ಕೇಂದ್ರದ ನರೇಂದ್ರ ಮೋದಿ ಸರ್ಕಾರವು ನವದೆಹಲಿಯ ಲೂಟಿಯನ್ಸ್ ವಲಯದಲ್ಲಿ ಕೈಗೆತ್ತಿಕೊಂಡಿರುವ ‘ಸೆಂಟ್ರಲ್ ವಿಸ್ಟಾ ಮರುಅಭಿವೃದ್ಧಿ ಯೋಜನೆ’ಯು ಕೇವಲ ಹಳೆಯ ಕಟ್ಟಡಗಳನ್ನು ಕೆಡವಿ ಹೊಸ ಆಡಳಿತ ಸಂಕೀರ್ಣಗಳನ್ನು ನಿರ್ಮಿಸುವ ಯೋಜನೆಯಾಗಿ ಉಳಿದಿಲ್ಲ. ಇದು ರಾಜಕೀಯ, ಸಿದ್ಧಾಂತ ಮತ್ತು ಸಾಂಸ್ಕೃತಿಕ ಇತಿಹಾಸದ ಮರುಲೇಖನದ ಸುತ್ತ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಸ್ವಾತಂತ್ರ್ಯೋತ್ತರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕಾಲದಲ್ಲಿ ನಿರ್ಮಾಣಗೊಂಡ ಕೃಷಿ ಭವನ, ಶಾಸ್ತ್ರಿ ಭವನಗಳು ಹಾಗೂ ಇತರ ಮಂತ್ರಾಲಯಗಳ ಕಟ್ಟಡಗಳನ್ನು ಧ್ವಂಸಗೊಳಿಸುತ್ತಿರುವುದು ಮತ್ತು ಹೆಸರುಗಳನ್ನು ಬದಲಾಯಿಸುತ್ತಿರುವುದು ಒಂದು ನಿರ್ದಿಷ್ಟ ‘ರಾಜಕೀಯ ಛಾಪು’ ಮೂಡಿಸುವ ಯತ್ನ ಎಂಬ ವಿಮರ್ಶೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ನೆಹರೂ ದಾಖಲೆ ಮುರಿದ ಮೋದಿ: ದೇಶ ಮುನ್ನಡೆಯಿತೋ, ಹಿಂದಕ್ಕೆ ಹೋಯಿತೋ?
ನೆಹರೂ-ಶಾಸ್ತ್ರಿ ಶಕೆಯ ಹೆಜ್ಜೆಗುರುತುಗಳನ್ನುಳಿಸುವ ಅಥವಾ ಅಳಿಸುವ ಯತ್ನ?
ಶಾಸ್ತ್ರಿ ಭವನ, ಕೃಷಿ ಭವನ, ನಿರ್ಮಾಣ ಭವನ ಮತ್ತು ಉದ್ಯೋಗ ಭವನಗಳು ಕೇವಲ ಇಟ್ಟಿಗೆ-ಸಿಮೆಂಟ್‌ನ ಕಟ್ಟಡಗಳಾಗಿರಲಿಲ್ಲ. ಅವು ಸ್ವತಂತ್ರ ಭಾರತವು ತನ್ನದೇ ಆದ ಆಡಳಿತಾತ್ಮಕ ಶಕ್ತಿಯನ್ನು ಕಂಡುಕೊಂಡ ಪ್ರಕ್ರಿಯೆಯ ಸಂಕೇತಗಳಾಗಿದ್ದವು. ಆದರೆ ಪ್ರಸ್ತುತ ಸರ್ಕಾರವು ಕಾಂಗ್ರೆಸ್ ಹಾಗೂ ನೆಹರೂ-ಶಾಸ್ತ್ರಿ ಯುಗದ ಪರಂಪರೆಯನ್ನು ಹಂತ ಹಂತವಾಗಿ ಹಿನ್ನೆಲೆಗೆ ಸರಿಸಲು ಯತ್ನಿಸುತ್ತಿದೆ. ಹಳೆಯ ಕಟ್ಟಡಗಳ ಜಾಗದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸುವುದರ ಜೊತೆಗೆ, ಅವುಗಳಿಗೆ ‘ಕರ್ತವ್ಯ ಭವನ’ಗಳೆಂದು ಹೆಸರಿಡುವ ಮೂಲಕ ಹೊಸ ರಾಜಕೀಯ ಸಿದ್ಧಾಂತವನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂಬ ವಾದವಿದೆ.
ಕಟ್ಟಡಗಳ ಭೌತಿಕ ಬದಲಾವಣೆಯ ಜತೆಗೆ ಹೆಸರುಗಳ ಬದಲಾವಣೆಯೂ ಒಂದು ಪ್ರಮುಖ ಅಸ್ತ್ರವಾಗಿದೆ. ದೆಹಲಿಯ ಐತಿಹಾಸಿಕ ‘ರಾಜಪಥ್’ ಅನ್ನು ‘ಕರ್ತವ್ಯ ಪಥ’ ಎಂದು ಮರುನಾಮಕರಣ ಮಾಡಲಾಗಿದೆ. ರಾಷ್ಟ್ರಪತಿ ಭವನದ ಪ್ರಸಿದ್ಧ ‘ಮೊಘಲ್ ಗಾರ್ಡನ್’ ಅನ್ನು ‘ಅಮೃತ ಉದ್ಯಾನ’ ಎಂದು ಬದಲಾಯಿಸಲಾಗಿದೆ.
ಪ್ರಸ್ತುತ ನೆಲಸಮಗೊಳ್ಳುತ್ತಿರುವ ಶಾಸ್ತ್ರಿ ಮತ್ತು ಕೃಷಿ ಭವನಗಳ ಜಾಗದಲ್ಲಿ ಬರುವ ಸಂಕೀರ್ಣಗಳನ್ನು ‘ಕರ್ತವ್ಯ ಭವನ 4 ಮತ್ತು 5’ ಎಂದು ಕರೆಯಲಾಗುತ್ತಿದೆ. ಸರ್ಕಾರವು ಇದನ್ನು “ಗುಲಾಮಗಿರಿಯ ಸಂಕೇತಗಳಿಂದ ಮುಕ್ತಿ” ಮತ್ತು ಭಾರತೀಯ ಸಂಸ್ಕೃತಿಗೆ ಆದ್ಯತೆ ಎಂದು ಪ್ರತಿಪಾದಿಸಿದರೆ, ವಿರೋಧ ಪಕ್ಷಗಳು ಮತ್ತು ಕೆಲವು ಇತಿಹಾಸಕಾರರು ಇದನ್ನು “ಸ್ವಾತಂತ್ರ್ಯೋತ್ತರ ಭಾರತ ಕಟ್ಟಿದ ನಾಯಕರ ಇತಿಹಾಸವನ್ನು ಮರೆಮಾಚುವ ಯತ್ನ” ಎಂದು ಕರೆಯುತ್ತಾರೆ.




