2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆ ಮಾತುಕತೆಗಾಗಿ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ ಭಾನುವಾರ ತಲಾ ನಾಲ್ವರು ಸದಸ್ಯರ ಸಮಿತಿಗಳನ್ನು ರಚಿಸಿವೆ. ‘ಇಂಡಿಯಾ’ ಮೈತ್ರಿಕೂಟದ ಪ್ರಮುಖ ಪಾಲುದಾರರಾದ ಉಭಯ ಪಕ್ಷಗಳು ನವೆಂಬರ್ 23 ಮತ್ತು 24ರಂದು ದೆಹಲಿಯಲ್ಲಿ ಎರಡು ದಿನಗಳ ಮೊದಲ ಹಂತದ ಸಭೆ ನಡೆಸಿ, ರಾಜ್ಯದ ಎಲ್ಲ 403 ವಿಧಾನಸಭಾ ಕ್ಷೇತ್ರಗಳ ಕುರಿತು ಕ್ಷೇತ್ರವಾರು ಪರಿಶೀಲನೆ ನಡೆಸಲಿವೆ.
ಎಸ್‌ಪಿ ಸಮಿತಿಯ ನೇತೃತ್ವವನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ರಾಮ್ ಗೋಪಾಲ್ ಯಾದವ್ ವಹಿಸಿದ್ದು, ಲೋಕಸಭಾ ಸಂಸದರಾದ ರಾಜೀವ್ ರಾಯ್, ಇಕ್ರಾ ಚೌಧರಿ (ಇಕ್ರಾ ಹಸನ್) ಮತ್ತು ರಾಜ್ಯ ಘಟಕದ ಅಧ್ಯಕ್ಷ ಶ್ಯಾಮ್ ಲಾಲ್ ಪಾಲ್ ಸದಸ್ಯರಾಗಿದ್ದಾರೆ. ಕಾಂಗ್ರೆಸ್ ಸಮಿತಿಯಲ್ಲಿ ಉತ್ತರ ಪ್ರದೇಶ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್, ರಾಜ್ಯ ಘಟಕದ ಅಧ್ಯಕ್ಷೆ ಆರಾಧನಾ ಮಿಶ್ರಾ, ಕಾರ್ಯಾಧ್ಯಕ್ಷ ಇಮ್ರಾನ್ ಮಸೂದ್ ಹಾಗೂ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಇದ್ದಾರೆ.
ಸೀಟು ಹಂಚಿಕೆಯಲ್ಲಿ ನಿಗದಿತ ಸಂಖ್ಯೆಗಿಂತ ‘ಗೆಲ್ಲುವ ಸಾಮರ್ಥ್ಯವೇ’ ಏಕೈಕ ಮಾನದಂಡವಾಗಲಿದೆ ಎಂದು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯನ್ನು ಸೋಲಿಸಲು ಯಾರು ಎಲ್ಲಿ ಗೆಲ್ಲಬಲ್ಲರು ಎಂಬುದನ್ನು ಚರ್ಚಿಸಿ ಅಭ್ಯರ್ಥಿಗಳನ್ನು ನಿರ್ಧರಿಸಲಾಗುವುದು ಎಂದಿದ್ದಾರೆ. 403 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 181 ಸ್ಥಾನಗಳನ್ನು ಕೇಳುತ್ತಿದೆ ಎಂದು ಅಖಿಲೇಶ್ ಇತ್ತೀಚೆಗೆ ಹೇಳಿದ್ದ ಬೆನ್ನಲ್ಲೇ, ಸಂಖ್ಯೆಯ ವಿಚಾರದಲ್ಲಿ ಪಟ್ಟು ಹಿಡಿಯುವುದಿಲ್ಲ ಹಾಗೂ ‘ಗೌರವಯುತ ಪಾಲು’ ಬಯಸುತ್ತಿರುವುದಾಗಿ ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.
ದೆಹಲಿಯ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಅವರ ನಿವಾಸದಲ್ಲಿ ನಡೆಯಲಿರುವ ಸಭೆಯಲ್ಲಿ ಪ್ರತಿ ಕ್ಷೇತ್ರದ ಸ್ಥಳೀಯ ಬಲ, ಹಿಂದಿನ ಚುನಾವಣಾ ಫಲಿತಾಂಶ ಹಾಗೂ ಸಂಘಟನಾ ಶಕ್ತಿಯ ಬಗ್ಗೆ ಕೂಲಂಕಷ ಚರ್ಚೆ ನಡೆಯಲಿದೆ. ಚುನಾವಣೆಗೆ ಹೆಚ್ಚು ಸಮಯವಿಲ್ಲದ ಕಾರಣ ಡಿಸೆಂಬರ್ 20ರೊಳಗೆ ಮಾತುಕತೆ ಅಂತಿಮಗೊಳಿಸುವ ಅಗತ್ಯವಿದೆ ಎಂದು ರಾಜೇಂದ್ರ ಪಾಲ್ ಗೌತಮ್ ಹೇಳಿದ್ದಾರೆ. ಮೊದಲ ಹಂತದ ಚರ್ಚೆಯ ಬಳಿಕ ಸೀಟು ಹಂಚಿಕೆಯ ಅಂತಿಮ ನಿರ್ಧಾರವನ್ನು ಅಖಿಲೇಶ್ ಯಾದವ್ ಕೈಗೊಳ್ಳಲಿದ್ದಾರೆ ಎಂದು ಎಸ್‌ಪಿ ನಾಯಕ ಫಕ್ರುಲ್ ಹಸನ್ ಚಾಂದ್ ತಿಳಿಸಿದ್ದಾರೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಬಿಜೆಪಿ ವಕ್ತಾರ ಆನಂದ್ ದುಬೆ, 2027ರ ಚುನಾವಣೆಯಲ್ಲಿ ಎಸ್‌ಪಿ–ಕಾಂಗ್ರೆಸ್ ಮೈತ್ರಿಯು ರಾಜ್ಯದ ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. ಎಸ್‌ಪಿ ಆಡಳಿತಾವಧಿಯ ಅರಾಜಕತೆ ಹಾಗೂ ಅಪರಾಧ ಪ್ರಕರಣಗಳು ಮತದಾರರಿಗೆ ತಿಳಿದಿವೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ನೆಲೆಯೇ ಇಲ್ಲದಿರುವುದರಿಂದ ಆ ಪಕ್ಷಕ್ಕೆ ಸ್ಥಾನ ಬಿಟ್ಟುಕೊಟ್ಟರೆ ಎಸ್‌ಪಿಗೆ ನಷ್ಟವಾಗಲಿದೆ ಎಂದು ಟೀಕಿಸಿದ್ದಾರೆ.
2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 255 ಸ್ಥಾನಗಳನ್ನು ಗೆದ್ದು ಸತತ ಎರಡನೇ ಬಾರಿಗೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಆಗ ಎಸ್‌ಪಿ 111 ಸ್ಥಾನಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಕೇವಲ ಎರಡು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದ ಎಸ್‌ಪಿ ಮತ್ತು ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಬಲಿಷ್ಠ ಪ್ರದರ್ಶನ ನೀಡಿದ್ದವು.



