ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಚಾಲಕ ಅಶುತೋಷ್ ರಂಕಾ ಮತ್ತು ಅವರ ಹಲವಾರು ಬೆಂಬಲಿಗರನ್ನು ಅಸ್ಸಾಂನ ಗುವಾಹಟಿಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಭಾನುವಾರ ಬೆಳಿಗ್ಗೆ ಆಯೋಜಿಸಲಾಗಿದ್ದ ಸಿಜೆಪಿಯ ಮೊದಲ ಪ್ರಾದೇಶಿಕ “ಸ್ವಯಂಸೇವಕರ ಸಭೆ” ಆರಂಭವಾಗುವ ಕೆಲವೇ ಗಂಟೆಗಳ ಮೊದಲು ಈ ಕಾರ್ಯಚರಣೆ ನಡೆದಿದೆ.
ಗುವಾಹಟಿಯ ಡಿಸ್‌ಪುರದ ಅಸ್ಸಾಂ ಸಚಿವಾಲಯದ ಎದುರಿನ ಪ್ರದೇಶದಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು. ಆದರೆ ಸಭೆಗೆ ಆಗಮಿಸುತ್ತಿದ್ದಂತೆ ಅಶುತೋಷ್ ರಂಕಾ, ದೆಹಲಿ, ನಾಗಾಲ್ಯಾಂಡ್ ಹಾಗೂ ಅಸ್ಸಾಂನ ಸ್ಥಳೀಯ ಕಾರ್ಯಕರ್ತರು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದು ಅಪರಿಚಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಸಿಜೆಪಿ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದು ಕಾಕ್ರೋಚ್ ಪಾರ್ಟಿ ಪ್ರತಿಭಟನೆ; ನಟ ಪ್ರಕಾಶ್ ರಾಜ್ ಭಾಗಿ
ಬಂಧನಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅಶುತೋಷ್ ರಂಕಾ, “ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರಾಜ್ಯದ ಸರ್ಕಾರಿ ಶಾಲೆಗಳ ನೈಜ ಸ್ಥಿತಿಯನ್ನು ದೇಶದ ಮುಂದೆ ಬಯಲು ಮಾಡುತ್ತೇವೆ ಎಂಬ ಭಯದಿಂದ ಈ ರೀತಿ ಕ್ರಮ ಕೈಗೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.
This video cannot be played in your browser. Open the video directly
ಅಲ್ಲದೆ ಕಾಜಿರಂಗ ಸೇರಿದಂತೆ ಹಲವೆಡೆ ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲು ಸ್ಥಳೀಯರ ಭೂಮಿ, ಅರಣ್ಯ ಮತ್ತು ಜಲ ಮೂಲಗಳ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಹೇಳಿದ್ದಾರೆ.
ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ‘ಎಕ್ಸ್’ (ಟ್ವಿಟರ್) ಮೂಲಕ ಪ್ರತಿಕ್ರಿಯಿಸಿದ್ದು, “ಅಶುತೋಷ್ ರಂಕಾ ಮತ್ತು ನಮ್ಮ ತಂಡವನ್ನು ಪೊಲೀಸರು ಕಾನೂನುಬಾಹಿರವಾಗಿ ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಭೇಟಿಯಾಗಲು ವಕೀಲರಿಗೆ ಪೊಲೀಸರು ಅವಕಾಶ ನೀಡುತ್ತಿಲ್ಲ” ಎಂದು ಆರೋಪಿಸಿದ್ದಾರೆ.





