ಅಯೋಧ್ಯೆಯ ರಾಮಮಂದಿರದ ಕಾಣಿಕೆ ಲೂಟಿ ಪ್ರಕರಣದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಜುಲೈ 12ರ ಭಾನುವಾರದಂದು ಅಧಿಕೃತವಾಗಿ ತೀವ್ರ ‘ವಿಷಾದ ಮತ್ತು ಕಳವಳ’ ವ್ಯಕ್ತಪಡಿಸಿದೆ.
ರಾಜ್ಯದ ಬೆಳಗಾವಿಯಲ್ಲಿ ಜುಲೈ 10ರಿಂದ 12 ರವರೆಗೆ ಆಯೋಜಿಸಲಾಗಿದ್ದ ಆರೆಸ್ಸೆಸ್‌ನ ವಾರ್ಷಿಕ ‘ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್’ (ಪ್ರಾಂತ ಪ್ರಚಾರಕರ ಸಭೆ) ಸಮಾರೋಪದ ದಿನದಂದು ಸಂಘವು ಈ ಕುರಿತು ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: ರಾಮಮಂದಿರ ಲೂಟಿ | ತನಿಖೆ-ಬಂಧನದಿಂದ RSSನ ತಿಮಿಂಗಿಲಗಳು ಪಾರು!
ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಮತ್ತು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಸಮ್ಮುಖದಲ್ಲಿ ನಡೆದ ಈ ಮೂರು ದಿನಗಳ ಉನ್ನತ ಮಟ್ಟದ ಸಭೆಯಲ್ಲಿ ಮಂದಿರದ ದೇಣಿಗೆ ಹಗರಣದ ಕುರಿತು ಚರ್ಚೆಗಳು ನಡೆದಿವೆ.
ರಾಮಮಂದಿರದ ಕಾಣಿಕೆ ಪೆಟ್ಟಿಗೆಯ ಹಣದ ಎಣಿಕೆಯಲ್ಲಿ ನಡೆದಿರುವ ಲೋಪದೋಷಗಳು ಮತ್ತು ಅಕ್ರಮಗಳ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಪ್ರತಿನಿಧಿಗಳು ತೀವ್ರ ದುಃಖ ಮತ್ತು ಆತಂಕ ವ್ಯಕ್ತಪಡಿಸಿದ್ದಾರೆ. ಕೋಟ್ಯಂತರ ರಾಮಭಕ್ತರು ಅತ್ಯಂತ ಶ್ರದ್ಧೆ ಮತ್ತು ಪವಿತ್ರ ಭಾವನೆಯಿಂದ ನೀಡಿದ ಕಾಣಿಕೆಯಲ್ಲಿ ಇಂತಹ ಘಟನೆ ನಡೆದಿರುವುದು ಅತ್ಯಂತ ಖೇದಕರ ಎಂದು ಸಂಘ ಹೇಳಿದೆ.
ಹಾಗೆಯೇ ಭವಿಷ್ಯದಲ್ಲಿ ಇಂತಹ ಯಾವುದೇ ದುರದೃಷ್ಟಕರ ಘಟನೆಗಳು ಮರುಕಳಿಸದಂತೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರೆಸ್ಸೆಸ್ ಸೂಚಿಸಿದೆ.
ರಾಮಮಂದಿರದ ಮೇಲಿನ ಭಕ್ತರ ಪವಿತ್ರ ನಂಬಿಕೆ ಮತ್ತು ಗೌರವಕ್ಕೆ ಯಾವುದೇ ಧಕ್ಕೆ ಬರದಂತೆ ನೋಡಿಕೊಳ್ಳುವುದು ಟ್ರಸ್ಟ್‌ನ ಹೊಣೆಗಾರಿಕೆಯಾಗಿದೆ. ಅದಕ್ಕಾಗಿ ಹಣಕಾಸು ನಿರ್ವಹಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಮತ್ತು ಆಡಳಿತಾತ್ಮಕ ಲೋಪದೋಷಗಳನ್ನು ತಕ್ಷಣವೇ ಸರಿಪಡಿಸಲು ಸಂಘವು ಆಗ್ರಹಿಸಿದೆ.
ಹಾಗೆಯೇ ದೇಣಿಗೆ ಕಳ್ಳತನದ ಸುದ್ದಿಯಿಂದಾಗಿ ಪ್ರಸ್ತುತ ರಾಮಭಕ್ತರಲ್ಲಿ ಉಂಟಾಗಿರುವ ಗೊಂದಲ, ಸಂದೇಹ ಹಾಗೂ ಅನಿಶ್ಚಿತತೆಯ ವಾತಾವರಣ ತಕ್ಷಣವೇ ಕೊನೆಗೊಳ್ಳಬೇಕು. ಪಾರದರ್ಶಕ ಆಡಳಿತ ವ್ಯವಸ್ಥೆಯ ಮೂಲಕ ಸಾರ್ವಜನಿಕರಲ್ಲಿ ಮತ್ತು ಭಕ್ತರಲ್ಲಿ ಮರುವಿಶ್ವಾಸ ಮೂಡಿಸಬೇಕೆಂದು ಆರೆಸ್ಸೆಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ರಾಮಮಂದಿರ, ಬದರಿನಾಥದ ನಂತರ ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲೂ ದೇಣಿಗೆ ಲೂಟಿ ಬಯಲು!
ಇನ್ನು ಆರ್‌ಎಸ್‌ಎಸ್ ಹೇಳಿಕೆ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ “ಹಿಂದೂ ಸಮಾಜವು ಈ ಕಷ್ಟದ ಸಮಯದಲ್ಲಿ ತಾಳ್ಮೆ ಮತ್ತು ಸಂಯಮ ಕಾಯ್ದುಕೊಳ್ಳಬೇಕು” ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದ್ದರು. ಇದಕ್ಕೆ ಭಕ್ತರು ಮತ್ತು ನೆಟ್ಟಿಗರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
“ಕೋಟಿ ಕೋಟಿ ಭಕ್ತರು ತಮ್ಮ ಕಷ್ಟದ ಗಳಿಕೆಯನ್ನು ಭಕ್ತಿಯಿಂದ ದೇವರಿಗೆ ನೀಡಿದ್ದಾರೆ. ಆ ಹಣ ಕಳ್ಳತನವಾದಾಗ ಪ್ರಶ್ನಿಸುವುದು ಭಕ್ತರ ಹಕ್ಕು. ಅದನ್ನು ಬಿಟ್ಟು ‘ತಾಳ್ಮೆಯಿಂದ ಇರಿ’ ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ. ಭಕ್ತರ ಹಣಕ್ಕೆ ಇಲ್ಲಿ ಬೆಲೆ ಇಲ್ಲವೇ?” ಎಂದು ಎಕ್ಸ್ (ಟ್ವಿಟರ್) ಬಳಕೆದಾರರು ಪ್ರಶ್ನಿಸಿದ್ದಾರೆ.
“ಇದು ಯಾರೋ ತೀರಿಕೊಂಡಾಗ ವ್ಯಕ್ತಪಡಿಸುವ ಸಂತಾಪದ ಸಂದೇಶವಲ್ಲ, ಕೋಟ್ಯಂತರ ಭಕ್ತರ ಕಷ್ಟದ ಗಳಿಕೆಯ ಹಣ ಲೂಟಿಯಾಗಿರುವ ಬೃಹತ್ ಹಗರಣ. ಮಂದಿರ ನಿರ್ಮಾಣದ ಸಂಪೂರ್ಣ ಉಸ್ತುವಾರಿ ಮತ್ತು ಕ್ರೆಡಿಟ್ ಪಡೆದ ಸಂಘ ಪರಿವಾರ, ಈಗ ಕಳ್ಳತನವಾದಾಗ ಕೇವಲ ‘ಖೇದ’ ವ್ಯಕ್ತಪಡಿಸಿ ಕೈತೊಳೆದುಕೊಳ್ಳಲು ಹೇಗೆ ಸಾಧ್ಯ?” ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಜುಲೈ 12ರ ಹೇಳಿಕೆಯಲ್ಲಿ ಆರೆಸ್ಸೆಸ್ ಕೇವಲ “ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಟ್ರಸ್ಟ್ ಜಾಗ್ರತೆ ವಹಿಸಬೇಕು” ಎಂದು ಸಾಫ್ಟ್ ಆಗಿ ಹೇಳಿರುವುದನ್ನು ನೆಟ್ಟಿಗರು ತರಾಟೆಗೆ ತಗೆದುಕೊಂಡಿದ್ದಾರೆ. ಪ್ರಭಾವಿ ನಾಯಕರನ್ನು ಮತ್ತು ಟ್ರಸ್ಟಿಗಳನ್ನು ಕಾನೂನು ಕ್ರಮದಿಂದ ರಕ್ಷಿಸಲು ಹಾಗೂ ಕೇವಲ ಕೆಳಮಟ್ಟದ 8 ಜನ ಸಿಬ್ಬಂದಿಯನ್ನು ಬಲಿಪಶು ಮಾಡಿ ಹಗರಣ ಮುಚ್ಚಿಹಾಕಲು ಆರೆಸ್ಸೆಸ್ ಪ್ರಯತ್ನಿಸುತ್ತಿದೆ ಎಂದು ನೆಟ್ಟಿಗರು ನೇರ ಆರೋಪ ಮಾಡಿದ್ದಾರೆ.




