ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision–SIR) ಪ್ರಕ್ರಿಯೆಯು ಕೇವಲ ಆಡಳಿತಾತ್ಮಕ ವ್ಯಾಯಾಮವಲ್ಲ. ಇದು ಭಾರತದ ಸಂವಿಧಾನದ ಅನುಚ್ಛೇದ 324ರ ಅಡಿಯಲ್ಲಿ ಕಾರ್ಯನಿರ್ವಹಿಸುವ ಚುನಾವಣಾ ಆಯೋಗದ ಮಹತ್ವದ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕು ರಕ್ಷಿತವಾಗಿರುವುದನ್ನು ಖಚಿತಪಡಿಸುವ ಉದ್ದೇಶ ಹೊಂದಿದೆ. ಜನಪ್ರತಿನಿಧಿಗಳ ಕಾಯ್ದೆ, 1950 (Representation of the People Act, 1950) ಹಾಗೂ ಮತದಾರರ ನೋಂದಣಿ ನಿಯಮಗಳು, 1960ರ ಆಶಯವೂ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಉಳಿಯಬೇಕು, ಅನರ್ಹ ಹೆಸರುಗಳನ್ನು ಮಾತ್ರ ಕಾನೂನುಬದ್ಧವಾಗಿ ತೆಗೆದುಹಾಕಬೇಕು ಎಂಬುದಾಗಿದೆ. ಆದ್ದರಿಂದ SIR ಪ್ರಕ್ರಿಯೆಯ ಯಶಸ್ಸನ್ನು ಕೇವಲ ಶೇಕಡಾವಾರು ಅಂಕಿ-ಅಂಶಗಳಿಂದ ಅಳೆಯಲು ಸಾಧ್ಯವಿಲ್ಲ; ನೆಲಮಟ್ಟದಲ್ಲಿ ಪ್ರತಿಯೊಬ್ಬ ಮತದಾರನಿಗೂ ತಲುಪಲಾಗಿದೆಯೇ ಎಂಬುದೇ ನಿಜವಾದ ಮಾನದಂಡ.
ಈ ಹಿನ್ನೆಲೆಯಲ್ಲಿಯೇ ಚಾಮರಾಜನಗರ ಜಿಲ್ಲೆಯ SIR ಪ್ರಕ್ರಿಯೆಯ ಕುರಿತು ಪ್ರಕಟವಾಗಿರುವ ಅಂಕಿ-ಅಂಶಗಳು ಸಹಜವಾಗಿಯೇ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ. ಜಿಲ್ಲಾಧಿಕಾರಿ ಕಚೇರಿಯ ಪ್ರಕಟಣೆಯ ಪ್ರಕಾರ, ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 983 ಮತಗಟ್ಟೆಗಳು ಹಾಗೂ 8,80,224 ಮತದಾರರು ಇದ್ದಾರೆ. ಆಗಸ್ಟ್ 2, 2026ರ ಸಂಜೆ 4 ಗಂಟೆಯ ಮಾಹಿತಿಯಂತೆ 7,95,792 (90.41%) ಎನ್ಯುಮರೇಷನ್ ಫಾರಂಗಳು ಡಿಜಿಟಲೀಕರಣಗೊಂಡಿದ್ದು, ಡಿಜಿಟಲೀಕರಣಕ್ಕೆ ಬಾಕಿ ಇರುವ ಫಾರಂಗಳು ಶೂನ್ಯ ಎಂದು ಚುನಾವಣಾ ಆಯೋಗದ ವರದಿ ತಿಳಿಸಿದೆ. ಉಳಿದ 84,432 (9.59%) ಮತದಾರರನ್ನು ASDDO (UEF) ವಿಭಾಗದಲ್ಲಿ ಸೇರಿಸಲಾಗಿದೆ. ಇದರಲ್ಲಿ ಮೃತರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಎರಡು ಕಡೆ ಹೆಸರು ಹೊಂದಿರುವವರು ಹಾಗೂ ಸಂಪರ್ಕಕ್ಕೆ ಸಿಗದ ಮತದಾರರು ಸೇರಿದ್ದಾರೆ ಎಂದು ಹೇಳಲಾಗಿದೆ.
ಇದೇ ವೇಳೆ ಜಿಲ್ಲಾಧಿಕಾರಿಗಳ ಪತ್ರಿಕಾ ಪ್ರಕಟಣೆಯಲ್ಲಿ ವಿಧಾನಸಭಾವಾರು ನೀಡಿರುವ ಅಂಕಿ-ಅಂಶಗಳೂ ಗಮನಾರ್ಹವಾಗಿವೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 2,17,852 ಮತದಾರರ ಪೈಕಿ 1,97,057, ಹನೂರು ಕ್ಷೇತ್ರದಲ್ಲಿ 2,24,616 ಮತದಾರರ ಪೈಕಿ 2,03,066, ಕೊಳ್ಳೇಗಾಲ ಕ್ಷೇತ್ರದಲ್ಲಿ 2,21,151 ಮತದಾರರ ಪೈಕಿ 1,97,922 ಹಾಗೂ ಗುಂಡ್ಲುಪೇಟೆ ಕ್ಷೇತ್ರದಲ್ಲಿ 2,16,605 ಮತದಾರರ ಪೈಕಿ 1,96,476 ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ ಎಂದು ತಿಳಿಸಲಾಗಿದೆ. ಮತ್ತೊಂದೆಡೆ 30,878 ಮೃತರು, 35,140 ಶಾಶ್ವತ ಸ್ಥಳಾಂತರಗೊಂಡವರು, 7,596 ಎರಡು ಕಡೆ ನೋಂದಣಿ ಹೊಂದಿರುವವರು ಎಂದು ಪ್ರತ್ಯೇಕ ಅಂಕಿ-ಅಂಶಗಳೂ ಪ್ರಕಟವಾಗಿವೆ. ಈ ಎಲ್ಲ ಅಂಕಿ-ಅಂಶಗಳನ್ನು ಒಟ್ಟಾಗಿ ನೋಡಿದಾಗ ಪ್ರಕ್ರಿಯೆಯ ಪಾರದರ್ಶಕತೆ, ಪರಿಶೀಲನೆ ಹಾಗೂ ನೆಲಮಟ್ಟದ ಅನುಷ್ಠಾನದ ಬಗ್ಗೆ ಗಂಭೀರ ಪ್ರಶ್ನೆಗಳು ಮೂಡುವುದು ಸಹಜ.
ಚಾಮರಾಜನಗರವನ್ನು ಕರ್ನಾಟಕದ ಇತರೆ ಜಿಲ್ಲೆಗಳಂತೆ ಒಂದೇ ರೀತಿಯಲ್ಲಿ ಪರಿಗಣಿಸಲು ಸಾಧ್ಯವಿಲ್ಲ. ಆಡಳಿತಾತ್ಮಕ ದೃಷ್ಟಿಯಿಂದ ಈ ಜಿಲ್ಲೆ ಅತ್ಯಂತ ಸಂಕೀರ್ಣ ಭೌಗೋಳಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ರಚನೆಯನ್ನು ಹೊಂದಿದೆ. ಗುಂಡ್ಲುಪೇಟೆ ಮತ್ತು ಚಾಮರಾಜನಗರ ನಗರ ಪ್ರದೇಶಗಳ ಪರಿಸ್ಥಿತಿ ಒಂದು ರೀತಿಯಲ್ಲಿದ್ದರೆ, ಹನೂರು, ಕೊಳ್ಳೇಗಾಲ ಹಾಗೂ ಯಳಂದೂರು ಸಂಪೂರ್ಣ ವಿಭಿನ್ನ ಸ್ವರೂಪ ಹೊಂದಿವೆ. ಬೆಟ್ಟಗುಡ್ಡಗಳು, ದಟ್ಟ ಅರಣ್ಯ, ವನ್ಯಜೀವಿ ಸಂರಕ್ಷಿತ ಪ್ರದೇಶಗಳು, ಗಡಿ ಗ್ರಾಮಗಳು, ಆದಿವಾಸಿ ಹಾಡಿಗಳು, ಸಂಪರ್ಕವಿಲ್ಲದ ಹಳ್ಳಿಗಳು, ಮೂಲಭೂತ ಸೌಲಭ್ಯಗಳಿಂದ ವಂಚಿತ ಪ್ರದೇಶಗಳು ಹೆಚ್ಚಿರುವ ಈ ಜಿಲ್ಲೆಯಲ್ಲಿ ಪ್ರತಿಯೊಬ್ಬ ಮತದಾರನ ಮನೆ ಬಾಗಿಲಿಗೆ ತಲುಪುವುದು ಸಾಮಾನ್ಯ ಆಡಳಿತಾತ್ಮಕ ಕಾರ್ಯವಲ್ಲ.
ವಾಸ್ತವವಾಗಿ, ಸರ್ಕಾರದ ಅನೇಕ ಕಲ್ಯಾಣ ಯೋಜನೆಗಳೇ ಈ ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ಸಮರ್ಪಕವಾಗಿ ತಲುಪಿಲ್ಲ ಎಂಬ ಆರೋಪಗಳು ವರ್ಷಗಳಿಂದ ಕೇಳಿಬರುತ್ತಿವೆ. ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ರಸ್ತೆ, ಸಾರಿಗೆ, ಭೂ ದಾಖಲೆ, ಅರಣ್ಯ ಹಕ್ಕುಗಳ ಮಾನ್ಯತೆ, ವಸತಿ ಹಕ್ಕು ಮುಂತಾದ ಮೂಲಭೂತ ಕ್ಷೇತ್ರಗಳಲ್ಲಿಯೂ ಸಮಸ್ಯೆಗಳು ಇನ್ನೂ ಮುಂದುವರಿದಿವೆ. ಸಾಕ್ಷರತೆ ಪ್ರಮಾಣವೂ ರಾಜ್ಯದ ಅನೇಕ ಜಿಲ್ಲೆಗಳಿಗಿಂತ ಕಡಿಮೆ. ಡಿಜಿಟಲ್ ಅರಿವು ಸೀಮಿತವಾಗಿದೆ. ಇಂತಹ ಜಿಲ್ಲೆಯಲ್ಲಿ ಅತಿ ಕಡಿಮೆ ಅವಧಿಯಲ್ಲಿ SIR ಪ್ರಕ್ರಿಯೆ ಸಂಪೂರ್ಣ ಯಶಸ್ವಿಯಾಗಿದೆ ಎಂಬ ಘೋಷಣೆ ಹೊರಬಂದಿರುವುದು ಸ್ವಾಭಾವಿಕವಾಗಿಯೇ ಸಾರ್ವಜನಿಕರಲ್ಲಿ ಕುತೂಹಲ ಮತ್ತು ಅನುಮಾನ ಎರಡನ್ನೂ ಹುಟ್ಟುಹಾಕಿದೆ.
ಭಾರತದ ಸಂವಿಧಾನದ ಅನುಚ್ಛೇದ 326 ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕಿಗೆ ಭದ್ರತೆ ನೀಡುತ್ತದೆ. ಮತದಾನದ ಹಕ್ಕು ಸಂವಿಧಾನದ ಮೂಲ ಹಕ್ಕಾಗಿ ಪರಿಗಣಿಸಲ್ಪಡದಿದ್ದರೂ ಅದು ಪ್ರಜಾಪ್ರಭುತ್ವದ ಮೂಲಭೂತ ಅಸ್ತಿವಾರವಾಗಿದೆ. ಸರ್ವೋಚ್ಚ ನ್ಯಾಯಾಲಯ ಕೂಡ ಅನೇಕ ತೀರ್ಪುಗಳಲ್ಲಿ ಮತದಾರರ ಪಟ್ಟಿಯ ನಿಖರತೆಯೇ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಗೆ ಆಧಾರ ಎಂದು ಹೇಳಿದೆ. ಆದ್ದರಿಂದ ಯಾವುದೇ ಪ್ರಕ್ರಿಯೆಯಲ್ಲಿ ವೇಗಕ್ಕಿಂತ ನಿಖರತೆಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ.
ವಿಶೇಷವಾಗಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿದೆ. ಸುಮಾರು 2,500 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ಈ ತಾಲ್ಲೂಕು ಜಿಲ್ಲೆಯ ಒಟ್ಟು ಭೌಗೋಳಿಕ ವ್ಯಾಪ್ತಿಯ ಸುಮಾರು 49.12 ಶೇಕಡಾ ಭಾಗವನ್ನು ಒಳಗೊಂಡಿದೆ. ಮಲೆ ಮಹದೇಶ್ವರ ವನ್ಯಜೀವಿ ವಲಯ, ಕಾವೇರಿ ವನ್ಯಜೀವಿ ವಲಯ, ತಮಿಳುನಾಡು ಗಡಿ ಪ್ರದೇಶಗಳು, ಬೆಟ್ಟಗುಡ್ಡಗಳು, ದಟ್ಟ ಕಾಡುಗಳು ಹಾಗೂ ದುರ್ಗಮ ಹಾಡಿಗಳು ಇಲ್ಲಿನ ಪ್ರಮುಖ ಲಕ್ಷಣಗಳಾಗಿವೆ. ಗೋಪಿನಾಥಂ, ಪುಂಗಂ, ಆಲಂಬಾಡಿ, ಪಾಲಾರ್, ಹೊಗೆನೆಕಲ್ ಸೇರಿದಂತೆ ಅನೇಕ ಗ್ರಾಮಗಳು ಮತ್ತು ಹಾಡಿಗಳು ಇನ್ನೂ ಅರಣ್ಯದೊಳಗೇ ಇವೆ. ಅನೇಕ ಕಡೆಗಳಿಗೆ ಸಾರ್ವಜನಿಕ ಸಾರಿಗೆ ಸೀಮಿತವಾಗಿದ್ದು, ಮಳೆಗಾಲದಲ್ಲಿ ಸಂಪರ್ಕವೇ ಕಡಿತಗೊಳ್ಳುವ ಪರಿಸ್ಥಿತಿಯೂ ಉಂಟಾಗುತ್ತದೆ.
ಇಂತಹ ಪ್ರದೇಶಗಳಲ್ಲಿ ವಾಸಿಸುವ ಜನರ ಸಮಸ್ಯೆಗಳು ಸಾಮಾನ್ಯವಲ್ಲ. ಅರಣ್ಯ ಸಂರಕ್ಷಣಾ ಕಾಯ್ದೆ, ಅರಣ್ಯ ಹಕ್ಕುಗಳ ಕಾಯ್ದೆ, 2006 (Forest Rights Act, 2006), ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972, ಅರಣ್ಯ ಇಲಾಖೆಯ ನಿಯಮಗಳು ಹಾಗೂ ಭೂ ದಾಖಲೆಗಳ ಕೊರತೆಯಿಂದ ಅನೇಕ ಕುಟುಂಬಗಳು ಇಂದಿಗೂ ತಮ್ಮ ವಾಸಸ್ಥಳ, ಕೃಷಿಭೂಮಿ ಅಥವಾ ಪಾರಂಪರಿಕ ಹಕ್ಕುಗಳಿಗೆ ಪೂರ್ಣ ದಾಖಲೆಗಳನ್ನು ಹೊಂದಿಲ್ಲ. Forest Rights Act, 2006ರ ಆಶಯವೇ ಅರಣ್ಯವಾಸಿಗಳ ಪಾರಂಪರಿಕ ಹಕ್ಕುಗಳನ್ನು ಮಾನ್ಯಗೊಳಿಸುವುದಾಗಿದೆ. ಆದರೆ ಅನೇಕ ಕಡೆಗಳಲ್ಲಿ ವೈಯಕ್ತಿಕ ಮತ್ತು ಸಮುದಾಯ ಹಕ್ಕುಗಳ ಪ್ರಕ್ರಿಯೆಯೇ ಇನ್ನೂ ಪೂರ್ಣಗೊಂಡಿಲ್ಲ ಎಂಬುದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿರುವ ವಿಚಾರ.
ಇಂತಹ ಸಂದರ್ಭದಲ್ಲಿ SIR ಪ್ರಕ್ರಿಯೆಗೆ ಅಗತ್ಯ ದಾಖಲೆಗಳನ್ನು ಪ್ರತಿಯೊಬ್ಬರಿಂದ ಸಂಗ್ರಹಿಸಲಾಯಿತೇ? ದಾಖಲೆ ಇಲ್ಲದವರಿಗೆ ಯಾವ ಪರ್ಯಾಯ ವಿಧಾನ ಅನುಸರಿಸಲಾಯಿತು? ಅರಣ್ಯ ಪ್ರದೇಶದ ಪ್ರತಿಯೊಂದು ಹಾಡಿಗೂ ಅಧಿಕಾರಿಗಳು ತಲುಪಿದ್ದಾರೆಯೇ? ಜನರಿಗೆ ಅವರ ಭಾಷೆಯಲ್ಲಿ ಮಾಹಿತಿ ನೀಡಲಾಗಿತ್ತೇ? ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ದೊರಕಬೇಕಾಗಿದೆ.
ಕೊಳ್ಳೇಗಾಲ ತಾಲ್ಲೂಕಿನ ಪರಿಸ್ಥಿತಿಯೂ ಇದೇ ರೀತಿಯ ಸಂಕೀರ್ಣವಾಗಿದೆ. ಜಾಗೇರಿ ವ್ಯಾಪ್ತಿಯ ಶಿಲುವೈಪುರ, ಪಾಸ್ಕಲ್ ನಗರ, ಸಿಆರ್ ನಗರ, ಬೂದುಕಟ್ಟೆದೊಡ್ಡಿ, ಡಿಜಿ ದೊಡ್ಡಿ, ಶಾಂತಿನಗರ ಸೇರಿದಂತೆ ಹಲವಾರು ಗ್ರಾಮಗಳು ಆಡಳಿತಾತ್ಮಕವಾಗಿ ಒಂದು ವ್ಯಾಪ್ತಿಯಲ್ಲಿದ್ದರೂ ಚುನಾವಣಾ ದೃಷ್ಟಿಯಿಂದ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತವೆ. ಈ ರೀತಿಯ ವ್ಯಾಪ್ತಿಯ ಬದಲಾವಣೆಗಳು ಸಾಮಾನ್ಯ ಮತದಾರರಲ್ಲಿಯೇ ಗೊಂದಲಕ್ಕೆ ಕಾರಣವಾಗುತ್ತವೆ.
ಈ ಗ್ರಾಮಗಳಲ್ಲಿ ಬಹುತೇಕರು ತಮಿಳು ಭಾಷಿಕರಾಗಿದ್ದಾರೆ. ಅನೇಕ ಕುಟುಂಬಗಳಿಗೆ ಮನೆಗಳ ದಾಖಲೆಗಳಿಲ್ಲ. ಭೂಮಿಗೆ ಖಾತೆ ಇಲ್ಲ. ಕಂದಾಯ ದಾಖಲೆಗಳಿಲ್ಲ. ಸರ್ಕಾರ ನಿರ್ಮಿಸಿದ ಅಥವಾ ಸ್ವಯಂ ನಿರ್ಮಿಸಿಕೊಂಡ ಮನೆಗಳಿಗೂ ಕಾನೂನುಬದ್ಧ ದಾಖಲೆಗಳ ಕೊರತೆ ಇದೆ ಎಂಬುದು ಸ್ಥಳೀಯರು ದೀರ್ಘಕಾಲದಿಂದ ಹೇಳುತ್ತಿರುವ ಸಮಸ್ಯೆ. ಈ ಹಿನ್ನೆಲೆಯಲ್ಲಿಯೇ ಪ್ರಶ್ನೆ ಉದ್ಭವಿಸುತ್ತದೆ—ಇಂತಹ ಕುಟುಂಬಗಳಿಂದ SIR ಪ್ರಕ್ರಿಯೆಯಲ್ಲಿ ಯಾವ ದಾಖಲೆಗಳನ್ನು ಪಡೆದುಕೊಳ್ಳಲಾಯಿತು? ದಾಖಲೆ ಇಲ್ಲದಿದ್ದರೆ ಚುನಾವಣಾ ಆಯೋಗ ಯಾವ ಪರ್ಯಾಯ ವ್ಯವಸ್ಥೆಯನ್ನು ಅನುಸರಿಸಿತು? ಇಲ್ಲವೇ ದಾಖಲೆಗಳ ಕೊರತೆಯೇ ಅವರನ್ನು ASDDO ವಿಭಾಗಕ್ಕೆ ಸೇರಿಸುವ ಕಾರಣವಾಗಿದೆಯೇ? ಈ ಕುರಿತು ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕಾಗಿದೆ.
ಸ್ಥಳೀಯರ ಮತ್ತೊಂದು ಆರೋಪವೇನೆಂದರೆ, ಈ ಪ್ರದೇಶಗಳು ದಶಕಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿವೆ. ರಸ್ತೆ, ಕುಡಿಯುವ ನೀರು, ವಿದ್ಯುತ್, ಆರೋಗ್ಯ, ಶಿಕ್ಷಣ, ಕಂದಾಯ ಸೇವೆಗಳು, ಭೂ ದಾಖಲೆಗಳ ವಿತರಣೆಯಂತಹ ಮೂಲಭೂತ ಸೇವೆಗಳಲ್ಲಿಯೇ ಸಮಸ್ಯೆಗಳಿರುವಾಗ, ಅಷ್ಟೇ ದುರ್ಗಮ ಪ್ರದೇಶಗಳಲ್ಲಿ ಅತಿ ವೇಗವಾಗಿ SIR ಪ್ರಕ್ರಿಯೆ ಸಂಪೂರ್ಣಗೊಂಡಿದೆ ಎನ್ನುವ ಅಂಕಿ-ಅಂಶಗಳು ಸಹಜವಾಗಿ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.
ಹನೂರು ಹಾಗೂ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಸೋಲಿಗ ಸಮುದಾಯದ ಪರಿಸ್ಥಿತಿ ಇನ್ನೂ ಸೂಕ್ಷ್ಮವಾಗಿದೆ. ಅನುಚ್ಛೇದ 46ರ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತಾಸಕ್ತಿಯನ್ನು ರಕ್ಷಿಸುವುದು ರಾಜ್ಯದ ಕರ್ತವ್ಯವಾಗಿದೆ. ಜೊತೆಗೆ ಪಂಚಾಯತ್ (ಪರಿಶಿಷ್ಟ ಪ್ರದೇಶಗಳ ವಿಸ್ತರಣೆ) ಕಾಯ್ದೆ – PESA Act, 1996 ಹಾಗೂ Forest Rights Act ಎರಡೂ ಆದಿವಾಸಿಗಳ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಭೂ ಹಕ್ಕುಗಳಿಗೆ ವಿಶೇಷ ರಕ್ಷಣೆಯನ್ನು ನೀಡುತ್ತವೆ. ಇಂತಹ ಸಮುದಾಯಗಳಿಗೆ ಆಡಳಿತಾತ್ಮಕ ಪ್ರಕ್ರಿಯೆಗಳು ಅವರ ಭಾಷೆ, ಸಂಸ್ಕೃತಿ ಹಾಗೂ ಜೀವನಶೈಲಿಯನ್ನು ಗಮನದಲ್ಲಿಟ್ಟುಕೊಂಡೇ ನಡೆಸಬೇಕು ಎಂಬುದು ಕಾನೂನಿನ ಆಶಯ.
ಆದರೆ ನೆಲಮಟ್ಟದಲ್ಲಿ ಅನೇಕ ಸೋಲಿಗ ಹಾಡಿಗಳು ಇನ್ನೂ ನಾಗರಿಕ ಪ್ರಪಂಚದಿಂದ ದೂರವೇ ಉಳಿದಿವೆ. ಕೆಲವು ಕಡೆ ಮೊಬೈಲ್ ಜಾಲತಾಣವೇ ಇಲ್ಲ. ಸಾರಿಗೆ ಸೀಮಿತವಾಗಿದೆ. ಸರ್ಕಾರಿ ಸಿಬ್ಬಂದಿಯ ಭೇಟಿ ವಿರಳವಾಗಿದೆ. ಇಂತಹ ಪ್ರದೇಶಗಳಲ್ಲಿ SIR ಕುರಿತು ಜಾಗೃತಿ ಮೂಡಿಸುವುದು, ಫಾರಂಗಳನ್ನು ಭರ್ತಿ ಮಾಡಿಸುವುದು, ದಾಖಲೆ ಪರಿಶೀಲಿಸುವುದು, ಡಿಜಿಟಲೀಕರಣ ಮಾಡುವುದು—ಇವೆಲ್ಲವೂ ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಂಡಿವೆ ಎನ್ನುವ ಅಂಕಿ-ಅಂಶಗಳು ಹೆಚ್ಚಿನ ವಿವರಣೆಯನ್ನು ಕೇಳುತ್ತವೆ.
ಯಳಂದೂರು ಭಾಗದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇದೆ. ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಅನೇಕ ಪೋಡುಗಳು ಹಾಗೂ ಆದಿವಾಸಿ ಹಾಡಿಗಳಿವೆ. ಇಲ್ಲಿ ಸೋಲಿಗ ಸಮುದಾಯದ ಜನರು ತಮ್ಮದೇ ಜೀವನಶೈಲಿಯಲ್ಲಿ ಬದುಕುತ್ತಿದ್ದಾರೆ. ಆಡಳಿತಾತ್ಮಕ ಸಂಪರ್ಕ ಸೀಮಿತವಾಗಿರುವ ಪ್ರದೇಶಗಳೂ ಸಾಕಷ್ಟಿವೆ. ಇಂತಹ ಸಮುದಾಯಗಳಲ್ಲಿ ಚುನಾವಣಾ ಆಯೋಗದ SIR ಪ್ರಕ್ರಿಯೆಯ ಬಗ್ಗೆ ಎಷ್ಟು ಜನರಿಗೆ ಮಾಹಿತಿ ತಲುಪಿತು? ಎಷ್ಟು ಜನ ಸ್ವಯಂವಾಗಿ ದಾಖಲೆಗಳನ್ನು ನೀಡಿದರು? ಎಷ್ಟು ಜನರನ್ನು ಅಧಿಕಾರಿಗಳು ನೇರವಾಗಿ ಭೇಟಿ ಮಾಡಿದರು? ಈ ಕುರಿತು ಜಿಲ್ಲಾ ಮಟ್ಟದಲ್ಲಿ ಪಾರದರ್ಶಕ ಮಾಹಿತಿ ಪ್ರಕಟವಾದರೆ ಸಾರ್ವಜನಿಕ ಅನುಮಾನಗಳಿಗೆ ಉತ್ತರ ಸಿಗಬಹುದು.
ಚಾಮರಾಜನಗರ ಜಿಲ್ಲೆಯಲ್ಲಿ ಪ್ರಕಟವಾಗಿರುವ ಮ್ಯಾಪಿಂಗ್ ಅಂಕಿ-ಅಂಶಗಳೂ ವಿಶ್ಲೇಷಣೆಗೆ ಅರ್ಹವಾಗಿವೆ. 3,65,215 ಮತದಾರರು Self Mapping, 4,06,796 Progeny Mapping, 23,534 ಯಾವುದೇ ಮ್ಯಾಪಿಂಗ್‌ಗೆ ಒಳಪಡದವರು ಎಂದು ದಾಖಲಾಗಿದೆ. ಇದೇ ವೇಳೆ 2,588 ಆನ್‌ಲೈನ್ ಅರ್ಜಿಗಳಲ್ಲಿ 175 ಇನ್ನೂ ಪರಿಶೀಲನೆಗೆ ಬಾಕಿ ಇವೆ. ಇದರಿಂದ ಡಿಜಿಟಲೀಕರಣ ಪೂರ್ಣಗೊಂಡಿದ್ದರೂ ಪರಿಶೀಲನಾ ಪ್ರಕ್ರಿಯೆ ಇನ್ನೂ ಮುಂದುವರಿದಿರುವುದು ಸ್ಪಷ್ಟವಾಗುತ್ತದೆ. ಆದ್ದರಿಂದ ಡಿಜಿಟಲೀಕರಣ ಪೂರ್ಣಗೊಂಡಿದೆ ಎಂದರೆ ಅಂತಿಮವಾಗಿ ಮತದಾರರ ಪಟ್ಟಿಯ ನಿಖರತೆಯೂ ಖಚಿತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ.
ಅದೇ ರೀತಿ 84,432 ಮತದಾರರನ್ನು ASDDO ವಿಭಾಗದಲ್ಲಿ ಸೇರಿಸಿರುವುದು ಅತ್ಯಂತ ಮಹತ್ವದ ವಿಷಯವಾಗಿದೆ. ಈ ವರ್ಗದಲ್ಲಿ ಸೇರಿರುವ ಪ್ರತಿಯೊಬ್ಬರ ಕುರಿತು ವೈಯಕ್ತಿಕ ಪರಿಶೀಲನೆ ನಡೆದಿದೆಯೇ? ಕುಟುಂಬದವರಿಂದ ಮಾಹಿತಿ ಪಡೆದಿದೆಯೇ? ಸ್ಥಳೀಯ ಸಂಸ್ಥೆಗಳ ದಾಖಲೆಗಳನ್ನು ಪರಿಶೀಲಿಸಲಾಯಿತೇ? ತಪ್ಪಾಗಿ ಯಾರಾದರೂ ಈ ಪಟ್ಟಿಗೆ ಸೇರಿರುವ ಸಾಧ್ಯತೆ ಇದೆಯೇ? ಇಂತಹ ಪ್ರಶ್ನೆಗಳಿಗೆ ಉತ್ತರ ಸಿಗುವುದು ಅತ್ಯಗತ್ಯ.
ಪ್ರಜಾಪ್ರಭುತ್ವದಲ್ಲಿ ಚುನಾವಣಾ ಆಯೋಗದ ಮೇಲಿನ ಸಾರ್ವಜನಿಕ ವಿಶ್ವಾಸ ಅತ್ಯಂತ ಮುಖ್ಯ. ಆದ್ದರಿಂದ ಅಂಕಿ-ಅಂಶಗಳ ಪ್ರಕಟಣೆಯಷ್ಟೇ ಅಲ್ಲ, ಅವುಗಳ ಹಿಂದೆ ಇರುವ ಕಾರ್ಯವಿಧಾನವೂ ಸಾರ್ವಜನಿಕ ಪರಿಶೀಲನೆಗೆ ತೆರೆದಿರಬೇಕು. ವಿಶೇಷವಾಗಿ ಅರಣ್ಯ ಪ್ರದೇಶಗಳು, ಆದಿವಾಸಿ ಹಾಡಿಗಳು, ಗಡಿ ಗ್ರಾಮಗಳು, ದಾಖಲೆರಹಿತ ಕುಟುಂಬಗಳು, ಭಾಷಾ ಅಲ್ಪಸಂಖ್ಯಾತರು ಹಾಗೂ ದುರ್ಗಮ ಪ್ರದೇಶಗಳಲ್ಲಿ SIR ಹೇಗೆ ಅನುಷ್ಠಾನಗೊಂಡಿತು ಎಂಬುದರ ಕುರಿತು ಜಿಲ್ಲಾವಾರು ವಿವರವಾದ ಶ್ವೇತಪತ್ರ ಪ್ರಕಟಿಸಿದರೆ ಸಾರ್ವಜನಿಕ ವಿಶ್ವಾಸ ಇನ್ನಷ್ಟು ಬಲವಾಗುತ್ತದೆ.
ಅಂತಿಮವಾಗಿ, ಇಲ್ಲಿ ಉದ್ದೇಶ SIR ಪ್ರಕ್ರಿಯೆಯನ್ನು ಪ್ರಶ್ನಿಸುವುದಲ್ಲ; ಅದರ ಅನುಷ್ಠಾನದ ನಿಖರತೆ ಮತ್ತು ಸಮಾನತೆಯನ್ನು ಪ್ರಶ್ನಿಸುವುದು. ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶವನ್ನು ನೀಡುತ್ತದೆ. ಆದ್ದರಿಂದ ಅರಣ್ಯದಲ್ಲಿರುವ ಸೋಲಿಗ ಕುಟುಂಬದಿಂದ ಹಿಡಿದು ಗಡಿ ಗ್ರಾಮದಲ್ಲಿರುವ ತಮಿಳು ಭಾಷಿಕ ಮತದಾರರವರೆಗೆ ಯಾರೊಬ್ಬರೂ ದಾಖಲೆಗಳ ಕೊರತೆ ಅಥವಾ ಆಡಳಿತಾತ್ಮಕ ದೌರ್ಬಲ್ಯದಿಂದ ಮತದಾನದ ಹಕ್ಕಿನಿಂದ ವಂಚಿತರಾಗಬಾರದು.
ಈ ವಿಶೇಷ ಸುದ್ದಿ ಓದಿದ್ದೀರಾ?SIR: ಕೊಡಗಿನ ಆದಿವಾಸಿಗಳ ಅಸ್ತಿತ್ವದ ಪ್ರಶ್ನೆಯ ಮುಂದೆ ಆಡಳಿತದ ಅಂಕಿ-ಅಂಶಗಳು ಸಾಕೇ?
ಹೀಗಾಗಿ ಚಾಮರಾಜನಗರ ಜಿಲ್ಲೆಯ ಕುರಿತು ಹೊರಬಿದ್ದಿರುವ ಶೇ.100 ಡಿಜಿಟಲೀಕರಣದ ಸಾಧನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗವು ಸಾರ್ವಜನಿಕರಲ್ಲಿ ಮೂಡಿರುವ ಪ್ರಶ್ನೆಗಳಿಗೆ ದಾಖಲೆ ಆಧಾರಿತ, ಪಾರದರ್ಶಕ ಮತ್ತು ವಿಸ್ತೃತ ಸ್ಪಷ್ಟನೆ ನೀಡುವುದು ಅಗತ್ಯವಾಗಿದೆ. ವಿಶೇಷವಾಗಿ ದುರ್ಗಮ ಹಾಡಿಗಳು, ಅರಣ್ಯ ಪ್ರದೇಶಗಳು, ಅರಣ್ಯ ಹಕ್ಕು ಬಾಕಿ ಇರುವ ಕುಟುಂಬಗಳು, ಭೂ ದಾಖಲೆಗಳಿಲ್ಲದ ಗ್ರಾಮಗಳು, ಆದಿವಾಸಿ ವಸತಿಗಳು ಹಾಗೂ ಗಡಿ ಪ್ರದೇಶಗಳಲ್ಲಿ SIR ಹೇಗೆ ಅನುಷ್ಠಾನಗೊಂಡಿತು, ಯಾವ ಪರ್ಯಾಯ ಕ್ರಮಗಳನ್ನು ಅನುಸರಿಸಲಾಯಿತು ಮತ್ತು ಅರ್ಹ ಮತದಾರರ ಹಕ್ಕು ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಯಾವ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಸಾರ್ವಜನಿಕರಿಗೆ ವಿವರಿಸುವುದು ಪ್ರಜಾಪ್ರಭುತ್ವದ ಪಾರದರ್ಶಕತೆಗೆ ಅಗತ್ಯವಾದ ಹೆಜ್ಜೆಯಾಗಲಿದೆ.




