ಮಹಾರಾಷ್ಟ್ರದ ಎನ್‌ಸಿಪಿಯ ಎರಡು ಬಣಗಳ ವಿಲೀನದ ಬಗ್ಗೆ ಊಹಾಪೋಹಗಳಿಗೆ ಸುನೇತ್ರ ಪವಾರ್ ಬಲವಾಗಿ ವಿರೋಧಿಸಿದರೆ, ಸುಪ್ರಿಯಾ ಸುಳೆ ಪೂರ್ಣ ವಿರಾಮ ಹಾಕುವ ಮೂಲಕ ತೆರೆ ಎಳೆದಿದ್ದಾರೆ.
ಎನ್‌ಸಿಪಿ(ಎಸ್‌ಪಿ) ಬೇಕಾದರೆ ಪ್ರತ್ಯೇಕ ಸ್ವತಂತ್ರ ಪಕ್ಷವಾಗಿ ಎನ್‌ಡಿಎ ಸೇರುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ, ಎರಡು ಬಣಗಳ ಒಗ್ಗೂಡಿಕೆಯನ್ನು ಸುನೇತ್ರ ಪವಾರ್ ವಿರೋಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಜಿತ್ ಪವಾರ್ ಅವರ ಮರಣದ ನಂತರ ಪಕ್ಷದ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡಿರುವ ಸುನೇತ್ರಾ ಪವಾರ್, ಶರದ್ ಪವಾರ್ ಬಣದೊಂದಿಗೆ ವಿಲೀನಗೊಳ್ಳುವುದರಿಂದ ತಮ್ಮ ಬಣದ ಅಸ್ತಿತ್ವಕ್ಕೆ ಧಕ್ಕೆ ಬರಬಹುದೆಂಬ ಆತಂಕ ಹೊಂದಿದ್ದಾರೆ ಎಂದು ಪಕ್ಷದ ಒಳಗಿನವರ ನಂಬಿಕೆಯಾಗಿದೆ. ಪ್ರಸ್ತುತ ಈ ಬಣವು ಬಿಜೆಪಿ ಮತ್ತು ಶಿವಸೇನೆ ಜೊತೆಗಿನ ಆಡಳಿತಾರೂಢ ಮಹಾರಾಷ್ಟ್ರ ಮೈತ್ರಿಕೂಟದ ಭಾಗವಾಗಿದೆ.
ಗಡಿ ನಿಗಧಿ ಮತ್ತು ಮಹಿಳಾ ಮೀಸಲಾತಿ ಮಸೂದೆಗಳನ್ನು ಅಂಗೀಕರಿಸಲು ಸಂಸತ್ತಿನಲ್ಲಿ ತನ್ನ ಸಂಖ್ಯಾಬಲವನ್ನು ಹೆಚ್ಚಿಸಲು ಎರಡೂ ಬಣಗಳ ವಿಲೀನದ ಬಗ್ಗೆ ಕೇಂದ್ರವು ಆಸಕ್ತಿ ಹೊಂದಿದೆ. ನವೆಂಬರ್ 16 ಮತ್ತು 17 ರಂದು ಗೃಹ ಸಚಿವ ಅಮಿತ್ ಶಾ ಪುಣೆಗೆ ಭೇಟಿ ನೀಡುತ್ತಿರುವುದು ಊಹಾಪೋಹಕ್ಕೆ ಮಹತ್ವ ತಂದುಕೊಟ್ಟಿದೆ. ಭೇಟಿಯ ಸಂದರ್ಭದಲ್ಲಿ ಅಮಿತ್ ಶಾ, ಸುನೇತ್ರಾ ಪವಾರ್ ಅವರನ್ನು ಭೇಟಿ ಮಾಡಿ ವಿಲೀನದ ಬಗ್ಗೆ ಚರ್ಚೆ ಮಾಡುವ ಯೋಜನೆ ಇದೆ ಎಂಬ ಮಾತುಗಳು ಕೇಳಿಬಂದಿದೆ. ಇದಕ್ಕೂ ಮೊದಲು ಸುನೇತ್ರಾ ಪವಾರ್ ಅವರ ಕಠಿಣ ನಿಲುವು ಹೊರಬಿದ್ದಿದೆ.
ಅದಾಗ್ಯೂ ಎರಡೂ ಬಣಗಳ ನಾಯಕರ ನಡುವಿನ ಸರಣಿ ಸಭೆಗಳು ವಿಲೀನದ ಬಗೆಗಿನ ಗುಸುಗುಸುವಿಗೆ ಕಾರಣವಾಗಿದೆ. ಎನ್‌ಸಿಪಿ(ಎಸ್‌ಪಿ) ಅಧ್ಯಕ್ಷೆ ಸುಪ್ರಿಯಾ ಸುಳೆ ಅವರು ವಿಲೀನದ ಪ್ರತಿಪಾದಕರಾದ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಅವರನ್ನು ದೇಹಲಿಯಲ್ಲಿ ಭೇಟಿಯಾಗಿರುವುದು ಎಲ್ಲರಲ್ಲೂ ಆಸಕ್ತಿ ಕೆರಳಿಸಿತು.
ಇಷ್ಟಾಗಿಯೂ ಸುದ್ದಿವಾಹಿನಿಯೊಂದರ ಸಂದರ್ಶನದ ವೇಳೆ ಸುಪ್ರಿಯಾ ಸುಳೆ ಅವರು ವಿಲೀನದ ಮಾತುಕತೆಗಳನ್ನು ಸ್ಪಷ್ಟವಾಗಿ ನಿರಾಕರಿಸಿದರು. ವಾಹಿನಿಯ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ವಿಲೀನದ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ, ಯಾವುದೇ ಮಾತುಕತೆಗಳು ನಡೆದಿದ್ದರೂ ಅದು ನನ್ನ ಸಹೋದರ ಅಜಿತ್ ಪವಾರ್ ನಿಧನದ ಬಳಿಕ ಸಂಪೂರ್ಣ ವಿರಾಮ ಬಿದ್ದಿದೆ ಎಂದು ತಿಳಿಸಿದರು.
ಈ ಮಧ್ಯ ಶರದ್ ಪವಾರ್ ಅವರ ಪಕ್ಷದಲ್ಲಿರುವ ಕೆಲವು ನಾಯಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ಅವರು ವಿಲೀನಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ಎನ್‌ಸಿಪಿ(ಎಸ್‌ಪಿ) ಮಿತ್ರ ಪಕ್ಷ ಸೇನಾ ಯುಬಿಟಿ ಹೇಳಿದೆ. ವಿಲೀನದ ವಿಷಯವಾಗಿ ಪಕ್ಷವು ಪವಾರ್ ಅವರಿಗೆ ಎಚ್ಚರಿಕೆ ನೀಡಿದೆ.
“ಸಚಿವ ಸ್ಥಾನಗಳಿಗಾಗಿ ಹಾತೊರೆಯುತ್ತಿರುವ ಕೆಲವೇ ಜನರಿಗಾಗಿ ಶರದ್ ಪವಾರ್ ಅವರು ತಮ್ಮ ಜೀವನದುದ್ದಕ್ಕೂ ಎತ್ತಿಹಿಡಿದ ತತ್ವಗಳನ್ನು ನಾಶಪಡಿಸುವುದು ಸರಿಯಲ್ಲ. ಬಿಜೆಪಿಯ ಬೂಟುಗಳನ್ನು ನೆಕ್ಕುವ ಮತ್ತು ಮಹಾರಾಷ್ಟ್ರದಲ್ಲಿ ಗೊಂದಲದ ವಾತಾವರಣ ನಿರ್ಮಾಣ ಮಾಡುವ ಗುಂಪಿನೊಂದಿಗೆ ಶರದ್ ಪವಾರ್ ಎಚ್ಚರಿಕೆಯಿಂದ ಇರಬೇಕು” ಎಂದು ಸೇನಾ ಯುಬಿಟಿ ಸಂಸದ ಸಂಜಯ್ ರಾವತ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.



