ಬಿಹಾರದ ಮಾಜಿ ಮುಖ್ಯಮಂತ್ರಿ ಜೆಡಿ(ಯು) ಹಿರಿಯ ನಾಯಕ ನಿತೀಶ್ ಕುಮಾರ್ ಅವರ ಪುತ್ರ, ಬಿಹಾರ ಆರೋಗ್ಯ ಸಚಿವರ ಹೆಸರು ನಿಶಾಂತ್ ಕುಮಾರ್ ಅಲ್ಲ, ಬರೀ ನಿಶಾಂತ್. ಹಾಗೆಯೇ ಅವರ ಎಂಜಿನಿಯರಿಂಗ್ ಪದವಿಯೂ ಪೂರ್ಣವಾಗಿಲ್ಲ. ಅಷ್ಟು ಮಾತ್ರವಲ್ಲದೆ 2020-21 ಮತ್ತು 2024-25ರ ನಡುವೆ ನಿಶಾಂತ್ ಆದಾಯವು ಬರೋಬ್ಬರಿ 1600 ಪಟ್ಟಿಗಿಂತ ಅಧಿಕ ಏರಿಕೆಯಾಗಿದೆ ಎಂಬುದು ಅಫಿಡವಿಟ್‌ನಿಂದ ಬಹಿರಂಗವಾಗಿದೆ. ಬಿಹಾರ ವಿಧಾನ ಪರಿಷತ್ (MLC) ಚುನಾವಣೆಗೆ ಸ್ಪರ್ಧಿಸಲು ನಿಶಾಂತ್ ಸಲ್ಲಿಸಿರುವ ಅಧಿಕೃತ ಪ್ರಮಾಣಪತ್ರದಲ್ಲಿ (Affidavit) ಈ ಎಲ್ಲ ಮಾಹಿತಿ ಬಹಿರಂಗಗೊಂಡಿದೆ.
ಜೂನ್ 18ರಂದು 10 ಸ್ಥಾನಗಳಿಗೆ ಎಂಎಲ್‌ಸಿ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ನಿಶಾಂತ್ ಅಫಿಡವಿಟ್ ಸಲ್ಲಿಸಿದ್ದಾರೆ. ನಿತೀಶ್ ಕುಮಾರ್ ಪುತ್ರ ಎಂಬ ಕಾರಣಕ್ಕೆ ಹೋರ್ಡಿಂಗ್, ಪೋಸ್ಟರ್‌ಗಳಲ್ಲಿ ನಿಶಾಂತ್ ಕುಮಾರ್ ಎಂದು ಬಳಸಲಾಗುತ್ತಿದ್ದರೂ ಅವರ ಪೂರ್ಣ ಹೆಸರು ನಿಶಾಂತ್ ಮಾತ್ರ ಎಂಬುದು ಅಫಿಡವಿಟ್‌ನಲ್ಲಿ ಉಲ್ಲೇಖಿತವಾಗಿದೆ. ಹಾಗೆಯೇ 44 ವರ್ಷದ ನಿಶಾಂತ್ ತಮ್ಮ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಕೋರ್ಸ್‌ನ ಎಂಟು ಸೆಮಿಸ್ಟರ್‌ಗಳಲ್ಲಿ ಕೇವಲ ಐದು ಸೆಮಿಸ್ಟರ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಅಂದರೆ ಅವರು ಪದವಿಯನ್ನು ಪೂರ್ಣಗೊಳಿಸಿಲ್ಲ ಎಂಬುದೂ ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಜೆಡಿಯು ಹೊಸ ರಾಷ್ಟ್ರೀಯ ನಾಯಕರ ಪಟ್ಟಿಯಲ್ಲಿಲ್ಲ ನಿತೀಶ್ ಕುಮಾರ್ ಪುತ್ರ ನಿಶಾಂತ್ ಹೆಸರು
ಬಿಹಾರ ಆರೋಗ್ಯ ಸಚಿವ ನಿಶಾಂತ್ ಅಫಿಡವಿಟ್ ಪ್ರಕಾರ ಅವರು 1998ರಲ್ಲಿ ಪಟನಾ ವಿಜ್ಞಾನ ಕಾಲೇಜಿನಿಂದ ತಮ್ಮ ಮಧ್ಯಂತರ (10+2) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಬಳಿಕ ರಾಂಚಿಯ ಮೆಸ್ರಾದ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಯಲ್ಲಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ (ಕಂಪ್ಯೂಟರ್ ಸೈನ್ಸ್)ಗೆ ದಾಖಲಾಗಿದ್ದಾರೆ. 2001ರವರೆಗೆ ಎಂಟು ಸೆಮಿಸ್ಟರ್‌ಗಳಲ್ಲಿ ಐದನ್ನು ಪೂರ್ಣಗೊಳಿಸಿದ್ದಾರೆ. ಇನ್ನು ಆರೋಗ್ಯ ಕಾರಣಗಳಿಂದಾಗಿ ಅವರು ಕೋರ್ಸ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದೂ ವರದಿಯಾಗಿದೆ.
ನಿಶಾಂತ್ ಅವರ ಪ್ರಸ್ತುತ ವಿಳಾಸ 7, ಸರ್ಕ್ಯುಲರ್ ರಸ್ತೆ ಆಗಿದ್ದು, ಇದು ನಿಶಾಂತ್ ತಂದೆ ನಿತೀಶ್ ಕುಮಾರ್ ಅವರ ಅಧಿಕೃತ ನಿವಾಸ. ನಿಶಾಂತ್ ಪಟನಾದ ದಿಘಾ ವಿಧಾನಸಭಾ ವಿಭಾಗದಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ನಿತೀಶ್ ಕುಮಾರ್ ಪುತ್ರ ನಿಶಾಂತ್ ಅಧಿಕೃತವಾಗಿ ಜೆಡಿಯು ಸೇರ್ಪಡೆ
ನಿಶಾಂತ್ ಆದಾಯ 1,600 ಪಟ್ಟು ಏರಿಕೆ
2020-21ರಲ್ಲಿ ನಿಶಾಂತ್ ಅವರ ಆದಾಯವು 7,16,780 ರೂಪಾಯಿ ಆಗಿತ್ತು. ಆದರೆ 2024-25ರಲ್ಲಿ ಈ ಆದಾಯವು 1,28,28,400 ರೂ.ಗಳಿಗೆ ಏರಿದೆ ಎಂದು ಅಫಿಡವಿಟ್‌ನಲ್ಲೆ ಉಲ್ಲೇಖಿಸಲಾಗಿದೆ. ಆದರೆ ಅವರ ಚರಾಸ್ತಿ ಮತ್ತು ಸ್ಥಿರ ಆಸ್ತಿಗಳು 4.63 ಕೋಟಿ ರೂ. ಮೌಲ್ಯದ್ದಾಗಿದೆ. ಸ್ಥಿರ ಆಸ್ತಿಗಳಲ್ಲಿ ಅವರ ತಂದೆಯ ಗ್ರಾಮವಾದ ನಳಂದದ ಕಲ್ಯಾಣ್‌ಬಿಘಾದಲ್ಲಿ 7.1 ಎಕರೆ ಕೃಷಿ ಭೂಮಿ, ಪಟನಾದ ಕಲ್ಯಾಣ್‌ಬಿಘಾ, ಭಕ್ತಿಯಾರ್‌ಪುರ, ಕಂಕರ್‌ಬಾಗ್ ಮತ್ತು ಶಾಸ್ತ್ರಿ ನಗರದಲ್ಲಿ ನಾಲ್ಕು ವಸತಿ ಕಟ್ಟಡಗಳು, 2024ರಲ್ಲಿ 9.14 ಲಕ್ಷ ರೂ. ಮೌಲ್ಯದ ಶಾಸ್ತ್ರಿ ನಗರದಲ್ಲಿ ಉಡುಗೊರೆಯಾಗಿ ನೀಡಲಾದ 2,160 ಚದರ ಅಡಿ ಫ್ಲಾಟ್ ಸೇರಿವೆ.
ಕಳೆದ ತಿಂಗಳು ಸಾಮ್ರಾಟ್ ಚೌಧರಿ ಸರ್ಕಾರದ ವಿಸ್ತರಣೆಯ ಸಮಯದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಿಶಾಂತ್ ಅವರಿಗೆ ಉನ್ನತ ಮಟ್ಟದ ಆರೋಗ್ಯ ಖಾತೆಯನ್ನು ನೀಡಲಾಯಿತು. ಈವರೆಗೆ ರಾಜಕೀಯವಾಗಿ ಕಾಣಿಸಿಕೊಳ್ಳದ ನಿಶಾಂತ್ ನೇರವಾಗಿ ಆರೋಗ್ಯ ಖಾತೆಗಿಟ್ಟಿಸಿಕೊಂಡಿದ್ದಾರೆ. ಸದ್ಯ ಜೆಡಿಯು ನಿಶಾಂತ್ ಅವರನ್ನು ತನ್ನ ಭವಿಷ್ಯದ ನಾಯಕ ಎಂದು ಬಿಂಬಿಸುತ್ತಿದೆ.





