ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಉದ್ಯಮಿ ನೀರವ್ ಮೋದಿಯ ನಿಕಟವರ್ತಿ ಸಂದೀಪ್ ಮಿಸ್ತ್ರಿಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಮುಂಬೈನಲ್ಲಿ ಅಧಿಕೃತವಾಗಿ ಬಂಧಿಸಿದೆ. ಸಂದೀಪ್ ಮಿಸ್ತ್ರಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ (ಯುಎಇ) ಭಾರತಕ್ಕೆ ಹಸ್ತಾಂತರಿಸಿದ ಬಳಿಕ, ಆತನನ್ನು ಸಿಬಿಐ ಬಂಧಿಸಿ, ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
2025ರ ನವೆಂಬರ್‌ನಲ್ಲಿ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಜಾಮೀನು ರಹಿತ ವಾರಂಟ್ ಆಧರಿಸಿ ಈ ಹಸ್ತಾಂತರ ಮತ್ತು ಬಂಧನ ಪ್ರಕ್ರಿಯೆ ನಡೆದಿದೆ. ವಿಶೇಷ ಸಿಬಿಐ ನ್ಯಾಯಾಲಯವು ಮಿಸ್ತ್ರಿಗೆ ಅಕ್ಟೋಬರ್ 6ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಹಾಂಕ್-ಕಾಂಗ್ ಮೂಲದ ನೀರವ್ ಮೋದಿ ಒಡೆತನದ ‘ಫ್ಯಾನ್ಸಿ ಕ್ರಿಯೇಷನ್ಸ್ ಲಿಮಿಟೆಡ್ ಕಾರ್ಪೊರೇಟ್’ನಲ್ಲಿ ಸಂದೀಪ್ ಮಿಸ್ತ್ರಿ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಸುಮಾರು 6,498.20 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಬ್ಯಾಂಕ್ ವಂಚನೆ ಎಸಗಲು ನೀರವ್ ಮೋದಿ ಮತ್ತು ಇತರ ಆರೋಪಿಗಳೊಂದಿಗೆ ಸೇರಿ ಮಿಸ್ತ್ರಿ ಕ್ರಿಮಿನಲ್ ಸಂಚು ರೂಪಿಸಿದ್ದರು ಎಂದು ಸಿಬಿಐ ಆರೋಪಿಸಿದೆ.
ಇದಷ್ಟೇ ಅಲ್ಲದೆ, ಭಾರತದಲ್ಲಿ ಪ್ರಕರಣ ದಾಖಲಾದಾಗ, ದುಬೈನಲ್ಲಿ ಮೋದಿಗೆ ಸಂಬಂಧಿಸಿದ ವಿವಿಧ ಸಂಸ್ಥೆಗಳ ನೌಕರರಿಗೆ (ಬೇನಾಮಿ ನಿರ್ದೇಶಕರಿಗೆ) ಅಲ್ಲಿಂದ ಹೊರಟುಹೋಗುವಂತೆ ನೀರವ್ ಮೋದಿಯ ಸಹೋದರ ನೇಹಾಲ್ ಮತ್ತು ಮಿಸ್ತ್ರಿ ಬೆದರಿಕೆ ಹಾಕಿದ್ದರು. ಆ ನೌಕರರನ್ನು ದುಬೈನಿಂದ ಈಜಿಪ್ಟ್‌ನ ಕೈರೋಗೆ ಪಲಾಯನ ಮಾಡುವಂತೆ ಒತ್ತಡ ಹೇರಿದ್ದರು. ಪುರಾವೆಗಳನ್ನು ನಾಶಪಡಿಸುವ ಉದ್ದೇಶದಿಂದ ಅವರ ಮೊಬೈಲ್ ಫೋನ್‌ಗಳನ್ನು ಧ್ವಂಸಗೊಳಿಸಿದ್ದರು ಎಂದು ಸಿಬಿಐ ಆರೋಪಿಸಿದೆ.
2018ರಿಂದಲೂ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐ ತನಿಖೆ ಎದುರಿಸುತ್ತಿರುವ ನೀರವ್ ಮೋದಿ ಮತ್ತು ಆತನ ಮಾವ ಮೆಹುಲ್ ಚೋಕ್ಸಿ, ಮುಂಬೈನ ಬ್ರಾಡಿ ಹೌಸ್ ಪಿಎನ್‌ಬಿ ಶಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಅಕ್ರಮ ಸಾಲ ಖಾತರಿ ಪತ್ರಗಳನ್ನು (LoUs) ಬಳಸಿಕೊಂಡು ಒಟ್ಟು 13,000 ಕೋಟಿ ರೂ.ಗಳಿಗೂ ಅಧಿಕ ಸಾಲ ಪಡೆದು, ವಂಚನೆ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.



