ಟಿಎಂಸಿ ಹೆಸರು ಹಾಗೂ ಅದರ ಅಧಿಕೃತ ‘ಹೂವು ಮತ್ತು ಹುಲ್ಲು’ ಚಿಹ್ನೆಯನ್ನು ಮುಟ್ಟುಗೋಲುಗೊಳಿಸಿರುವ ಕೇಂದ್ರ ಚುನಾವಣಾ ಆಯೋಗದ (ಇಸಿ) ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಮಾಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿಸಿದೆ.
ದೇಶದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ಪೀಠದ ಮುಂದೆ ಮಮತಾ ಬ್ಯಾನರ್ಜಿ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಈ ವಿಷಯವನ್ನು ಪ್ರಸ್ತಾಪಿಸಿ, ತಕ್ಷಣದ ವಿಚಾರಣೆಗೆ ಮನವಿ ಮಾಡಿದರು.
ಇದನ್ನೂ ಓದಿ: ಟಿಎಂಸಿ ಚಿಹ್ನೆ ಮುಟ್ಟುಗೋಲು: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ
ಚುನಾವಣಾ ಪ್ರಕ್ರಿಯೆ ಮತ್ತು ಅಧಿಸೂಚನೆಗಳ ಮಧ್ಯದಲ್ಲೇ ಚುನಾವಣಾ ಆಯೋಗವು ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಹಠಾತ್ ಆಗಿ ಮುಟ್ಟುಗೋಲುಗೊಳಿಸಿದೆ. ಅಕ್ಟೋಬರ್ 6ರಂದು ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಈ ಹಂತದಲ್ಲಿ ಇಂತಹ ನಿರ್ಧಾರ ಕೈಗೊಂಡಿರುವುದು ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಧಕ್ಕೆ ತಂದಿದೆ. ಹೀಗಾಗಿ ಈ ಅರ್ಜಿಯನ್ನು ತಕ್ಷಣವೇ ಪಟ್ಟಿ ಮಾಡಿ ವಿಚಾರಣೆ ನಡೆಸಬೇಕು ಎಂದು ಸಿಬಲ್ ಪೀಠಕ್ಕೆ ವಿನಂತಿಸಿದರು.
ಇತ್ತೀಚೆಗೆ ತೃಣಮೂಲ ಕಾಂಗ್ರೆಸ್‌ನಲ್ಲಿ ಉಂಟಾದ ತೀವ್ರ ಬಂಡಾಯದ ಬಳಿಕ ಪಕ್ಷವು ಎರಡು ಬಾಗಿಯಾಗಿತ್ತು. ಋತಬ್ರತ ಬ್ಯಾನರ್ಜಿ ಮತ್ತು ಅರೂಪ್ ರಾಯ್ ನೇತೃತ್ವದ ಬಂಡಾಯ ಬಣವು ತಾವೇ ‘ನಿಜವಾದ ಟಿಎಂಸಿ’ ಎಂದು ಪ್ರತಿಪಾದಿಸಿ ಚುನಾವಣಾ ಆಯೋಗದ ಬಾಗಿಲು ತಟ್ಟಿತ್ತು.
ಎರಡೂ ಬಣಗಳ ನಡುವಿನ ಈ ಆಂತರಿಕ ಕದನದ ಹಿನ್ನೆಲೆಯಲ್ಲಿ, ಚುನಾವಣಾ ಚಿಹ್ನೆಗಳ (ಹಂಚಿಕೆ) ಆದೇಶ 1968ರ ಅಡಿಯಲ್ಲಿ ಅಂತಿಮ ತೀರ್ಮಾನವಾಗುವವರೆಗೆ ಮೂಲ ಹೆಸರು ಹಾಗೂ ಚಿಹ್ನೆಯನ್ನು ಯಾವುದೇ ಬಣವೂ ಬಳಸದಂತೆ ಚುನಾವಣಾ ಆಯೋಗ ಮಧ್ಯಂತರ ತಡೆ ನೀಡಿತ್ತು.
ತಾತ್ಕಾಲಿಕ ವ್ಯವಸ್ಥೆಯಾಗಿ, ಅಕ್ಟೋಬರ್ 6ರ ಉಪಚುನಾವಣೆಗಾಗಿ ಆಯೋಗವು ಮಮತಾ ಬ್ಯಾನರ್ಜಿ ಬಣಕ್ಕೆ ‘ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ ಹೆಸರು ಹಾಗೂ ‘ಫುಟ್‌ಬಾಲ್ ಆಟಗಾರ’ ಚಿಹ್ನೆಯನ್ನು ನೀಡಿತ್ತು. ಅದೇ ರೀತಿ, ಬಂಡಾಯ ಬಣಕ್ಕೆ ‘ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್’ ಹಾಗೂ ‘ಲಕೋಟೆಯ’ ಚಿಹ್ನೆಯನ್ನು ಹಂಚಿಕೆ ಮಾಡಿತ್ತು.
ಚುನಾವಣಾ ಆಯೋಗದ ಈ ಕ್ರಮವನ್ನು “ಪ್ರಜಾಪ್ರಭುತ್ವದ ಕಪ್ಪು ದಿನ” ಎಂದು ಬಣ್ಣಿಸಿರುವ ಮಮತಾ ಬ್ಯಾನರ್ಜಿ, 28-29 ವರ್ಷಗಳ ಕಾಲ ಹೋರಾಟ ನಡೆಸಿ ಕಟ್ಟಿದ ಪಕ್ಷದ ಗುರುತನ್ನು ಕಸಿದುಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಯೋಗದ ಈ ಮಧ್ಯಂತರ ಆದೇಶವನ್ನು ತಾವು ಒಪ್ಪುವುದಿಲ್ಲ ಮತ್ತು ಮೂಲ ಚಿಹ್ನೆಯನ್ನು ಮರಳಿ ಪಡೆಯಲು ಕಾನೂನು ಹಾಗೂ ರಾಜಕೀಯ ಹೋರಾಟ ಮುಂದುವರಿಸುವುದಾಗಿ ತಿಳಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.




