ಕೋಮುವಾದ- ಹಿಂದುತ್ವವಾದಿಗಳ ನೇರ ಖಂಡನೆಗೆ ಹಿಂಜರಿಯುವ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಪದವಿಗೆ ಏರುತ್ತಿದ್ದಂತೆ, ಆರೆಸ್ಸೆಸ್- ಹಿಂದುತ್ವವಾದ- ಕೋಮುವಾದವನ್ನು ಉಗ್ರವಾಗಿ ವಿರೋಧಿಸುತ್ತ ಬಂದಿರುವ ಬಿ ಕೆ ಹರಿಪ್ರಸಾದ್ ಅವರನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪದವಿಯಲ್ಲಿ ಕೂರಿಸಿರುವ ಬೆಳವಣಿಗೆ ಅತ್ಯಂತ ಕುತೂಹಲಕರ.
ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಪ್ರತಿಪಾದಿಸುತ್ತ ಬಂದಿರುವ ಮೌಲ್ಯಗಳು ಚಿಂತನೆಗಳನ್ನು ಎದೆಗೆ ಹತ್ತಿರವಿಟ್ಟುಕೊಂಡು ಬಂದವರು, ಭುಜಕೀರ್ತಿಯಂತೆ ಧರಿಸಿರುವವರು ಹರಿಪ್ರಸಾದ್.
ಬಿ.ಕೆ.ಹರಿಪ್ರಸಾದ್ ಎಂದಾಕ್ಷಣ ಕಣ್ಣಿಗೆ ಕಟ್ಟುವುದು ಕಾಂಗ್ರೆಸ್ ಪಕ್ಷದ ಕಟ್ಟಾಳುವಿನ ಚಿತ್ರ. ದೈಹಿಕವಾಗಿ ಕೂಡ ಅವರು ಕಟ್ಟಾಳುವೇ ಹೌದು. ಪಾಯಿಜಾಮ-ಅರೆತೋಳಿನ ಜುಬ್ಬಾ ಧರಿಸಿದ ಘನ ಗಂಭೀರ ಮುಖಮುದ್ರೆಯ ವ್ಯಕ್ತಿ. ದೆಹಲಿಯ ಅಧಿಕಾರದ ಮೊಗಸಾಲೆಗಳಲ್ಲಿ ದಶಕಗಳುದ್ದದ ಹೊಕ್ಕು ಬಳಕೆ ಉಳ್ಳವರು. ಸಂಸದೀಯ ಲಾಬಿಗಳಲ್ಲಿ ಚಿರಪರಿಚಿತ ಚಹರೆ. ದೆಹಲಿಯ ಕಾಂಗ್ರೆಸ್ ವಲಯಗಳಲ್ಲಿ ‘ಹರೀಜೀ’, ಉತ್ತರಭಾರತದ ರಾಜ್ಯಗಳ ಕಾಂಗ್ರೆಸ್ಸಿಗರ ಬಾಯಲ್ಲಿ ‘ಹರಿಪ್ರಶಾದ್ ಜೀ’. “ಇದೇನು ಮೋದಿಯಂತೆ ಅರೆತೋಳಿನ ಜುಬ್ಬಾ ಧರಿಸಿದ್ದೀರಲ್ಲಾ…? ಎಂದು ಕೇಳಿದವರಿಗೆ- “ಅವರು ಹಾಕುವುದಕ್ಕೆ ಮೊದಲೇ ಅರೆತೋಳಿನ ಜುಬ್ಬಾ ಧರಿಸಿದ್ದವನು ನಾನು, ನನ್ನನ್ನು ಅವರು ಅನುಕರಿಸಿರಬಹುದೇ ವಿನಾ, ನಾನು ಆತನನ್ನು ಅನುಕರಿಸಿದ್ದಲ್ಲ” ಎಂದು ಎವೆಯಿಕ್ಕದೆ ಹೇಳುವವರು.

This video cannot be played in your browser. Open the video directly

ಎಂಭತ್ತರ ದಶಕದ ಕಡೆಯ ಭಾಗದಲ್ಲಿ ದೆಹಲಿ ರಾಜಕಾರಣಕ್ಕೆ ಅಡಿಯಿಟ್ಟು ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ಭಾಗವೇ ಆಗಿ ಬೆಳೆದವರು ಹರಿ. ಇಂದಿರಾ ಗಾಂಧೀ ಕಾಲದಿಂದ ಮೊದಲುಗೊಂಡು, ರಾಜೀವ್, ನರಸಿಂಹರಾವ್, ಸೀತಾರಾಮ ಕೇಸರಿ, ಸೋನಿಯಾಗಾಂಧೀ ನಂತರ ರಾಹುಲ್ ಗಾಂಧೀ ಕಾಲಕ್ಕೂ ಸೈ ಎನಿಸಿಕೊಂಡಿದ್ದವರು. ಎಐಸಿಸಿ ಕಾರ್ಯದರ್ಶಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ನಾಲ್ಕು ಅವಧಿಗಳುದ್ದಕ್ಕೆ ರಾಜ್ಯಸಭಾ ಸದಸ್ಯರಾಗಿದ್ದವರು. ಅಧಿಕಾರಕ್ಕೆ ದುಂಬಾಲು ಬಿದ್ದವರಲ್ಲ. ಕಾಂಗ್ರೆಸ್ ಸರ್ಕಾರಗಳು ಅಧಿಕಾರದಲ್ಲಿದ್ದಾಗಲೂ ಕಾರ್ಯಕರ್ತರಾಗಿ ದುಡಿದವರು. ಕರ್ನಾಟಕದ ಕಣ್ಣಿಂದ ‘ದೆಹಲಿ’ಯನ್ನೂ, ‘ದೆಹಲಿ’ ಕಣ್ಣಿಂದ ಕರ್ನಾಟಕವನ್ನೂ ನೋಡಿರುವ ಅಪರೂಪದ ಕಾಂಗ್ರೆಸ್ಸಿಗ. ಇಂದಿರಾ-ದೇವರಾಜ ಅರಸು ಕಾಲದ ಕಾಂಗ್ರೆಸ್ಸು ಮತ್ತು ಇಂದಿನ ಕಾಂಗ್ರೆಸ್ಸುಗಳ ನಡುವಣ ಕೊಂಡಿ. ಕಾಂಗ್ರೆಸ್ ಹೈಕಮಾಂಡ್ ನ ಮಿದುಳು ಹೇಗೆ ಕೆಲಸ ಮಾಡುತ್ತದೆಂದು ಸನಿಹದಿಂದ ಬಲ್ಲವರು.
ಪಕ್ಷವನ್ನು ಯುವಪೀಳಿಗೆಯ ನಿಯಂತ್ರಣಕ್ಕೆ ತೆಗೆದುಕೊಳ್ಳಲು ರಾಹುಲ್ ಗಾಂಧೀ 2020ರಲ್ಲಿ ಅಡಿಯಿಟ್ಟ ತರುವಾಯ ರಾಜ್ಯ ರಾಜಕೀಯಕ್ಕೆ ಮರಳಿ ವಿಧಾನಪರಿಷತ್ತನ್ನು ಪ್ರವೇಶಿಸಿದವರು.

ಬಿ.ಕೆ.ಹರಿಪ್ರಸಾದ್ 1979ರಲ್ಲಿ ದೆಹಲಿಗೆ ಬಂದವರು. ಅದ್ಭುತ ವಾಗ್ಮಿಯಲ್ಲದಿದ್ದರೂ ತೂಕದ ಮಾತಾಡುವವರು. ಕಾಂಗ್ರೆಸ್ ಪಕ್ಷದ ಮೂಲಸಿದ್ಧಾಂತಗಳನ್ನು ಅರಿತು ರಕ್ತಗತ ಮಾಡಿಕೊಂಡವರು. ಕಾಂಗ್ರೆಸ್ಸಿನಿಂದ ಇಂತಿಂತಹವರು ಕಡೆಯ ಉಸಿರಿನ ತನಕ ಬಿಜೆಪಿ ಸೇರುವುದಿಲ್ಲ ಎಂದು ಪಟ್ಟಿ ಮಾಡಿದರೆ ಅಂತಹುದೊಂದು ಚುರುಕು ಪಟ್ಟಿಯಲ್ಲಿ ಎದ್ದು ಕಾಣುವ ಹೆಸರುಗಳ ಪೈಕಿ ಹರಿಪ್ರಸಾದರದೂ ಒಂದು.
ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಎಐಸಿಸಿ ಜಂಟಿ ಕಾರ್ಯದರ್ಶಿಯಾಗಿ, ಪ್ರಧಾನಕಾರ್ಯದರ್ಶಿಯಾಗಿ ಪಕ್ಷಕ್ಕಾಗಿ ಹೆಚ್ಚಾಗಿ ತೆರೆಮರೆಯಲ್ಲಿ ದುಡಿದವರು. ಈ ಕಾರಣಕ್ಕಾಗಿ ಉತ್ತರ ಭಾರತವನ್ನು ಅಂಗೈ ಗೆರೆಗಳಂತೆ ಅರಿತವರು. ಎಐಸಿಸಿಯ ಹಲವು ಅಧ್ಯಕ್ಷರ ಸನಿಹದ ಸಂಪರ್ಕ ಹೊಂದಿದ್ದವರು. ಹಲವು ಅವಧಿಗಳ ಕಾಲ ರಾಜ್ಯಸಭಾ ಸದಸ್ಯರಾಗಿ ಬಹುಮುಖ್ಯ ಸ್ಥಾಯೀ ಸಮಿತಿಗಳಲ್ಲಿ ಕೆಲಸ ಮಾಡಿದವರು.
ಎಐಸಿಸಿ ಪ್ರಧಾನಕಾರ್ಯದರ್ಶಿಯಾಗಿ 30 ವರ್ಷಗಳ ಕಾಲ ಮಹಾರಾಷ್ಟ್ರ, ರಾಜಸ್ತಾನ, ಬಿಹಾರ, ಹರಿಯಾಣ, ಮಧ್ಯಪ್ರದೇಶ ಮುಂತಾದ 19 ರಾಜ್ಯಗಳ ಉಸ್ತುವಾರಿ ನಿಭಾಯಿಸಿದ ವಿರಳಾತಿವಿರಳ ಕನ್ನಡಿಗ.
2020ರಲ್ಲಿ ರಾಜ್ಯ ರಾಜಕಾರಣಕ್ಕೆ ಮರಳಿದ ನಂತರವೂ ಹೈಕಮಾಂಡ್ ಹತ್ತಿರದಲ್ಲಿಟ್ಟುಕೊಂಡಿದ್ದ ನಾಯಕ. ಕಳೆದ ಐದಾರು ವರ್ಷಗಳಲ್ಲಿ ಹೈಕಮಾಂಡು ಗೊತ್ತು ಗುರಿಯಲ್ಲದೆ ವ್ಯರ್ಥ ಮಾಡಿದ ಕಾಂಗ್ರೆಸ್ಸಿನ ಕಟ್ಟರ್ ಕಾಲಾಳು.
ದೆಹಲಿಯ ಉಗ್ರ ಚಳಿ, ಭೀಷಣ ಬಿಸಿಲು ಹಾಗೂ ಹಿಂದಿಗೆ ಹೆದರಿ ಹಿಂಜರಿದು ಕರ್ನಾಟಕವೇ ಲೇಸೆಂದು ಕನ್ನಡಮ್ಮನ ಮಡಿಲಲ್ಲೇ ಉಳಿದ ಹೋದ ಪ್ರತಿಭೆಗಳು ಅನೇಕ. ಹರಿಪ್ರಸಾದ್ ಈ ಗುಂಪಿಗೆ ಸೇರದೆ ದೆಹಲಿಯ ಹವೆಯನ್ನು ಪಳಗಿಸಿಕೊಂಡ ರಾಜಕಾರಣಿ.
ರಾಜ್ಯ ರಾಜಕಾರಣಕ್ಕೆ ಮರಳಿದ ನಂತರ ತಮ್ಮ ಸರದಿಗಾಗಿ ಸಹನೆಯಿಂದೇ ಕಾದಿದ್ದ ಹರಿ ಅವರಿಗೆ ಮಂತ್ರಿ ಸ್ಥಾನ ಸಿಗುವ ಪುಕಾರು ನಿಜವಾಗಲಿಲ್ಲ. ಅದಕ್ಕಿಂತ ಹೆಚ್ಚಿನ ಗುರುತರ ಹೊಣೆಯನ್ನೇ ಕಾಂಗ್ರೆಸ್ ಹೈಕಮಾಂಡು ಅವರ ಭುಜಗಳ ಮೇಲಿರಿಸಿತು. ಶಾಂತಿ ಕಾಲದ ಸೇನಾನಿ ಆಗುವುದು ಸುಲಭ ಇದ್ದೀತು. ಆದರೆ ಸಮರಕಾಲದ ಸೇನಾನಿ ಆಗುವುದು ಕಡು ಕಠಿಣ. ಚುನಾವಣೆ ಎರಡೇ ವರ್ಷಗಳಾಚೆ ಬಾಗಿಲು ಬಡಿದಿರುವ ಈ ಹೊತ್ತಿನಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪದವಿ ಹೊಣೆಗಾರಿಕೆಯೂ ಹೌದು, ಅಧಿಕಾರವೂ ಹೌದು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಹರಿಪ್ರಸಾದ್ ಮೂಲ ಕರಾವಳಿ. ಕೋಮು ದಳ್ಳುರಿಯಲ್ಲಿ ಬೇಯುತ್ತ ಬಂದಿರುವ ಸೀಮೆ. ಜನಾರ್ದನ ಪೂಜಾರಿ, ಆಸ್ಕರ್ ಫರ್ನಾಂಡಿಸ್ ಅವರು ಈ ಹಿಂದೆ ಏರಿದ್ದ ಕುರ್ಚಿ ಇದೀಗ ಹರಿಯವರ ಮುಂದಿದೆ.
ಅಷ್ಟೇ ಅಲ್ಲ, ರಾಜ್ಯಾಧಿಕಾರದ ಚುಕ್ಕಾಣಿಯನ್ನು ಸಿದ್ದರಾಮಯ್ಯನವರ ಕೈಯಿಂದ ವಾಪಸು ಪಡೆದು, ಬಲಿಷ್ಠ ಒಕ್ಕಲಿಗ ನಾಯಕ ಡಿ.ಕೆ.ಶಿವಕುಮಾರ್ ಗೆ ಒಪ್ಪಿಸಿದೆ ಹೈಕಮಾಂಡು. ಈ ಸನ್ನಿವೇಶದಲ್ಲಿ ಹಿಂದುಳಿದ ಬಿಲ್ಲವ- ಈಡಿಗ ಜಾತಿಗೆ ಸೇರಿದ ಹರಿಪ್ರಸಾದ್ ಅವರಿಗೆ ಪಕ್ಷದ ಸಾರಥ್ಯ ವಹಿಸಿರುವುದು ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ವಿಶಿಷ್ಟವಾದ ನಡೆ. ಆಕ್ರಮಣಕಾರಿ ಪ್ರವೃತ್ತಿಯ ಒಕ್ಕಲಿಗ ನಾಯಕ ಮುಖ್ಯಮಂತ್ರಿಗೆ ಹೈಕಮಾಂಡು ಸದ್ಯಕ್ಕೆ ತೊಡಿಸಿರುವ ಮುಖ್ಯ ‘ಮೂಗುದಾರ’ ಹರಿಪ್ರಸಾದ್. ವರಿಷ್ಠರು ಎಲ್ಲ ಕಾಲಕ್ಕೂ ನೆಚ್ಚಬಹುದಾದ ನಿಷ್ಠಾವಂತ ಸಿಪಾಯಿ.
ರಾಜ್ಯಾಧಿಕಾರದ ನೊಗಕ್ಕೆ ಹೂಡಲಾಗಿರುವ ಶಿವಕುಮಾರ್ ಒಂದೆಡೆ ಮಠಮಾನ್ಯಗಳು, ಧರ್ಮಗುರುಗಳು, ಧರ್ಮಾಧಿಕಾರಿಗಳನ್ನು ತಲೆಯ ಮೇಲೆ ಹೊತ್ತು ನಡೆಯುವ ಮನುಷ್ಯ. ಮತ್ತೊಂದೆಡೆ ಈ ಎಲ್ಲರನ್ನೂ ವೈಚಾರಿಕ ದೃಷ್ಟಿಕೋನದಿಂದ ನೋಡಬಲ್ಲ ನಾರಾಯಣಗುರು, ಅಂಬೇಡ್ಕರ್, ಪೆರಿಯಾರ್ ವಾದಿ ಹರಿಪ್ರಸಾದ್. ಆರೆಸ್ಸೆಸ್ ನ ಕಡುವಿರೋಧಿ. ಕಟು ಟೀಕಾಕಾರ. ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳು, ಸಿದ್ಧಾಂತಗಳನ್ನು ರಾಹುಲ್ ಗಾಂಧೀ ಅವರಷ್ಟು ಉಗ್ರವಾಗಿ ವಿಮರ್ಶಿಸಿದ ಮತ್ತೊಬ್ಬ ನೇತಾರನನ್ನು ಕಾಂಗ್ರೆಸ್ಸು ನೆಹರೂ ನಂತರ ಕಂಡಿರಲಿಲ್ಲ. ಹಿಂದುತ್ವದ ವಿರುದ್ಧ ಅವರ ಸೈದ್ಧಾಂತಿಕ ನಿಲುವು ನಿಚ್ಚಳ. ರಾಹುಲ್ ಅವರಿಗೆ ರಾಜ್ಯಮಟ್ಟದಲ್ಲಿ ಹೆಗಲೆಣೆಯಾಗಬಲ್ಲ ಪಿಸಿಸಿ ಅಧ್ಯಕ್ಷ ಹರಿಪ್ರಸಾದ್. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳು ಹತ್ತಿರದಲ್ಲಿರುವ ಈ ಹಂತದಲ್ಲಿ ಆಕ್ರಮಣಕಾರಿ ಶಿವಕುಮಾರ್- ಹರಿಪ್ರಸಾದ್ ಜೊತೆಗೆ ಗಮನ ಸೆಳೆಯುವ ಮತ್ತೊಬ್ಬ ಆಕ್ರಮಣಕಾರಿ ನಾಯಕ ಪ್ರಿಯಾಂಕ್ ಖರ್ಗೆ. ಆರೆಸ್ಸೆಸ್-ಕೋಮುವಾದದ ವಿರುದ್ಧ ಎತ್ತರೆತ್ತರಕ್ಕೆ ನಿರಂತರ ಕೇಳಿಬಂದಿರುವ ವಿರೋಧದ ದನಿ. ಅವರ ಕೈಗೆ ಗೃಹಖಾತೆಯನ್ನು ಒಪ್ಪಿಸಿದ್ದು ಅತ್ಯಂತ ಸ್ವಾಗತಾರ್ಹ ಕ್ರಮ. ಹಿಂದುತ್ವವಾದಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ ಕ್ರಮವಿದು. ನವಪೇಜಾವರರು ಈ ಹೊಸ ಗೃಹಮಂತ್ರಿಯ ಮನೆಗೆ ತೆರಳಿ ಪೂಜೆ ಮಾಡಿಸಿಕೊಳ್ಳುವುದು ಅಸಾಧ್ಯ ಎಂಬುದು ಅಭಿನಂದನಾರ್ಹ. ಆರೆಸ್ಸೆಸ್ ವಿರುದ್ಧ ಹೊಸ ಗೃಹಮಂತ್ರಿ ಎತ್ತಿರುವ ತಕರಾರು ಇದೀಗ ದೇಶಮಟ್ಟದಲ್ಲಿ ಪ್ರತಿಧ್ವನಿಸಿರುವುದು ಮಾರ್ಮಿಕ ವಿದ್ಯಮಾನ. ವಾದಕ್ಕೆ ಪ್ರತಿವಾದವನ್ನು ಕಟ್ಟಿ, ಗೋದಿ ಮೀಡಿಯಾದ ಕುತರ್ಕದ ಮುಂದೆ ಸೋಲದೆ ಅದನ್ನು ಮೆಟ್ಟಿ ನಿಲ್ಲುವ ಅಪರೂಪದ ಛಾತಿ ಕಿರಿ ಖರ್ಗೆಯವರದು. ಹಿರಿಯ ವರ್ಚಸ್ವೀ ನಾಯಕ ಸಿದ್ದರಾಮಯ್ಯನವರ ಮಾರ್ಗದರ್ಶನದಲ್ಲಿ ಈ ಮೂವರು ನಾಯಕರು ಮೋದಿ ಅಮಿತ್ ಶಾ ವಿರೋಧವನ್ನು ಪ್ರತಿರೋಧಿಸಬಲ್ಲ ಎದೆಗಾರಿಕೆಯವರು. ಪಕ್ಷಗಳನ್ನು ಒಡೆಯುವ ಬಿಜೆಪಿ ಕುತಂತ್ರ ಮತ್ತು ದಿನ ಬೆಳಗಾದರೆ ಪಕ್ಷಾಂತರಿಗಳ ಅವಕಾಶವಾದಿತನ ಮುಗಿಲು ಮುಟ್ಟಿರುವ ದಿನಗಳಲ್ಲಿ ಈ ನಾಲ್ವರೂ ನಾಯಕರ ಪಕ್ಷ ನಿಷ್ಠೆ ಪ್ರಶ್ನಾತೀತ.
‘ಪಕ್ಷ ಕಟ್ಟಬೇಕೆನ್ನುವವರು ನನ್ನ ಜೊತೆ ಬನ್ನಿ, ಅಧಿಕಾರ ಬೇಕೆನ್ನುವವರು ಡಿಕೆಶಿ ಜೊತೆ ಹೋಗಿ. ಕಾರ್ಯಕರ್ತರಿಗೆ ಭರವಸೆ ಕೊಡುತ್ತೇನೆ, ಅವರಿಗೆ ಏನೇ ಆದರೂ ಅವರ ಜೊತೆ ಅವರ ಜೊತೆ ನಿಲ್ಲುತ್ತೇನೆ’…ಎಂದು ನೇಮಕವಾದ ಮರುದಿನವೇ ಗುಡುಗಿದವರು ಪ್ರದೇಶ ಕಾಂಗ್ರೆಸ್ ಪಕ್ಷದ ಹೊಸ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್. ಅವರ ಈ ಟಿಪ್ಪಣಿ ಖಡಕ್ಕು ಸಂದೇಶ ರವಾನಿಸಿದೆ.
ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಯ ಸಂಬಂಧದಲ್ಲಿ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳ ಕುಟುಂಬದ ವಿರುದ್ಧ ಬಂದ ಆಪಾದನೆಗಳ ತನಿಖೆಗೆ ಸಿದ್ದರಾಮಯ್ಯ ಸರ್ಕಾರ ಎಸ್.ಐ.ಟಿ. ರಚಿಸಿದ ಕುರಿತು ಅಂದಿನ ಉಪಮುಖ್ಯಮಂತ್ರಿ ಶಿವಕುಮಾರ್ ಅವರಿಗೆ ಅಸಮಾಧಾನವಿತ್ತು. ತನಿಖೆಯ ಹಿಂದೆ ಮುಂದೆ ಧರ್ಮಸ್ಥಳದ ದೇವಾಲಯ ಮತ್ತು ಧರ್ಮಾಧಿಕಾರಿಯವರನ್ನು ಹಲವು ಸಲ ಭೇಟಿ ಮಾಡಿದ್ದ ಶಿವಕುಮಾರ್ ಅವರು ಒಮ್ಮೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ದೇವರ ದರ್ಶನ ಮತ್ತು ಧರ್ಮಾಧಿಕಾರಿ ಭೇಟಿಗೆ ಕರೆದೊಯ್ದಿದ್ದರು. ‘ನನ್ನಂತಹ ಸಾವಿರಾರು ಜನ ಡಿ.ಕೆ.ಶಿವಕುಮಾರರು ನಿಮ್ಮ ಜೊತೆ ನಿಲ್ಲಲು ಸಿದ್ಧರಿದ್ದಾರೆ. ನನ್ನಂಥ ನೂರಾರು ಡಿ.ಕೆ. ಶಿವಕುಮಾರ್ ಈ ಕ್ಷೇತ್ರವನ್ನ ಮತ್ತು ನಿಮ್ಮನ್ನ ರಕ್ಷಣೆ ಮಾಡೋ ಕೆಲಸ ಮಾಡ್ತಾರೆ. ಚಿಂತೆ ಮಾಡದೆ ಆರೋಗ್ಯ ಕಾಪಾಡಿಕೊಂಡು ಸೇವೆ ಮುಂದುವರೆಸಿ’ ಎಂದು ಉಪಮುಖ್ಯಮಂತ್ರಿಯಾಗಿ ಸಾರಿ ಹೇಳಿದ್ದರು. ಮೊನ್ನೆ ಮೊನ್ನೆ ಅಜ್ಜಯ್ಯನ ಫೋಟೋವನ್ನು ಪ್ರಮಾಣವಚನದ ವೇದಿಕೆಗೇರಿಸಿದ್ದರು ಕೂಡ. ಆದರೆ ಹರಿಪ್ರಸಾದ್ ಮತ್ತು ಪ್ರಿಯಾಂಕ್ ಇಬ್ಬರೂ ಈ ಪ್ರವೃತ್ತಿಯಿಂದ ಆರೋಗ್ಯಕರ ದೂರ ಕಾಪಾಡಿಕೊಂಡಿರುವವರು. ಪಕ್ಷದೊಳಗಿನ ವಿರೋಧವನ್ನು ಲೆಕ್ಕಿಸದೆ ಧರ್ಮಸ್ಥಳದ ವ್ಯಾಪ್ತಿಯಲ್ಲಿ ನಡೆದಿವೆಯೆನ್ನಲಾದ ಅಧರ್ಮ-ಅತ್ಯಾಚಾರಗಳನ್ನು ಎಸ್.ಐ.ಟಿ. ತನಿಖೆಗೆ ಗುರಿಪಡಿಸಿದವರು ಸಿದ್ದರಾಮಯ್ಯ.
ಆರೆಸ್ಸೆಸ್ ನ ಎರಡು ಬಣಗಳ ನಡುವೆ ನಡೆದಿರುವ ಘರ್ಷಣೆಯಿದು. ಎಸ್.ಐ.ಟಿ ತನಿಖೆಯಲ್ಲಿ ತಪ್ಪಿಲ್ಲ ಎಂಬುದು ಹರಿಪ್ರಸಾದ್ ವ್ಯಾಖ್ಯಾನ. ಲಕ್ಷಾಂತರ ಜನರು ಆ ಕ್ಷೇತ್ರದ ಮೇಲೆ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಈ ಭಕ್ತಾದಿಗಳ ಭಾವನೆಗೆ ಘಾಸಿಯಾಗಬಾರದು, ಹಾಗಾಗಿ, ಆದಷ್ಟು ಬೇಗ ಎಸ್ಐಟಿ ತನ್ನ ವರದಿಯನ್ನು ನೀಡಿದರೆ ಎಲ್ಲಾ ಗೊಂದಲಗಳು ದೂರವಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದರು.

ದಕ್ಷಿಣ ಕನ್ನಡ ಮೂಲದ ಹರಿಪ್ರಸಾದ್ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಓದಿದ್ದು ಮಲ್ಲೇಶ್ವರದ ಎಂ.ಇ.ಎಸ್.ಕಾಲೇಜಿನಲ್ಲಿ. ವಿದ್ಯಾರ್ಥಿ ಸಂಘದ ಚುನಾವಣೆಗಳ ಮೂಲಕ ರಾಜಕೀಯಕ್ಕೆ ಕಾಲಿಟ್ಟವರು.
ಅಂಬೇಡ್ಕರ್, ಪೆರಿಯಾರ್, ತೀವ್ರ ಕೇಸರೀಕರಣ ಕಂಡ ರಾಜ್ಯದ ಕರಾವಳಿ ಜಿಲ್ಲೆಯ ಕೋಮುವಾದಿ ಘರ್ಷಣೆಗಳು ಹತ್ಯೆಗಳ ನಂತರ ಅಲ್ಲಿಗೆ ಭೇಟಿ ನೀಡಿ ಅಭಯ ನೀಡಿದವರು. ಭಯ ಅಭದ್ರತೆಯ ವಿರುದ್ಧ ಗುರಾಣಿಯಾದವರು. ಕರಾವಳಿ ಸೀಮೆಗೆ ದಕ್ಷ ಮತ್ತು ಪ್ರಾಮಾಣಿಕ ಖಡಕ್ ಅಧಿಕಾರಿಗಳನ್ನು ನೇಮಕ ಮಾಡುವಂತೆ ಮುಖ್ಯಮಂತ್ರಿಯವರ ಮೇಲೆ ಒತ್ತಡ ತಂದವರು.
ಬಹುತೇಕ ರಾಜಕಾರಣಿಗಳು ಓದುವ ಹವ್ಯಾಸದಿಂದ ಸಾವಿರಾರು ಮೈಲಿ ದೂರ. ಹರಿಪ್ರಸಾದ್ ಈ ಮಾತಿಗೆ ಹೊರತಾದವರು. ದೆಹಲಿ ಮತ್ತು ಬೆಂಗಳೂರಿನ ನಿವಾಸದ ಅವರ ಸಮೃದ್ಧ ಗ್ರಂಥಾಲಯ ಅವರ ನಂಬಿಕೆ ಸಿದ್ಧಾಂತಗಳ ಪ್ರತಿಬಿಂಬ.
ದಲಿತರು, ಬಸ್ತರಿನ ಆದಿವಾಸಿಗಳ ಮೇಲೆ ನಡೆದ ದೌರ್ಜನ್ಯಗಳು, ಹಿಂದುಳಿದವರು ಎದುರಿಸಿದ ಅನ್ಯಾಯಗಳು, ಅವಮರ್ಯಾದೆ ಹತ್ಯೆಗಳು, ರೈತರ ಆತ್ಮಹತ್ಯೆಗಳು, ಮಾನವ ಮಲ ಬಳಿಯುವವರು, ಮುಸಲ್ಮಾನರನ್ನು ಜಜ್ಜಿ ಕೊಲ್ಲುವ ಕೃತ್ಯಗಳೇ ಮುಂತಾದ ಜನಮುಖೀ ಸಂಗತಿಗಳ ಕುರಿತು ಅವರು ರಾಜ್ಯಸಭೆಯಲ್ಲಿ ಮಾತಾಡಿದ್ದಾರೆ. ಪ್ರಶ್ನೆ ಕೇಳಿದ್ದಾರೆ. ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಸದನದಲ್ಲಿ ಅವರ ಹಾಜರಾತಿ ಅತ್ಯುತ್ತಮ ಎನ್ನಬಹುದಾದದ್ದು.
ಈ ಪತ್ರಕರ್ತನ ಜೊತೆ ದೆಹಲಿ ರಾಜಕಾರಣದಲ್ಲಿ ಕನ್ನಡಿಗರು ವಿಷಯ ಕುರಿತು ಅವರು ವರ್ಷಗಳ ಹಿಂದೆ ಹಂಚಿಕೊಂಡಿದ್ದ ಅನಿಸಿಕೆಗಳು ಮತ್ತೆ ಮತ್ತೆ ಮೆಲುಕು ಹಾಕಬೇಕಾದಂತಹವು-
“ಹೊಟ್ಟೇಲಿ ಬೆಂಕಿ ಇದ್ರೆ ನೋವಿದ್ರೆ, ಅಧ್ಯಯನ ಮಾಡಿ ತಿಳಿದುಕೊಂಡಿದ್ರೆ ಸಂಸತ್ತಿನಲ್ಲಿ ಮಾತಾಡಬಹುದು. ನಾವು ಮಾತಾಡದಿದ್ದರೆ ಉತ್ತರದವರು ನಮ್ಮನ್ನು ಲೆಕ್ಕಕ್ಕೆ ಇಡೋದಿಲ್ಲ. ಲೋಕಸಭೆ ಅಂದ್ರೆ ದುಡ್ಡಿರೋರು, ಬಲಾಢ್ಯರನ್ನು ಕಳಿಸಿಬಿಡ್ತಾರೆ. ಅವರು ಪಾರ್ಲಿಮೆಂಟಲ್ಲಿ ದನಿಯೆತ್ತಿ ಮಾತಾಡುವ ಕುರಿತು ಅವರು ತಲೇನೆ ಕೆಡಿಸಿಕೊಳ್ಳಲ್ಲ. ತಮಿಳುನಾಡು,ಕೇರಳದವರು ಮಾತಾಡ್ತಾರೆ. ಕೆಲ್ಸ ಮಾಡ್ತಾರೆ, ಚೆನ್ನಾಗೂ ಮಾಡ್ತಾರೆ. ರೇಲ್ವೆ ಸಚಿವರಾಗಿ ಜಾಫರ್ ಷರೀಫ್ ಅವರು ಮೀಟರ್ ಗೇಜನ್ನ ಯೂನಿಗೇಜ್ ಮಾಡಿದ್ದೂ ಕರ್ನಾಟಕಕ್ಕೆ ಬಹಳ ಲಾಭ ಆಯಿತು. ಕರ್ನಾಟಕ ಮತ್ತು ರಾಜಸ್ತಾನ ಬಿಟ್ಟರೆ ಉಳಿದೆಲ್ಲ ಕಡೆ ಮೊದಲಿನಿಂದಲೇ ಬ್ರಾಡ್ ಗೇಜ್ ಇತ್ತು. ಕರ್ನಾಟಕಕ್ಕೆ ಮಾಡಲು ಹೊರಟರೆ ಸ್ವಂತ ರಾಜ್ಯದ ಪಕ್ಷಪಾತದ ಆರೋಪ ಬರ್ತದೆಂದು ಯೂನಿಗೇಜ್ ಹೆಸರು ಮುಂದೆ ಮಾಡಿದರು. ಷರೀಫ್ ಅವರು ಮಾಡಿದಷ್ಟು ಕೆಲಸವನ್ನು ಬೇರೆ ಯಾರೂ ಕರ್ನಾಟಕಕ್ಕೆ ಮಾಡಲಿಲ್ಲ. ಅಲ್ಪಸಂಖ್ಯಾತರು ಅಂತ ಅವರಿಗೆ ಯಾರೂ ಕ್ರೆಡಿಟ್ಟೂ ಕೊಡಲಿಲ್ಲ. ಕೆಂಗಲ್ ಹನುಮಂತಯ್ಯ, ಸಿ.ಎಂ.ಪೂಣಚ್ಚ ರೇಲ್ವೆ ಸಚಿವರಾಗಿದ್ದರು. ಆದರೆ ಇದ್ರು, ಹೋದರು ಎಂಬಂತಾಗಿತ್ತು. ಕರ್ನಾಟಕಕ್ಕೆ ಕೆಲಸ ಮಾಡಬೇಕೆಂಬ ಇಚ್ಛಾಶಕ್ತಿ ಇರಬೇಕು. ಪಾರ್ಲಿಮೆಂಟಲ್ಲಿ ಕುಳಿತು ಪಕ್ಷದ ಪರವಾಗಿ ಕೈಯೆತ್ತಿ ಬರ್ತೀನಿ ಸಾಕು ಅಂದ್ರೆ ಯಾರೇನು ಮಾಡಲಾದೀತು? ಕರ್ನಾಟಕದ ಬಲಿಷ್ಠ ಸಮುದಾಯಗಳ ರಾಜಕಾರಣಿಗಳು ತಮಗೆ ಅಧಿಕಾರ ಸಿಕ್ಕಾಗ ಸ್ವಾರ್ಥ ಬಿಟ್ಟು ಬೇರೇನೂ ಮಾಡಲಿಲ್ಲ”.

“ಈಗ ಹೊಸ ಪಾರ್ಲಿಮೆಂಟ್ ಕಟ್ಟಡದಲ್ಲಿ ಸೆಂಟ್ರಲ್ ಹಾಲ್ ಇಲ್ಲ. ಹಳೆಯ ಕಟ್ಟಡದ ಸೆಂಟ್ರಲ್ ಹಾಲ್ ನಲ್ಲಿ ಕಾಫೀ, ನಾಲ್ಕು ಹೋಳು ಬ್ರೆಡ್ ತಿಂದು ಹೋಗೋ ಕೆಲಸಕ್ಕೆ ಬಹಳ ಮಂದಿ ಸೀಮಿತ ಆಗಿದ್ರು. ಸತತವಾಗಿ ಸುಮಾರು 40 ವರ್ಷ ಕಾಂಗ್ರೆಸ್ ನಿಂದ 25-26 ಮಂದಿ ಲೋಕಸಭೆಗೆ ಆಯ್ಕೆ ಆಗಿ ಬರ್ತಿದ್ದರು. ಸಮರ್ಥಿಸಿಕೊಂಡು ಕೆಲಸ ಮಾಡಬಹುದಿತ್ತು. ಬಿ.ಶಂಕರಾನಂದ್, ಡಾ.ವಿ.ಕೆ.ಆರ್.ವಿ ರಾವ್, ಎಂ.ವಿ.ಕೃಷ್ಣಪ್ಪ ತುಸು ಕೆಲಸ ಮಾಡಿದರು. ಆದರೆ ಷರೀಫ್ ಕೆಲಸ ಅಸಾಧಾರಣ. ಮೊದಲೆಲ್ಲ ದೆಹಲಿಗೆ ಬರಬೇಕೆಂದರೆ ಚೆನ್ನೈಗೆ ಹೋಗಿ ರಾತ್ರಿವರೆಗೆ ಕಾದು ತಮಿಳುನಾಡು ಎಕ್ಸ್ ಪ್ರೆಸ್ ಹಿಡಿದು ದೆಹಲಿಗೆ ಬರಬೇಕಿತ್ತು. ಕರ್ನಾಟಕದಿಂದ ನೇರವಾಗಿ ದೆಹಲಿಗೆ ರೈಲು ಸಂಚಾರ ಇರಲಿಲ್ಲ. ಷರೀಫ್ 1980-81ರಲ್ಲಿ ನೇರ ರೈಲು ವ್ಯವಸ್ಥೆ ಮಾಡಿದರು. ಯಲಹಂಕಕ್ಕೆ ವ್ಹೀಲ್ ಅಂಡ್ ಆಕ್ಸಲ್ ಪ್ಲ್ಯಾಂಟ್ ತಂದ್ರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ್ರೆ ಸಾಕು. ಪಾರ್ಲಿಮೆಂಟಿಗೆ ಯಾರಾದರೂ ಆರಿಸಿ ಹೋಗಲಿ ಎಂದು ನಮ್ಮವರು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಸರಿಯಾದವರನ್ನು ಆರಿಸಿ ಕಳಿಸಲ್ಲ. ಕೇರಳದ್ದು ಸೈದ್ಧಾಂತಿಕ ಹೋರಾಟ, ತಮಿಳುನಾಡಿಗೆ ಏನಾದರೂ ಕೆಲಸ ಮಾಡಬೇಕು ಎಂಬುದು ತಮಿಳು ಸಂಸದರ ಹೋರಾಟ. ನಮ್ಮದು ಎರಡೂ ಇಲ್ಲ”.
“ತಮಿಳುನಾಡಿನವರು ತಮಿಳು ಮತ್ತು ಇಂಗ್ಲಿಷಲ್ಲಿ ಮಾತಾಡ್ತಾರೆ. ನಮ್ಮವರು ಬಾಯೇ ಬಿಡಲ್ಲ ಅಂತಾರೆ. ಕಾಂಗ್ರೆಸ್ ಮೂರು ಸಲ ಹೋಳಾದದ್ದು ಕರ್ನಾಟಕದವರಿಂದಲೇ. ನಿಜಲಿಂಗಪ್ಪನವರು, ಕಾಸು ಬ್ರಹ್ಮಾನಂದರೆಡ್ಡಿ ರೆಡ್ಡಿ ಕಾಂಗ್ರೆಸ್ ಆಗಿದ್ದರ ಹಿಂದೆ ಕೆ.ಎಚ್.ಪಾಟೀಲ್ ಮತ್ತು ಎಸ್.ಎಂ.ಕೃಷ್ಣ ಇದ್ದರು. ದೇವರಾಜ ಅರಸರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ ತಮಗೆ ಆದ ಅವಹೇಳನಕ್ಕೆ ಸಿಡಿದು ನಿಂತರು. ಬಲಿಷ್ಠ ಜಾತಿಗಳವರಿಗೆ ಅವಹೇಳನದ ಪ್ರಶ್ನೆ ಇರಲಿಲ್ಲ. ಕರ್ನಾಟಕದಿಂದ ಸಂಸತ್ತಿಗೆ ಆರಿಸಿ ಹೋದ ಬಲಿಷ್ಠ ಸಮುದಾಯಗಳು ತಮ್ಮ ಪ್ರಾಬಲ್ಯ ಉಳಿಸಿಕೊಳ್ಳುವುದಕ್ಕೆ ಪ್ರಾಶಸ್ತ್ಯ ನೀಡಿದರೇ ವಿನಾ ಕರ್ನಾಟಕಕ್ಕೆ ಕೆಲಸ ಮಾಡಲು ಅಲ್ಲ. ಜೊತೆಗೆ ಇಂಗ್ಲಿಷಲ್ಲಿ ಮಾತಾಡಲು ಬಾರದೆ, ಕನ್ನಡದಲ್ಲಿ ಮಾತಾಡಲಾಗದೆ ಕೀಳರಿಮೆ ಅನುಭವಿಸಿ ಬಾಯಿ ಹೊಲಿದುಕೊಂಡವರೇ ಹೆಚ್ಚು. ಮಾರ್ಗರೆಟ್ ಆಳ್ವ ಒಳ್ಳೆಯ ಸಂಸದೀಯ ಪಟು. ಜನಾರ್ದನ ಪೂಜಾರಿಯವರು ಬ್ಯಾಂಕ್ ಲೋನ್ ಮನ್ನಾ ಮಾಡಿದರು. ವೈಯಕ್ತಿಕವಾಗಿ ಭ್ರಷ್ಟರಿರಲಿಲ್ಲ. ನಮ್ಮ ಸದಸ್ಯರ ಹಿಂಜರಿಕೆಯ ಲಾಭವನ್ನು ಪಡೆದ ದೆಹಲಿ ನಮ್ಮನ್ನು ಗದರಿಸಿಕೊಂಡೋ, ಅದುಮಿಟ್ಟುಕೊಂಡೋ ಇದ್ದರು. ಕಳೆದ ಹತ್ತು ವರ್ಷಗಳಿಂದಲಂತೂ ಅಭಿವೃದ್ಧಿಯ ಕುರಿತು ಮಾತೇ ಇಲ್ಲ, ಕೋಮು ಧ್ರುವೀಕರಣದ ಆರ್ಭಟವೇ ಎಲ್ಲ”.

“ನೆಹರೂ ಕಾಲದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಹಲವಾರು ಕೇಂದ್ರ ಒಡೆತನದ ಸಾರ್ವಜನಿಕ ಉದ್ಯಮಗಳು ಸ್ಥಾಪನೆಯಾದವು. ಬೆಂಗಳೂರು ನಗರ ಆರಂಭದಲ್ಲಿ ಟಿಪ್ಪು ಸುಲ್ತಾನ್ ಕಾರಣ ರೇಷ್ಮೆ ನಗರವಾಗಿತ್ತು, 1907ರಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಬಂದು ಸೈನ್ಸ್ ಸಿಟಿ ಆಯ್ತು. ಸ್ವಾತಂತ್ರ್ಯ ಬಂದ ಹೊಸತರಲ್ಲಿ ಸಾರ್ವಜನಿಕ ಉದ್ಯಮ ವಲಯದ ಔದ್ಯೋಗಿಕ ನಗರ ಆಯ್ತು. ಆನಂತರ ಹಾಲಿನ ನಗರ, ಸಿಲಿಕಾನ್ ಸಿಟಿ ಆಯ್ತು. ಸಿಲಿಕಾನ್ ಸಿಟಿ ಆಗಲು ಯಾರದೂ ಕೊಡುಗೆ ಇರಲಿಲ್ಲ. ತಾನಾಗಿಯೇ ಬೆಳೆಯಿತು” ಎಂದಿದ್ದ ಹರಿಪ್ರಸಾದ್ ಅವರಿಗೆ ಎಲ್ಲರನ್ನೂ ಜೊತೆಗೆ ಕರೆದೊಯ್ಯಬೇಕಾದ ಹೊಣೆಗಾರಿಕೆ ಹೆಗಲೇರಿದೆ.
ಆಳುವ ಪಕ್ಷಗಳು ಅವಧಿ ಮುಗಿಯುತ್ತ ಬಂದಂತೆ ಚುನಾವಣೆಗಳಲ್ಲಿ ಮತದಾರರಿಂದ ಆಡಳಿತವಿರೋಧಿ ಭಾವನೆಯನ್ನು ಎದುರಿಸುವುದು ಸರ್ವೇಸಾಮಾನ್ಯ. ಆದರೆ ಮೋದಿ-ಶಾ ಬಿಜೆಪಿ ಈ ಪ್ರವೃತ್ತಿಯನ್ನು ಕಟ್ಟಿ ಹಾಕಿ ಪುನಃ ಅಧಿಕಾರ ಹಿಡಿಯತೊಡಗಿದೆ. ಕಾಂಗ್ರೆಸ್ ಸರ್ಕಾರಗಳು ಈ ಮಾತಿಗೆ ಹೊರತು. ಆಡಳಿತವಿರೋಧಿ ಭಾವನೆ ಮೆಟ್ಟುವ ಛಾತಿಯನ್ನು ಅವು ತೋರಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ವರಿಷ್ಠರು ನಡುದಾರಿಯಲ್ಲಿ ನಡೆಸಿರುವ ಬದಲಾವಣೆಗಳು ಆಡಳಿತ ವಿರೋಧಿ ಭಾವನೆಯನ್ನು ಕಟ್ಟಿ ಹಾಕಬಲ್ಲವೇ ಕಾದು ನೋಡಬೇಕಿದೆ. ಪಕ್ಷ ಮತ್ತು ಸರ್ಕಾರ ಹಾಗೂ ಹಿರಿಯ ನಾಯಕರು ಕೂಡಿ ಎದುರಿಸಬೇಕಿರುವ ಸವಾಲಿದು. ಹರಿಪ್ರಸಾದ್ ಏಕಾಂಗಿಯಾಗಿ ನಡೆಸಬೇಕಿರುವ ಕಸರತ್ತು ಅಲ್ಲ.
ಇದನ್ನೂ ಓದಿ ಈ ದಿನ ಸಂಪಾದಕೀಯ | ನೀಟ್ ಪರೀಕ್ಷಾ ಅಕ್ರಮ-ವಿದ್ಯಾರ್ಥಿಗಳ ಆತ್ಮಹತ್ಯೆ, ಚಿಂತೆಯೇ ಇಲ್ಲದ ಪ್ರಧಾನಿ!
ತೀವ್ರ ಬಿಕ್ಕಟ್ಟುಗಳ ಭಾರಗಳಡಿ ದೇಶದ ಜನತಂತ್ರ ನಲುಗಿರುವ, ಜನಕೋಟಿ ಸಂಕಟಗಳ ಸರಮಾಲೆಯಡಿ ನರಳುತ್ತಿರುವ ಕಾಲಮಾನದಲ್ಲಿ ಹರಿಪ್ರಸಾದ್ ಜವಾಬ್ದಾರಿ ಅತ್ಯಂತ ಗುರುತರ. ಪ್ರತಿಪಕ್ಷಗಳು ಮತ್ತು ಅವುಗಳ ನಾಯಕರ ದೌರ್ಬಲ್ಯಗಳನ್ನೇ ಎಣಿಸಿ ಅವುಗಳ ಮೇಲೆ ದಾಳಿ ನಡೆಸಲು ಇದು ಕಾಲವಲ್ಲ.

ಡಿ ಉಮಾಪತಿ
ʼಈ ದಿನ.ಕಾಮ್ʼನ ಗೌರವ ಸಂಪಾದಕರು. ʼದೆಹಲಿ ನೋಟʼ, ʼಪದ ಕುಸಿಯೇ ನೆಲವಿಲ್ಲʼ ಇವರ ಮಹತ್ವದ ಕೃತಿಗಳು. ಕರ್ನಾಟಕ ಸರ್ಕಾರ ಸ್ಥಾಪಿಸಿರುವ ʼವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪ್ರಶಸ್ತಿʼ ಪುರಸ್ಕೃತರು.




