ನೀಟ್ ಮರುಪರೀಕ್ಷೆಯ ಪ್ರಶ್ನಾಪತ್ರಿಕೆ ಸೋರಿಕೆಯಾಗಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಈ ಬಗ್ಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಭಾನುವಾರ ರಾತ್ರಿ ಸ್ಪಷ್ಟನೆ ನೀಡಿದೆ. ಈ ವಿಡಿಯೋ ನಕಲಿಯಾಗಿದ್ದು, ಅದನ್ನು ನಂಬಬೇಡಿ. ಇಂತಹ ವಿಡಿಯೋಗಳನ್ನು ಹಂಚಿಕೊಳ್ಳಬೇಡಿ ಎಂದು ಎನ್‌ಟಿಎ ಹೇಳಿದೆ.
ಈ ಬಗ್ಗೆ ಎನ್‌ಟಿಎ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. “ವಿಡಿಯೋ ನಕಲಿ ಮತ್ತು ನೀಟ್ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬುದು ಸುಳ್ಳು. ಸಮಗ್ರ ಭದ್ರತೆ ಮತ್ತು ಕಣ್ಗಾವಲಿನಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ” ಎಂದು ತಿಳಿಸಿದೆ.
ಇದನ್ನೂ ಓದಿ: ನೀಟ್ ಪತ್ರಿಕೆ ಬೇಕಾದ್ರೆ 30 ಸಾವಿರ ರೂ. ನೀಡಿ; ವಿಡಿಯೋ ಕರೆಯಲ್ಲಿ ಬೇಡಿಕೆ: ತನಿಖೆ ಆರಂಭ
ಪರೀಕ್ಷೆಗೆ ಒಂದು ದಿನ ಮೊದಲು ಜೂನ್ 20ರಂದು ರಾತ್ರಿ 9.16ಕ್ಕೆ ಟೆಲಿಗ್ರಾಮ್ ಚಾನೆಲ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿದೆ ಎಂದು ಹೇಳಲಾಗಿದೆ. ಚಾನೆಲ್ ಅನ್ನು ನಿರ್ಬಂಧಿಸಲಾಗಿದ್ದರೂ, ವಿದ್ಯಾರ್ಥಿಗಳು ವಿಪಿಎನ್ ಬಳಸಿ ಚಾನೆಲ್ ಬಳಸುತ್ತಿದ್ದಾರೆ ಎಂಬ ಬಗ್ಗೆ ಎಕ್ಸ್‌ನಲ್ಲಿ ತೀವ್ರ ಚರ್ಚೆ ನಡೆದಿದೆ.
ವಿದ್ಯಾರ್ಥಿಗಳ ದಾರಿತಪ್ಪಿಸಲು, ಆತಂಕಕ್ಕೆ ದೂಡಲು ಇಂತಹ ತಪ್ಪು ಮಾಹಿತಿಯನ್ನು, ಉದ್ದೇಶಪೂರ್ವಕವಾಗಿ ಪ್ರಸಾರ ಮಾಡಿರುವುದು ಗಂಭೀರ ಅಪರಾಧ. ಈ ಕೃತ್ಯ ಎಸಗಿದವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಎನ್‌ಟಿಎ ತಿಳಿಸಿದೆ.




