ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲೆಯಲ್ಲಿ 100 ವರ್ಷಗಳಷ್ಟು ಹಳೆಯದಾದ ಮಸೀದಿಯನ್ನು ಧ್ವಂಸಗೊಳಿಸಿರುವುದು, ಬುಲ್ಡೋಜರ್ ಬಳಕೆಗೆ ಸಂಬಂಧಿಸಿದಂತೆ 2024ರ ಮಹತ್ವದ ತೀರ್ಪಿನಲ್ಲಿ ತಾನು ನಿಗದಿಪಡಿಸಿದ್ದ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪಾಲಿಸಿಲ್ಲ ಎಂದು ಆರೋಪಿಸಿ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಶಶಿ ಪ್ರಕಾಶ್ ಗೋಯಲ್ ವಿರುದ್ಧ ಇಮ್ರಾನ್ ಅಹ್ಮದ್ ಅವರು ವಕೀಲ ಅಫ್ತಾಬ್ ಅಲಿ ಖಾನ್ ಮೂಲಕ ಈ ಅರ್ಜಿ ಸಲ್ಲಿಸಿದ್ದರು. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ಪೀಠವು ಅರ್ಜಿಯ ವಿಚಾರಣೆ ನಡೆಸಿತು.
ಆರೋಪಗಳ ಕುರಿತು ನೇರವಾಗಿ ಪರಿಶೀಲನೆ ನಡೆಸಲು ನಿರಾಕರಿಸಿದ ಪೀಠವು, ಸಂಬಂಧಪಟ್ಟ ಹೈಕೋರ್ಟ್ (ಅಲಹಾಬಾದ್ ಹೈಕೋರ್ಟ್) ಮೊರೆ ಹೋಗುವಂತೆ ಅರ್ಜಿದಾರರಿಗೆ ಸೂಚಿಸಿತು. ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ ಎನ್ನಲಾದ ಪ್ರತಿಯೊಂದು ಪ್ರಕರಣವನ್ನೂ ನೇರವಾಗಿ ಸರ್ವೋಚ್ಚ ನ್ಯಾಯಾಲಯಕ್ಕೇ ತರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ‘ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸುವ ಪ್ರತಿಯೊಂದು ಆದೇಶವೂ ಮತ್ತೆ ಸುಪ್ರೀಂ ಕೋರ್ಟ್‌ಗೇ ಬರಲು ಸಾಧ್ಯವಿಲ್ಲ; ನೀವು ಸಂಬಂಧಪಟ್ಟ ಹೈಕೋರ್ಟ್‌ಗೆ ಹೋಗಬೇಕು’ ಎಂದು ಸಿಜೆಐ ಸೂರ್ಯಕಾಂತ್ ಹೇಳಿದರು.
ಕಟ್ಟಡ ಧ್ವಂಸದ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು, ಆ ಘಟನೆಗೆ ಸಂಬಂಧಿಸಿದ ನಿರ್ದಿಷ್ಟ ವಾಸ್ತವಾಂಶಗಳು ಮತ್ತು ಸನ್ನಿವೇಶಗಳನ್ನು ಪರಿಶೀಲಿಸುವುದು ಅಗತ್ಯವಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು. ಇಂತಹ ಪರಿಶೀಲನೆಯನ್ನು ಸಂಬಂಧಪಟ್ಟ ಹೈಕೋರ್ಟ್ ನಡೆಸುವುದೇ ಹೆಚ್ಚು ಸೂಕ್ತ ಎಂದು ತಿಳಿಸಿತು.
‘ನಾವು ತತ್ವಗಳನ್ನು (ಮಾರ್ಗಸೂಚಿ) ನಿಗದಿಪಡಿಸಿದ್ದೇವೆ. ಆದರೆ ಅವು ಎಲ್ಲಿ, ಯಾವ ವಾಸ್ತವಿಕ ಸಂದರ್ಭ ಮತ್ತು ಹಿನ್ನೆಲೆಯಲ್ಲಿ ಉಲ್ಲಂಘನೆಯಾಗಿವೆ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ದಯವಿಟ್ಟು ಸಂಬಂಧಪಟ್ಟ ಹೈಕೋರ್ಟ್‌ಗೆ ಹೋಗಿ, ವಾಸ್ತವಾಂಶಗಳ ಆಧಾರದ ಮೇಲೆ ನಿಮ್ಮ ಪ್ರಕರಣವನ್ನು ಸಾಬೀತುಪಡಿಸಿ. ಒಂದು ವೇಳೆ ಹೈಕೋರ್ಟ್ ಅಗತ್ಯ ಪರಿಹಾರ ನೀಡದಿದ್ದರೆ, ಆನಂತರ ನಮ್ಮ ಬಳಿಗೆ ಬನ್ನಿ’ ಎಂದು ಸಿಜೆಐ ತಿಳಿಸಿದರು.
ನ್ಯಾಯಾಂಗ ನಿಂದನೆ ವಿಚಾರಣೆಯ ವ್ಯಾಪ್ತಿಯಲ್ಲಿ ಆರೋಪಗಳ ಕುರಿತು ವಾಸ್ತವಿಕ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು. ಆದರೆ, ಪ್ರಕರಣವನ್ನು ಪರಿಶೀಲಿಸಿದ ಬಳಿಕ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳು ಉಲ್ಲಂಘನೆಯಾಗಿರುವುದು ಕಂಡುಬಂದರೆ ಅದಕ್ಕೆ ತಕ್ಕ ಪರಿಣಾಮಗಳು ಎದುರಾಗುತ್ತವೆ ಎಂದು ತಿಳಿಸಿದ ಪೀಠವು, ಈ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದು ನಿರ್ದೇಶಿಸಿತು.



