ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಮರ್ಪಕವಾಗಿ ಬಳಸಿಕೊಂಡರೆ ಕೃಷಿಯಲ್ಲೂ ಅದ್ಭುತ ಸಾಧನೆ ಮಾಡಬಹುದು ಎಂಬುದಕ್ಕೆ ಬಾಗಲಕೋಟೆ ಜಿಲ್ಲೆಯ ಹುನಗುಂದ ನಗರದ ರೈತ ನಾಗರಾಜ ಬಯ್ಯಾಪುರ ಅವರ ತೋಟ ಉತ್ತಮ ಉದಾಹರಣೆಯಾಗಿದೆ.
ಹುನಗುಂದ ನಗರಕ್ಕೆ ಹೊಂದಿಕೊಂಡಿರುವ ತಮ್ಮ ಒಂದುವರೆ ಎಕರೆ ಜಮೀನಿನಲ್ಲಿ ವೈಜ್ಞಾನಿಕ ಪದ್ಧತಿಯ ತೋಟಗಾರಿಕೆ ಬೆಳೆಗಳನ್ನು ಬೆಳೆಸಿ, ಪೋಲಾಗುವ ನೀರನ್ನು ಬಳಸಿ 1.5 ಎಕರೆ ತೋಟದಲ್ಲಿ ವರ್ಷಕ್ಕೆ ₹1.50 ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಸುಮಾರು ಐದು ವರ್ಷಗಳ ಹಿಂದೆ ಭವಿಷ್ಯದ ದೃಷ್ಟಿಯಿಂದ ತೋಟವನ್ನು ರೂಪಿಸಿದ ಅವರು, 200 ಪೇರಲ, 65 ನೇರಳೆ, 60 ಕರಿಬೇವು, 150 ಶ್ರೀಗಂಧ ಸೇರಿದಂತೆ ಸಾಗುವಾನಿ, ಮಹಾಗನಿ ಹಾಗೂ ರಕ್ತಚಂದನದಂತಹ ದೀರ್ಘಕಾಲಿಕ ಮೌಲ್ಯದ ಸಸಿಗಳನ್ನು ನೆಟ್ಟಿದ್ದರು. ಆರಂಭದಲ್ಲಿ ಸಾಕಷ್ಟು ಶ್ರಮ ಹಾಗೂ ನಿರ್ವಹಣೆ ಅಗತ್ಯವಿದ್ದರೂ, ಈಗ ಅವು ಉತ್ತಮ ಇಳುವರಿ ನೀಡುತ್ತಿದ್ದು, ಕುಟುಂಬಕ್ಕೆ ಸ್ಥಿರ ಆದಾಯದ ಮೂಲವಾಗಿವೆ.
ಪ್ರಸ್ತುತ ಪೇರಲ ಹಣ್ಣಿನಿಂದ ವರ್ಷಕ್ಕೆ ಸುಮಾರು ₹40 ಸಾವಿರ, ನೇರಳೆ ಹಣ್ಣಿನಿಂದ ₹70 ಸಾವಿರ, ಕರಿಬೇವಿನಿಂದ ₹40 ಸಾವಿರ ಆದಾಯ ಬರುತ್ತಿದ್ದು, ಒಟ್ಟು ಸುಮಾರು ₹1.50 ಲಕ್ಷ ಗಳಿಸುತ್ತಿದ್ದಾರೆ. ಜೊತೆಗೆ ತಿಪಟೂರಿನಿಂದ ತರಿಸಿಕೊಂಡಿದ್ದ 50 ತೆಂಗಿನ ಸಸಿಗಳಲ್ಲಿ ಈ ವರ್ಷದಿಂದ 25ಕ್ಕೂ ಹೆಚ್ಚು ಮರಗಳು ಫಲ ನೀಡಲು ಆರಂಭಿಸಿವೆ. ಮುಂದಿನ ವರ್ಷಗಳಲ್ಲಿ ತೆಂಗಿನ ಬೆಳೆಯಿಂದಲೂ ಆದಾಯ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.
ಜಮೀನಿನ ಸುತ್ತ ತಂತಿ ಬೇಲಿ ನಿರ್ಮಿಸಿ ಅದರ ಬದುವಿನಲ್ಲಿ ಕರಿಬೇವು, ಸಾಗುವಾನಿ ಹಾಗೂ ಇತರೆ ಮರಗಳನ್ನು ಸಾಲಾಗಿ ಬೆಳೆಸಿರುವುದು ತೋಟದ ವಿಶೇಷತೆ. ಇದರಿಂದ ಭೂ ಸಂರಕ್ಷಣೆ ಜೊತೆಗೆ ದೀರ್ಘಾವಧಿಯಲ್ಲಿ ಉತ್ತಮ ಆರ್ಥಿಕ ಲಾಭವೂ ದೊರೆಯಲಿದೆ.
ನೀರಿನ ಸಮರ್ಪಕ ಬಳಕೆ ವ್ಯರ್ಥವಾಗಿ ಹರಿಯುತ್ತಿದ್ದ ನೀರನ್ನು ಸಂಗ್ರಹಿಸಿ ತೋಟಕ್ಕೆ ಬಳಸಿಕೊಳ್ಳುವ ವ್ಯವಸ್ಥೆಯನ್ನು ರೈತರು ಮಾಡಿಕೊಂಡಿದ್ದಾರೆ. ನೀರಿನ ಬಳಕೆಯಲ್ಲಿ ಮಿತವ್ಯಯಕ್ಕೆ ಆದ್ಯತೆ ನೀಡಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ನೀರು ಪೂರೈಕೆಗೆ ಸೌರಶಕ್ತಿ ಆಧಾರಿತ ಪಂಪ್ ಅಳವಡಿಸಿರುವುದರಿಂದ ವಿದ್ಯುತ್ ವ್ಯತ್ಯಯದ ಸಮಸ್ಯೆ ಎದುರಾಗುತ್ತಿಲ್ಲ. ಅಗತ್ಯವಿದ್ದಾಗ ಬಳಕೆಗಾಗಿ ಕೊಳವೆ ಬಾವಿಯನ್ನೂ ಕೊರೆಸಿದ್ದಾರೆ.
ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆ ತೋಟದಲ್ಲಿ ಉತ್ಪಾದನೆಯಾಗುವ ಪೇರಲ, ನೇರಳೆ ಹಾಗೂ ಕರಿಬೇವುಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲೇ ಮಾರಾಟ ಮಾಡಲಾಗುತ್ತಿದೆ. ಗುಣಮಟ್ಟದ ಹಣ್ಣುಗಳಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಈ ವರ್ಷ ನೇರಳೆ ಬೆಳೆ ನಿರೀಕ್ಷೆಗೂ ಮೀರಿ ಫಲ ನೀಡಿದೆ. ದೊಡ್ಡ ಗಾತ್ರದ ಹಾಗೂ ಉತ್ತಮ ಗುಣಮಟ್ಟದ ಹಣ್ಣುಗಳಿಗೆ ಉತ್ತಮ ಬೆಲೆ ಸಿಕ್ಕಿರುವುದರಿಂದ ಆದಾಯವೂ ಹೆಚ್ಚಾಗಿದೆ.
“ಪೇರಲ ಬೆಳೆಗೆ ಕೀಟಬಾಧೆ ಹೆಚ್ಚಾಗುವ ಸಾಧ್ಯತೆ ಇದೆ. ಸಮಯಕ್ಕೆ ಸರಿಯಾಗಿ ಔಷಧ ಸಿಂಪಡಿಸಿ ರೋಗ ನಿಯಂತ್ರಣ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು. ಈ ವರ್ಷ ನೇರಳೆ ಬೆಳೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಹಣ್ಣು ಬಂದಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುವುದರಿಂದ ಲಾಭವೂ ಹೆಚ್ಚಾಗಿದೆ” ಎಂದು ರೈತ ದೊಡ್ಡಬಸಪ್ಪ ಬಯ್ಯಾಪುರ ಈದಿನ.ಕಾಮ್‌ಗೆ ತಮ್ಮ ಅನುಭವ ಹಂಚಿಕೊಂಡರು.
ಬಹುಬೆಳೆ ಪದ್ಧತಿಗೂ ಆದ್ಯತೆ ತೋಟಗಾರಿಕೆಯ ಜೊತೆಗೆ ದೊಡ್ಡಬಸಪ್ಪ ಬಯ್ಯಾಪುರ ಅವರು ಐದು ಎಕರೆ ಕಬ್ಬು ಹಾಗೂ 16 ಎಕರೆ ಮಳೆಯಾಶ್ರಿತ ಜಮೀನಿನಲ್ಲಿ ಮೆಣಸಿನಕಾಯಿ, ಕಡಲೆ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕೃಷಿಗೆ ಪೂರಕವಾಗಿ ಗಾಣದ ಎಣ್ಣೆ ಯಂತ್ರ ಸ್ಥಾಪಿಸಿಕೊಂಡಿದ್ದು, ಮೌಲ್ಯವರ್ಧಿತ ಕೃಷಿಯತ್ತಲೂ ಹೆಜ್ಜೆ ಇಟ್ಟಿದ್ದಾರೆ.
ಇಲಾಖೆಯ ಪ್ರೋತ್ಸಾಹ
ರೈತನ ವಿಭಿನ್ನ ಸಾಧನೆಯ ಕುರಿತು ಈದಿನ.ಕಾಮ್ ಜೊತೆಗೆ ಮಾತನಾಡಿದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸುಭಾಷ್ ಶುಲ್ಪಿ, “ತೋಟಗಾರಿಕೆ ಬೆಳೆಗಳಿಗೆ ಇಲಾಖೆಯಿಂದ ವಿವಿಧ ಸೌಲಭ್ಯಗಳು ಹಾಗೂ ಅನುದಾನಗಳನ್ನು ನೀಡಲಾಗಿದೆ. ಇಂತಹ ಯೋಜನೆಗಳನ್ನು ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಂಡು ತೋಟಗಾರಿಕೆ ಬೆಳೆಗಳತ್ತ ಆಸಕ್ತಿ ತೋರಬೇಕು” ಎಂದು ತಿಳಿಸಿದರು.
ಕಡಿಮೆ ಜಮೀನಿನಲ್ಲಿ ನೀರಿನ ಸಮರ್ಪಕ ನಿರ್ವಹಣೆ, ಆಧುನಿಕ ತಂತ್ರಜ್ಞಾನ ಹಾಗೂ ಬಹುಬೆಳೆ ಪದ್ಧತಿಯನ್ನು ಅಳವಡಿಸಿಕೊಂಡರೆ ಕೃಷಿಯಲ್ಲೂ ಉತ್ತಮ ಆದಾಯ ಗಳಿಸಬಹುದು ಎಂಬುದನ್ನು ದೊಡ್ಡಬಸಪ್ಪ ಬಯ್ಯಾಪುರ ಅವರ ಯಶೋಗಾಥೆ ಮತ್ತೊಮ್ಮೆ ಸಾಬೀತುಪಡಿಸಿದೆ.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು



