ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (CBSE) 12ನೇ ತರಗತಿ ಮೌಲ್ಯಮಾಪನದಲ್ಲಿ ಆನ್ಲೈನ್ ಸ್ಕ್ರೀನಿಂಗ್ ಮಾರ್ಕಿಂಗ್ (OSM) ವ್ಯವಸ್ಥೆಯನ್ನು ಬಳಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಉತ್ತರ ಪತ್ರಿಕೆಗಳಲ್ಲಿನ ದೋಷಗಳು, ತಪ್ಪಾದ ಮೌಲ್ಯಮಾಪನ ಮತ್ತು ಗುತ್ತಿಗೆ ಪ್ರಕ್ರಿಯೆಗಳಲ್ಲಿನ ಅಕ್ರಮಗಳೆಲ್ಲವೂ ಬೆಳಕಿಗೆ ಬಂದಿದೆ. ಇವೆಲ್ಲವನ್ನು ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ಸಂಘಪರಿವಾರ ‘ಪಾಕಿಸ್ತಾನಿ’ ಎಂಬ ಹಣೆಪಟ್ಟಿ ಕಟ್ಟಿದ್ದಾರೆ. ಹೀಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆದ, ಸಂಘಿಗಳಿಂದ ಪಾಕಿಸ್ತಾನಿ ಎಂದು ಕರೆಸಿಕೊಂಡ CBSE ಮೌಲ್ಯಮಾಪನದ ಬಲಿಪಶು, ವಿದ್ಯಾರ್ಥಿ ವೇದಾಂತ್ ಶ್ರೀವಾಸ್ತವ ಮತ್ತು ಇತರೆ ವಿದ್ಯಾರ್ಥಿಗಳೊಂದಿಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾತುಕತೆ ನಡೆಸಿದ್ದಾರೆ.
ಈ ಮಾತುಕತೆಯ ವಿಡಿಯೋವನ್ನು ರಾಹುಲ್ ಗಾಂಧಿ ಅವರ ಯೂಟ್ಯೂಬ್ ರೀಲ್ಸ್ನಲ್ಲಿ ಅಪ್ಲೋಡ್ ಮಾಡಲಾಗಿದ್ದು ವಿದ್ಯಾರ್ಥಿಗಳು ಸಿಬಿಎಸ್ಇ ಮೌಲ್ಯಮಾಪನದಲ್ಲಾದ ಎಡವಟ್ಟನ್ನು ಉತ್ತರ ಪತ್ರಿಕೆ ತೋರಿಸಿ ವಿವರಿಸಿದ್ದಾರೆ. ಹಾಗೆಯೇ ಸಮಸ್ಯೆಯನ್ನು ಬೊಟ್ಟು ಮಾಡಿದ್ದಕ್ಕೆ ತಮ್ಮನ್ನು ಪಾಕಿಸ್ತಾನಿ, ಭಯೋತ್ಪಾದಕರು ಎಂದು ಕರೆದಿರುವುದರ ಬಗ್ಗೆಯೂ ಮಾತನಾಡಿದ್ದಾರೆ.
ಇದನ್ನು ಓದಿದ್ದೀರಾ? ಇಟಲಿಗರನ್ನು ಕೆರಳಿಸಿದ ಅಂಬಾನಿ ಕುಟುಂಬದ ಕ್ರೂಸ್ ಪಾರ್ಟಿ: ರಾತ್ರೋರಾತ್ರಿ ಪೊಲೀಸರಿಗೆ ದೂರು
ದೆಹಲಿಯ 12ನೇ ತರಗತಿಯ ವಿದ್ಯಾರ್ಥಿ ವೇದಾಂತ್ ಶ್ರೀವಾಸ್ತವ ತನ್ನ ರೋಲ್ ನಂಬರ್ ಅಡಿಯಲ್ಲಿ ಅಪ್ಲೋಡ್ ಮಾಡಲಾದ ಭೌತಶಾಸ್ತ್ರದ ಉತ್ತರ ಪತ್ರಿಕೆ ತನ್ನದಲ್ಲ. ಬೇರೊಬ್ಬರ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿ ತನಗೆ ಅಂಕ ನೀಡಲಾಗಿದೆ ಎಂದು ವೇದಾಂತ್ ದೂರಿದ್ದರು. ಈ ಆರೋಪವು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಸಂಚಲನವನ್ನು ಮೂಡಿಸಿತ್ತು. ಅಷ್ಟರಲ್ಲೇ ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಸಂಘಪರಿವಾರದವರು ಈ 17ರ ಬಾಲಕನನ್ನು ಟ್ರೋಲ್ ಮಾಡಲು ಶುರು ಮಾಡಿದ್ದರು. ಬಾಲಕ ಪಾಕಿಸ್ತಾನಿ, ಭಯೋತ್ಪಾದಕ ಎಂದು ಕರೆದಿದ್ದರು.
ವೇದಾಂತ್ ಮಾತ್ರವಲ್ಲ ಹಲವು ವಿದ್ಯಾರ್ಥಿಗಳು ಮೌಲ್ಯಮಾಪನದಲ್ಲಿನ ವ್ಯತ್ಯಾಸಗಳು ಮತ್ತು ಮರುಪರಿಶೀಲನಾ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮಂಡಳಿಯು ಅಪ್ಲೋಡ್ ಮಾಡಿದ ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳು ತಮ್ಮ ಕೈಬರಹಕ್ಕೆ ಹೊಂದಿಕೆಯಾಗುತ್ತಿಲ್ಲ ಎಂದು ಹಲವರು ಹೇಳಿಕೊಂಡಿದ್ದಾರೆ.
ದೂರುಗಳು ಹೆಚ್ಚಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಸಿಬಿಎಸ್ಇ ಮಂಡಳಿ ವಿದ್ಯಾರ್ಥಿಗಳು ತಮ್ಮ ಮೌಲ್ಯಮಾಪನ ಮಾಡಿದ ಉತ್ತರ ಪ್ರತಿಯನ್ನು ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಪಡೆಯಲು ಅವಕಾಶ ನೀಡಿತ್ತು. ಅದರಂತೆ ದೆಹಲಿ ಮೂಲದ ವೇದಾಂತ್ ಶ್ರೀವಾಸ್ತವ, ತಮ್ಮ ಭೌತಶಾಸ್ತ್ರದಲ್ಲಿ ಪ್ರತಿಯನ್ನು ಕೋರಿದ್ದರು. ಆದರೆ ತಮ್ಮ ಪ್ರತಿಯೇ ಅಲ್ಲ ಎಂದು ತಿಳಿದ ಬಳಿಕ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಭೌತಶಾಸ್ತ್ರ ಪತ್ರಿಕೆಯಲ್ಲಿನ ಕೈಬರಹವನ್ನು, ಇಂಗ್ಲಿಷ್ ಮತ್ತು ಕಂಪ್ಯೂಟರ್ ವಿಜ್ಞಾನ ಉತ್ತರ ಪತ್ರಿಕೆಗಳೊಂದಿಗೆ ಹೋಲಿಸಿ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿದ್ದರು.
“ನಾನು ಇಡೀ ವರ್ಷ ಅಧ್ಯಯನ ಮಾಡಿದೆ. ಈ ಪರೀಕ್ಷೆಗಳನ್ನು ಬರೆಯಲು ನಾನು ನಿದ್ರೆ, ಮನಸ್ಸಿನ ಶಾಂತಿ, ಪ್ರವಾಸ, ಎಲ್ಲವನ್ನೂ ತ್ಯಾಗ ಮಾಡಿದ್ದೇನೆ. ಈಗ ನನ್ನ ನಿಜವಾದ ಭೌತಶಾಸ್ತ್ರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಲಾಗಿದೆಯೇ ಎಂಬುದು ನನಗೆ ತಿಳಿದಿಲ್ಲ. ವಿದ್ಯಾರ್ಥಿಗಳು ನಿಜವಾಗಿಯೂ ಇದಕ್ಕೆ ಅರ್ಹರೇ” ಎಂದು ಪ್ರಶ್ನಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನು ಓದಿದ್ದೀರಾ? ಕೇರಳ ಮಿನಿ ಪಾಕಿಸ್ತಾನ, ಭಯೋತ್ಪಾದಕರು ರಾಹುಲ್, ಪ್ರಿಯಾಂಕಾಗೆ ಮತ ನೀಡುತ್ತಾರೆ: ಮಹಾರಾಷ್ಟ್ರ ಸಚಿವ
ಈ ಪೋಸ್ಟ್ ಶೀಘ್ರದಲ್ಲೇ 3.2 ಮಿಲಿಯನ್ ವೀಕ್ಷಣೆಗಳನ್ನು ದಾಟಿತ್ತು. ಅಷ್ಟರಲ್ಲೇ ವಿದ್ಯಾರ್ಥಿ ಪಾಕಿಸ್ತಾನದವ, ಏಜೆಂಟ್, ದೇಶದ್ರೋಹಿ ಎಂದು ಸಂಘಿಗಳು ಕರೆಯಲು ಶುರು ಮಾಡಿದ್ದರು. ಈ ಆನ್ಲೈನ್ ನಿಂದನೆ ಶೀಘ್ರದಲ್ಲೇ ತೀವ್ರಗೊಳ್ಳುತ್ತಿದ್ದಂತೆ ವಿರೋಧ ಪಕ್ಷದ ನಾಯಕರು ಮತ್ತು ಇತರೆ ವಿದ್ಯಾರ್ಥಿಗಳು ವೇದಾಂತ್ ಬೆಂಬಲಕ್ಕೆ ನಿಂತರು. ಈ ಪೈಕಿ ರಾಹುಲ್ ಗಾಂಧಿ ಕೂಡಾ ಒಬ್ಬರು.
“ಉತ್ತರ ಪತ್ರಿಕೆಯನ್ನು ತಪ್ಪಾಗಿ ಮೌಲ್ಯಮಾಪನಕ್ಕೆ ಬಲಿಪಶುವಾದ 17 ವರ್ಷದ ಬಾಲಕ ನ್ಯಾಯದ ಭರವಸೆಯಲ್ಲಿ ಸಾಮಾಜಿಕ ಮಾಧ್ಯಮದತ್ತ ಮುಖಮಾಡಿದ್ದಾನೆ. ಆದರೆ ಸಹಾಯದ ಬದಲು ನಿಂದನೆಯೇ ಹೆಚ್ಚಾಗಿದೆ. ಬಿಜೆಪಿಯ ಐಟಿ ಸೆಟ್ ಈ ಬಾಲಕನನ್ನು ದೇಶವಿರೋಧಿ ಎಂದು ಕರೆದಿದ್ದಾರೆ. ‘ಸೊರೊಸ್ ಏಜೆಂಟ್’ ಎಂದು ಕರೆದಿದ್ದಾರೆ. ‘ಡೀಪ್ ಸ್ಟೇಟ್’ನ ಭಾಗವಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದರು. ಇನ್ನು ಈಗ ‘ಕಾಕ್ರೋಚ್ ಈಸ್ ಬ್ಯಾಕ್’ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊಸದಾಗಿ ರೂಪುಗೊಂಡ ಕಾಕ್ರೋಚ್ ಜನತಾ ಪಕ್ಷದ ಎಕ್ಸ್ ಖಾತೆಯಲ್ಲೂ ವಿದ್ಯಾರ್ಥಿಗೆ ಬೆಂಬಲ ನೀಡಿ ಪೋಸ್ಟ್ ಮಾಡಲಾಗಿದೆ.




