ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿಕೊಂಡು ಪರಾರಿಯಾಗಿದ್ದ ಕಳ್ಳರು, 15 ದಿನಗಳ ಬಳಿಕ ಪಶ್ಚಾತ್ತಾಪದಿಂದ ಕದ್ದ ಚಿನ್ನ-ಹಣವನ್ನು ಮನೆ ಬಾಗಿಲಿಗೆ ವಾಪಸ್ ತಂದಿಟ್ಟಿರುವ ಅಪರೂಪದ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ. ಅಷ್ಟೇ ಅಲ್ಲ, ಕದ್ದ ವಸ್ತುಗಳ ಜೊತೆಗೆ ‘ನಮ್ಮನ್ನು ಕ್ಷಮಿಸಿ’ ಎಂದು ಕೈಬರಹದ ಪತ್ರವನ್ನೂ ಇಟ್ಟು ಹೋಗಿದ್ದಾರೆ. ಈ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಕಾಕಿನಾಡ ಜಿಲ್ಲೆಯ ಕರಪ ಮಂಡಲದ ರಾಮಕಂಚಿರಾಜು ನಗರದ ನಿವಾಸಿ ನಾಮಲ ಗಣೇಶ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಜುಲೈ 18ರಂದು ಗಣೇಶ್ ಅವರು ಕುಟುಂಬ ಸಮೇತ ತಮ್ಮ ಸ್ವಗ್ರಾಮಕ್ಕೆ ತೆರಳಿದ್ದ ವೇಳೆ, ಮನೆ ಖಾಲಿಯಿರುವುದನ್ನು ಗಮನಿಸಿದ ಕಳ್ಳರು ಬೀಗ ಮುರಿದು ಒಳನುಗ್ಗಿದ್ದರು. ಸುಮಾರು 6.50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 50 ಸಾವಿರ ರೂಪಾಯಿ ನಗದನ್ನು ಕಳವು ಮಾಡಿ ಪರಾರಿಯಾಗಿದ್ದರು.
ಮನೆಗೆ ಹಿಂದಿರುಗಿದ ಗಣೇಶ್, ಮನೆಯಲ್ಲಿದ್ದ ಅಮೂಲ್ಯ ವಸ್ತುಗಳು ಕಳವಾಗಿರುವುದನ್ನು ಕಂಡು ಬೆಚ್ಚಿಬಿದ್ದಿದ್ದರು. ತಕ್ಷಣವೇ ಕರಪ ಪೊಲೀಸ್ ಠಾಣೆಗೆ ದೂರು ನೀಡಿ, ಕಳ್ಳರನ್ನು ಪತ್ತೆಹಚ್ಚುವಂತೆ ಮನವಿ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ಈ ನಡುವೆ ಆಗಸ್ಟ್ 2ರಂದು ಬೆಳಗಿನ ಜಾವ ಗಣೇಶ್ ಅವರಿಗೆ ಅಚ್ಚರಿ ಎದುರಾಗಿದೆ. ಮನೆಯ ಆವರಣದಲ್ಲಿ ಒಂದು ಬ್ಯಾಗ್ ಬಿದ್ದಿರುವುದನ್ನು ಗಮನಿಸಿದ ಅವರು, ಅದನ್ನು ತೆರೆದು ನೋಡಿದಾಗ, ಕಳವಾಗಿದ್ದ ಬಹುತೇಕ ಚಿನ್ನಾಭರಣಗಳು ಮತ್ತು ನಗದು ಅದರಲ್ಲೇ ಇರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ.
ಬ್ಯಾಗ್‌ನೊಳಗೆ ಚಿನ್ನಾಭರಣ ಮತ್ತು ಹಣದ ಜೊತೆಗೆ ಒಂದು ‘ಕೈಬರಹದ ಪತ್ರ’ ಕೂಡ ಇತ್ತು. ಅದರಲ್ಲಿ ಕಳ್ಳರು ತಮ್ಮ ಕೃತ್ಯಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದರು. “ನಾವು ಮಾಡಿದ್ದು ದೊಡ್ಡ ತಪ್ಪು. ದಯವಿಟ್ಟು ನಮ್ಮನ್ನು ಕ್ಷಮಿಸಿ. ಕದ್ದ ಹಣದಲ್ಲಿ 22 ಸಾವಿರ ರೂಪಾಯಿಯನ್ನು ಈಗಾಗಲೇ ಖರ್ಚು ಮಾಡಿದ್ದೇವೆ. ಆ ಹಣವನ್ನು ಮಾತ್ರ ವಾಪಸ್ ನೀಡಲು ಸಾಧ್ಯವಾಗುತ್ತಿಲ್ಲ. ಉಳಿದ ಎಲ್ಲ ಚಿನ್ನಾಭರಣ ಮತ್ತು ಹಣವನ್ನು ಹಿಂದಿರುಗಿಸುತ್ತಿದ್ದೇವೆ. ಸಾರಿ…” ಎಂದು ಪತ್ರದಲ್ಲಿ ಬರೆದಿದ್ದರು.
ತಮ್ಮ ಜೀವನದ ಉಳಿತಾಯದಿಂದ ಖರೀದಿಸಿದ್ದ ಚಿನ್ನಾಭರಣಗಳು ಮರಳಿ ಸಿಕ್ಕಿರುವುದನ್ನು ಕಂಡು ಗಣೇಶ್ ನಿಟ್ಟುಸಿರು ಬಿಟ್ಟಿದ್ದಾರೆ. 22 ಸಾವಿರ ರೂಪಾಯಿ ನಷ್ಟವಾದರೂ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಉಳಿದ ಹಣ ವಾಪಸ್ ಸಿಕ್ಕಿರುವುದರಿಂದ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.



