ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ದೇಣಿಗೆ ಲೂಟಿ ಪ್ರಕರಣವು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ರಾಮನ ಹೆಸರಿನಲ್ಲಿ ಭಕ್ತರು ನೀಡಿದ ಕೋಟ್ಯಂತರ ರೂಪಾಯಿ ಹಣದ ದುರುಪಯೋಗಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಳಹಂತದ ಎಂಟು ಜನರನ್ನು ಬಂಧಿಸಲಾಗಿದೆ. ಆದರೂ, ಈ ಪ್ರಕರಣದಲ್ಲಿ ಅತ್ಯಂತ ಪ್ರಭಾವಿಗಳು ಮತ್ತು ಶಕ್ತಿಶಾಲಿ ಸ್ಥಾನದಲ್ಲಿದ್ದವರ ಕೈವಾಡವನ್ನು ಅಲ್ಲಗಳೆಯಲಾಗದು. ಆದರೆ, ಅಂತಹ ಪ್ರಭಾವಿಗಳು ಕಾನೂನಿನ ತನಿಖೆಯಿಂದ ದೂರ ಉಳಿದಿದ್ದಾರೆ. ಇದು ರಾಜಕೀಯ ಮತ್ತು ಸಾಮಾಜಿಕವಾಗಿ ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಂಘಪರಿವಾರದೊಂದಿಗೆ ನಿಖಟ ಸಂಬಂಧ ಹೊಂದಿರುವ ಮತ್ತು ಟ್ರಸ್ಟ್‌ನ ಪ್ರಮುಖ ಹುದ್ದೆಯಲ್ಲಿದ್ದ ತಿಮಿಂಗಿಲಗಳನ್ನು ರಕ್ಷಿಸಲಾಗುತ್ತಿದೆ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.
ರಾಮಮಂದಿರ ಲೂಟಿ ಪ್ರಕರಣವು ಬೆಳಕಿಗೆ ಬಂದಿದ್ದ ಜೂನ್ 7ರಂದು, ಅಂದರೆ, ಬರೋಬ್ಬರಿ 1 ತಿಂಗಳು ಕಳೆದಿದೆ. ಪ್ರಕರಣವನ್ನು ಸಮಾಜವಾದಿ ಪಕ್ಷದ ಮಾಜಿ ಶಾಸಕ ಪವನ್ ಪಾಂಡೆ ಬೆಳಕಿಗೆ ತಂದಿದ್ದು, ಸುಮಾರು 7 ರಿಂದ 7.5 ಕೋಟಿ ರೂ.ಗಳಷ್ಟು ದೇಣಿಗೆ ದುರುಪಯೋಗವಾಗಿದೆ ಎಂದು ಆರೋಪಿಸಿದ್ದರು. ಆದರೆ, ಪ್ರಕರಣದ ಜಾಡು ಹಿಡಿದು ಹೋದಂತೆಲ್ಲ ಇನ್ನೂ ಭಾರೀ ಪ್ರಮಾಣದ ಹಣದ ಹಗಲು ದರೋಡೆ ನಡೆದಿರುವುದು ಜಗಜ್ಜಾಹೀರಾಗುತ್ತಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಜೂನ್ 23ರಂದು ಪ್ರಾಥಮಿಕ ವರದಿ ಸಲ್ಲಿಸಿದೆ. ಅಂದಿನಿಂದ ಈವರೆಗೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದೆ. ಬಂಧಿತರ ಪೈಕಿ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮ್ ಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮಾಶಂಕರ್ ಅಲಿಯಾಸ್ ಟಿನ್ನು ಯಾದವ್ ಸೇರಿದ್ದಾರೆ. ಇವರೆಲ್ಲ ದೇಣಿಗೆ ನಗದು ಮತ್ತು ಆಭರಣಗಳ ಎಣಿಕೆ ಕೆಲಸದಲ್ಲಿ ತೊಡಗಿದ್ದವರು. ಟ್ರಸ್ಟ್‌ನ ದೀನಾತಿ ಅಧೀನದಲ್ಲಿ ಕೆಲಸ ಮಾಡುತ್ತಿದ್ದವರು. ಅರ್ಥಾತ್, ಆರ್‌ಎಸ್‌ಎಸ್‌ನ ಕಾಲಾಳುಗಳು.
ರಾಮಮಂದಿರ ದೇಣಿಗೆ ಲೂಟಿಯಲ್ಲಿ ಭಾಗಿಯಾಗಿದ್ದ ಈ ಎಲ್ಲ ಕಾಲಾಳುಗಳು ತಾವೂ ಒಂದಷ್ಟು ಹಣ ಮಾಡಿಕೊಂಡಿದ್ದಾರೆ. ಮನೆ-ಕಾರು ಖರೀದಿಸಿದ್ದಾರೆ. ಈಗ ಬಂಧನಕ್ಕೊಳಗಾಗಿದ್ದಾರೆ. ತನಿಖೆ-ವಿಚಾರಣೆ ಎದುರಿಸುತ್ತಿದ್ದಾರೆ. ಆದರೆ, ಈ ಲೂಟಿಯ ಮಾಸ್ಟರ್ ಮೈಂಡ್‌ಗಳು ಇವರಲ್ಲ, ದೊಡ್ಡ ತಿಮಿಂಗಿಲಗಳು ಇವರ ಹಿಂದಿವೆ ಎಂಬುದು ಸ್ಪಷ್ಟ. ಆದರೆ, ಆ ತಿಮಿಂಗಿಲಗಳ ವಿರುದ್ಧ ಎಫ್‌ಐಆರ್ ದಾಖಲಾಗಿಲ್ಲ, ಬಂಧನ ದೂರದ ಮಾತು ಎಂಬಂತಿದೆ.
ಚಂಪತ್ ರಾಯ್, ಅನಿಲ್ ಮಿಶ್ರ, ಗೋಪಾಲ ರಾವ್ ವಿರುದ್ಧ FIR ಏಕಿಲ್ಲ?
ರಾಮಮಂದಿರ ಆಗು-ಹೋಗು, ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದದ್ದು ‘ರಾಮಮಂದಿರ ಟ್ರಸ್ಟ್’. ಈ ಟ್ರಸ್ಟ್‌ನಲ್ಲಿದ್ದವರ ಅಣತಿ ಇಲ್ಲದೆ ರಾಮಮಂದಿರದಲ್ಲಿ ಇಂತಹದೊಂದು ಬೃಹತ್ ಲೂಟಿ ನಡೆಯಲು ಸಾಧ್ಯವೇ ಇಲ್ಲ ಎಂಬುದು ಮೇಲ್ನೋಟಕ್ಕೆ ಕಾಣುವ ಸತ್ಯ. ಆದ್ದರಿಂದ, ಪ್ರಕರಣದ ಪ್ರಮುಖ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗಿದ್ದವರು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಚಂಪತ್ ರಾಯ್, ಟ್ರಸ್ಟಿಯಾಗಿದ್ದ ಅನಿಲ್ ಮಿಶ್ರ ಹಾಗೂ ಇಂದಿಗೂ ಆಡಳಿತಾಧಿಕಾರಿಯಾಗಿರುವ ಗೋಪಾಲ ರಾವ್. ಆದರೆ, ಈ ಮೂವರ ವಿರುದ್ಧ ಈವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಬಂಧನವಿರಲಿ, ವಿಚಾರಣೆಗೂ ಇವರನ್ನು ಕರೆಯಲಾಗಿಲ್ಲ.
ಚಂಪತ್ ರಾಯ್, ಅನಿಲ್ ಮಿಶ್ರ ಹಾಗೂ ಗೋಪಾಲ ರಾವ್ – ಈ ಮೂವರು ದೇಣಿಗೆ ದುರುಪಯೋಗ ಪ್ರಕರಣದೊಂದಿಗೆ ಸಂಬಂಧ ಹೊಂದಿದ್ದರೂ ಎಫ್‌ಐಆರ್‌ನಲ್ಲಿ ಇವರುಗಳನ್ನು ಹೆಸರಿಸಲಾಗಿಲ್ಲ. ಇವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿ ‘ಫೈಜಾಬಾದ್ ಬಾರ್ ಅಸೋಸಿಯೇಷನ್’ ಕ್ರಿಮಿನಲ್ ದೂರು ಸಲ್ಲಿಸಿದೆ. ವಿಪಕ್ಷಗಳಾದ ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ಹಲವು ಪಕ್ಷಗಳು ಈ ಮೂವರನ್ನು ವಿಚಾರಣೆ ಒಳಪಡಿಸಬೇಕು. ಪ್ರಕರಣದ ಹಿಂದಿರುವ ದೊಡ್ಡ ಕೈಗಳನ್ನು ಬೆಳಕಿಗೆ ತರಬೇಕೆಂದು ಒತ್ತಾಯಿಸಿವೆ. ಆದರೂ, ಎಫ್‌ಐಆರ್ ದಾಖಲಿಸಲಾಗಿಲ್ಲ.
ಈ ಮೂವರ ವಿರುದ್ಧ ಈವರೆಗೆ ಕ್ರಿಮಿನಲ್ ಪ್ರಕರಣ ದಾಖಲು ಮಾಡದೇ ಇರುವುದನ್ನು ಟ್ರಸ್ಟ್ ಮತ್ತು ಸಂಘಪರಿವಾರ ಸಮರ್ಥಿಸಿಕೊಳ್ಳುತ್ತಿವೆ. “ಎಸ್‌ಐಟಿಯ ಪ್ರಾಥಮಿಕ ವರದಿಯಲ್ಲಿ ಎಂಟು ವ್ಯಕ್ತಿಗಳನ್ನು ಮಾತ್ರ ಗುರುತಿಸಲಾಗಿತ್ತು. ಅದರ ಆಧಾರದ ಮೇಲೆ ಬಂಧನಗಳು ನಡೆದಿವೆ. ಸಾರ್ವಜನಿಕವಾಗಿ ಯಾರ ಮೇಲೂ ಆರೋಪ ಹೊರಿಸುವ ಬದಲು, ಅವ್ಯವಹಾರದ ಬಗ್ಗೆ ಸಾಕ್ಷ್ಯವಿದ್ದವರು ನೇರವಾಗಿ SIT ಅಥವಾ ಸಂಬಂಧಿತ ತನಿಖಾ ಸಂಸ್ಥೆಗೆ ಸಲ್ಲಿಸಬೇಕು” ಎಂದು ಹೇಳಿಕೊಂಡಿವೆ.
ಆದರೆ, ವಾಸ್ತವ ಬೇರೆಯೇ ಇದೆ. ಚಂಪತ್ ರಾಯ್, ಅನಿಲ್ ಮಿಶ್ರ ಹಾಗೂ ಗೋಪಾಲ ರಾವ್ ಅವರ ವಿರುದ್ಧ ಎಫ್‌ಐಆರ್ ಸಹ ದಾಖಲಾಗದೇ ಇರುವುದು ಮತ್ತು ಅವರನ್ನು ಬಂಧಿಸದೇ ಇರುವುದರ ಹಿಂದೆ ಸಂಘ ಪರಿವಾರದ ಪ್ರಭಾವವಿದೆ. ಚಂಪತ್ ರಾಯ್ ಅವರಂತಹ ನಾಯಕರು ದಶಕಗಳ ಕಾಲ ರಾಮಮಂದಿರ ಚಳವಳಿಯ ಮುಂಚೂಣಿಯಲ್ಲಿದ್ದವರು. ಇವರ ಮೇಲೆ ಭ್ರಷ್ಟಾಚಾರದ ಕಾನೂನು ಕ್ರಮ ಜರುಗಿದರೆ ಅದು ಕೇವಲ ವ್ಯಕ್ತಿಗತ ಕಳಂಕ ಮಾತ್ರವಲ್ಲದೆ, ಇಡೀ ರಾಮಮಂದಿರ ಆಂದೋಲನ ಮತ್ತು ರಾಮಮಂದಿರ ಟ್ರಸ್ಟ್‌ನ ನೈತಿಕತೆಗೆ ದೊಡ್ಡ ಪೆಟ್ಟು ನೀಡುತ್ತದೆ.
ಜೊತೆಗೆ, ಇವರ ವಿರುದ್ಧ ಪ್ರಕರಣ ದಾಖಲಿಸುವುದು ಮತ್ತು ಬಂಧಿಸುವುದು ತಾವು ಮಹಾನ್ ದೇಶಭಕ್ತರು, ಸ್ವಯಂ ಸೇವಕರು ಎಂದು ಬಡಾಯಿಬಿಡುವ ಆರ್‌ಎಸ್‌ಎಸ್‌ನ ವರ್ಚಸ್ಸಿಗೂ, ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೂ ರಾಜಕೀಯವಾಗಿ ಭಾರೀ ಹಿನ್ನಡೆ ಉಂಟುಮಾಡುತ್ತದೆ. ಮುಂದಾಗುವ ಆಘಾತದ ಅರಿವು ಆರ್‌ಎಸ್‌ಎಸ್ ಮತ್ತು ಮೋದಿ-ಯೋಗಿ ಸರ್ಕಾರಗಳಿಗೆ ಗೊತ್ತಿದೆ.
ಆದ್ದರಿಂದಲೇ, ತನಿಖೆಯನ್ನು ಕೇವಲ ಮಧ್ಯವರ್ತಿಗಳು ಮತ್ತು ಸಣ್ಣಪುಟ್ಟ ಕೊಂಡಿಗಳ ಬಂಧನಕ್ಕೆ ಸೀಮಿತಗೊಳಿಸಿ, ಪ್ರಮುಖ ‘ತಿಮಿಂಗಿಲಗಳನ್ನು’ ಕಾನೂನಾತ್ಮಕ ಕಡತಗಳಿಂದ ದೂರವಿಡುವ ಮೂಲಕ ವಿವಾದದ ತೀವ್ರತೆಯನ್ನು ತಗ್ಗಿಸುವ ತಂತ್ರ ಹೆಣೆಯಲಾಗಿದೆ.
ಕೃಷ್ಣಮೋಹನ್ ನೇಮಕ: ಸಂಚೋ – ಸಹಜ ಬೆಳವಣಿಗೆಯೋ?
ಜುಲೈ 6ರಂದು ನಡೆದ ಟ್ರಸ್ಟ್ ಸಭೆಯಲ್ಲಿ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರ ಅವರ ರಾಜೀನಾಮೆಗಳನ್ನು ಅಂಗೀಕರಿಲಾಗಿದೆ. ಗೋಪಾಲ ನಾಗರ್ಕೋಟೆ ಅವರನ್ನು ವಿಶೇಷ ಆಹ್ವಾನಿತ ಸದಸ್ಯರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದೇ ಸಭೆಯಲ್ಲಿ, ಮುಂದಿನ ಹೊಸ ನೇಮಕಾತಿ ಆಗುವವರೆಗೆ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿಯನ್ನು ನಿರ್ವಹಿಸಲು ಟ್ರಸ್ಟಿ ಕೃಷ್ಣಮೋಹನ್ ಅವರನ್ನು ನೇಮಿಸಲಾಗಿದೆ.
ನಿವೃತ್ತ ಐಎಫ್‌ಎಸ್ ಅಧಿಕಾರಿಯಾಗಿರುವ ಕೃಷ್ಣಮೋಹನ್, ಆರ್‌ಎಸ್‌ಎಸ್‌ನ ಹಿರಿಯ ಸದಸ್ಯ. ದಲಿತ ಸಮುದಾಯಕ್ಕೆ ಸೇರಿದಾತ. ದೇಣಿಗೆ ಹಗರಣ ಬೆಳಕಿಗೆ ಬಂದಿರುವ ಈ ಸೂಕ್ಷ್ಮ ಸಂದರ್ಭದಲ್ಲಿ, ಕೃಷ್ಣಮೋಹನ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿರುವುದು ಕೂಡ ಸಂದೇಹದಿಂದಲೇ ನೋಡುವಂತೆ ಮಾಡಿದೆ.
ರಾಮಮಂದಿರದ ಹಗರಣದ ಚರ್ಚೆ ನಡೆಯುತ್ತಿರುವಾಗ, ಟ್ರಸ್ಟ್‌ನಲ್ಲಿರುವ ಮೇಲ್ಮಟ್ಟದ ಆರ್‌ಎಸ್‌ಎಸ್‌ನ ಪ್ರಭಾವಿಗಳ ವಿರುದ್ಧ ಕ್ರಮ ಕೈಗೊಳ್ಳದೆ, ಸಾಮಾಜಿಕ ನ್ಯಾಯದ ಸಂಕೇತವಾಗಿ ದಲಿತ ವ್ಯಕ್ತಿಯನ್ನು ಮುಂಚೂಣಿಗೆ ತರಲಾಗಿದೆ. ಇದು, ಸಾರ್ವಜನಿಕ ಆಕ್ರೋಶವನ್ನು ಬೇರೆಡೆಗೆ ತಿರುಗಿಸುವ ಮತ್ತು ಟ್ರಸ್ಟ್‌ನ ವರ್ಚಸ್ಸು ಉಳಿಸುವ ಪ್ರಯತ್ನ ಎಂದೇ ನೋಡಲಾಗುತ್ತಿದೆ.
ರಾಮಮಂದಿರ ಟ್ರಸ್ಟ್‌ನ ಹಗರಣ ಬೆಳಕಿಗೆ ಬಂದ ಬಳಿಕ ನಡೆಯುತ್ತಿರುವ ವಿದ್ಯಮಾನಗಳು ವ್ಯವಸ್ಥಿತವಾದ ‘ಡ್ಯಾಮೇಜ್ ಕಂಟ್ರೋಲ್’ ರಾಜಕಾರಣದಂತೆ ಕಾಣುತ್ತಿವೆ.



