ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಮಸೂದೆಗಳ ವಿರುದ್ಧ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಭಾನುವಾರ (ನವೆಂಬರ್ 29) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕ್ಷೇತ್ರ ಮರುವಿಂಗಡಣೆ ಮಸೂದೆ ಬೆಂಬಲಿಸಲು ನನಗೂ ಆಫರ್ ಬಂದಿತ್ತು, ಆದರೆ ಜನರ ಹಿತಾಸಕ್ತಿ ಮುಖ್ಯ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮಹಿಳಾ ಮೀಸಲಾತಿ ಜಾರಿಗೆ ತಮ್ಮ ಸಂಪೂರ್ಣ ಬೆಂಬಲವಿದ್ದರೂ, ಸರ್ಕಾರವು ಕ್ಷೇತ್ರ ಮರುವಿಂಗಡಣೆ ಮಸೂದೆಯ ಮೂಲಕ ಮಹಿಳೆಯರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಮತ್ತು ಅವರನ್ನು ದಾರಿತಪ್ಪಿಸುತ್ತಿದೆ ಎಂದು ಠಾಕ್ರೆ ಆರೋಪಿಸಿದ್ದಾರೆ. ಅಲ್ಲದೆ, ಕ್ಷೇತ್ರ ಮರುವಿಂಗಡಣೆಗಾಗಿ ರಚಿಸಲಾಗಿರುವ ಸಮಿತಿಯ ಸ್ವರೂಪ ಮತ್ತು ಪಾರದರ್ಶಕತೆಯ ಬಗ್ಗೆಯೂ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, “ನಾನು ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸುತ್ತೇನೆ, ಕೇವಲ ಅದರ ಜಾರಿಗಾಗಿ ನೀವು ಪ್ರತ್ಯೇಕ ಮಸೂದೆ ತಂದರೆ ಈಗಲೇ ಬೆಂಬಲಿಸಲು ಸಿದ್ಧನಿದ್ದೇನೆ. ಆದರೆ, ಮಹಿಳೆಯರ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಅವರನ್ನು ಮೂರ್ಖರನ್ನಾಗಿಸುತ್ತಿದ್ದೀರಿ” ಎಂದು ಕಿಡಿಕಾರಿದರು.
ಇದನ್ನೂ ಓದಿ: ಡಿಲಿಮಿಟೇಶನ್ | ಜೆಎಂಎಂ ನಿಲುವು ಅಸ್ಪಷ್ಟ; ‘ಇಂಡಿಯಾ’ ಮೈತ್ರಿಕೂಟಕ್ಕೆ ಮತ್ತೊಂದು ಆಘಾತ?
ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಗಾಗಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಸದಸ್ಯರನ್ನು ಒಳಗೊಂಡ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು, ಇದರಲ್ಲಿ ಇಬ್ಬರು ಬಿಜೆಪಿ ಸರ್ಕಾರವೇ ನೇಮಿಸಿದ ವ್ಯಕ್ತಿಗಳಾಗಿದ್ದಾರೆ. ಈ ಸಮಿತಿಯಲ್ಲಿ ನ್ಯಾಯಾಂಗ ಅಥವಾ ವಿರೋಧ ಪಕ್ಷಗಳ ಪ್ರತಿನಿಧಿಗಳಿಲ್ಲದಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಈ ಪ್ರಸ್ತಾವಿತ ಯೋಜನೆಯು ಉತ್ತರ ಪ್ರದೇಶದಂತಹ ರಾಜ್ಯಗಳ ಪ್ರಾತಿನಿಧ್ಯವನ್ನು ಹೆಚ್ಚಿಸಿ, ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತದ ರಾಜ್ಯಗಳ ರಾಜಕೀಯ ಶಕ್ತಿಯನ್ನು ಕುಂದಿಸಲಿದೆ ಎಂದು ಉದ್ಧವ್ ಠಾಕ್ರೆ ಎಚ್ಚರಿಸಿದ್ದಾರೆ.
ತಮಗೂ ಈ ಮಸೂದೆಯನ್ನು ಬೆಂಬಲಿಸುವಂತೆ ಕರೆಗಳು ಮತ್ತು ಆಫರ್ಗಳು ಬಂದಿದ್ದವು, ಆದರೆ ತಮಗೆ ಮಹಾರಾಷ್ಟ್ರದ ಹಿತಾಸಕ್ತಿಯೇ ಮುಖ್ಯ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ, ಮಸೂದೆಗೆ ಬೆಂಬಲ ಸೂಚಿಸಿರುವ ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಮತ್ತು ಡಿಎಂಕೆ ನಾಯಕ ಎಂ. ಕೆ. ಸ್ಟ್ಯಾಲಿನ್ ಅವರು ದೇಶ ಮತ್ತು ತಮ್ಮ ರಾಜ್ಯಗಳ ಹಿತದೃಷ್ಟಿಯಿಂದ ತಮ್ಮ ನಿರ್ಧಾರವನ್ನು ಪುನರ್ವಿಮರ್ಶಿಸಬೇಕು ಎಂದು ಠಾಕ್ರೆ ಮನವಿ ಮಾಡಿದ್ದಾರೆ.
ನವೆಂಬರ್ 30 ರಿಂದ ಡಿಸೆಂಬರ್ 3ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಲೋಕಸಭೆಯ ಸದಸ್ಯ ಬಲವನ್ನು 850ಕ್ಕೆ ಏರಿಸುವ ಸಂವಿಧಾನ (132ನೇ ತಿದ್ದುಪಡಿ) ಮಸೂದೆ 2026 ಸೇರಿದಂತೆ ಪ್ರಮುಖ ಮಸೂದೆಗಳನ್ನು ಸರ್ಕಾರ ಮಂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಸದನದಲ್ಲಿ ಮಸೂದೆಯ ವಿರುದ್ಧವಾಗಿ ಮತ ಚಲಾಯಿಸುವಂತೆ ಮತ್ತು ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸುವಂತೆ ಶಿವಸೇನೆ (ಯುಬಿಟಿ) ಪಕ್ಷದ ಎಲ್ಲ 9 ಲೋಕಸಭಾ ಸಂಸದರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಉದ್ಧವ್ ಠಾಕ್ರೆ ತಿಳಿಸಿದ್ದಾರೆ.



