ದೇಶದಲ್ಲಿ ಮೊದಲ ಬಾರಿಗೆ 2009ರ ಜನವರಿ 28 ರಂದು ಆಧಾರ್ ಯೋಜನೆಯನ್ನು (UIDAI) ಆರಂಭಿಸಲಾಯಿತು. ನಂತರ ಸಾರ್ವಜನಿಕರಿಗೆ ಸುಲಭವಾಗಿ ಆಧಾರ್ ನೋಂದಣಿ ಮತ್ತು ನವೀಕರಣ ಸೇವೆಗಳನ್ನು ಒದಗಿಸಲು 2019ರ ಜನವರಿ 1 ರಂದು ದೇಶಾದ್ಯಂತ ಪ್ರತ್ಯೇಕವಾಗಿ ‘ಆಧಾರ್ ಸೇವಾ ಕೇಂದ್ರ’ಗಳನ್ನು (ASK) ಸ್ಥಾಪಿಸಲಾಯಿತು. ಆದರೆ ನಾಗಾಲ್ಯಾಂಡ್‌ನಲ್ಲಿ ಇಷ್ಟೊಂದು ವರ್ಷಗಳ ಬಳಿಕ ಮೊದಲ ಆಧಾರ್ ಸೇವಾ ಕೇಂದ್ರ ಆರಂಭವಾಗಿದೆ.
ನಾಗಾಲ್ಯಾಂಡ್‌ನಲ್ಲಿ ಆಧಾರ್ ನೋಂದಣಿ ಮತ್ತು ಸೇವೆಗಳನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಾಣಿಜ್ಯ ನಗರಿ ದಿಮಾಪುರದಲ್ಲಿ ರಾಜ್ಯದ ಪ್ರಪ್ರಥಮ ‘ಯುಐಡಿಎಐ ಆಧಾರ್ ಸೇವಾ ಕೇಂದ್ರ’ವನ್ನು ಶುಕ್ರವಾರ ಅಧಿಕೃತವಾಗಿ ಉದ್ಘಾಟಿಸಲಾಗಿದೆ.
ಇದನ್ನೂ ಓದಿ: ಎಬಿಪಿಎಸ್ ಕಡ್ಡಾಯಗೊಳಿಸಿದ ಕೇಂದ್ರ; ಮನರೇಗಾ ಉದ್ಯೋಗದಿಂದ 1.78 ಕೋಟಿ ಕಾರ್ಮಿಕರು ವಂಚಿತ
ಬುಡಕಟ್ಟು ವ್ಯವಹಾರಗಳು ಮತ್ತು ಚುನಾವಣೆಗಳ ಇಲಾಖೆಯ ಸಲಹೆಗಾರರಾದ ಎಚ್. ತೋವಿಹೊಟೊ ಅಯೆಮಿ ಅವರು ಯುಐಡಿಎಐ ಪ್ರಾದೇಶಿಕ ಕಚೇರಿಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಈ ಅತ್ಯಾಧುನಿಕ ಕೇಂದ್ರವನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದರು.
This video cannot be played in your browser. Open the video directly
ಅಸ್ಸಾಂಗೆ ಅಲೆಯುತ್ತಿದ್ದ ನಾಗಾಲ್ಯಾಂಡ್ ಜನರು!
ದೇಶದ ಉಳಿದ ಭಾಗಗಳಲ್ಲಿ ಆಧಾರ್ ಕಾರ್ಡ್ ವ್ಯಾಪಕವಾಗಿ ಬಳಕೆಯಲ್ಲಿದ್ದರೂ, ನಾಗಾಲ್ಯಾಂಡ್‌ನಲ್ಲಿ ಈ ಮಟ್ಟದ ಸುಸಜ್ಜಿತ ಅಧಿಕೃತ ಸೇವಾ ಕೇಂದ್ರ ತಲೆಯೆತ್ತಲು ಇಷ್ಟು ವರ್ಷಗಳು ಬೇಕಾಯಿತು. ಇದಕ್ಕೂ ಮುನ್ನ ಅಲ್ಲಿನ ಜನಸಾಮಾನ್ಯರು ಆಧಾರ್‌ನ ಪ್ರಮುಖ ತಿದ್ದುಪಡಿಗಳು ಹಾಗೂ ಬಯೋಮೆಟ್ರಿಕ್ ಅಪ್‌ಡೇಟ್‌ಗಳಿಗಾಗಿ ನೆರೆಯ ಅಸ್ಸಾಂನ ಗುವಾಹಟಿಗೆ ಅಲೆಯಬೇಕಾದ ಪರಿಸ್ಥಿತಿ ಇತ್ತು.
ನಾಗಾಲ್ಯಾಂಡ್‌ನಲ್ಲಿ ಶಿಕ್ಷಣ ಇಲಾಖೆ, ಅಂಚೆ ಕಚೇರಿ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಅಡಿಯಲ್ಲಿ ಸುಮಾರು 150 ರಿಂದ 160 ಸಣ್ಣ ಪ್ರಮಾಣದ ಆಧಾರ್ ನೋಂದಣಿ ಕಿಟ್‌ಗಳು/ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ಇವುಗಳಲ್ಲಿ ಕೇವಲ ಪ್ರಾಥಮಿಕ ಹೆಸರು, ವಿಳಾಸ ಬದಲಾವಣೆಯಂತಹ ಸಾಮಾನ್ಯ ಕೆಲಸಗಳು ಮಾತ್ರ ಆಗುತ್ತಿದ್ದವು.
ಆದರೆ ಬಯೋಮೆಟ್ರಿಕ್ ಡೇಟಾ ಲಾಕ್ ಆಗಿದ್ದರೆ, ಬೆರಳಚ್ಚು ಅಥವಾ ಕಣ್ಣಿನ ಪಾಪೆ (Iris) ಸ್ಕ್ಯಾನ್ ಮರು-ಅಪ್‌ಡೇಟ್ ಮಾಡಬೇಕಿದ್ದರೆ ಮತ್ತು ಜನ್ಮ ದಿನಾಂಕದ ಕಠಿಣ ತಿದ್ದುಪಡಿಗಳಿದ್ದರೆ ಹೈ-ಸ್ಪೀಡ್ ಇಂಟರ್ನೆಟ್ ಮತ್ತು ಸುಸಜ್ಜಿತ ಸರ್ವರ್ ಒಳಗೊಂಡ ಬೃಹತ್ ಕೇಂದ್ರಗಳ ಅಗತ್ಯವಿರುತ್ತದೆ. ಆದರೆ ಇಂತಹ ಅತ್ಯಾಧುನಿಕ ಸೌಲಭ್ಯವಿರುವ ‘ವಿಶೇಷ ಸೇವಾ ಕೇಂದ್ರ’ ಇಡೀ ನಾಗಾಲ್ಯಾಂಡ್‌ನಲ್ಲಿ ಒಂದೂ ಇರಲಿಲ್ಲ. ಈ ತಾಂತ್ರಿಕ ಕಾರಣಗಳಿಂದಾಗಿ ಜನರು ಅಸ್ಸಾಂನ ಗುವಾಹಟಿಯಲ್ಲಿರುವ ಯುಐಡಿಎಐ ಪ್ರಾದೇಶಿಕ ಕಚೇರಿ ಅಥವಾ ಅಲ್ಲಿನ ಬೃಹತ್ ಕೇಂದ್ರಗಳನ್ನೇ ಆಶ್ರಯಿಸಬೇಕಾಗಿತ್ತು.
ಇದನ್ನೂ ಓದಿ: ಕರ್ನಾಟಕ ಸೇರಿ 22 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ಎಸ್‌ಐಆರ್’ ನಡೆಸಲು ಚುನಾವಣಾ ಆಯೋಗ ಮುಂದು
ಈಶಾನ್ಯ ಭಾರತದ ರಾಜ್ಯಗಳಲ್ಲಿ ಭೌಗೋಳಿಕ ಪರಿಸ್ಥಿತಿ ಮತ್ತು ದುರ್ಗಮ ಬೆಟ್ಟ ಗುಡ್ಡಗಳ ಪ್ರದೇಶಗಳು ತಾಂತ್ರಿಕ ಮೂಲಸೌಕರ್ಯಗಳನ್ನು ಒದಗಿಸಲು ದೊಡ್ಡ ಸವಾಲಾಗಿದ್ದವು. ನೋಂದಣಿ ಪ್ರಮಾಣವೂ ಕಡಿಮೆ ಆದ್ದರಿಂದ ಇಷ್ಟೊಂದು ವಿಳಂಬವಾಗಿದೆ ಎಂಬುದು ಸರ್ಕಾರ ವಾದ. ಆದರೆ ಇದು ನಾಗಾಲ್ಯಾಂಡ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಅಧಿಕಾರದಲ್ಲಿರುವ ನ್ಯಾಶನಲಿಸ್ಟ್ ಡೆಮೋಕ್ರಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿ (NDPP) ಮತ್ತು ಬಿಜೆಪಿ ಮೈತ್ರಿಯ ‘ಯುನೈಟೆಡ್ ಡೆಮೋಕ್ರಟಿಕ್ ಅಲೈಯನ್ಸ್’ (UDA) ಸರ್ಕಾರದ ವೈಫಲ್ಯ ಎಂದು ವಿಪಕ್ಷಗಳು, ವಿಶ್ಲೇಷಕರು ಹೇಳುತ್ತಾರೆ.
ನೋಂದಣಿ ಕಡಿಮೆ ಏಕೆ?
ಯುಐಡಿಎಐ ಗುವಾಹಟಿ ಪ್ರಾದೇಶಿಕ ಕಚೇರಿಯ ಉಪ ಮಹಾನಿರ್ದೇಶಕರಾದ ನ್ಗಾಚನ್ ಜಿಮಿಕ್ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಭಾರತದಾದ್ಯಂತ ಆಧಾರ್ ನೋಂದಣಿ ಪ್ರಮಾಣವು ಶೇಕಡಾ 99 ರಷ್ಟಿದ್ದರೆ, ನಾಗಾಲ್ಯಾಂಡ್‌ನಲ್ಲಿ ಇದು ಕೇವಲ ಶೇಕಡಾ 67 ರಷ್ಟಿದೆ. ಅಂದರೆ ರಾಜ್ಯದ ಸುಮಾರು 33% ಜನಸಂಖ್ಯೆ ಇನ್ನು ಕೂಡ ಆಧಾರ್ ವ್ಯಾಪ್ತಿಗೆ ಬಂದಿಲ್ಲ! ರಾಜಧಾನಿ ಕೊಹಿಮಾದಲ್ಲೇ ಕೇವಲ 68% ರಷ್ಟು ನೋಂದಣಿಯಾಗಿದೆ.
ಭಾರತದ ಸಂವಿಧಾನದ ವಿಧಿ 371A (Article 371A) ನಾಗಾಲ್ಯಾಂಡ್‌ಗೆ ವಿಶೇಷ ಸ್ವಾಯತ್ತತೆಯನ್ನು ನೀಡುತ್ತದೆ. ಇದರ ಪ್ರಕಾರ, ನಾಗಾ ಜನರ ಧಾರ್ಮಿಕ, ಸಾಮಾಜಿಕ ಆಚರಣೆಗಳು ಮತ್ತು ಭೂಮಿಯ ಹಕ್ಕುಗಳ ವಿಷಯದಲ್ಲಿ ಸಂಸತ್ತಿನ ಯಾವುದೇ ಕಾಯ್ದೆ ನೇರವಾಗಿ ಅನ್ವಯಿಸುವುದಿಲ್ಲ.
ಆರಂಭದಲ್ಲಿ, ಆಧಾರ್ ನೋಂದಣಿಯಿಂದ ತಮ್ಮ ಸಾಂಪ್ರದಾಯಿಕ ಹಕ್ಕುಗಳಿಗೆ ಧಕ್ಕೆಯಾಗಬಹುದು ಮತ್ತು ತಮ್ಮ ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸುವುದು ತಮ್ಮ ಖಾಸಗಿತನಕ್ಕೆ ಲಗ್ಗೆ ಇಟ್ಟಂತೆ ಎಂಬ ತೀವ್ರ ಸಾರ್ವಜನಿಕ ಹಿಂಜರಿಕೆ ಇತ್ತು. ಈ ಸಾಮಾಜಿಕ ಮತ್ತು ಸಾಂಸ್ಕೃತಿಕ ಆತಂಕಗಳನ್ನು ನಿವಾರಿಸಿ ಆಧಾರ್ ನೋಂದಣಿ ಆರಂಭಿಸುವುದೇ ಹಲವಾರು ವರ್ಷಗಳು ತೆಗೆದುಕೊಂಡಿದೆ ಎಂದು ಸರ್ಕಾರ ಹೇಳುತ್ತದೆ.





