾಖೆಯ ಸಿದ್ಧತೆ ಮತ್ತು ಕಣ್ಗಾವಲು ವ್ಯವಸ್ಥೆಯನ್ನು ಪರೀಕ್ಷಿಸಲು ನವೆಂಬರ್ 12ರಂದು ರಾಜ್ಯಾದ್ಯಂತ ‘ಮಾಕ್ ಡ್ರಿಲ್’ ನಡೆಸಲು ತೀರ್ಮಾನಿಸಲಾಗಿದೆ.
ಆರೋಗ್ಯ ಇಲಾಖೆಯ ಕಾರ್ಯದರ್ಶಿ ಜಿ. ವೀರಪಾಂಡಿಯನ್ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ. ಅತ್ತಲೂರಿ ವಿಷ್ಣುವರ್ಧನ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಪ್ರಯಾಣದ ಸಮಯದಲ್ಲಿ ರೋಗಲಕ್ಷಣ ಕಂಡುಬಂದರೆ ಅಂತಹ ಪ್ರಯಾಣಿಕರನ್ನು ತಕ್ಷಣವೇ ಪ್ರತ್ಯೇಕಿಸಲು ವಿಮಾನಯಾನ ಮತ್ತು ಬಂದರು ಅಧಿಕಾರಿಗಳಿಗೆ ಸೂಚಿಸಲಾಗಿದೆ.




