ಇಂದಿನ ಕಾಲಘಟ್ಟದಲ್ಲಿ ಪತ್ರಕರ್ತರು ಪಕ್ಷಪಾತಿಗಳಾಗಿರಬೇಕು—ಅಂದರೆ ತಟಸ್ಥತೆಯ ನೆಪದಲ್ಲಿ ಸುಮ್ಮನಿರದೆ ಸತ್ಯ ಮತ್ತು ಮಾನವೀಯತೆಯ ಪರವಾಗಿ ನಿಲ್ಲಬೇಕು—ಎಂಬ ನಿಲುವನ್ನು ಪ್ರತಿಪಾದಿಸಿರುವ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ, ಮಾಧ್ಯಮಗಳಲ್ಲಿ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ‘ವಸ್ತುನಿಷ್ಠತೆ’ಯ (ಆಬ್ಜೆಕ್ಟಿವಿಟಿ) ಪರಿಕಲ್ಪನೆಗೆ ನೇರ ಸವಾಲು ಹಾಕಿದ್ದಾರೆ.
ಶನಿವಾರ (ನವೆಂಬರ್ 21) ನವದೆಹಲಿಯ ‘ಇಂಡಿಯನ್ ವಿಮೆನ್ಸ್ ಪ್ರೆಸ್ ಕಾರ್ಪ್ಸ್’ನ 32ನೇ ವಾರ್ಷಿಕೋತ್ಸವದ ‘ರೂಹಾನಿ ರಿಷ್ತಾ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮುಖ್ಯ ಭಾಷಣ ಮಾಡಿದ ಅವರು, ಪತ್ರಿಕೋದ್ಯಮವು ಹಿಂದೆ ಹೊಂದಿದ್ದ ವಿಶ್ವಾಸಾರ್ಹತೆ ಮತ್ತು ಸಾರ್ವಜನಿಕ ನಂಬಿಕೆಯನ್ನು ಇಂದು ಬಹುತೇಕ ಕಳೆದುಕೊಂಡಿದೆ ಎಂದು ವಿಷಾದಿಸಿದರು. ತನಿಖಾ ಪತ್ರಿಕೋದ್ಯಮ ಕಣ್ಮರೆಯಾಗುತ್ತಿದೆ, ಟಿವಿ ಸುದ್ದಿಗಳು ಅಸಭ್ಯವಾಗಿವೆ ಮತ್ತು ಸಾಮಾನ್ಯ ಜನರ ಘನತೆಯ ಬಗ್ಗೆ ಪತ್ರಕರ್ತರಲ್ಲಿ ಸಂವೇದನೆ ಕಡಿಮೆಯಾಗುತ್ತಿದೆ ಎಂದು ಅವರು ಟೀಕಿಸಿದರು.
ಪತ್ರಿಕೋದ್ಯಮದಲ್ಲಿ ಪದೇ ಪದೇ ಉಲ್ಲೇಖಿಸಲಾಗುವ ‘ವಸ್ತುನಿಷ್ಠತೆ’ಯ ಕಲ್ಪನೆಯನ್ನು ಪ್ರಶ್ನಿಸಿದ ಧುಲಿಯಾ, 1990ರ ದಶಕದಲ್ಲಿ ರುವಾಂಡಾದಲ್ಲಿ ಹುಟು ಸಮುದಾಯದಿಂದ ಸುಮಾರು 5 ಲಕ್ಷದಿಂದ 10 ಲಕ್ಷ ಟುಟ್ಸಿಗಳ ಹತ್ಯಾಕಾಂಡ ನಡೆದಾಗ ಅಥವಾ ಗಾಜಾದಲ್ಲಿನ ನರಮೇಧವನ್ನು ವರದಿ ಮಾಡುವಾಗ ಪತ್ರಕರ್ತರು ಹೇಗೆ ತಾನೇ ವಸ್ತುನಿಷ್ಠರಾಗಿರಲು ಸಾಧ್ಯ ಎಂದು ಪ್ರಶ್ನಿಸಿದರು.
ಎಲ್ಲ ಪತ್ರಕರ್ತರೂ ವಸ್ತುನಿಷ್ಠರಾಗಿರಬೇಕು ಎಂಬ ಹಳತಾದ ಕಲ್ಪನೆ ಇಂದಿನ ಜಗತ್ತಿಗೆ ಹೊಂದುವುದಿಲ್ಲ; ಆದರೆ ಪತ್ರಕರ್ತರು ಸ್ವತಂತ್ರರಾಗಿ, ಮುಕ್ತ ಮನಸ್ಸಿನವರಾಗಿ ಮತ್ತು ವೃತ್ತಿಪರ ನಿಷ್ಠೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಪ್ರತಿಪಾದಿಸಿದರು. ಖ್ಯಾತ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಅವರ ‘ದಿ ಗ್ರೇಟೆಸ್ಟ್ ಜಾಬ್ ಇನ್ ದಿ ವರ್ಲ್ಡ್’ ಪ್ರಬಂಧವನ್ನು ಉಲ್ಲೇಖಿಸಿದ ಅವರು, ‘ಎಲ್ಲ ಪತ್ರಿಕೋದ್ಯಮವೂ ಮೂಲತಃ ತನಿಖಾ ಪತ್ರಿಕೋದ್ಯಮವೇ ಆಗಿರಬೇಕು’ ಎಂದರು.
ಪತ್ರಿಕೋದ್ಯಮವು ಹಿಂದೆ ಹೊಂದಿದ್ದ ವಿಶ್ವಾಸಾರ್ಹತೆ ಮತ್ತು ಸಾರ್ವಜನಿಕ ನಂಬಿಕೆಯನ್ನು ಇಂದು ಬಹುತೇಕ ಕಳೆದುಕೊಂಡಿದೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಕಳವಳ ವ್ಯಕ್ತಪಡಿಸಿದ್ದಾರೆ.
ಸುಮಾರು ಎರಡು ದಶಕಗಳ ಹಿಂದೆಯೇ ವಾಹಿನಿಗಳಲ್ಲಿ ‘ನಾಗದೇವತೆ’ ಹಾಗೂ ಮಾಟಮಂತ್ರದಂತಹ ಕಾರ್ಯಕ್ರಮಗಳು ಪ್ರಸಾರವಾಗಲು ಆರಂಭವಾದಾಗ ತಾವು ಟಿವಿ ಸುದ್ದಿ ನೋಡುವುದನ್ನು ನಿಲ್ಲಿಸಿದ್ದಾಗಿ ಧುಲಿಯಾ ತಿಳಿಸಿದರು. ಇಂದು ಪ್ರತಿಷ್ಠಿತ ಸುದ್ದಿ ವಾಹಿನಿಗಳೂ ಅತಿಥಿಗಳನ್ನು ಕರೆಸಿ ಅವರೊಂದಿಗೆ ಒರಟಾಗಿ ಮಾತನಾಡುತ್ತವೆ, ಅವರ ಘನತೆಗೆ ಧಕ್ಕೆ ತಂದು ಪರಸ್ಪರ ಜಗಳವಾಡುವಂತೆ ಪ್ರಚೋದಿಸುತ್ತವೆ ಎಂದ ಅವರು, ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಇಂತಹ ನಡೆ ಅಸಭ್ಯವಾಗಿದೆ ಎಂದು ಆಕ್ಷೇಪಿಸಿದರು. ಕೃತಕ ಬುದ್ಧಿಮತ್ತೆ (ಎಐ), ಅಧಿಕಾರದಲ್ಲಿರುವವರಿಗೆ ಸತ್ಯ ಹೇಳುವ ಸವಾಲು, ಮಾಹಿತಿ ತಿರುಚುವಿಕೆ, ಉದ್ಯೋಗ ನಷ್ಟ ಹಾಗೂ ಹಳತಾದ ವಸ್ತುನಿಷ್ಠತೆಯ ಕಲ್ಪನೆ ಇಂದಿನ ಪತ್ರಕರ್ತರ ಮುಂದಿರುವ ಪ್ರಮುಖ ಸವಾಲುಗಳಾಗಿವೆ ಎಂದು ಅವರು ಗುರುತಿಸಿದರು.
ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ತಮ್ಮ ತಾತ ‘ಕರ್ಮಭೂಮಿ’ ಪತ್ರಿಕೆ ಪ್ರಕಟಿಸಿ ಜೈಲಿಗೆ ಹೋಗಿದ್ದನ್ನು ಸ್ಮರಿಸಿದ ಧುಲಿಯಾ, ಸರ್ಕಾರದ ಒಳ್ಳೆಯ ಕೆಲಸಗಳನ್ನು ವರದಿ ಮಾಡುತ್ತಿಲ್ಲ ಎಂದು ಜಿಲ್ಲಾಧಿಕಾರಿಯೊಬ್ಬರು ದೂರಿದಾಗ ‘ಸರ್ಕಾರವನ್ನು ಹೊಗಳುವುದು ಅಥವಾ ಪ್ರಚಾರ ಮಾಡುವುದು ನನ್ನ ಕೆಲಸವಲ್ಲ, ಸತ್ಯವನ್ನು ಬರೆದು ಜನರಿಗೆ ತಲುಪಿಸುವುದೇ ನನ್ನ ಕರ್ತವ್ಯ’ ಎಂದು ತಾತ ಸ್ಪಷ್ಟವಾಗಿ ಹೇಳಿದ್ದರು ಎಂದರು.
1970ರ ದಶಕದಲ್ಲಿ ಇಬ್ಬರು ಯುವ ಪತ್ರಕರ್ತರು ಬಯಲಿಗೆಳೆದ ವಾಟರ್‌ಗೇಟ್ ಹಗರಣದಿಂದ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ರಾಜೀನಾಮೆ ನೀಡಬೇಕಾಯಿತು; ಇಂಗ್ಲೆಂಡ್‌ನಲ್ಲಿ ನ್ಯಾಯಮೂರ್ತಿ ಲಾರ್ಡ್ ಆಲ್ಫ್ರೆಡ್ ಡೆನ್ನಿಂಗ್ ಅವರು ಭಾರತೀಯರನ್ನು ಉದ್ದೇಶಿಸಿ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಪತ್ರಿಕೆಗಳು ಟೀಕಿಸಿದ್ದು, ‘ದಿ ಟೈಮ್ಸ್’ ಬರಹದ ಬೆನ್ನಲ್ಲೇ ಅವರು ಅಂದೇ ಪದತ್ಯಾಗ ಮಾಡಿದರು ಎಂಬ ಮಾತಿದೆ ಎಂದು ಉಲ್ಲೇಖಿಸಿದರು. ಬಾಲ್ಯದಲ್ಲಿ ಆಕಾಶವಾಣಿಯ ಹಿಂದಿ ವಾರ್ತೆಯನ್ನು ದೇವಕಿ ನಂದನ್ ಪಾಂಡೆ ಓದುವಾಗ ಮನೆಯಲ್ಲಿ ಆವರಿಸುತ್ತಿದ್ದ ಮೌನ ಮತ್ತು ಗೌರವ ಇಂದು ಮಾಯವಾಗಿದೆ ಎಂದರು.
ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಸ್ಥಾನ ತೀವ್ರವಾಗಿ ಕುಸಿದಿರುವುದರತ್ತ ನ್ಯಾ. ಧುಲಿಯಾ ಗಮನ ಸೆಳೆದರು. 2020ರಲ್ಲಿ 142ನೇ ಸ್ಥಾನದಲ್ಲಿದ್ದ ಭಾರತ, 2024ರಲ್ಲಿ 159ನೇ, 2025ರಲ್ಲಿ 151ನೇ ಹಾಗೂ 2026ರಲ್ಲಿ 157ನೇ ಸ್ಥಾನಕ್ಕೆ ಇಳಿದಿದೆ ಎಂದರು. ಚೀನಾ (178ನೇ ಸ್ಥಾನ) ಹೊರತುಪಡಿಸಿ, ನೇಪಾಳ (87), ಶ್ರೀಲಂಕಾ (134), ಭೂತಾನ್ (150), ಬಾಂಗ್ಲಾದೇಶ (152) ಮತ್ತು ಪಾಕಿಸ್ತಾನ (153) ಸೇರಿದಂತೆ ಭಾರತದ ಬಹುತೇಕ ನೆರೆಯ ರಾಷ್ಟ್ರಗಳು ಈ ಸೂಚ್ಯಂಕದಲ್ಲಿ ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿವೆ ಎಂದು ವಿವರಿಸಿದರು.
ಮಾಧ್ಯಮಗಳ ಸಂಪಾದಕೀಯ ಆಯ್ಕೆಗಳನ್ನು ಪ್ರಶ್ನಿಸಿದ ಅವರು, ಸೆಲೆಬ್ರಿಟಿಗಳ ಮದುವೆಗಳಿಗೆ ವ್ಯಾಪಕ ಪ್ರಚಾರ ನೀಡುವ ಪತ್ರಿಕೆಗಳು ಮತ್ತು ಪತ್ರಕರ್ತರು ಗ್ರಾಮೀಣ ಭಾಗದ ಬಡವರ ಮದುವೆಗಳನ್ನು ಅಥವಾ ಮಗಳ ಮದುವೆ ಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಕಷ್ಟವನ್ನು ಎಷ್ಟು ಬಾರಿ ವರದಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಕೋವಿಡ್ ಅವಧಿಯಲ್ಲಿ ನೈನಿತಾಲ್‌ನಲ್ಲಿ ಮದ್ಯದ ಅಂಗಡಿ ಮುಂದೆ ಸಾಲುಗಟ್ಟಿ ನಿಂತಿದ್ದವರನ್ನು ಪತ್ರಕರ್ತರು ಒರಟಾಗಿ ಪ್ರಶ್ನಿಸಿದ್ದ ಘಟನೆಯನ್ನು ಉದಾಹರಿಸಿದ ಅವರು, ಇದು ಪತ್ರಿಕೋದ್ಯಮ ಮಾನವೀಯತೆ ಕಳೆದುಕೊಂಡಿರುವುದಕ್ಕೆ ಸ್ಪಷ್ಟ ನಿದರ್ಶನ ಎಂದರು. ಹಿರಿಯ ಪತ್ರಕರ್ತರು ಯುವ ಸಹೋದ್ಯೋಗಿಗಳಲ್ಲಿ ಸಂವೇದನೆ ಬೆಳೆಸಬೇಕು ಎಂದು ಸಲಹೆ ನೀಡಿದರು.
2025ರ ನವೆಂಬರ್‌ನಲ್ಲಿ ಪಾಕಿಸ್ತಾನದ 27ನೇ ಸಂವಿಧಾನ ತಿದ್ದುಪಡಿಯನ್ನು ವಿರೋಧಿಸಿ ಅಲ್ಲಿನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೈಯದ್ ಮನ್ಸೂರ್ ಅಲಿ ಶಾ, ಅಥರ್ ಮಿನಲ್ಲಾ ಹಾಗೂ ಲಾಹೋರ್ ಹೈಕೋರ್ಟ್ ನ್ಯಾಯಮೂರ್ತಿ ಶಮ್ಸ್ ಮೆಹಮೂದ್ ಮಿರ್ಜಾ ರಾಜೀನಾಮೆ ನೀಡಿದ ಪ್ರಸಂಗವನ್ನೂ ಧುಲಿಯಾ ಸ್ಮರಿಸಿದರು. ನ್ಯಾಯಾಂಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸಿ ಕಾರ್ಯಾಂಗದ ನಿಯಂತ್ರಣಕ್ಕೆ ತರುವ ಈ ತಿದ್ದುಪಡಿಯ ವಿರುದ್ಧ ನ್ಯಾ. ಅಲಿ ಶಾ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದ ಕವಿ ಅಹ್ಮದ್ ಫರಾಜ್ ಅವರ ‘ನನ್ನ ಲೇಖನಿ ಜನರ ವಶದಲ್ಲಿದೆ, ಅದು ನನ್ನ ಆತ್ಮಸಾಕ್ಷಿಯ ನ್ಯಾಯಾಲಯ’ ಎಂಬ ಸಾಲುಗಳನ್ನು ಅವರು ನೆನಪಿಸಿಕೊಂಡರು.
ತಮ್ಮ ನ್ಯಾಯಾಂಗ ಕ್ಷೇತ್ರವೂ ಸೇರಿದಂತೆ ಯಾವುದೇ ವೃತ್ತಿಯನ್ನು ವಿಮರ್ಶಿಸಬಹುದು ಎಂದು ಒಪ್ಪಿಕೊಂಡ ನ್ಯಾ. ಧುಲಿಯಾ, ಪತ್ರಕರ್ತರಲ್ಲಿ ಕೇವಲ ಬುದ್ಧಿವಂತಿಕೆಗಿಂತಲೂ ಮಾನವೀಯತೆ, ಕರುಣೆ ಮತ್ತು ಪ್ರಗತಿಪರ ಚಿಂತನೆಗಳೇ ಹೆಚ್ಚು ಮುಖ್ಯ ಎಂದರು. ಶ್ರೇಷ್ಠ ಪತ್ರಕರ್ತರ ತತ್ವದ ಕೇಂದ್ರಬಿಂದುವಿನಲ್ಲಿ ಮನುಷ್ಯತ್ವ ಇರುತ್ತದೆ ಎಂದು ಪ್ರತಿಪಾದಿಸಿದ ಅವರು, ಪಾಕಿಸ್ತಾನದ ಕ್ಯಾನ್ಸರ್ ತಜ್ಞೆ ಡಾ. ಅಜ್ರಾ ರೇಜಾ ಅವರ ಮಾತನ್ನು ಉಲ್ಲೇಖಿಸಿ ‘ಈ ಜಗತ್ತಿಗೆ ಮತ್ತಷ್ಟು ಬುದ್ಧಿವಂತ ಮಿದುಳುಗಳಿಗಿಂತ ಹೆಚ್ಚಾಗಿ, ತುಡಿಯುವ ಹೃದಯಗಳ ಅಗತ್ಯವಿದೆ’ ಎಂದು ಭಾಷಣವನ್ನು ಮುಕ್ತಾಯಗೊಳಿಸಿದರು.



