ಹೊಸ ಇಮಿಗ್ರೇಷನ್(ವಲಸೆ) ನಿಯಮಗಳನ್ನು ಟ್ರಂಪ್ ಆಡಳಿತ ಜಾರಿಗೆ ತಂದಿರುವುದರಿಂದ, ಅಮೆರಿಕದಲ್ಲಿ ವಾಸಿಸುತ್ತಿರುವ ಮತ್ತು ಉದ್ಯೋಗಾಧಾರಿತ ಗ್ರೀನ್ ಕಾರ್ಡ್ ನಿರೀಕ್ಷೆಯಲ್ಲಿ ವರ್ಷಗಳಿಂದ ಕಾಯುತ್ತಿರುವ 12 ಲಕ್ಷಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ ಕುಟುಂಬಗಳ ಭವಿಷ್ಯ ಅತಂತ್ರವಾಗಿದೆ ಎಂದು ಶ್ವೇತಭವನದ ಮಾಜಿ ಸಲಹೆಗಾರ ಅಜಯ್ ಭುಟೋರಿಯಾ ಎಚ್ಚರಿಸಿದ್ದಾರೆ.
ಯುಎಸ್ ಸಿಟಿಜನ್‌ಶಿಪ್ ಆಂಡ್ ಇಮಿಗ್ರೇಷನ್ ಸರ್ವಿಸಸ್ (USCIS) ಶುಕ್ರವಾರ ಹೊಸ ನೀತಿಯನ್ನು ಪ್ರಕಟಿಸಿದ್ದು, ತಾತ್ಕಾಲಿಕ ವೀಸಾದಲ್ಲಿರುವ ವಿದೇಶಿಗರು ಶಾಶ್ವತ ನಿವಾಸ (ಗ್ರೀನ್ ಕಾರ್ಡ್) ಪಡೆಯುವ ವಿಧಾನದಲ್ಲಿ ದೊಡ್ಡ ಬದಲಾವಣೆ ತಂದಿದೆ. ಈ ಹೊಸ ನಿಯಮದ ಪ್ರಕಾರ, ತಾತ್ಕಾಲಿಕ ವೀಸಾದಲ್ಲಿ ಅಮೆರಿಕದಲ್ಲಿ ಇರುವವರು ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕಾದರೆ, ಅವರು ತಮ್ಮ ತಾಯ್ನಾಡಿಗೆ ಹಿಂದಿರುಗಬೇಕು ಮತ್ತು ಅಲ್ಲಿ ಇರುವ ಯುಎಸ್ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಇದುವರೆಗೆ ಅಮೆರಿಕದಲ್ಲಿಯೇ ಇದ್ದುಕೊಂಡು, ವೀಸಾ ವಿಭಾಗವನ್ನು ಬದಲಾಯಿಸಲು ಅವಕಾಶ ಇತ್ತು. ಆದರೆ ಈಗ ಅದನ್ನು ರದ್ದುಗೊಳಿಸಲಾಗಿದೆ.
ಮಾಜಿ ಅಧ್ಯಕ್ಷ ಜೋ ಬೈಡೆನ್ ಅವರ ಆಡಳಿತದಲ್ಲಿ ಸಲಹೆಗಾರರಾಗಿದ್ದ ಅಜಯ್ ಭುಟೋರಿಯಾ ಅವರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, “ಕಾನೂನನ್ನು ಪಾಲಿಸುತ್ತಾ, ತೆರಿಗೆ ಕಟ್ಟುತ್ತಾ ದಶಕಗಳ ಕಾಲ ಕಾನೂನುಬದ್ಧವಾಗಿ ಕಾದಿರುವ 12 ಲಕ್ಷ ಭಾರತೀಯರು ಮತ್ತು ಅವರ ಕುಟುಂಬಗಳನ್ನು ಈ ಹೊಸ ನಿಯಮ ಅತಂತ್ರಕ್ಕೆ ನೂಕಿದೆ,” ಎಂದಿದ್ದಾರೆ. I-485 ಅರ್ಜಿಗಳನ್ನು ತಿರಸ್ಕರಿಸಲು ಅಧಿಕಾರಿಗಳಿಗೆ ಈ ಮೆಮೊ “ಅನಿಯಂತ್ರಿತ ಅಧಿಕಾರ” ನೀಡಿದೆ ಎಂದು ಅವರು ಆರೋಪಿಸಿದ್ದಾರೆ. ಕಾನೂನಿನ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೂ ಸಹ ಅರ್ಜಿಗಳನ್ನು ತಿರಸ್ಕರಿಸಬಹುದಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಕೊಹ್ಲಿ-ರೋಹಿತ್ 2027ರ ವಿಶ್ವಕಪ್ ಆಡ್ತಾರಾ; ಬಿಸಿಸಿಐ ಮುಂದಿದೆ ದೊಡ್ಡ ಸವಾಲು
ಉದ್ಯೋಗ-ಆಧಾರಿತ ಇಮಿಗ್ರೇಷನ್ ಮಾರ್ಗಗಳು ಈಗ ನೇರ ಪರಿಣಾಮಕ್ಕೆ ತುತ್ತಾಗಿವೆ. H-1B, H-4, L-1, L-2, B-1 ಮತ್ತು B-2 ವೀಸಾ ಹೊಂದಿರುವವರ ಮೇಲೆ ತೀವ್ರ ನಿಗಾವಹಿಸುವುದನ್ನು ಈ ಮೆಮೊ ಸ್ಪಷ್ಟಪಡಿಸಿದೆ. ಕಾನೂನುಬದ್ಧ(‘dual-intent’) ವೀಸಾಗಳು ಕೂಡ ಈಗ ಸುರಕ್ಷಿತವಾಗಿಲ್ಲ. ಅರ್ಜಿದಾರರ ಸಂಪೂರ್ಣ ಯುಎಸ್ ಇಮಿಗ್ರೇಷನ್ ಇತಿಹಾಸವನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಣ್ಣ ಪುಟ್ಟ ವೀಸಾ ಸ್ಟೇಟಸ್ ಗ್ಯಾಪ್ ಅಥವಾ ಅನಧಿಕೃತ ಕೆಲಸ ಮಾಡಿದ್ದರೂ ಅರ್ಜಿಯನ್ನು ತಿರಸ್ಕರಿಸಲು ಸಾಧ್ಯತೆ ಇದೆ ಎಂದು ಭುಟೋರಿಯಾ ಎಚ್ಚರಿಸಿದ್ದಾರೆ. ಅರ್ಜಿ ತಿರಸ್ಕೃತಗೊಂಡರೆ, ಅವರು ಕಡ್ಡಾಯವಾಗಿ ಅಮೆರಿಕವನ್ನು ತೊರೆದು ತಾಯ್ನಾಡಿಗೆ ಮರಳಬೇಕಾಗುತ್ತದೆ.
ಗಂಭೀರ ಆತಂಕ ಮತ್ತು ವಿರೋಧದ ನಂತರ, USCIS ಕೆಲವು ಅಂಶಗಳನ್ನು ಹಿಂತೆಗೆದುಕೊಂಡಿದೆ, ಇದರಿಂದ ಭಾರತೀಯ ಉದ್ಯೋಗಿಗಳಿಗೆ ಸ್ವಲ್ಪ ನೆಮ್ಮದಿ ಸಿಗಬಹುದು. ಹೊಸ ನೀತಿಯನ್ನು ಜಾರಿಗೆ ತಂದ ಕೆಲವೇ ಗಂಟೆಗಳಲ್ಲಿ USCIS “ಆರ್ಥಿಕ ಲಾಭ” ಮತ್ತು “ರಾಷ್ಟ್ರೀಯ ಹಿತಾಸಕ್ತಿ” ಎಂಬ ಎರಡು ವಿನಾಯಿತಿಗಳನ್ನು ಸೇರಿಸಿದೆ.
USCIS ವಕ್ತಾರ ಜ್ಯಾಕ್ ಕಾಹ್ಲರ್ ಅವರ ಪ್ರಕಾರ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಆರ್ಥಿಕ ಲಾಭವನ್ನು ತರುವ ಅರ್ಜಿದಾರರು ತಮ್ಮ ಪ್ರಸ್ತುತ ಮಾರ್ಗದಲ್ಲಿಯೇ ಮುಂದುವರಿಯಲು (ಅಮೆರಿಕದಲ್ಲಿಯೇ ಇದ್ದು ಅರ್ಜಿ ಸಲ್ಲಿಸಲು) ಅವಕಾಶ ನೀಡಲಾಗುತ್ತದೆ. ಆದರೆ, ಈ ಎರಡು ಪದಗಳಿಗೆ ಸ್ಪಷ್ಟ ವ್ಯಾಖ್ಯಾನವೇನೆಂಬುದು ಇನ್ನು ನಿರ್ಧಾರವಾಗಿಲ್ಲದಿರುವುದರಿಂದ, ಯಾರಿಗೆ ಈ ವಿನಾಯಿತಿ ಸಿಗಲಿದೆ ಎಂಬುದು ಇನ್ನು ಗೊಂದಲದಲ್ಲಿಯೇ ಇದೆ.




