ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ವಿಡಂಬನಾತ್ಮಕ ‘ಕಾಕ್‌ರೋಚ್ ಜನತಾ ಪಾರ್ಟಿ’ (CJP) ಇನ್‌ಸ್ಟಾಗ್ರಾಮ್ ಖಾತೆಯ ಫಾಲೋವರ್ಸ್‌ಗಳ ಕುರಿತು ಹರಿದಾಡುತ್ತಿರುವ ಮಾಹಿತಿ ಸಂಪೂರ್ಣ ಸುಳ್ಳು ಎಂದು ಖುದ್ದು ಆ ಖಾತೆಯ ಸ್ಥಾಪಕ ಅಭಿಜೀತ್ ದಿಪ್ಕೆ ಸ್ಪಷ್ಟಪಡಿಸಿದ್ದಾರೆ. ಸಿಜೆಪಿ ಖಾತೆಯನ್ನು ಹಿಂಬಾಲಿಸುತ್ತಿರುವವರಲ್ಲಿ ಶೇಕಡಾ 49ರಷ್ಟು ಮಂದಿ ಪಾಕಿಸ್ತಾನದವರು ಎಂದು ಬಿಂಬಿಸುವ ನಕಲಿ ಪೈ ಚಾರ್ಟ್ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಇದು ಬಿಜೆಪಿ ಬೆಂಬಲಿಗರು ಸೃಷ್ಟಿಸಿರುವ ‘ತಿರುಚಿದ ಪೋಸ್ಟರ್’ ಎಂದು ಅವರು ಆರೋಪಿಸಿದ್ದಾರೆ.
ಅಭಿಜೀತ್ ದಿಪ್ಕೆ ಅವರು ಆರಂಭಿಸಿದ ‘ಕಾಕ್‌ರೋಚ್ ಜನತಾ ಪಾರ್ಟಿ’ ಎಂಬುದು ಪ್ರಸ್ತುತ ರಾಜಕೀಯವನ್ನು ಅಣಕಿಸುವ ಒಂದು ವಿಡಂಬನಾತ್ಮಕ ಆನ್‌ಲೈನ್ ಚಳುವಳಿಯಾಗಿದೆ. 5 ದಿನಗಳ ಅಲ್ಪಾವಧಿಯಲ್ಲೇ ಈ ಇನ್‌ಸ್ಟಾಗ್ರಾಮ್ ಪೇಜ್ 1 ಕೋಟಿಗೂ ಅಧಿಕ ಫಾಲೋವರ್ಸ್‌ಗಳನ್ನು ಗಳಿಸಿ ತೀವ್ರವಾಗಿ ವೈರಲ್ ಆಗಿತ್ತು. ಖಾತೆಯ ಜನಪ್ರಿಯತೆ ಹೆಚ್ಚಾದ ಬೆನ್ನಲ್ಲೇ, ಉದ್ದೇಶಪೂರ್ವಕವಾಗಿ ಈ ರೀತಿಯ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ.
ತಾಂತ್ರಿಕವಾಗಿ ಇದು ಅಸಾಧ್ಯ
ವೈರಲ್ ಆಗಿರುವ ಇನ್‌ಫೋಗ್ರಾಫಿಕ್‌ನಲ್ಲಿ ಶೇ. 49 ಪಾಕಿಸ್ತಾನ, ಶೇ. 14 ಅಮೆರಿಕ, ಶೇ. 14 ಬಾಂಗ್ಲಾದೇಶ ಹಾಗೂ ಕೇವಲ ಶೇ. 9 ರಷ್ಟು ಭಾರತೀಯ ಫಾಲೋವರ್ಸ್‌ಗಳಿದ್ದಾರೆ ಎಂದು ತೋರಿಸಲಾಗಿದೆ. ಆದರೆ, ತಾಂತ್ರಿಕವಾಗಿ ಯಾವುದೇ ಬಾಹ್ಯ ವ್ಯಕ್ತಿ ಅಥವಾ ಸಂಸ್ಥೆ ಇಂತಹ ನಿಖರವಾದ ಶೇಕಡಾವಾರು ಅಂಕಿ-ಅಂಶಗಳನ್ನು ನೀಡಲು ಸಾಧ್ಯವೇ ಇಲ್ಲ. ಇನ್‌ಸ್ಟಾಗ್ರಾಮ್‌ನ ನೀತಿಗಳ ಪ್ರಕಾರ, ಫಾಲೋವರ್ಸ್‌ಗಳು ಯಾವ ದೇಶ, ನಗರ, ವಯಸ್ಸು ಅಥವಾ ಲಿಂಗಕ್ಕೆ ಸೇರಿದವರು ಎಂಬ ನಿಖರವಾದ ‘ಇನ್‌ಸೈಟ್ಸ್’ (Instagram Insights) ಭೌಗೋಳಿಕ ಮಾಹಿತಿಯು ಕೇವಲ ಆ ಖಾತೆಯ ನಿರ್ವಾಹಕರಿಗೆ (Account Admin) ಮಾತ್ರ ಲಭ್ಯವಿರುತ್ತದೆ. ಈ ಡೇಟಾವನ್ನು ಇನ್‌ಸ್ಟಾಗ್ರಾಮ್ ಸಾರ್ವಜನಿಕವಾಗಿ ಪ್ರದರ್ಶಿಸುವುದಿಲ್ಲ.
ಇನ್ನು, ಮೂರನೇ ವ್ಯಕ್ತಿಯ ಟೂಲ್‌ಗಳು (Third-party Tools) ಅಥವಾ ಆಡಿಟ್ ಸಾಫ್ಟ್‌ವೇರ್‌ಗಳ ಮೂಲಕವೂ ಇಷ್ಟು ನಿಖರವಾದ ಡೇಟಾ ಪಡೆಯಲು ಸಾಧ್ಯವಿಲ್ಲ. ಅವು ಕೇವಲ ಲೈಕ್ಸ್ ಮತ್ತು ಕಾಮೆಂಟ್ಸ್ ಆಧರಿಸಿ ಅತ್ಯಂತ ಸಣ್ಣ ಪ್ರಮಾಣದ ಸ್ಯಾಂಪಲ್ ಡೇಟಾವನ್ನು ಅಂದಾಜಿಸುತ್ತವೆಯೇ ಹೊರತು, 1 ಕೋಟಿ ಫಾಲೋವರ್ಸ್‌ಗಳ ನಿಖರವಾದ ಭೌಗೋಳಿಕ ಡೇಟಾವನ್ನು ನೀಡಲು ಇನ್‌ಸ್ಟಾಗ್ರಾಮ್‌ನ ಎಪಿಐಗಳು (API) ಅನುಮತಿ ನೀಡುವುದಿಲ್ಲ.
ಇದನ್ನು ಓದಿದ್ದೀರಾ? IPL ರೋಚಕ ಘಟ್ಟ: 3 ತಂಡಗಳ ಪ್ಲೇ-ಆಫ್ ಪ್ರವೇಶ,1 ಸ್ಥಾನಕ್ಕಾಗಿ 5 ತಂಡಗಳ ಹಣಾಹಣಿ
ಅಲ್ಲದೆ, ಸಿಜೆಪಿ ಖಾತೆಯು ಕೇವಲ ಕೆಲವು ದಿನಗಳ ಹಿಂದೆಯಷ್ಟೇ ಸೃಷ್ಟಿಯಾಗಿದ್ದು, ಅಷ್ಟು ವೇಗವಾಗಿ ಬಂದ ಕೋಟ್ಯಂತರ ಫಾಲೋವರ್ಸ್‌ಗಳ ಡೇಟಾವನ್ನು ಯಾವುದೇ ಬಾಹ್ಯ ಟೂಲ್‌ಗಳು ತಕ್ಷಣವೇ ವಿಶ್ಲೇಷಿಸಿ ಇಷ್ಟು ನಿಖರವಾದ ಗ್ರಾಫ್ ನೀಡಲು ಸಾಧ್ಯವೇ ಇಲ್ಲ. ಖಾತೆಯ ಅಡ್ಮಿನ್ ಸ್ವತಃ ತಮ್ಮ ಡೇಟಾವನ್ನು ಸ್ಕ್ರೀನ್‌ಶಾಟ್ ಮೂಲಕ ಬಹಿರಂಗಪಡಿಸದ ಹೊರತು ಈ ರೀತಿಯ ಪಟ್ಟಿಯನ್ನು ನೀಡುವುದು ಅಸಾಧ್ಯ.
ಜನರನ್ನು ದಾರಿ ತಪ್ಪಿಸಲು ಬಿಜೆಪಿ ಬೆಂಬಲಿಗರೇ ಈ ನಕಲಿ ಪೋಸ್ಟರ್ ಸೃಷ್ಟಿಸಿದ್ದಾರೆ ಎಂದು ಅಭಿಜೀತ್ ದಿಪ್ಕೆ ಸ್ಪಷ್ಟಪಡಿಸಿರುವುದರಿಂದ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಪೋಸ್ಟ್ ದುರುದ್ದೇಶಪೂರಿತವಾದ ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ.
ಮೀಸಲಾತಿ ಕುರಿತ ಪ್ರಶ್ನೆಗೆ ‘ನಾನೇ ದಲಿತ’ ಎಂದ ಸಿಜೆಪಿ ಸ್ಥಾಪಕ
ಇದೇ ವೇಳೆ, ‘ಕಾಕ್‌ರೋಚ್ ಜನತಾ ಪಾರ್ಟಿ’ಯ ವಿಚಾರಧಾರೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಗಂಭೀರ ಚರ್ಚೆಗಳೂ ಆರಂಭವಾಗಿದ್ದವು. ದಲಿತರ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಬಗ್ಗೆ ಸಿಜೆಪಿಯ ಮೌನವನ್ನು ‘ಶಟ್ ಅಪ್ ಕೌನ್ಸಿಲ್’ ಎಂಬ ಎಕ್ಸ್ ಖಾತೆಯು ಪ್ರಶ್ನಿಸಿತ್ತು. “ಕೆಲವು ಜಾತಿವಾದಿ ಹಾಗೂ ಮೇಲ್ವರ್ಗದ ಶ್ರೇಷ್ಠತೆಯನ್ನು ಬಿಂಬಿಸುವ ಖಾತೆಗಳು ಸಿಜೆಪಿ ಪೋಸ್ಟ್‌ಗಳನ್ನು ಹಂಚಿಕೊಂಡು ಸಂಭ್ರಮಿಸುತ್ತಿವೆ. ಹೀಗಾಗಿ ದಲಿತರ ಹಕ್ಕು ಮತ್ತು ಮೀಸಲಾತಿ ರಕ್ಷಣೆ ಬಗ್ಗೆ ನಿಮ್ಮ ನಿಲುವು ಸ್ಪಷ್ಟಪಡಿಸಿ” ಎಂದು ಅದು ಆಗ್ರಹಿಸಿತ್ತು. ಈ ಪೋಸ್ಟ್‌ಗೆ ಎಕ್ಸ್ ವೇದಿಕೆಯಲ್ಲಿಯೇ ನೇರವಾಗಿ ಪ್ರತಿಕ್ರಿಯಿಸಿರುವ ಸಿಜೆಪಿ ಸ್ಥಾಪಕ ಅಭಿಜೀತ್ ದಿಪ್ಕೆ, “ನಾನೇ ಸ್ವತಃ ದಲಿತನಾಗಿದ್ದೇನೆ. ಇದು ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ ಎಂದು ಭಾವಿಸುತ್ತೇನೆ” ಎಂದು ಹೇಳಿದ್ದಾರೆ. ಆ ಮೂಲಕ, ಸಿಜೆಪಿಯ ಸಾಮಾಜಿಕ ನ್ಯಾಯದ ನಿಲುವಿನ ಕುರಿತು ಎದ್ದಿದ್ದ ಅನುಮಾನಗಳಿಗೆ ಒಂದೇ ವಾಕ್ಯದಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.





