ನೀಟ್ ಮರುಪರೀಕ್ಷೆಯನ್ನು ಲಕ್ಷಾಂತರ ವಿದ್ಯಾರ್ಥಿಗಳು ಬರೆಯುತ್ತಿರುವ ನಡುವೆಯೇ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಂಚನೆ ಆರೋಪದ ಬಗ್ಗೆ ಅಜ್ಮೀರ್ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ವಿಡಿಯೋ ಕರೆ ಮಾಡಿದ ವ್ಯಕ್ತಿಯೊಬ್ಬ ನೀಟ್ ಪತ್ರಿಕೆ ಬೇಕಾದರೆ 30 ಸಾವಿರ ರೂಪಾಯಿ ನೀಡಿ ಎಂದು ಬೇಡಿಕೆ ಇಟ್ಟಿರುವುದಾಗಿ ಆರೋಪಿಸಲಾಗಿದೆ.
ಡಿಎವಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಸಿಂಗ್ ಠಾಕೂರ್ ವಿಡಿಯೋ ಕರೆ ಮೂಲಕ ನೀಟ್ ಪ್ರಶ್ನೆ ಪತ್ರಿಕೆ ಎಂದು ಹೇಳಿಕೊಂಡು ವಿದ್ಯಾರ್ಥಿಗಳಿಗೆ ಯಾವುದೋ ಪತ್ರಿಕೆ ತೋರಿಸಿ ಸುಲಿಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. “ಕಾಲೇಜಿನ ಹೊಸ ವಿದ್ಯಾರ್ಥಿಯೊಬ್ಬರು ನನಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಪರಿಶೀಲಿಸಲು ನಾನೇ ಆ ಸಂಖ್ಯೆಗೆ ಕರೆ ಮಾಡಿದೆ” ಎಂದು ಕೃಷ್ಣ ಸಿಂಗ್ ಠಾಕೂರ್ ತಿಳಿಸಿದ್ದಾರೆ.
ಇದನ್ನೂ ಓದಿ: 37 ದಿನಗಳಲ್ಲಿ 12 ಬಲಿ: ವಿದ್ಯಾರ್ಥಿಗಳನ್ನು ‘ಸೈಕಲಾಜಿಕಲ್ ಬರ್ನ್‌ಔಟ್’ಗೆ ತಳ್ಳುವ ನೀಟ್ ಮರುಪರೀಕ್ಷೆ ಒತ್ತಡ!
ಈ ಬಗ್ಗೆ ಶನಿವಾರ ಹೇಳಿಕೆ ನೀಡಿದ ಠಾಕೂರ್, “ನೀಟ್ ಪರೀಕ್ಷೆ ನಾಳೆ (ಇಂದು-ಜೂನ್ 21) ನಡೆಯಲಿದೆ. ಅದಕ್ಕೂ ಮುನ್ನ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲಾಗುತ್ತಿದೆ, ಸುಲಿಗೆ ಮಾಡಲಾಗುತ್ತಿದೆ. ನನಗೆ ಒಂದು ಪ್ರಶ್ನೆ ಪತ್ರಿಕೆಯನ್ನು ತೋರಿಸಲಾಯಿತು. ಅದಕ್ಕಾಗಿ 30,000 ರೂ. ಪಾವತಿಸುವಂತೆ ತಿಳಿಸಲಾಯಿತು. ನಾನು ಈ ಬಗ್ಗೆ ರೆಕಾರ್ಡಿಂಗ್ ಅನ್ನು ದೂರಿನಲ್ಲಿ ಸಲ್ಲಿಸಿದ್ದೇನೆ. ಕರೆ ಮಾಡಿದವರು ಕ್ಯೂಆರ್ ಕೋಡ್ ಅನ್ನು ಸಹ ಕಳುಹಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಈಗಾಗಲೇ ಹಲವಾರು ವಿದ್ಯಾರ್ಥಿಗಳು ಇಂತಹ ವಂಚನೆಗೆ ಬಲಿಯಾಗಿದ್ದಾರೆ. ಪರೀಕ್ಷಾ ತಯಾರಿಯತ್ತ ಗಮನಹರಿಸುವಂತೆ ಅಭ್ಯರ್ಥಿಗಳಿಗೆ ಠಾಕೂರ್ ಮನವಿ ಮಾಡಿದ್ದಾರೆ. ಹಾಗೆಯೇ ಘಟನೆಯ ಬಗ್ಗೆ ತಿಳಿಸಲು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಹಿಮಾಂಶು ಜಂಗಿದ್ ಅವರನ್ನು ಭೇಟಿ ಮಾಡಿ ಕ್ಯೂಆರ್ ಕೋಡ್ ಮತ್ತು ಕರೆ ಮಾಡಿದವರ ಸಂಖ್ಯೆ ಸೇರಿದಂತೆ ಡಿಜಿಟಲ್ ಪುರಾವೆಗಳನ್ನು ಹಸ್ತಾಂತರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಸದ್ಯ ದೂರಿನ ಆಧಾರದಲ್ಲಿ ತನಿಖೆ ಆರಂಭವಾಗಿದೆ. ಪೊಲೀಸರು ಮೊಬೈಲ್ ಸಂಖ್ಯೆ ಮತ್ತು ಕ್ಯೂಆರ್ ಕೋಡ್‌ಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯ ಸ್ಥಳವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಮುಖ್ಯವಾಗಿ ವಿಡಿಯೋ ಕರೆಯ ವೇಳೆ ಪ್ರದರ್ಶಿಸಲಾದ ಪ್ರಶ್ನೆ ಪತ್ರಿಕೆ ನಿಜವಾಗಿಯೂ ನೀಟ್ ಪ್ರಶ್ನೆಪತ್ರಿಕೆ ಅಥವಾ ನಕಲಿಯೇ ಎಂಬ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
ಈ ಹಿಂದೆ ಮೇ 3ರಂದು ನೀಟ್ ಪರೀಕ್ಷೆ ನಡೆದಿತ್ತು. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಪರೀಕ್ಷೆಯನ್ನೇ ರದ್ದುಪಡಿಸಲಾಗಿತ್ತು. ಇದೀಗ ಇಂದು ಮರುಪರೀಕ್ಷೆ ನಡೆಯುತ್ತಿದೆ.




