ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿರುವ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಕಲ್ಮಂಗಿ ಗ್ರಾಮದ ಯಲ್ಲಪ್ಪ ಪರಾರಿಯಾದ ಕೈದಿ. ಇಂದು ಬೆಳಿಗ್ಗೆ ಜೈಲಿನಿಂದ ಹೊರಗ್ಯಾಂಗ್ ಕೆಲಸಕ್ಕೆ ಕರೆದೊಯ್ಯುವ ಸಂದರ್ಭದಲ್ಲಿ ಜೈಲು ಸಿಬ್ಬಂದಿಯ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ.
ಯಲ್ಲಪ್ಪನನ್ನು 2024ರಲ್ಲಿ ರಾಯಚೂರು ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಕಳೆದ ನಾಲ್ಕು ತಿಂಗಳಿಂದ ಜೈಲಿನ ಹೊರಗ್ಯಾಂಗ್ ಕೆಲಸಕ್ಕೆ ತೆರಳುತ್ತಿದ್ದ ಎನ್ನಲಾಗಿದೆ. ಎಂದಿನಂತೆ ಇಂದು ಬೆಳಿಗ್ಗೆಯೂ ಕೆಲಸಕ್ಕೆ ಕರೆದೊಯ್ಯುವಾಗ ಜೈಲು ಸಿಬ್ಬಂದಿಗೆ ಅನುಮಾನ ಬಾರದಂತೆ ಹೊರಬಂದು ಅಲ್ಲಿಂದ ಪರಾರಿಯಾಗಿದ್ದಾನೆ.
ಕೈದಿ ಯಲ್ಲಪ್ಪ ಜೈಲಿನಿಂದ ಹೊರಬಂದು ಪರಾರಿಯಾಗಿರುವ ದೃಶ್ಯಗಳು ಕಾರಾಗೃಹದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಜೈಲು ಸಿಬ್ಬಂದಿ ಕೈದಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ವೀರಶೈವ-ಲಿಂಗಾಯತರು ಯಾವತ್ತಿದ್ದರೂ ಒಂದೇ: ಬಿ.ವೈ.ವಿಜಯೇಂದ್ರ



