ಭೀಮಶಕ್ತಿ ಸಂಘಟನೆ ಪದಾಧಿಕರಿಗಳಿಗೆ ಜಿಲ್ಲಾಧಿಕಾರಿಯಿಂದ ಅಗೌರವ ತೋರಿಸಲಾಗಿದೆ ಎಂದು ವಿರೋಧಿಸಿ ಸಭೆಯಲ್ಲಿ ಸಂಘಟನೆಯ ಪದಾಧಿಕಾರಿಳು ನೆಲದ ಮೇಲೆ ಕುಳಿತು ವಿರೋಧ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಗದಗ ಜಿಲ್ಲೆಯ ಸೊರಟೂರು ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯ ಹಾಗೂ ದಲಿತ ಸಮುದಾಯದವರಿಗೆ ಮಂಜೂರಾಗಿರುವ ವಸತಿ ನಿವೇಶನಗಳ ಸಮೀಪ ಅಕ್ರಮವಾಗಿ ವಿಂಡ್ ಫ್ಯಾನ್‌ಗಳನ್ನು ಅಳವಡಿಸಿರುವುದನ್ನು ವಿರೋಧಿಸಿ ಭೀಮಶಕ್ತಿ ಸಂಘಟನೆಯ ವತಿಯಿಂದ ಸೆಪ್ಟೆಂಬರ್ 10ರಂದು ಬೃಹತ್ ಪ್ರತಿಭಟನೆ ನಡೆಸಲಾಗಿತ್ತು.
ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗದಗ ಜಿಲ್ಲಾಧಿಕಾರಿ ಶ್ರೀಧರ್ ಅವರು ಸಂಬಂಧಪಟ್ಟ ವಿಂಡ್ ಫ್ಯಾನ್ ಕಂಪನಿಗಳ ಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಭೀಮಶಕ್ತಿ ಸಂಘಟನೆಯ ಪದಾಧಿಕಾರಿಗಳಿಗೆ ಸಭೆಗೆ ಆಹ್ವಾನ ನೀಡಿದ್ದರು.
ಅದರಂತೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಭೀಮಶಕ್ತಿ ಸಂಘಟನೆಯ ಪದಾಧಿಕಾರಿಗಳಿಗೆ ಸಭೆಯ ಆರಂಭದಲ್ಲಿ ಕುಳಿತುಕೊಳ್ಳಲು ಕನಿಷ್ಠ ಸೌಜನ್ಯವನ್ನೂ ತೋರಿಸದೇ ಅಗೌರವಯುತವಾಗಿ ನಡೆಸಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಈ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಸಂಘಟನೆಯ ರಾಜ್ಯ ಕಾನೂನು ಸಲಹೆಗರಾರು ಹಾಗೂ ವಕೀಲರಾದ ಮೈಲಾರಪ್ಪ ಡಿ ಎಚ್ ತೀವ್ರ ಆಕ್ರೋಶ ವ್ಯಕ್ತಪಡಿಸುವ ಮೂಲಕ ಜಿಲ್ಲಾಧಿಕಾರಿಗಳ ನಡೆಯನ್ನು ಖಂಡಿಸಿದರು.



