ಜನತಾ ದಳ (ಯುನೈಟೆಡ್) ಪಕ್ಷದ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ಮರು ಆಯ್ಕೆ ಮಾಡಿರುವುದನ್ನು ಭಾನುವಾರ ಅಧಿಕೃತವಾಗಿ ಅನುಮೋದಿಸಲಾಗಿದೆ. ಈ ವರ್ಷದ ಮಾರ್ಚ್‌ನಲ್ಲಿ ನಡೆದ ಸಾಂಸ್ಥಿಕ ಚುನಾವಣೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ರಾಜ್ಯ ಕೌನ್ಸಿಲ್ ಸಭೆಯಲ್ಲಿ ಉಮೇಶ್ ಸಿಂಗ್ ಕುಶ್ವಾಹ ಅವರು ರಾಜ್ಯ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವುದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಇದೇ ಸಂದರ್ಭದಲ್ಲಿ, ನಿತೀಶ್ ಕುಮಾರ್ ಅವರ ಪುತ್ರ ಮತ್ತು ಸಚಿವ ನಿಶಾಂತ್ ಕುಮಾರ್ ಅವರಿಗೆ ಪಕ್ಷದಲ್ಲಿ ದೊಡ್ಡ ಸಾಂಸ್ಥಿಕ ಪಾತ್ರವನ್ನು ನೀಡಬೇಕೆಂಬ ರಾಜಕೀಯ ನಿರ್ಣಯವನ್ನೂ ಅಂಗೀಕರಿಸಲಾಗಿದೆ.
ಜೆಡಿಯು ಕಾರ್ಯಾಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಕುಮಾರ್ ಝಾ ಮಾತನಾಡಿ, “ನಿಶಾಂತ್ ಪಕ್ಷದ ಭವಿಷ್ಯವನ್ನು ಪ್ರತಿನಿಧಿಸುತ್ತಾರೆ, ಇದು ಅತ್ಯಂತ ಮುಖ್ಯವಾದ ವಿಷಯ. ಸದ್ಯ ಅವರು ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಪಕ್ಷದ ವ್ಯವಹಾರಗಳಲ್ಲೂ ತೊಡಗಿಸಿಕೊಳ್ಳಲಿದ್ದಾರೆ” ಎಂದು ತಿಳಿಸಿದರು. ನಿಶಾಂತ್ ಅವರ ಸಮರ್ಥ ನಾಯಕತ್ವದಲ್ಲಿ ಯುವಕರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದು, ಇದರಿಂದ ಪಕ್ಷವು ಇನ್ನಷ್ಟು ಬಲಗೊಳ್ಳಲಿದೆ ಎಂದು ರಾಜ್ಯ ಸಚಿವ ಮದನ್ ಸಾಹ್ನಿ ಅಭಿಪ್ರಾಯಪಟ್ಟಿದ್ದಾರೆ. ನಿಶಾಂತ್ ಅವರೇ ನಮ್ಮ ನಾಯಕ ಮತ್ತು ಮುಂದೆಯೂ ಅವರೇ ಮುಂದುವರಿಯಲಿದ್ದಾರೆ ಎಂದು ಅಶೋಕ್ ಚೌಧರಿ ತಿಳಿಸಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ಸ್ಪರ್ಧಿಸುವ ಸಾಧ್ಯತೆಗಳ ಬಗ್ಗೆ ಪ್ರತಿಕ್ರಿಯಿಸಿದ ಸಂಜಯ್ ಕುಮಾರ್ ಝಾ, “ನಾವು ಈ ವಿಷಯದ ಬಗ್ಗೆ ಚರ್ಚಿಸುತ್ತಿದ್ದೇವೆ. ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಮೊದಲಿನಿಂದಲೂ ನೆಲೆ ಇದೆ. ಪಕ್ಷದ ಉಪಸ್ಥಿತಿಯನ್ನು ಇನ್ನಷ್ಟು ಬಲಪಡಿಸಲು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದೊಳಗೆ ಬಲವಾದ ಇಚ್ಛಾಶಕ್ತಿ ಇದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಧಿಕಾರದ ದಾಹಕ್ಕೆ ಬಲಿಯಾಗುತ್ತಿರುವ ಜನಾದೇಶ: ಭಾರತೀಯ ರಾಜಕಾರಣದಲ್ಲಿ ʼಪಕ್ಷಾಂತರʼ ಪ್ರಹಸನ
ಈ ಬೆಳವಣಿಗೆಗಳ ಕುರಿತು ಮಾತನಾಡಿದ ನಿಶಾಂತ್ ಕುಮಾರ್, “ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ಇನ್ನು ಮುಂದೆ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಬಿಹಾರದಾದ್ಯಂತ ಪಕ್ಷವನ್ನು ಬಲಪಡಿಸುತ್ತೇವೆ” ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ನಾಯಕರು, ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ತಳಮಟ್ಟದಿಂದ ಬಲಪಡಿಸಲು ನಿಶಾಂತ್ ಕುಮಾರ್ ಅವರಿಗೆ ಪಕ್ಷದ ಉನ್ನತ ಹುದ್ದೆಯನ್ನು ನೀಡಬೇಕೆಂದು ನಿತೀಶ್ ಕುಮಾರ್ ಅವರಲ್ಲಿ ಸರ್ವಾನುಮತದ ಬೇಡಿಕೆ ಸಲ್ಲಿಸಿದರು.
ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೂ ಮುನ್ನ ಹಲವಾರು ವಿಚಿತ್ರ ವರ್ತನೆಯಿಂದಾಗಿ ಟ್ರೋಲ್‌ಗೆ ಒಳಗಾಗಿದ್ದವರು. ಈಗ ಅವರ ಪುತ್ರ, ಬಿಹಾರದ ಆರೋಗ್ಯ ಸಚಿವ ನಿಶಾಂತ್ ಕೂಡಾ ಟ್ರೋಲಿಗರ ಕೈಗೆ ಸಿಲುಕುತ್ತಿದ್ದಾರೆ. ನಿನ್ನೆ (ಜೂ.21) ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ನಿಶಾಂತ್ ಸಾರ್ವಜನಿಕವಾಗಿ ವಿಚಿತ್ರವಾಗಿ ಯೋಗ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟ್ರೋಲ್ ಆಗಿದ್ದರು




