ಕಾರಂಜಾ ಮುಳುಗಡೆ ಸಂತ್ರಸ್ತ ರೈತರಿಗೆ ನ್ಯಾಯಯುತ ಪರಿಹಾರ ನೀಡುವ ಕುರಿತು ಸರ್ಕಾರ ನೀಡಿದ್ದ ಭರವಸೆ ಈಡೇರದ ಹಿನ್ನೆಲೆಯಲ್ಲಿ, ಹೋರಾಟವನ್ನು ಮತ್ತೆ ಆರಂಭಿಸುವುದಾಗಿ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಎಚ್ಚರಿಕೆ ನೀಡಿದೆ.
ಸಮಿತಿಯು ಹಮ್ಮಿಕೊಂಡಿರುವ ‘ಸಮಿತಿಯ ನಡೆ, ಜನಪ್ರತಿನಿಧಿಗಳ ಕಡೆ’ ಅಭಿಯಾನದಡಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರನ್ನು ಭೇಟಿಯಾಗಿ, ಸಂತ್ರಸ್ತ ರೈತರ ದಶಕಗಳ ಸಮಸ್ಯೆಗಳನ್ನು ವಿವರಿಸಿ ಮನವಿ ಸಲ್ಲಿಸಿತು.
ಈ ವೇಳೆ ಸಮಿತಿ ಮುಖಂಡರು ಮಾತನಾಡಿ, “ರೈತರಿಗೆ ನ್ಯಾಯಯುತ ಪರಿಹಾರ ನೀಡುವಂತೆ ಒತ್ತಾಯಿಸಿ ಈ ಹಿಂದೆ ಸತತ 920 ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಚಿವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರಿಂದ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ, ಈವರೆಗೂ ಪರಿಹಾರ ಬಿಡುಗಡೆಗೆ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕಾರಂಜಾ ಯೋಜನೆಯಿಂದ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ದೊರೆತಿದ್ದರೂ, ಯೋಜನೆಗಾಗಿ ಭೂಮಿ ಹಾಗೂ ಜೀವನೋಪಾಯ ಕಳೆದುಕೊಂಡ ಸಂತ್ರಸ್ತ ರೈತರಿಗೆ ನ್ಯಾಯಯುತ ಪರಿಹಾರ ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ರೈತರ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬಾರದು. ನೀಡಿದ ಭರವಸೆಯನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ” ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಸಚಿವ ಈಶ್ವರ ಬಿ. ಖಂಡ್ರೆ ಅವರು, ಸಂತ್ರಸ್ತ ರೈತರ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸರ್ಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.

ಸಚಿವರ ಭರವಸೆಯನ್ನು ಸ್ವಾಗತಿಸಿದ ಸಮಿತಿ, ಈ ಬಾರಿ ಕೇವಲ ಆಶ್ವಾಸನೆಗೆ ಸೀಮಿತವಾಗದೆ ಕಾಲಮಿತಿಯೊಳಗೆ ಸ್ಪಷ್ಟ ನಿರ್ಧಾರ ಕೈಗೊಂಡು ಪರಿಹಾರ ಒದಗಿಸಲು ಕ್ರಮ ಜರುಗಿಸಬೇಕು. ಬೇಡಿಕೆಗಳಿಗೆ ತಕ್ಷಣ ಸ್ಪಂದಿಸದಿದ್ದರೆ ಮತ್ತೆ ಹೋರಾಟ ಆರಂಭಿಸಲಾಗುವುದು. ಈ ಹೋರಾಟ ನಿರ್ಣಾಯಕ ಹಂತ ತಲುಪುವವರೆಗೂ ಮುಂದುವರಿಯಲಿದೆ ಎಂದು ಹೇಳಿದೆ.
ಇದನ್ನೂ ಓದಿ : ಔರಾದ್ | ಭಾರತ ಸಂವಿಧಾನ ವಿಶ್ವಕ್ಕೆ ಮಾದರಿ: ಪಿಎಸ್‌ಐ ದಿನೇಶ್
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಹೂಚಕನಳ್ಳಿ, ರಾಜಪ್ಪ ಕೋಸಂ, ಯೂಸುಫ್ ಮಿಯಾ ರೇಕುಳಗಿ, ವಿನಯಕುಮಾರ್ ಮಾಳಗೆ, ಮಾದಪ್ಪ ಖೌದೇ, ವೀರೇಂದ್ರ ಭಾತ್ಮುರ್ಗೆ, ಬಸವರಾಜ ಹಿಂದೆ, ಸಂಗಾರೆಡ್ಡಿ, ರಾಮ್ ಶೆಟ್ಟಿ, ಮಹೇಶ್ ಕಮಲಪುರ್, ರೇವಣಪ್ಪ ರಂಜೋಳ, ಶಂಕರರಾವ್ ಮನಳ್ಳಿ, ಲಕ್ಷ್ಮೀಬಾಯಿ ಮಾದಪ್ಪ, ವಿದ್ಯಾವತಿ ಔರಾದೆ, ಕನ್ಯಾಕುಮಾರಿ ಸಿಂದಬಂದಗಿ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.




