ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೂ ಮುನ್ನ ಹಲವಾರು ವಿಚಿತ್ರ ವರ್ತನೆಯಿಂದಾಗಿ ಟ್ರೋಲ್‌ಗೆ ಒಳಗಾಗಿದ್ದವರು. ಈಗ ಅವರ ಪುತ್ರ, ಬಿಹಾರದ ಆರೋಗ್ಯ ಸಚಿವ ನಿಶಾಂತ್ ಕೂಡಾ ಆಗಾಗೇ ಟ್ರೋಲಿಗರ ಕೈಗೆ ಸಿಲುಕುತ್ತಿದ್ದಾರೆ. ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ನಿಶಾಂತ್ ಸಾರ್ವಜನಿಕವಾಗಿ ವಿಚಿತ್ರವಾಗಿ ಯೋಗ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟ್ರೋಲ್ ಆಗಿದ್ದಾರೆ.
ಪಟನಾದ ಕಂಕರ್‌ಬಾಗ್‌ನಲ್ಲಿರುವ ಪಾಟಲಿಪುತ್ರ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಬಿಹಾರದ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ರಾಜ್ಯದ ಇತರ ಸಚಿವರು ಹಾಗೂ ಜಂಟಿ ಮೈತ್ರಿಕೂಟದ (BJP-JDU) ಪ್ರಮುಖ ನಾಯಕರ ಸಮ್ಮುಖದಲ್ಲಿ ಯೋಗ ದಿನಾಚರಣೆಯ ಸಾರ್ವಜನಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ಪದವಿ ಅಪೂರ್ಣ, ಆದಾಯ 1,600 ಪಟ್ಟು ಏರಿಕೆ: ನಿತೀಶ್ ಪುತ್ರ, ಬಿಹಾರ ಆರೋಗ್ಯ ಸಚಿವ ನಿಶಾಂತ್ ಅಫಿಡವಿಟ್
ಈ ವೇದಿಕೆಯಲ್ಲಿ ಮುಖ್ಯಮಂತ್ರಿಗಳ ಪಕ್ಕದಲ್ಲೇ ಕುಳಿತು ಆರೋಗ್ಯ ಸಚಿವ ನಿಶಾಂತ್ ಕುಮಾರ್ ಕೂಡ ಯೋಗ ಮಾಡಿದ್ದರು. ಆದರೆ ಯೋಗ ಶಿಕ್ಷಕರು ನೀಡುತ್ತಿದ್ದ ಸೂಚನೆಗಳನ್ನು ಪಾಲಿಸುವಾಗ ಅವರು ಮಾಡಿದ ತಪ್ಪುಗಳು ಕ್ಯಾಮೆರಾಗಳಲ್ಲಿ ಸೆರೆಯಾಗಿ, ವಿಡಿಯೋ ವೈರಲ್ ಆಗಿದೆ.
ವೇದಿಕೆಯ ಮುಂಚೂಣಿಯಲ್ಲೇ ಕುಳಿತಿದ್ದ ನಿಶಾಂತ್ ಕುಮಾರ್ ಅವರು ಯೋಗದ ಆಸನಗಳನ್ನು ಮಾಡುವಾಗ ತಬ್ಬಿಬ್ಬಾದರು. ಯೋಗ ತರಬೇತುದಾರರು ಎಲ್ಲರಿಗೂ ‘ಎಡಗಡೆಗೆ ಬಾಗಲು’ ಹೇಳಿದರೆ ನಿಶಾಂತ್ ಕುಮಾರ್ ಗೊಂದಲಕ್ಕೀಡಾಗಿ ತದ್ವಿರುದ್ಧವಾಗಿ ತಮ್ಮ ಬಲಗಡೆಗೆ ಬಾಗಲು ಪ್ರಯತ್ನಿಸುತ್ತಿದ್ದರು. ಅದೂ ವಿಚಿತ್ರವಾದ ಭಂಗಿಯಲ್ಲಿ! ‘ಚಕ್ರಾಶನ’ ಅಥವಾ ಅದಕ್ಕೆ ಪೂರಕವಾದ ಮುದ್ರೆಗಳನ್ನು ಮಾಡುವಂತೆ ಸೂಚಿಸಿದಾಗ, ಅವರು ತಮ್ಮ ಕುತ್ತಿಗೆಯನ್ನು ಅತ್ಯಂತ ವಿಚಿತ್ರವಾಗಿ ಹಿಂದಕ್ಕೆ ಬಾಗಿಸಿ ಸಮತೋಲನ ಕಾಯ್ದುಕೊಳ್ಳಲಾಗದೆ ಒದ್ದಾಡಿದರು.
ನೆಟ್ಟಿಗರು ಈ ವಿಡಿಯೋವನ್ನೇ ಟ್ರೋಲ್ ಮಾಡುತ್ತಿದ್ದಾರೆ. “ರಾಜ್ಯದ ಆರೋಗ್ಯ ಸಚಿವರೇ ಇಷ್ಟು ಅಸಹಜವಾಗಿ ಮತ್ತು ತಪ್ಪು ತಪ್ಪಾಗಿ ಯೋಗ ಮಾಡುತ್ತಿದ್ದಾರೆ. ಇನ್ನು ರಾಜ್ಯದ ಜನರ ಆರೋಗ್ಯ ಸುಧಾರಿಸುವುದು ಹೇಗೆ?” ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್, “ಈ ನಾಟಕ ನೋಡಿ. ಬಿಹಾರದ ಆರೋಗ್ಯ ಸಚಿವ ನಿಶಾಂತ್ ಕುಮಾರ್ ಅವರಿಗೆ ಬೇಸಿಕ್ ಯೋಗವೂ ಮಾಡೋಕೆ ಬರಲ್ಲ. ಆರೋಗ್ಯ ಸಚಿವರಾಗಲು ಅವರು ಅರ್ಹರಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ನಿತೀಶ್ ಕುಮಾರ್ ಅವರ ಮಗ ಎಂಬ ಕಾರಣಕ್ಕಾಗಿ ನಿಶಾಂತ್ ಅವರಿಗೆ ಹುದ್ದೆಯನ್ನು ನೀಡಿದ್ದಾರೆ. ಆದರೆ ಪ್ರಧಾನಿ ಕುಟುಂಬ ರಾಜಕಾರಣದ ವಿರುದ್ಧ ಹೋರಾಡುವುದಾಗಿ ಹೇಳಿಕೊಳ್ಳುವವರು!” ಎಂದು ಟೀಕಿಸಿದ್ದಾರೆ.
ಇನ್ನೋರ್ವ ನೆಟ್ಟಿಗರು, “ಬಿಹಾರ ಆರೋಗ್ಯ ಸಚಿವರ ಬಗ್ಗೆ ಯಾವುದೇ ಕಾಮೆಂಟ್ ಮಾಡಲ್ಲ. ನಮ್ಮ ಪ್ರಜಾಪ್ರಭುತ್ವ ಎಷ್ಟು ಸುಂದರವಾಗಿದೆಯೆಂದರೆ ಇಲ್ಲಿ ಕ್ರಿಮಿನಲ್‌ಗಳು ಗೃಹಸಚಿವರಾಗುತ್ತಾರೆ, ಅನಾರೋಗ್ಯಪೀಡಿತ ವ್ಯಕ್ತಿ ಆರೋಗ್ಯ ಸಚಿವರಾಗುತ್ತಾರೆ” ಎಂದಿದ್ದಾರೆ.
“ಬಿಹಾರದ ಆರೋಗ್ಯ ಸಚಿವ ನಿಶಾಂತ್ ಕುಮಾರ್ ಅವರನ್ನು ನೋಡಿ. ಅವರು ಯೋಗ ಮಾಡುತ್ತಿದ್ದಾರಾ ಅಥವಾ ಸರ್ಕಸ್ ಮಾಡುತ್ತಿದ್ದಾರಾ ಗೊತ್ತಿಲ್ಲ. ಆದರೆ ಅವರಿಗೆ ಖಂಡಿತವಾಗಿಯೂ ಚಿಕಿತ್ಸೆಯ ಗಂಭೀರ ಅಗತ್ಯವಿದೆ” ಎಂದು ಇನ್ನೋರ್ವ ನೆಟ್ಟಿಗರು ಅಭಿಪ್ರಾಯಿಸಿದ್ದಾರೆ.




