ಟಿಎಂಸಿ ಪಕ್ಷದ ಆಂತರಿಕ ಭಿನ್ನಮತ ಮತ್ತು ಬಂಡಾಯದ ಬಳಿಕ ಚುನಾವಣಾ ಆಯೋಗವು (ಇಸಿ) ಪಕ್ಷದ ಮೂಲ ಹೆಸರು ಹಾಗೂ ಸಾಂಪ್ರದಾಯಿಕ ‘ಹೂವು ಮತ್ತು ಹುಲ್ಲು’ ಚಿಹ್ನೆಯನ್ನು ಮುಟ್ಟುಗೋಲುಗೊಳಿಸಿ ಮಧ್ಯಂತರ ಆದೇಶ ಹೊರಡಿಸಿದೆ. ಆಯೋಗದ ಈ ನಿರ್ಧಾರವನ್ನು ಪ್ರಶ್ನಿಸಿ ಮಾಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಚುನಾವಣಾ ಆಯೋಗದ ನಿರ್ಧಾರವು “ಸಂವಿಧಾನಬಾಹಿರ, ಕಾನೂನುಬಾಹಿರ ಹಾಗೂ ಪ್ರಜಾಪ್ರಭುತ್ವ ವಿರೋಧಿ” ಎಂದು ಕಿಡಿಕಾರಿದ್ದಾರೆ. ಅಲ್ಲದೆ ಈ ಬೆಳವಣಿಗೆಯನ್ನು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ “ಕಪ್ಪು ದಿನ” ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ: ನಂದಿಗ್ರಾಮ ಉಪಚುನಾವಣೆ: ಮಮತಾ ಬೆಂಬಲ ಘೋಷಿಸಿದ ಗಂಟೆಗಳಲ್ಲೇ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಬಂಧನ!
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ, ಚುನಾವಣಾ ಆಯೋಗವು ಪಕ್ಷದ ಸಂಘಟನಾತ್ಮಕ ಚೌಕಟ್ಟನ್ನು ಸರಿಯಾಗಿ ಪರಿಶೀಲಿಸದೆ ಈ ಆದೇಶ ನೀಡಿದೆ ಮತ್ತು ಅರ್ಹತಾ ಅನರ್ಹತೆ ಅರ್ಜಿಗಳು ಬಾಕಿ ಇರುವಾಗಲೇ ಬಂಡಾಯ ಶಾಸಕರ ಹೇಳಿಕೆಗಳನ್ನು ಆಧರಿಸಿ ನಿರ್ಧಾರ ಕೈಗೊಂಡಿದೆ ಎಂದು ಮಮತಾ ಬಣ ವಾದಿಸಿದೆ.
ಮುಂಬರುವ ಪಶ್ಚಿಮ ಬಂಗಾಳದ ವಿಧಾನಸಭೆ ಉಪಚುನಾವಣೆಗಳ ಹಿನ್ನೆಲೆಯಲ್ಲಿ, ಎರಡು ಬಣಗಳ ನಡುವೆ ಮೂಲ ಟಿಎಂಸಿ ಮೇಲಿನ ಹಕ್ಕಿನ ಕುರಿತು ತೀವ್ರ ಸಂಘರ್ಷ ಏರ್ಪಟ್ಟಿತ್ತು. ಈ ಸಂಘರ್ಷ ಬಗೆಹರಿಯುವವರೆಗೆ ಎರಡೂ ಬಣಗಳು ‘ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ ಹೆಸರು ಮತ್ತು ಅದರ ಅಧಿಕೃತ ಚಿಹ್ನೆಯನ್ನು ಬಳಸದಂತೆ ಆಯೋಗ ಮಧ್ಯಂತರ ತಡೆ ನೀಡಿದೆ.
ಬೆಳವಣಿಗೆಯ ಭಾಗವಾಗಿ ಆಯೋಗವು ಎರಡೂ ಬಣಗಳಿಗೆ ತಾತ್ಕಾಲಿಕವಾಗಿ ಹೊಸ ಹೆಸರು ಹಾಗೂ ಚಿಹ್ನೆಗಳನ್ನು ಹಂಚಿಕೆ ಮಾಡಿದೆ. ಮಮತಾ ಬ್ಯಾನರ್ಜಿ ಬಣಕ್ಕೆ ‘ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ಹೆಸರು ಹಾಗೂ ‘ಫುಟ್‌ಬಾಲ್ ಆಟಗಾರ’ ಚಿಹ್ನೆ ನೀಡಲಾಗಿದೆ. ಇನ್ನೊಂದೆಡೆ ಅರೂಪ್ ರಾಯ್ ನೇತೃತ್ವ ಬಂಡಾಯ ಬಣಕ್ಕೆ‘ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್’ ಹೆಸರು ಹಾಗೂ ‘ಲಕೋಟೆ’ ಚಿಹ್ನೆ ನೀಡಲಾಗಿದೆ.
ಇದನ್ನೂ ಓದಿ: ನಂದಿಗ್ರಾಮ ಉಪಚುನಾವಣೆ: ಟಿಎಂಸಿ ಅಭ್ಯರ್ಥಿ ನಾಮಪತ್ರ ವಾಪಸ್; ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಮಮತಾ ಬ್ಯಾನರ್ಜಿ
ಇದೇ ವೇಳೆ ನಂದಿಗ್ರಾಮ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ಬಣದ ಅಭ್ಯರ್ಥಿ ಸಂಚಿತಾ ಪ್ರಧಾನ್ ಡೇ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಈ ಬೆಳವಣಿಗೆಯ ನಂತರ, ‘ಇಂಡಿಯಾ’ ಮೈತ್ರಿಕೂಟದ ಒಗ್ಗಟ್ಟಿಗಾಗಿ ನಂದಿಗ್ರಾಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರಿಗೆ ಬೆಂಬಲ ನೀಡುವುದಾಗಿ ಮಮತಾ ಪ್ರಕಟಿಸಿದರು. ಆದರೆ, ಮಮತಾ ಬ್ಯಾನರ್ಜಿ ಅವರು ಬೆಂಬಲ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ನಂದಿಗ್ರಾಮದ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
2007ರಲ್ಲಿ ನಂದಿಗ್ರಾಮ ಭೂಸ್ವಾಧೀನ ವಿರೋಧಿ ಚಳವಳಿಯ ಸಂದರ್ಭದಲ್ಲಿ ದಾಖಲಾಗಿದ್ದ ಹಳೆಯ ಕೊಲೆ ಪ್ರಕರಣವೊಂದನ್ನು ಈಗ ಕೆದಕಿ ಕಾಂಗ್ರೆಸ್ ಅಭ್ಯರ್ಥಿಯ ಈ ಬಂಧನ ಮಾಡಲಾಗಿದೆ. ಕಾಂಗ್ರೆಸ್ ಹಾಗೂ ಮಮತಾ ಬ್ಯಾನರ್ಜಿ ಈ ಬಂಧನವನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು ಆಡಳಿತಾರೂಢ ಬಿಜೆಪಿಯ “ರಾಜಕೀಯ ಪ್ರೇರಿತ ಕೃತ್ಯ” ಎಂದು ಆರೋಪಿಸಿದ್ದಾರೆ.
“ಇಷ್ಟು ವರ್ಷಗಳಿಂದ ಹಳೆಯ ಪ್ರಕರಣದಲ್ಲಿ ವಾರಂಟ್ ಬಾಕಿ ಇದ್ದರೂ ಸುಮ್ಮನಿದ್ದ ಪೊಲೀಸರು, ಚುನಾವಣೆಗೆ ನಾಮಪತ್ರ ಸಲ್ಲಿಸಿ ಮೈತ್ರಿ ಬೆಂಬಲ ಸಿಕ್ಕ ಬೆನ್ನಲ್ಲೇ ಸಕ್ರಿಯರಾಗಿದ್ದಾರೆ. ಇದು ವಿರೋಧ ಪಕ್ಷಗಳ ಮುಕ್ತ ಸ್ಪರ್ಧೆಯನ್ನು ತಡೆಯಲು ಮತ್ತು ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಲು ಬಿಜೆಪಿ ನಡೆಸುತ್ತಿರುವ ಹುನ್ನಾರ” ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




