ಪ್ರಪಂಚದಾದ್ಯಂತ ಮಾಧ್ಯಮಗಳ ಧ್ವನಿಯನ್ನು ಅಡಗಿಸಲು ಮತ್ತು ಪತ್ರಕರ್ತರನ್ನು ವ್ಯವಸ್ಥಿತವಾಗಿ ಗುರಿಯಾಗಿಸಲು ಮುಂದಾಗಿರುವ ‘ಪತ್ರಿಕಾ ಸ್ವಾತಂತ್ರ್ಯದ ಭಕ್ಷಕರು’ ಯಾರು ಎಂಬ ಹೊಸ ಪಟ್ಟಿಯನ್ನು ‘ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್’ (RSF) ಪ್ರಕಟಿಸಿದೆ. ಪ್ರತಿವರ್ಷ ನವೆಂಬರ್ 2ರಂದು ಆಚರಿಸಲಾಗುವ ‘ಪತ್ರಕರ್ತರ ವಿರುದ್ಧದ ಅಪರಾಧಗಳ ತಡೆ ದಿನ’ದ ಅಂಗವಾಗಿ ‘ಪತ್ರಿಕಾ ಸ್ವಾತಂತ್ರ್ಯ ಭಕ್ಷಕರ ಪಟ್ಟಿ-2026’ಅನ್ನು ಆಎಸ್ಎಫ್ ಪ್ರಕಟಿಸಿದೆ. ಈ ಪಟ್ಟಿಯನ್ನು ಕಪ್ಪುಪಟ್ಟಿ ಎಂದು ಬಣ್ಣಿಸಲಾಗಿದೆ. ಇದರಲ್ಲಿ, 33 ಜಾಗತಿಕ ಶಕ್ತಿಗಳನ್ನು ಹೆಸರಿಸಿದ್ದು, ಅವರಲ್ಲಿ, ಪ್ರಧಾನಿ ಮೋದಿ ಅವರ ಅತ್ಯಾಪ್ತ ಗೌತಮ್ ಅದಾನಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಬಲಪಂಥೀಯ ಪೋರ್ಟಲ್ ‘ಓಪ್ಇಂಡಿಯಾ’ ಸೇರಿದಂತೆ ಹಲವು ಪ್ರಭಾವಿ ಸಂಸ್ಥೆ ಮತ್ತು ನಾಯಕರ ಹೆಸರುಗಳಿವೆ.
ಮಾಧ್ಯಮಗಳ ಮೇಲಿನ ದೌರ್ಜನ್ಯ ಮತ್ತು ದ್ವೇಷದ ಸ್ವರೂಪವನ್ನು ಜಗತ್ತಿಗೆ ತೋರಿಸುವ ಉದ್ದೇಶದಿಂದ ಆರ್ಎಸ್ಎಫ್ ಸಂಸ್ಥೆ ಈ ಪಟ್ಟಿಯನ್ನು ಸಿದ್ಧಪಡಿಸಿದೆ. ಇದರಲ್ಲಿ ಅದಾನಿ ಹೆಸರು ಸೇರಿಕೊಂಡಿದೆ. ಗೌತಮ್ ಅದಾನಿ ನೇತೃತ್ವದ ‘ಅದಾನಿ ಗ್ರೂಪ್’ ಕುರಿತು ಸತ್ಯ ಸಂಗತಿಗಳನ್ನು ವರದಿ ಮಾಡುವ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ‘ಮಾನನಷ್ಟ ಮೊಕದ್ದಮೆ’ಗಳನ್ನು ಅಸ್ತ್ರವಾಗಿ ಬಳಸಿಕೊಂಡು ಮಾಧ್ಯಮಗಳ ಬಾಯಿ ಮುಚ್ಚಿಸಲಾಗುತ್ತಿದೆ ಎಂದು ವರದಿ ಬೆಟ್ಟು ಮಾಡಿದೆ.
ವರದಿ ಪ್ರಕಾರ, ಅದಾನಿ ಗ್ರೂಪ್ ಸಂಸ್ಥೆಯು ಭಾರತೀಯ ಪತ್ರಕರ್ತರ ವಿರುದ್ಧ 11 ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದೆ. ಈ ಪೈಕಿ, ಪತ್ರಕರ್ತರೊಬ್ಬರು ಗುಜರಾತ್ನಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಯಿತು ಎಂಬುದನ್ನು ಆರ್ಎಸ್ಎಫ್ ಗಮನಿಇದೆ. “ಕಾನೂನಿನ ಮಾರ್ಗವನ್ನೇ ಅಸ್ತ್ರವಾಗಿಸಿಕೊಂಡು ಪತ್ರಿಕೋದ್ಯಮವನ್ನು ಅಪರಾಧೀಕರಣಗೊಳಿಸಲು ಯತ್ನಿಸಲಾಗುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದೆ.
ಇನ್ನು ಭಾರತದಿಂದ ಪಟ್ಟಿಗೆ ಸೇರ್ಪಡೆಯಾಗಿರುವ ಮತ್ತೊಂದು ಹೆಸರು ‘ಓಪ್ಇಂಡಿಯಾ’ ಎಂಬ ವೆಬ್ತಾಣ. ಸ್ವತಂತ್ರ ಪತ್ರಿಕೋದ್ಯಮ ಮತ್ತು ಪ್ರಮುಖ ಪತ್ರಕರ್ತರನ್ನು ಗುರಿಯಾಗಿಸಿಕೊಂಡು ಆನ್ಲೈನ್ ಮೂಲಕ ಸಾರ್ವಜನಿಕವಾಗಿ ದ್ವೇಷವನ್ನು ಹಬ್ಬಿಸುವ ಕೃತ್ಯದಲ್ಲಿ ಈ ಸಂಸ್ಥೆ ತೊಡಗಿದೆ ಎಂದು ಆರ್ಎಸ್ಎಫ್ ಸ್ಪಷ್ಟಪಡಿಸಿದೆ.
2023ರಿಂದ 2025ರ ನಡುವೆ ಈ ಪೋರ್ಟಲ್ ಪತ್ರಕರ್ತರನ್ನು ಟಾರ್ಗೆಟ್ ಮಾಡಿ 300ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದೆ. ರಾಜ್ದೀಪ್ ಸರ್ದೇಸಾಯಿ, ಅರ್ಫಾ ಖಾನಮ್ ಶೇರ್ವಾನಿ, ಮೊಹಮ್ಮದ್ ಝುಬೇರ್, ಮಹೇಶ್ ಲಂಗಾ ಹಾಗೂ ರವೀಶ್ ಕುಮಾರ್ ಅವರಂತಹ ಹಿರಿಯ ಪತ್ರಕರ್ತರನ್ನು ಈ ಪೋರ್ಟಲ್ ಟಾರ್ಗೆಟ್ ಮಾಡಿದೆ. ಈ ಎಲ್ಲರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮತ್ತು ಬೆದರಿಕೆಯ ಸರಣಿ ದಾಳಿಗಳು ನಡೆಯುವಂತೆ ಸೈಬರ್ ದ್ವೇಷಕ್ಕೆ ಪ್ರಚೋದನೆ ನೀಡಿದೆ ಎಂದು ವರದಿ ಬಹಿರಂಗಪಡಿಸಿದೆ.

ಆರ್ಎಸ್ಎಫ್ನ ಸಂಪಾದಕೀಯ ನಿರ್ದೇಶಕಿ ಆನೆ ಬೊಕಾಂಡೆ ಹೇಳುವಂತೆ; “ಭಾರತದಲ್ಲಿ ಪತ್ರಕರ್ತರ ಮೇಲೆ ನಡೆಯುವ ಸೈಬರ್ ದಾಳಿಗಳಿಗೆ ಆಪ್ಇಂಡಿಯಾ ಪ್ರಮುಖ ಯಂತ್ರದಂತಿದೆ. ಈ ಕುರಿತು ಭಾರತೀಯ ನ್ಯಾಯಾಂಗ ವ್ಯವಸ್ಥೆಯು ತನಿಖೆ ನಡೆಸಬೇಕು. ಇಂತಹ ದ್ವೇಷಪೂರಿತ ವೆಬ್ಸೈಟ್ಗಳಿಗೆ ಗೂಗಲ್ ಆ್ಯಡ್ಸೆನ್ಸ್ ನೀಡುತ್ತಿರುವ ಜಾಹೀರಾತು ಹಣಕಾಸಿನ ನೆರವನ್ನು ತಕ್ಷಣವೇ ತಡೆಯಬೇಕು” ಎಂದು ಆಗ್ರಹಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಕರಸ್ಥಲದ ಲಿಂಗ ಮತ್ತು ಬೆರಳಿನ ಮಸಿ: ಸ್ಥಾವರ ಪ್ರಭುತ್ವದ ನಡುವೆ ಕಾಯಕ ಜೀವಿಯ ಘನತೆ
ಮತ್ತೊಂದೆಡೆ, ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರಕ್ಕೇರಿರುವ ಡೊನಾಲ್ಡ್ ಟ್ರಂಪ್ ಅವರು ಪ್ರಥಮ ಬಾರಿಗೆ ಈ ಕಪ್ಪುಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅವರ 2ನೇ ಅವಧಿಯ ಅಧ್ಯಕ್ಷರಾದ ನಂತರ ಮಾಧ್ಯಮಗಳ ವಿರುದ್ಧ ಸಂಘಟಿತ ಸಮರ ಸಾರಿದ್ದಾರೆ. ಪತ್ರಕರ್ತರಿಗೆ ಸರ್ಕಾರಿ ಕಾರ್ಯಕ್ರಮಗಳಿಗೆ ಪ್ರವೇಶ ನಿಷೇಧಿಸುವುದು, ಬೆದರಿಕೆ ಹಾಕುವುದು ಹಾಗೂ ಸಾರ್ವಜನಿಕ ರೇಡಿಯೋ/ಟಿವಿ ಸಂಸ್ಥೆಗಳ ಸ್ವಾಯತ್ತತೆಯನ್ನು ಧ್ವಂಸ ಮಾಡುವ ಕೃತ್ಯಗಳಿಗೆ ಅವರು ಕೈಹಾಕಿದ್ದಾರೆ.
ಟ್ರಂಪ್ ಜೊತೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಟರ್ಕಿ ಅಧ್ಯಕ್ಷ ಎರ್ಡೋಗನ್ ಹಾಗೂ ಗಾಜಾದಲ್ಲಿ ಪತ್ರಕರ್ತರನ್ನು ಹತ್ಯೆ ಮಾಡುತ್ತಿರುವ ಇಸ್ರೇಲ್ ಮಿಲಿಟರಿ ಪಡೆಗಳು ಸಹ ಈ ಕಪ್ಪುಪಟ್ಟಿಯಲ್ಲಿವೆ.
ಈ ಎಲ್ಲ ಕರಾಳ ಬೆಳವಣಿಗೆಗಳ ಪರಿಣಾಮವಾಗಿ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ-2026ರಲ್ಲಿ ಒಟ್ಟು 180 ದೇಶಗಳ ಪೈಕಿ ಭಾರತವು 157ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷಕ್ಕಿಂತ ಭಾರತವು 6 ಸ್ಥಾನಗಳಷ್ಟು ಕೆಳಗೆ ಜಾರಿದ್ದು, ಪ್ರಜಾಪ್ರಭುತ್ವದ ನಾಲ್ಕನೇ ಕಂಭವೆನಿಸಿದ ಮಾಧ್ಯಮ ಕ್ಷೇತ್ರವು ದೇಶದಲ್ಲಿ ಭಾರಿ ಬಿಕ್ಕಟ್ಟು ಮತ್ತು ಬೆದರಿಕೆಯನ್ನು ಎದುರಿಸುತ್ತಿದೆ ಎಂಬುದನ್ನು ವರದಿ ತೆರೆದಿಟ್ಟಿದೆ. ಮಾತ್ರವಲ್ಲದೆ, ಮೋದಿ ಆಡಳಿತದಲ್ಲಿ ‘ಗೋದಿ ಮೀಡಿಯಾ’ ಎಂಬ ಹೊಸ ದಂಡೇ ಹುಟ್ಟಿಕೊಂಡಿದೆ.



