ಅಮರಾವತಿ ಗ್ರಾಮದಲ್ಲಿ 220/110 ಕೆ ವಿ ಸಾಮರ್ಥ್ಯದ ವಿದ್ಯುತ್ ಸ್ವೀಕರಣ ಕೇಂದ್ರ ನಿರ್ಮಾಣವಾಗುತ್ತಿರುವುದರಿಂದ ಹುನಗುಂದ ಮತ್ತು ಇಳಕಲ್ ತಾಲೂಕುಗಳ ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಮತ್ತಷ್ಟು ಬಲ ಬರಲಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವ ವಿಜಯಾನಂದ ಕಾಶಪ್ಪನವರ ಅಭಿಪ್ರಯ ವ್ಯಕ್ತಪಡಿಸಿದರು.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮರಾವತಿ ಗ್ರಾಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವತಿಯಿಂದ ಆಯೋಜಿಸಿದ್ದ 220/110 ಕೆ.ವಿ. ವಿದ್ಯುತ್ ಸ್ವೀಕರಣ ಕೇಂದ್ರದ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಹುನಗುಂದ ತಾಲೂಕಿನಲ್ಲಿ ಇಂತಹ ಮಹತ್ವದ ವಿದ್ಯುತ್ ಕೇಂದ್ರ ಸ್ಥಾಪಿಸಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಕಳೆದ ಮೂರು ವರ್ಷಗಳಿಂದ ಇಂಧನ ಸಚಿವ ಕೆ ಜೆ ಜಾರ್ಜ್ ಅವರೊಂದಿಗೆ ಹಲವು ಬಾರಿ ಚರ್ಚಿಸಿ, ಕೇಂದ್ರ ಸ್ಥಾಪನೆಗೆ ಮನವಿ ಮಾಡಲಾಗಿತ್ತು. ಇದೀಗ ಅವರ ಸಹಕಾರದಿಂದ ಯೋಜನೆ ಕಾರ್ಯರೂಪಕ್ಕೆ ಬಂದಿದೆ” ಎಂದು ಕಾಶಪ್ಪನವರ ಹೇಳಿದರು.
“ಯೋಜನೆಗಾಗಿ ಈಗಾಗಲೇ 20 ಎಕರೆ ಜಮೀನು ಖರೀದಿಸಲಾಗಿದ್ದು, ಸುಮಾರು ₹147 ಕೋಟಿ ವೆಚ್ಚದಲ್ಲಿ ವಿದ್ಯುತ್ ಸ್ವೀಕರಣ ಕೇಂದ್ರ ನಿರ್ಮಾಣವಾಗಲಿದೆ. ಈ ಕೇಂದ್ರ ಕಾರ್ಯಾರಂಭಿಸಿದ ಬಳಿಕ ಇಳಕಲ್ ಮತ್ತು ಹುನಗುಂದ ನಗರಗಳು ಮಾತ್ರವಲ್ಲದೆ ವಿವಿಧ ಉಪಕೇಂದ್ರಗಳಿಗೂ ಹೆಚ್ಚು ಸ್ಥಿರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ” ಎಂದರು.
“ವಿಶೇಷವಾಗಿ ಗ್ರಾನೈಟ್ ಉದ್ಯಮಕ್ಕೆ ಸಂಬಂಧಿಸಿದ ಕೈಗಾರಿಕೆಗಳು ಮತ್ತು ರೈತರ ನೀರಾವರಿ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಯೋಜನೆ ನೆರವಾಗಲಿದೆ. ಮರೋಳ, ಕೊಪ್ಪಳ ಹಾಗೂ ನಂದವಾಡಗಿ ಏತ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ವಿದ್ಯುತ್ ಬೇಡಿಕೆ ನಿರ್ವಹಿಸುವುದಕ್ಕೂ ಇದು ಸಹಕಾರಿಯಾಗಲಿದೆ” ಎಂದು ತಿಳಿಸಿದರು.
ರೈತರಿಗೆ ₹1,250 ಕೋಟಿ ಪರಿಹಾರ ಬಿಡುಗಡೆ
“ರಾಜ್ಯದ ಬರಪೀಡಿತ ತಾಲೂಕುಗಳ ರೈತರ ನೆರವಿಗೆ ಸರ್ಕಾರ ಮುಂದಾಗಿದೆ. ಈಗಾಗಲೇ ₹1,250 ಕೋಟಿ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗಿದ್ದು, ಅರ್ಹ ರೈತರಿಗೆ ತಲಾ ₹2,500 ಪರಿಹಾರ ನೀಡಲಾಗುತ್ತಿದೆ” ಎಂದು ಸಚಿವರು ಹೇಳಿದರು.
“ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ‘ಪ್ರಜಾ ಸೇವಾ ಆಂದೋಲನ’ ಸಭೆಗಳನ್ನು ನಡೆಸಲಾಗುತ್ತಿದೆ. ಜನರ ಅಹವಾಲುಗಳನ್ನು ಆಲಿಸಿ ಸಂಬಂಧಿಸಿದ ಇಲಾಖೆಗಳ ಮೂಲಕ ಪರಿಹಾರ ಒದಗಿಸುವ ಕಾರ್ಯ ನಡೆಯುತ್ತಿದೆ” ಎಂದರು.
ಯುವಜನರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅವಕಾಶ
“ಯುವಜನರ ಸಬಲೀಕರಣಕ್ಕೆ ಸರ್ಕಾರ ಆದ್ಯತೆ ನೀಡುತ್ತಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಭಾರತ್ ಜೋಡೋ ಯುವ ಸಂಘ’ಗಳಿಗೆ ₹10 ಲಕ್ಷದವರೆಗೆ ಅನುದಾನ ನೀಡಲಾಗುತ್ತಿದೆ. ಪಕ್ಷಭೇದ ಮರೆತು ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಗಳ ಸದಸ್ಯತ್ವ ಪಡೆದು ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಕಾಶಪ್ಪನವರ ಕರೆ ನೀಡಿದರು.
ಇದೇ ವೇಳೆ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಲ್ಲಿ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ತಿಂಗಳಿಗೆ ₹2,500 ಸಹಾಯಧನ ನೀಡುವ ಯೋಜನೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು.
ಇದನ್ನೂ ಓದಿದ್ದೀರಾ? ಬೆಳಗಾವಿ | ಇಂದು ಬಸವ ಜಯಂತಿ ಉತ್ಸವ ಸಮಿತಿ ಅಭಿನಂದನಾ ಸಮಾರಂಭ
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧೀಕ್ಷಕ ಎಂಜಿನಿಯರ್ ರಮೇಶ್ ಪವಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ಮಹಾಂತೇಶ ಅವಾರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಾಂತಯ್ಯ ಗಚ್ಚಿನಮಠ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅನಿಲಕುಮಾರ್ ದಡ್ಡಿ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ, ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮುತ್ತಣ್ಣ ಕಲಗೋಡಿ, ಮುಖ್ಯ ಎಂಜಿನಿಯರ್ ಬಸವರಾಜ ಎಚ್ .ಎಸ್, ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಭುಸಿಂಗ್ ಹಜಾರೆ, ಮುಖಂಡರಾದ ಶರಣಪ್ಪ ಅಮದಿಹಾಳ, ಅರುಣಾ ಅಕ್ಕಿ, ಅಮೀನಪ್ಪ ಸಂದಿಗೌಡ, ಬಸವರಾಜ ಗೌಡರ ಸೇರಿದಂತೆ ಅಧಿಕಾರಿಗಳು ಹಾಗೂ ಗಣ್ಯರು ಇದ್ದರು.




