ಭಾರತೀಯ ರೈಲ್ವೆಯು ತನ್ನ ಪ್ರಯಾಣ ನಿಯಮಗಳನ್ನು ಕಠಣಿಗೊಳಿಸಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣದ ಖಾತ್ರಿಗಾಗಿ ನಿಯಮಗಳಲ್ಲಿ ಮಾರ್ಪಾಡು ಮಾಡಿರುವುದಾಗಿ ಹೇಳಿಕೊಂಡಿದೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ‘ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಕಾಯ್ದೆ-2026’ರ ಅಡಿಯಲ್ಲಿ ರೈಲು ಮತ್ತು ರೈಲ್ವೆ ಆವರಣದಲ್ಲಿ ಧೂಮಪಾನ ಮಾಡುವುದು, ಅನಧಿಕೃತವಾಗಿ ವ್ಯಾಪಾರ ನಡೆಸುವುದು ಹಾಗೂ ಭಿಕ್ಷಾಟನೆ ಮಾಡುವುದರ ವಿರುದ್ಧ ಹೊಸ ನಿಯಮಗಳನ್ನು ರೂಪಿಸಲಾಗಿದೆ. ಇದನ್ನು 2016ರ ಜೂನ್ 19ರಂದು ಗೆಜೆಟ್ ಅಧಿಸೂಚನೆ ಹೊರಡಿಸುವ ಮೂಲಕ, ಜಾರಿಗೆ ತರಲಾಗಿದೆ ಎಂದು ಹೇಳಿದೆ.
ರೈಲ್ವೆ ಕಾಯ್ದೆಯ ಸೆಕ್ಷನ್ 167ರ ಪ್ರಕಾರ ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣದ ಆವರಣದಲ್ಲಿ ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಹಿಂದೆ ಧೂಮಪಾನಕ್ಕೆ ಕೇವಲ 100 ರೂಪಾಯಿಗಳವರೆಗೆ ಮಾತ್ರ ದಂಡ ವಿಧಿಸುವ ನಿಯಮವಿತ್ತು. ಆದರೆ, ನೂತನ ಕಾಯ್ದೆಯಡಿ ನಿಯಮ ಉಲ್ಲಂಘಿಸುವವರಿಗೆ ತಕ್ಷಣವೇ 2,000 ರೂಪಾಯಿಗಳ ಭಾರಿ ದಂಡವನ್ನು ವಿಧಿಸಲಾಗುತ್ತದೆ.
ಒಂದು ವೇಳೆ ಅಪರಾಧಿಯು ಈ ದಂಡವನ್ನು ಪಾವತಿಸಲು ನಿರಾಕರಿಸಿದರೆ ಅಥವಾ ವಿಫಲವಾದರೆ, ಅವರನ್ನು ಸಕ್ಷಮ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ನ್ಯಾಯಾಲಯದಲ್ಲಿ ಅಪರಾಧ ಸಾಬೀತಾದರೆ ದಂಡದ ಪ್ರಮಾಣವು 5,000 ರೂ.ವರೆಗೆ ಹೆಚ್ಚಾಗಬಹುದು. ಅಲ್ಲದೆ, ನ್ಯಾಯಾಲಯವು ವಿಶೇಷ ಕಾರಣಗಳನ್ನು ದಾಖಲಿಸದ ಹೊರತು ಕನಿಷ್ಠ 2,000 ರೂ. ದಂಡ ವಿಧಿಸುವುದು ಕಡ್ಡಾಯವಾಗಿದೆ. ಜೊತೆಗೆ, ಧೂಮಪಾನ ಮಾಡುವ ವ್ಯಕ್ತಿಯ ರೈಲು ಟಿಕೆಟ್ ಅಥವಾ ಪಾಸ್ ಅನ್ನು ಮುಟ್ಟುಗೋಲು ಹಾಕಿಕೊಳ್ಳುವ ಹಾಗೂ ಅವರನ್ನು ರೈಲಿನಿಂದ ತಕ್ಷಣವೇ ಕೆಳಗಿಳಿಸುವ ಸಂಪೂರ್ಣ ಅಧಿಕಾರವನ್ನು ರೈಲ್ವೆ ಸಿಬ್ಬಂದಿಗೆ ನೀಡಲಾಗಿದೆ.
ಇದೇ ರೀತಿ ರೈಲುಗಳಲ್ಲಿ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಅನಧಿಕೃತವಾಗಿ ವ್ಯಾಪಾರ ಮಾಡುವುದು ಮತ್ತು ಭಿಕ್ಷಾಟನೆ ಮಾಡುವುದನ್ನು ಸೆಕ್ಷನ್ 144ರ ಅಡಿಯಲ್ಲಿ ಕಡ್ಡಾಯವಾಗಿ ನಿಷೇಧಿಸಲಾಗಿದೆ. ರೈಲ್ವೆ ಆಡಳಿತ ಮಂಡಳಿಯಿಂದ ಸೂಕ್ತ ಪರವಾನಗಿ ಪಡೆಯದೆ ಯಾವುದೇ ವಸ್ತುವನ್ನು ಮಾರಾಟ ಮಾಡಲು ಯತ್ನಿಸಿದರೆ ಅಥವಾ ಭಿಕ್ಷಾಟನೆ ನಡೆಸಿದರೆ ಮೊದಲ ಬಾರಿಗೆ 2,000 ರೂಪಾಯಿಗಳ ದಂಡವನ್ನು ವಿಧಿಸಲಾಗುತ್ತದೆ.
ಈ ದಂಡವನ್ನು ಪಾವತಿಸದಿದ್ದರೆ ನ್ಯಾಯಾಲಯದ ಮೂಲಕ ಮೂರು ತಿಂಗಳವರೆಗಿನ ಜೈಲು ಶಿಕ್ಷೆ, 5,000 ರೂ.ವರೆಗೆ ದಂಡ ಅಥವಾ ಇವೆರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ನ್ಯಾಯಾಲಯವು ವಿಶೇಷ ಕಾರಣಗಳನ್ನು ನೀಡದ ಹೊರತು ಕನಿಷ್ಠ ಒಂದು ತಿಂಗಳ ಜೈಲು ಅಥವಾ 2,000 ರೂಪಾಯಿ ದಂಡದ ಶಿಕ್ಷೆ ಅನ್ವಯವಾಗುತ್ತದೆ.
ಈ ಲೇಖನ ಓದಿದ್ದೀರಾ?: ಕಾಂಗ್ರೆಸ್ ಕಾಲಾಳು ಹರಿಪ್ರಸಾದ್ ಈಗ ಪಿಸಿಸಿ ತಲೆಯಾಳು; ಕುತೂಹಲ ಮೂಡಿಸಿದ ನೇಮಕ
ಇದೇ ಅಪರಾಧವನ್ನು ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಬಾರಿ ಪುನರಾವರ್ತಿಸಿದರೆ ಶಿಕ್ಷೆಯು ಒಂದು ವರ್ಷದ ಜೈಲು ಮತ್ತು 5,000 ರೂಪಾಯಿ ದಂಡದವರೆಗೆ ಹೆಚ್ಚಾಗಬಹುದು. ಇಂತಹ ನಿಯಮ ಉಲ್ಲಂಘಿಸುವವರನ್ನು ರೈಲಿನಿಂದ ಅಥವಾ ನಿಲ್ದಾಣದಿಂದ ಹೊರಹಾಕಲು ರೈಲ್ವೆ ಸಿಬ್ಬಂದಿಗೆ ಮುಕ್ತ ಅಧಿಕಾರ ನೀಡಲಾಗಿದೆ.
ಆದಾಗ್ಯೂ, ಹೊಟ್ಟೆ ಪಾಡಿಗಾಗಿ ವ್ಯಾಪಾರ ಮಾಡುವವರ ಮೇಲೆ ಭಾರೀ ದಂಡ ವಿಧಿಸುವ ನಿಯಮದ ವಿರುದ್ಧ ಸಾರ್ವಜನಿಕರು ಮತ್ತು ಬೀದಿ ಬದಿ ವ್ಯಾಪಾರಿಗಳಂತಹ ಬಡ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.



