ಭದ್ರಾವತಿ, ಹಳೆ ನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭದ್ರಾವತಿ ತಾಲ್ಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದಿಂದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮುಖ್ಯ ಶಿಕ್ಷಕಿ ಶ್ರೀಮತಿ ಜ್ಯೋತಿ ಎನ್ ಮಾತನಾಡಿದರು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ, ಕನ್ನಡ ಭಾಷೆ ನುಡಿದಂತೆ ಬರೆಯಬಹುದು, ಬರೆದಂತೆ ನುಡಿಯಬಹುದು. ಆ ಒಂದು ಶಕ್ತಿ ಕನ್ನಡ ಭಾಷೆಯಲ್ಲಿ ಮಾತ್ರ ಅಡಗಿದೆ ಎಂದು ತಿಳಿಸಿದರು. ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಹೊರತರಲು ಪೋಷಕರು ಅವಕಾಶ ಮಾಡಿಕೊಡಬೇಕು. ಯಾವುದೇ ರೀತಿಯ ಒತ್ತಡವನ್ನು ಮಕ್ಕಳಿಗೆ ಹೇರಬಾರದು ಎಂದು ತಿಳಿಸಿದರು.
ಮಕ್ಕಳ ದಿನಾಚರಣೆಯ ಪ್ರಯುಕ್ತ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಾದ ಕುಮಾರಿ ಶ್ರೀಯಾ ಎ ಸಜ್ಜನ್ ಮತ್ತು ಕುಮಾರಿ ಧನ್ಯ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಸಮಾಜದ ಹಿರಿಯ ನಾಗರಿಕರಾದ ಶ್ರೀಮತಿ ಗೀತಾ ಬೆಂಗಳೂರಿ, ಶ್ರೀಮತಿ ಗೌರಮ್ಮ ಶಂಕರಯ್ಯ, ಜಯಮ್ಮ ಜನ್ನಾಪುರ ಇವರುಗಳಿಗೆ ಸನ್ಮಾನಿಸಲಾಯಿತು. ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳಿಗೆ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು.




