ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ತಮ್ಮ ಮತ್ತು ತಮ್ಮ ಪುತ್ರ ರಾಹುಲ್ ಗಾಂಧಿ ವಿರುದ್ಧ ಕೇಳಿಬಂದಿರುವ ಆರ್ಥಿಕ ಅಕ್ರಮದ ಆರೋಪಗಳನ್ನು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. “ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪುನರುಜ್ಜೀವನ ಪ್ರಕ್ರಿಯೆಯಿಂದ ನಾನಾಗಲಿ ಅಥವಾ ರಾಹುಲ್ ಗಾಂಧಿ ಆಗಲಿ ಯಾವುದೇ ರೀತಿಯ ಒಂದೇ ಒಂದು ಪೈಸೆಯ ಹಣದ ಲಾಭವನ್ನೂ ಪಡೆದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಹಾರ್ಪರ್ ಕಾಲಿನ್ಸ್ ಇಂಡಿಯಾ ಸಂಸ್ಥೆ ಪ್ರಕಟಿಸಿರುವ ತಮ್ಮ ಆತ್ಮಕಥೆ ‘Belonging: A Journey of Love’ ಪುಸ್ತಕದಲ್ಲಿ ಸೋನಿಯಾ ಗಾಂಧಿ ಈ ವಿಷಯದ ಕುರಿತು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ | ಒಂದೆಡೆ ಕೋರ್ಟ್ ರಿಲೀಫ್, ಇನ್ನೊಂದೆಡೆ ಹೊಸ ಪ್ರಕರಣ
ನ್ಯಾಷನಲ್ ಹೆರಾಲ್ಡ್ ನಡೆಸುವ ಸಂಸ್ಥೆಯು ‘ಲಾಭರಹಿತ’ ಸ್ವರೂಪದ್ದಾಗಿದೆ. ಇದರ ನಿರ್ದೇಶಕರು ಅಥವಾ ಶೇರುದಾರರು ಯಾವುದೇ ಹಣಕಾಸಿನ ಲಾಭ ಅಥವಾ ಲಾಭಾಂಶವನ್ನು ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಿದ್ದರೂ, ನಮ್ಮ ವಿರುದ್ಧ ‘ಅಪರಾಧಿಕ ಸಂಚು’ ಪ್ರಕರಣವನ್ನು ದಾಖಲಿಸಲಾಯಿತು.
ರಾಜಕೀಯ ದುರುದ್ದೇಶದಿಂದ 2015ರಲ್ಲಿ ಜಾಮೀನು ಪಡೆಯಬೇಕಾದ ಪರಿಸ್ಥಿತಿ ಬಂದೊದಗಿತು. ತದನಂತರ ಕೇಂದ್ರ ಸರ್ಕಾರದ ಸೂಚನೆಯಂತೆ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣ ಕೈಗೆತ್ತಿಕೊಂಡು ನಮ್ಮನ್ನು ಗಂಟೆಗಟ್ಟಲೆ ಹಾಗೂ ದಿನಗಟ್ಟಲೆ ವಿಚಾರಣೆಗೆ ಒಳಪಡಿಸಿತು. ಕಳೆದ 12 ವರ್ಷಗಳಿಗೂ ಹೆಚ್ಚು ಕಾಲದಿಂದ ಈ ವಿಷಯವನ್ನು ಅನಗತ್ಯವಾಗಿ ಎಳೆದಾಡಲಾಗುತ್ತಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ.
ಇದರೊಂದಿಗೆ, ತಮ್ಮ ಅಳಿಯ ರಾಬರ್ಟ್ ವಾದ್ರಾ ಹಾಗೂ ಪುತ್ರ ರಾಹುಲ್ ಗಾಂಧಿ ಅವರ ವಿರುದ್ಧವೂ ಸುಳ್ಳು ಆರೋಪಗಳನ್ನು ಹೊರಿಸಿ, ರಾಜಕೀಯವಾಗಿ ಮಸಿಬಳಿಯುವ ಯತ್ನ ನಡೆಯಿತು ಎಂದು ಸೋನಿಯಾ ಗಾಂಧಿ ಪುಸ್ತಕದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.




