ಎನ್‌ಸಿಇಆರ್‌ಟಿ (NCERT) 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಅಧ್ಯಾಯವನ್ನು ರಚಿಸಿದ್ದ ಮೂವರು ಶಿಕ್ಷಣ ತಜ್ಞರನ್ನು ಕಪ್ಪುಪಟ್ಟಿಗೆ ಸೇರಿಸಿ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಹಿಂಪಡೆದಿದೆ. ಈ ಮೂಲಕ, ಶೈಕ್ಷಣಿಕ ಯೋಜನೆಗಳಲ್ಲಿ ಈ ತಜ್ಞರೊಡನೆ ಕಾರ್ಯನಿರ್ವಹಿಸುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸಂಸ್ಥೆಗಳು ಸ್ವತಂತ್ರವಾಗಿ ತಮ್ಮದೇ ನಿರ್ಧಾರ ತೆಗೆದುಕೊಳ್ಳಲು ಮುಕ್ತ ಅವಕಾಶ ಕಲ್ಪಿಸಿದೆ.
ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಾಂಚೋಲಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ನಿರ್ಣಯ ಕೈಗೊಂಡಿದೆ. ವಿವಾದಿತ ಅಧ್ಯಾಯದ ಕುರಿತು ಶಿಕ್ಷಣ ತಜ್ಞರು ನೀಡಿದ ವಿವರಣೆ ಹಾಗೂ ಸಮರ್ಥನೆಗಳಿಗೆ ನ್ಯಾಯಪೀಠ ತೃಪ್ತಿ ವ್ಯಕ್ತಪಡಿಸಿದೆ. ಈ ಹಿಂದಿನ ಆದೇಶದಿಂದ ತಮ್ಮ ವೃತ್ತಿಜೀವನ ಹಾಗೂ ಜೀವನೋಪಾಯದ ಮೇಲೆ ಉಂಟಾಗಿದ್ದ ದುಷ್ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ತಜ್ಞರಿಗೆ ಸುಪ್ರೀಂ ಕೋರ್ಟ್‌ನ ಈ ನಿರ್ಧಾರವು ರಿಲೀಫ್ ನೀಡಿದೆ.
ಮಾರ್ಚ್ 11 ರಂದು ಹೊರಡಿಸಲಾಗಿದ್ದ ಆದೇಶದಲ್ಲಿ, ಶಿಕ್ಷಣ ತಜ್ಞರಾದ ಮೈಕೆಲ್ ಡ್ಯಾನಿನೋ, ಅಲೋಕ್ ಪ್ರಸನ್ನ ಕುಮಾರ್ ಮತ್ತು ಸುಪರ್ಣಾ ದಿವಾಕರ್ ಅವರನ್ನು ಶೈಕ್ಷಣಿಕ ಕಾರ್ಯಗಳಿಂದ ಸಂಪೂರ್ಣವಾಗಿ ದೂರವಿಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು. ಎಳೆಯ ವಯಸ್ಸಿನ 8ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಭಾರತೀಯ ನ್ಯಾಯಾಂಗದ ಬಗ್ಗೆ ನಕಾರಾತ್ಮಕ ಚಿತ್ರಣವನ್ನು ಬಿಂಬಿಸಲು ಇವರು ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ನ್ಯಾಯಾಲಯ ಆಪಾದಿಸಿತ್ತು. ಇದೀಗ ಆ ಆದೇಶದಲ್ಲಿ ಮಾಡಲಾಗಿದ್ದ ಎಲ್ಲ ಪ್ರತಿಕೂಲ ಟೀಕೆಗಳನ್ನು ನ್ಯಾಯಾಲಯವು ಕಡತದಿಂದ ಅಳಿಸಿಹಾಕಿದೆ.
ಇದನ್ನು ಓದಿದ್ದೀರಾ? ಕಾಕ್‌ರೋಚ್ ಪಕ್ಷದ ಶೇ. 49ರಷ್ಟು ಪಾಕಿಸ್ತಾನದ ಫಾಲೋವರ್ಸ್‌ಗಳೆ? ಸುಳ್ಳು ವೈರಲ್ ಪೋಸ್ಟರ್‌ಗೆ ಅಸಲಿ ಉತ್ತರ ಇಲ್ಲಿದೆ
ಇದಕ್ಕೂ ಮುನ್ನ, ಫೆಬ್ರವರಿ 26 ರಂದು ಈ ಪಠ್ಯಪುಸ್ತಕದ ಪ್ರಕಟಣೆ, ಮರುಮುದ್ರಣ ಮತ್ತು ಡಿಜಿಟಲ್ ಪ್ರಸರಣಕ್ಕೆ ನ್ಯಾಯಾಲಯ ಸಂಪೂರ್ಣ ನಿಷೇಧ ಹೇರಿತ್ತು.
ವಿಚಾರಣೆ ವೇಳೆ ಮೈಕೆಲ್ ಡ್ಯಾನಿನೋ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ಮಾರ್ಚ್ 11 ರ ಆದೇಶವನ್ನು ತಜ್ಞರ ಅಹವಾಲು ಆಲಿಸದೆಯೇ ಏಕಪಕ್ಷೀಯವಾಗಿ ಹೊರಡಿಸಲಾಗಿತ್ತು ಎಂದು ಪ್ರತಿಪಾದಿಸಿದರು.
“ಪಠ್ಯಪುಸ್ತಕದ ವಿಷಯವು ಕೇವಲ ಒಬ್ಬ ವ್ಯಕ್ತಿಯದ್ದಲ್ಲ, ಅದು ಇಡೀ ಸಮಿತಿಯ ಸಾಮೂಹಿಕ ನಿರ್ಧಾರವಾಗಿತ್ತು. ನ್ಯಾಯಾಂಗವನ್ನು ಬಾಧಿಸುತ್ತಿರುವ ಸಮಸ್ಯೆಗಳ ಬಗ್ಗೆ ಇಂದು ಮಾಧ್ಯಮಗಳಲ್ಲಿ ಮುಕ್ತ ಚರ್ಚೆಗಳು ನಡೆಯುತ್ತಿವೆ. ಇವುಗಳನ್ನು ವಿದ್ಯಾರ್ಥಿಗಳಿಂದ ಮುಚ್ಚಿಡಲಾಗದು” ಎಂದ ಅವರು, ಇದರ ಹಿಂದೆ ಯಾವುದೇ ದುರುದ್ದೇಶವಿರಲಿಲ್ಲ, ಪರಿಹಾರಗಳನ್ನು ಕಂಡುಕೊಳ್ಳಲು ಮುಕ್ತ ಚರ್ಚೆಗಳು ಅಗತ್ಯ ಎಂದು ವಾದಿಸಿದರು. ಸುಪರ್ಣಾ ದಿವಾಕರ್ ಪರ ವಾದಿಸಿದ ಹಿರಿಯ ವಕೀಲ ಜೆ. ಸಾಯಿ ದೀಪಕ್ ಅವರು, ಪಠ್ಯ ರಚನೆಯಲ್ಲಿ ತಮ್ಮ ಕಕ್ಷಿದಾರರ ಪಾತ್ರ ಅತ್ಯಂತ ಸೀಮಿತವಾಗಿತ್ತು ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಈ ವಾದಗಳ ನಡುವೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪಠ್ಯಪುಸ್ತಕದಲ್ಲಿ ಕೇವಲ ‘ಭ್ರಷ್ಟಾಚಾರ’ವನ್ನು ಮಾತ್ರ ನ್ಯಾಯಾಂಗದ ವಿಶಿಷ್ಟ ಲಕ್ಷಣವೆಂಬಂತೆ ಎತ್ತಿ ತೋರಿಸಲಾಗಿದೆಯೇ ಹೊರತು, ಕಾನೂನು ಸೇವೆಗಳ ಲಭ್ಯತೆ ಅಥವಾ ನ್ಯಾಯಾಧೀಶರ ಸಕಾರಾತ್ಮಕ ಪಾತ್ರದ ಬಗ್ಗೆ ಒಂದು ಪದವೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಅದಕ್ಕೆ ಪ್ರತಿಯಾಗಿ, ಪುಸ್ತಕದ ಇತರ ಭಾಗಗಳಲ್ಲಿ ನ್ಯಾಯಾಂಗದ ಕೊಡುಗೆಗಳ ಬಗ್ಗೆಯೂ ವಿವರವಾಗಿ ಚರ್ಚಿಸಲಾಗಿದೆ ಎಂದು ತಜ್ಞರು ಸಮರ್ಥಿಸಿಕೊಂಡರು. ಅಂತಿಮವಾಗಿ, ಈ ಶಿಕ್ಷಣ ತಜ್ಞರು ‘ರಾತ್ರೋರಾತ್ರಿ ಹುಟ್ಟಿಕೊಂಡವರಲ್ಲ’ ಮತ್ತು ಶೈಕ್ಷಣಿಕ ವಲಯದಲ್ಲಿ ಅವರಿಗೆ ತಮ್ಮದೇ ಆದ ವಿಶ್ವಾಸಾರ್ಹತೆ ಇದೆ ಎಂಬ ವಾದವನ್ನು ಮನ್ನಿಸಿದ ಸುಪ್ರೀಂ ಕೋರ್ಟ್, ಅವರು ನೀಡಿದ ವಿವರಣೆಗಳು ತೃಪ್ತಿದಾಯಕವಾಗಿವೆ ಎಂದು ಪರಿಗಣಿಸಿ ಕಪ್ಪುಪಟ್ಟಿಯ ಆದೇಶವನ್ನು ಅಧಿಕೃತವಾಗಿ ಹಿಂಪಡೆದಿದೆ.




