ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯ ತಯಾರಿಕೆ ಮತ್ತು ವಿತರಣೆಯ ಜವಾಬ್ದಾರಿಯನ್ನು ಇಸ್ಕಾನ್‌ಗೆ ವಹಿಸುವ ಪ್ರಸ್ತಾವನೆಯ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರವು ಕೋಲ್ಕತ್ತಾ ಹೈಕೋರ್ಟ್‌ಗೆ ಪ್ರತಿಕ್ರಿಯಿಸಿದೆ. “ಈ ವಿಷಯದಲ್ಲಿ ಇನ್ನೂ ಯಾವುದೇ ಅಧಿಕೃತ ನಿರ್ಧಾರವನ್ನು ತೆಗೆದುಕೊಂಡಿಲ್ಲ” ಎಂದು ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದೆ.
ಕೋಲ್ಕತ್ತಾ ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಬಿಸಿಯೂಟ ಒದಗಿಸುವ ಜವಾಬ್ದಾರಿಯನ್ನು ಇಸ್ಕಾನ್ ಸಂಸ್ಥೆಗೆ ಸರ್ಕಾರ ವಹಿಸಲು ಮುಂದಾಗಿತ್ತು. ಇಸ್ಕಾನ್ ಪಶ್ಚಿಮ ಬಂಗಾಳದ ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟದಿಂದ ಮೊಟ್ಟೆಯನ್ನು ತೆಗೆದುಹಾಕುವ ನಿರ್ಧಾರ ಕೈಗೊಂಡಿತ್ತು. ಮೊಟ್ಟೆಯ ಬದಲಿಗೆ ಮಕ್ಕಳಿಗೆ ಪನೀರ್ ಮತ್ತು ರಾಜ್ಮಾವನ್ನು ನೀಡಲು ನಿರ್ಧರಿಸಿತ್ತು. ಈ ವಿಚಾರ ತೀವ್ರ ವಿವಾದಕ್ಕೆ ಕಾರಣಕ್ಕಾಗಿತ್ತು. ಸರ್ಕಾರದ ಈ ಹೊಸ ನಿರ್ಧಾರದಿಂದಾಗಿ ಶಾಲಾ ಮಕ್ಕಳಿಗೆ ತಮಗೆ ಇಷ್ಟಬಂದದ್ದನ್ನು ತಿನ್ನುವ ಆಹಾರದ ಆಯ್ಕೆ ಇಲ್ಲದಂತಾಗುತ್ತದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿರುವ ನಡುವೆ ಪಶ್ಚಿಮ ಬಂಗಾಳ ಸರ್ಕಾರ ಯೂಟರ್ನ್ ಹೊಡೆದಿದೆ.
ಇದನ್ನೂ ಓದಿ: ಮತಕ್ಕಾಗಿ ಮೀನೂಟ ಜಪ: ಅಧಿಕಾರಕ್ಕೇರಿ ಬಡ ಮಕ್ಕಳ ಕೈಯಿಂದ ಮೊಟ್ಟೆ ಕಿತ್ತುಕೊಂಡ ಬಿಜೆಪಿ!
ಈ ಸಂಬಂಧ ವಕೀಲ ಸಿರ್ಸಾನ್ಯ ಬಂಡೋಪಾಧ್ಯಾಯ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. ಕೋಲ್ಕತ್ತಾ ಮಹಾನಗರ ಪಾಲಿಕೆ (ಕೆಎಂಸಿ) ವ್ಯಾಪ್ತಿಯ ಶಾಲೆಗಳಲ್ಲಿ ಸದ್ಯ ಸ್ವಸಹಾಯ ಸಂಘಗಳು ಬಿಸಿಯೂಟ ನಡೆಸುತ್ತಿದೆ. ಇದರಿಂದಾಗಿ ಮಹಿಳೆಯರ ಜೀವನೋಪಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದೂ ಕಳವಳ ವ್ಯಕ್ತಪಡಿಸಿದ್ದರು.
ಈ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ತಪಬ್ರತ ಚಕ್ರವರ್ತಿ ಮತ್ತು ನ್ಯಾಯಮೂರ್ತಿ ಪಾರ್ಥ ಸಾರಥಿ ಚಟರ್ಜಿ ಅವರನ್ನೊಳಗೊಂಡ ಪೀಠ ನಡೆಸಿದ್ದು, ಪೀಠದ ಮುಂದೆ ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಸುರಜಿತ್ ನಾಥ್ ಮಿತ್ರ ವಾದ ಮಂಡಿಸಿದ್ದಾರೆ.
“ಇಸ್ಕಾನ್ ಸಂಸ್ಥೆಯಿಂದ ಕೇವಲ ಒಂದು ಪ್ರಸ್ತಾಪ ಬಂದಿದೆಯೇ ಹೊರತು, ಈ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ಅಧಿಸೂಚನೆ ಹೊರಡಿಸಿಲ್ಲ. ಅರ್ಜಿದಾರರ ಆತಂಕಗಳು ಕೇವಲ ಊಹೆಗಳನ್ನು ಆಧರಿಸಿವೆ” ಎಂದು ಹೇಳಿಕೊಂಡಿದ್ದಾರೆ.
ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ಪೀಠವು, “ಯಾವುದೇ ಅಧಿಕೃತ ಸರ್ಕಾರಿ ಅಧಿಸೂಚನೆ ಇಲ್ಲದೆ ಇಂತಹ ಪ್ರಮುಖ ನಿರ್ಧಾರಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಸಾವಿರಾರು ಸ್ವಸಹಾಯ ಸಂಘಗಳ ಮಹಿಳೆಯರ ಜೀವನೋಪಾಯದ ಮೇಲಾಗುವ ಪರಿಣಾಮಗಳ ಕುರಿತು ಅರ್ಜಿದಾರರು ವ್ಯಕ್ತಪಡಿಸಿರುವ ಆತಂಕಗಳು ಅರ್ಥಮಾಡಿಕೊಳ್ಳುವಂತಹದ್ದೇ ಆಗಿದೆ” ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ, ಈ ಪ್ರಸ್ತಾವನೆಯ ಪ್ರಸ್ತುತ ಸ್ಥಿತಿಗತಿ ಮತ್ತು ವಿವರಗಳ ಕುರಿತು ಅಫಿಡವಿಟ್ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.




