ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಇಂಧನ ಬಿಕ್ಕಟ್ಟನ್ನು ನಿಭಾಯಿಸಲು, ಪ್ರಧಾನಿ ನರೇಂದ್ರ ಮೋದಿ ಇಂಧನ ಉಳಿತಾಯಕ್ಕೆ ಕರೆ ನೀಡಿದ್ದು ಗೊತ್ತೇ ಇದೆ. ಈ ಕರೆಗೆ ಬೆಂಬಲ ಸೂಚಿಸಿರುವ ಉತ್ತರ ಪ್ರದೇಶದ ಲಕ್ನೋದ ಸುಮಾರು 70 ನ್ಯಾಯಾಧೀಶರು ಇಂದು (ಮೇ.22) ಬೆಳಗ್ಗೆ ಸೈಕಲ್ ಏರಿ ಕೋರ್ಟ್‌ಗೆ ಆಗಮಿಸಿದ್ದಾರೆ.
ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಅವರು ಈ ಜಾಗೃತಿ ರ‍್ಯಾಲಿಗೆ ಹಸಿರು ನಿಶಾನೆ ತೋರಿಸಿದ್ದಲ್ಲದೆ, ತಾವೂ ಕೂಡ ಸೈಕಲ್ ಸವಾರಿ ಮಾಡುವ ಮೂಲಕ ಈ ವಿಶಿಷ್ಟ ಉಪಕ್ರಮದ ನೇತೃತ್ವ ವಹಿಸಿದ್ದರು ಎಂದು PTI ತನ್ನ Xನಲ್ಲಿ ಪೋಸ್ಟ್ ಹಂಚಿಕೊಂಡಿದೆ.
ನ್ಯಾಯಾಧೀಶರೊಂದಿಗೆ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ಕೂಡ ಈ ಸೈಕಲ್ ಸವಾರಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಹಲವರು ಇ-ರಿಕ್ಷಾಗಳ ಮೂಲಕ ಕೋರ್ಟ್ ಆವರಣಕ್ಕೆ ಆಗಮಿಸಿದರು. ಸೈಕಲ್‌ಗಳ ಮೇಲೆ “ಇಂಧನ ಉಳಿಸಿ” ಮತ್ತು “ಪರಿಸರಸ್ನೇಹಿ ಸಾರಿಗೆ ಬಳಸಿ” ಎಂಬ ಜಾಗೃತಿ ಸಂದೇಶಗಳಿದ್ದ ಫಲಕಗಳನ್ನು ಅಳವಡಿಸಲಾಗಿತ್ತು.
ಇದನ್ನೂ ಓದಿ: ಮಗನಿಗೆ ಕಿಡ್ನಿ ದಾನ ಮಾಡಲು ತಾಯಿಗೆ DNA ಪರೀಕ್ಷೆ ಕಡ್ಡಾಯವಲ್ಲ: ಮದ್ರಾಸ್ ಹೈಕೋರ್ಟ್
“ಇದು ದೇಶದ ಮೇಲಿನ ನಮ್ಮ ಪ್ರಾಮಾಣಿಕ ಕಾಳಜಿ” ಇಂಧನ ಕೊರತೆಯ ಆತಂಕ ಎದುರಾಗಿರುವುದು ನಮ್ಮ ಗಮನಕ್ಕೆ ಬಂದಾಗ, ವಾರದಲ್ಲಿ ಕನಿಷ್ಠ ಒಂದು ದಿನವಾದರೂ ನ್ಯಾಯಾಂಗ ಅಧಿಕಾರಿಗಳೆಲ್ಲರೂ ಸೈಕಲ್ ಮೂಲಕ ಕೋರ್ಟ್‌ಗೆ ಬರಬೇಕೆಂದು ನಿರ್ಧರಿಸಿದೆವು. ಇದು ಕೇವಲ ಒಂದು ಉಪಕ್ರಮವಲ್ಲ, ನ್ಯಾಯಾಂಗ ಅಧಿಕಾರಿಗಳ ಕಡೆಯಿಂದ ದೇಶಕ್ಕೆ ತೋರುತ್ತಿರುವ ಗೌರವವಾಗಿದೆ. ದೇಶದ ಹಿತಾಸಕ್ತಿ ಎಲ್ಲಕ್ಕಿಂತಲೂ ಮಿಗಿಲಾದುದು” ಎಂದಿದ್ದಾರೆ ನ್ಯಾ. ರಾಜೇಶ್ ಸಿಂಗ್ ಚೌಹಾಣ್.




